ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗಳನ್ನು ಸುಧಾರಿಸಿ

Last Updated 22 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಹೆಚ್ಚು. ಈ ವಿಷಯದಲ್ಲಿ ಚೀನಾ ಎರಡನೇ ಸ್ಥಾನದಲ್ಲಿದೆ.

ಭಾರತದಲ್ಲಿ ಪ್ರತಿ ವರ್ಷ 1.05 ಲಕ್ಷ ಜನರು ರಸ್ತೆ ಅಪಘಾತಗಳಲ್ಲಿ ಜೀವ ಕಳೆದುಕೊಳ್ಳುತ್ತಾರೆ. ಬಹುತೇಕ ಅಪಘಾತಗಳಿಗೆ ರಸ್ತೆಗಳ ದುರವಸ್ಥೆಯೇ ಕಾರಣ. ಅಪಘಾತಗಳಲ್ಲಿ ಸತ್ತವರಿಗೆ, ಗಾಯಗೊಂಡವರಿಗೆ ಆರ್ಥಿಕ ಪರಿಹಾರ, ವಾಹನಗಳ ದುರಸ್ತಿ, ಸಂತ್ರಸ್ತ ಕುಟುಂಬಗಳಿಗೆ ಆದ ಹಾನಿಗಳನ್ನು ಲೆಕ್ಕ ಹಾಕಿದರೆ ಅದೇ ಒಂದು ಲಕ್ಷ ಕೋಟಿ ರೂಪಾಯಿಗಳಷ್ಟಾಗುತ್ತದೆ ಎಂದು ಅಂತರರಾಷ್ಟ್ರೀಯ ರಸ್ತೆ ಒಕ್ಕೂಟ (ಐಆರ್‌ಎಫ್) ಅಂದಾಜು ಮಾಡಿದೆ.
 
ರಸ್ತೆಗಳ ನಿರ್ವಹಣೆಗೆ ಗಮನ ನೀಡಿದರೆ ಅಪಘಾತಗಳನ್ನು ಕಡಿಮೆ ಮಾಡಬಹುದು ಮತ್ತು ನಷ್ಟವನ್ನೂ ತಪ್ಪಿಸಲು ಸಾಧ್ಯವಿದೆ. ಆದರೆ ಸರ್ಕಾರಕ್ಕೆ ರಾಜಕೀಯ ಇಚ್ಛಾಶಕ್ತಿ ಇಲ್ಲ ಎಂದು ಐಆರ್‌ಎಫ್ ಹೇಳಿದೆ. ಜಾಗತೀಕರಣದ ನಂತರ ದೇಶದ ಜನರ ಜೀವನಮಟ್ಟದಲ್ಲಿ ಸುಧಾರಣೆ ಆಗುತ್ತಿದೆ. ಆರ್ಥಿಕ ಸ್ಥಿರತೆ ಕಾಯ್ದುಕೊಂಡ ಮಧ್ಯಮ ಹಾಗೂ ಮೇಲ್ಮಧ್ಮಮ ವರ್ಗಗಳ ಜನರು ವಾಹನಗಳ ಖರೀದಿಗೆ ಹಾತೊರೆಯುತ್ತಿದ್ದಾರೆ.

ಹೀಗಾಗಿ ಸ್ವಂತ ವಾಹನಗಳನ್ನು ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಹದಿ ಹರೆಯದವರು, ಕುಡಿದು ವಾಹನ ಓಡಿಸುವವರಿಂದಲೂ ಅಪಘಾತಗಳು ಹೆಚ್ಚುತ್ತಿವೆ. ಅಪಘಾತಗಳ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಂಡಿದ್ದರೂ ಅದರಿಂದ ಹೆಚ್ಚಿನ ಪರಿಣಾಮ ಆಗಿಲ್ಲ. ವಾಹನಗಳ ಹೆಚ್ಚಳಕ್ಕೆ ಅನುಗುಣವಾಗಿ ರಸ್ತೆಗಳ ಗುಣಮಟ್ಟ ಸುಧಾರಣೆ ಮಾಡುವ ಕಡೆಗೆ ಸರ್ಕಾರ ಗಮನಕೊಡಬೇಕು.

ದೇಶಕ್ಕೆ ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದರೂ ಇಂದಿಗೂ ಗ್ರಾಮೀಣ ಪ್ರದೇಶದಿಂದ ಪಟ್ಟಣ, ನಗರಗಳಿಗೆ ಉತ್ತಮ ಸಂಪರ್ಕ ರಸ್ತೆಗಳಿಲ್ಲ. ಕೆರೆಗಳು, ಕಾಲುವೆಗಳ ಪಕ್ಕದಲ್ಲೇ ಹಾದುಹೋಗುವ ರಸ್ತೆಗಳಂತೂ ಮೃತ್ಯುಕೂಪಗಳೇ ಆಗಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ನಿರ್ವಹಣೆಗಷ್ಟೇ ಹೆಚ್ಚಿನ ಆಸಕ್ತಿ ತೋರುತ್ತವೆ.

ಗ್ರಾಮೀಣ ರಸ್ತೆಗಳ ಸ್ಥಿತಿ ಅಧ್ವಾನವಾಗಿದೆ. ಗ್ರಾಮೀಣ ಜನರು ಈಗ ನಾನಾ ಕಾರಣಗಳಿಗಾಗಿ ನಿತ್ಯವೂ ಪಟ್ಟಣ ಹಾಗೂ ನಗರಗಳಿಗೆ ಬಂದು ಹೋಗುವ ಅನಿವಾರ್ಯತೆ ಇದೆ. ಕೆಟ್ಟ ರಸ್ತೆಗಳು, ಸೇತುವೆಗಳ ಕಾರಣಗಳಿಂದ ಅಪಘಾತ ಸಂಭವಿಸಿದರೆ ಸರ್ಕಾರದ ವಿರುದ್ಧ ದಾವೆ ಹೂಡಿ ಹೆಚ್ಚಿನ ಪರಿಹಾರ ಕೇಳುವ ಪ್ರಯತ್ನಗಳು ನಮ್ಮ ದೇಶದಲ್ಲಿ ವಿರಳ.

ವಾಹನಗಳ ಮೇಲೆ ಇಳಿಸಿದ ವಿಮೆಯಿಂದ ಮೃತರು ಹಾಗೂ ಗಾಯಗೊಂಡವರಿಗೆ ಪರಿಹಾರ ನೀಡುವ ಪದ್ಧತಿ ಇದೆ. ವಾಹನಗಳ ಮಾಲೀಕರಿಂದ ರಸ್ತೆ ತೆರಿಗೆ ವಸೂಲು ಮಾಡುವುದಕ್ಕೆ ಹೆಚ್ಚಿನ ಆಸಕ್ತಿ ತೋರುವ ಸರ್ಕಾರಗಳು ಅವುಗಳ ನಿರ್ವಹಣೆಗೆ ಗಮನ ಕೊಡುತ್ತಿಲ್ಲ. ಅದೇನೇ ಇರಲಿ, ರಸ್ತೆಗಳ ಗುಣಮಟ್ಟ ಸುಧಾರಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚಿನ ಗಮನ ಕೊಡಬೇಕು.
 
ಅಪಘಾತ ನಿಯಂತ್ರಣಕ್ಕೆ ಹೆಲ್ಮೆಟ್ ಧರಿಸುವುದು, ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವುದು ಎಷ್ಟು ಮುಖ್ಯವೋ, ಸುಗಮ ರಸ್ತೆಗಳು ಅದಕ್ಕಿಂತ ಹೆಚ್ಚು ಮುಖ್ಯ ಎಂಬುದನ್ನು ಸರ್ಕಾರಗಳು ಮನಗಾಣಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT