ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗಳ ನಡುವೆ ಕಲ್ಲರಳಿ ಕಲೆಯಾಗಿ...

Last Updated 21 ಫೆಬ್ರುವರಿ 2011, 8:55 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅವಳಿನಗರದಲ್ಲಿ ಈಗಾಗಲೇ ಗಿನ್ನೀಸ್ ದಾಖಲೆಗೆ ಸೇರ್ಪಡೆಯಾಗಿರುವ ಒಂದು ವಿಮಾ ರಸ್ತೆಯಿದೆ. ಇಂತಹ ಇನ್ನೊಂದು ರೀತಿಯ ವೈಶಿಷ್ಟ್ಯಕ್ಕಾಗಿ ಇಲ್ಲಿಯ ಮತ್ತೆರಡು ರಸ್ತೆಗಳು ಶೀಘ್ರವೇ ದೇಶದ ಗಮನ ಸೆಳೆಯಲಿವೆ. ಅವುಗಳೆಂದರೆ ಧಾರವಾಡದ ಕಾಲೇಜು ರಸ್ತೆ ಮತ್ತು ಹುಬ್ಬಳ್ಳಿಯ ವಿಮಾನ ನಿಲ್ದಾಣವರೆಗಿನ ಗೋಕುಲ ರಸ್ತೆ!

ನೃಪತುಂಗ ಬೆಟ್ಟವನ್ನು ಅವಳಿನಗರದ ಪಚ್ಚೆಕೀರಿಟವಾಗಿ ಪರಿವರ್ತಿಸಿ, ಗ್ಲಾಸ್‌ಹೌಸ್, ಉಣಕಲ್ ಕೆರೆ, ಸಾಧನಕೇರಿ ಕೆರೆ ಮತ್ತು ಕೆಲಗೇರಿ ಕೆರೆಗಳಿಗೆ ಅಂದದ ರೂಪ ಒದಗಿಸಿ, ‘ಸೈ’ ಎನಿಸಿಕೊಂಡ ಉತ್ಸಾಹಿ ಜಿಲ್ಲಾಧಿಕಾರಿ ದರ್ಪಣ ಜೈನ್ ಅವರ ಮತ್ತೊಂದು ವಿನೂತನ ಕ್ರಮವಿದು. ಜಿಲ್ಲಾಡಳಿತದಿಂದಲೇ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ.

ಈಗಾಗಲೇ ಕಾಂಕ್ರೀಟ್ ರೂಪ ಪಡೆದಿರುವ ಕಾಲೇಜು ರಸ್ತೆಗೆ ವಿಭಜಕವನ್ನು ನಿರ್ಮಿಸಲಾಗಿದ್ದು, ಅಲ್ಲಿ ನೆಡಲಾದ ಅತ್ಯಾಕರ್ಷಕ ಕಂಬಗಳಲ್ಲಿ ಅಂದದ ಅಲಂಕಾರಿಕ ದೀಪಗಳೂ ಬಂದಿದ್ದು, ಹಿಟ್ಟಿನಂತಹ ಬೆಳಕನ್ನು ರಸ್ತೆ ಮೇಲೆಲ್ಲಾ ಚೆಲ್ಲುತ್ತಿವೆ. ರಸ್ತೆ ವಿಭಜಕದ ಮಿಕ್ಕ ಜಾಗೆಯಲ್ಲಿ ‘ಜಾನಪದ ಲೋಕ’ ರಸ್ತೆ ಮಾದರಿಯಲ್ಲಿ ಶಿಲ್ಪ ಕಲಾಕೃತಿಗಳನ್ನು ನಿಲ್ಲಿಸಲಾಗುತ್ತದೆ. ಅಲಂಕಾರಿಕ ಸಸ್ಯಗಳು ಮಧ್ಯದ ಜಾಗವನ್ನು ಆಕ್ರಮಿಸಲಿವೆ.

ಇದೇ ಮಾದರಿಯ ವ್ಯವಸ್ಥೆ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲೂ ಬರಲಿದೆ. ಗೋಕುಲ ರಸ್ತೆಯಲ್ಲೂ ದೀಪಗಳ ಅಳವಡಿಕೆ ಕಾರ್ಯ ಆರಂಭವಾಗಿದೆ. ಕೇವಲ ದೀಪದ ವ್ಯವಸ್ಥೆಗಾಗಿಯೇ ರೂ. 15 ಲಕ್ಷ  ವ್ಯಯಿಸಲಾಗುತ್ತಿದೆ. ಎರಡೂ ರಸ್ತೆಗಳನ್ನು ಮಾದರಿ ರಸ್ತೆಗಳನ್ನಾಗಿ ಪರಿವರ್ತಿಸುವುದು ನಮ್ಮ ಗುರಿ ಎಂದು ಜಿಲ್ಲಾಧಿಕಾರಿ ದರ್ಪಣ ಜೈನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಜುಬಿಲಿ ಸರ್ಕಲ್‌ನಿಂದ ಕರ್ನಾಟಕ ಕಾಲೇಜು ಸರ್ಕಲ್‌ವರೆಗಿನ ಕಾಲೇಜು ರಸ್ತೆ ಧಾರವಾಡದ ಅತ್ಯಂತ ಪ್ರತಿಷ್ಠಿತ ರಸ್ತೆಗಳಲ್ಲಿ ಒಂದೆನಿಸಿದೆ. ವಿಶಾಲವಾದ ಈ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿತ್ತು. ರಾಜ್ಯ ಸರ್ಕಾರದ ವಿಶೇಷ ಆರ್ಥಿಕ ಅನುದಾನದಲ್ಲಿ ಈ ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಪರಿವರ್ತನೆ ಮಾಡಲಾಗಿತ್ತು. ಧಾರವಾಡದಲ್ಲಿ ಅತಿ ಹೆಚ್ಚಿನ ಬಳಕೆಯ ರಸ್ತೆಗಳಲ್ಲಿ ಇದು ಒಂದಾಗಿದೆ.

‘ರಸ್ತೆಯ ಎರಡೂ ಬದಿ ಪಾದಚಾರಿಗಳ ಸುಗಮ ಓಡಾಟಕ್ಕೆ ಫುಟ್‌ಪಾತ್, ವಾಹನಗಳ ಓಡಾಟಕ್ಕೆ ವಿಶಾಲವಾದ ಜಾಗ, ರಸ್ತೆ ವಿಭಜಕಗಳಲ್ಲಿ ಎದುರಿನಿಂದ ಬರುವ ವಾಹನಗಳ ಬೆಳಕು ಕುಕ್ಕದಂತೆ ಶಿಲ್ಪ ಕಲಾಕೃತಿ ಮತ್ತು ಅಲಂಕಾರಿಕ ಸಸ್ಯಗಳು ಈ ರಸ್ತೆಯ ವಿಶೇಷವಾಗಲಿವೆ’ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

‘ಶಿಲ್ಪ ಕಲಾಕೃತಿಗಳು ಮತ್ತು ಅಲಂಕಾರಿಕ ಸಸ್ಯಗಳು ಕುಕ್ಕುವ ಬೆಳಕನ್ನು ತಡೆಗಟ್ಟುವ ಜೊತೆಗೆ ರಸ್ತೆಯ ಅಂದವನ್ನೂ ಹೆಚ್ಚಿಸಲಿವೆ. ರಸ್ತೆಗೆ ಇನ್ನಷ್ಟು ಮೋಹಕವಾದ ರೂಪ ಕೊಡಲು ದೀಪಗಳನ್ನು ಅಷ್ಟೇ ಪೂರಕವಾಗಿ ಆಯ್ಕೆ ಮಾಡಲಾಗಿದೆ’ ಎಂದು ಅವರು ವಿವರಿಸಿದರು.

‘ಕಾಲೇಜು ರಸ್ತೆಯಲ್ಲಿ ಶೀಘ್ರವೇ ಶಿಲ್ಪ ಕಲಾಕೃತಿಗಳನ್ನು ಅಳವಡಿಸಲಾಗುವುದು. ಅಲಂಕಾರಿಕ ಸಸ್ಯಗಳನ್ನು ನೆಡಿಸಲಾಗುವುದು. ಆಮೇಲೆ ಗೋಕುಲ ರಸ್ತೆ ಕೆಲಸವನ್ನು ಕೈಗೆತ್ತಿಕೊಳ್ಳಲಾಗುವುದು. ವಿಮಾನ ನಿಲ್ದಾಣವೂ ಇದೇ ರಸ್ತೆಯಲ್ಲಿ ಇರುವುದರಿಂದ ನಗರಕ್ಕೆ ಬಂದು-ಹೋಗುವ ಗಣ್ಯರು ಇದೇ ರಸ್ತೆಯನ್ನು ಬಳಸಬೇಕು. ಹೀಗಾಗಿ ಆ ರಸ್ತೆಯನ್ನೂ ಅಂದಗೊಳಿಸುತ್ತೇವೆ’ ಎಂದು ಜೈನ್ ತಿಳಿಸಿದರು.

‘ಎರಡೂ ರಸ್ತೆಗಳ ಯಶಸ್ಸನ್ನು ನೋಡಿಕೊಂಡು ಇತರ ಪ್ರಮುಖ ರಸ್ತೆಗಳ ಕಡೆಗೆ ಗಮನ ಹರಿಸುತ್ತೇವೆ. ಆದರೆ ಬಡಾವಣೆ ರಸ್ತೆಗಳಲ್ಲಿ ಇಂತಹ ಸೌಲಭ್ಯ ಕಲ್ಪಿಸಲು ಸಾಧ್ಯವಿಲ್ಲ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT