ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗಳಲ್ಲೇ ಉಳಿದ ರಾಶಿ ರಾಶಿ ಕಸ

Last Updated 3 ಅಕ್ಟೋಬರ್ 2012, 19:10 IST
ಅಕ್ಷರ ಗಾತ್ರ

ಬೆಂಗಳೂರು: ಒಂದೆಡೆ ಮೂಲದಲ್ಲಿಯೇ ಹಸಿ ತ್ಯಾಜ್ಯವನ್ನು ವಿಂಗಡಿಸುವಂತೆ ಬಿಬಿಎಂಪಿ ಜನರಲ್ಲಿ ಜಾಗೃತಿ ಮೂಡಿಸುವುದರಲ್ಲಿ ತಲ್ಲೆನರಾಗಿದ್ದರೆ, ಮತ್ತೊಂದೆಡೆ ಸಮರ್ಪಕವಾಗಿ ವಿಲೇವಾರಿಯಾಗದೆ ನಗರದಲ್ಲಿ ಮತ್ತೆ ರಸ್ತೆಗಳ ಬದಿ ಕಸದ ರಾಶಿ ಎದ್ದು ಕಾಣುತ್ತಿದೆ.

ಸ್ಥಳೀಯರ ಪ್ರತಿಭಟನೆ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಟೆರ‌್ರಾ ಫಾರ್ಮ್‌ಗೆ ಕಸ ವಿಲೇವಾರಿ ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ. ಇನ್ನು, ಮಂಡೂರು ತ್ಯಾಜ್ಯ ವಿಲೇವಾರಿ ಘಟಕಕ್ಕೆ ರಾತ್ರಿ ವೇಳೆ ಮಾತ್ರ ಕಸ ಸಾಗಿಸಲಾಗುತ್ತಿದೆ. ಹೀಗಾಗಿ, ಎರಡು ದಿನಗಳಿಂದ ಹೊರಗಡೆ ಸಮರ್ಪಕವಾಗಿ ಕಸ ವಿಲೇವಾರಿಯಾಗದೆ ಬಡಾವಣೆಗಳಲ್ಲಿ ರಾಶಿ ರಾಶಿ ಕಸ ಹಾಗೆಯೇ ಬಿದ್ದಿದೆ.

ಇನ್ನು, ಮನೆ-ಮನೆಗಳಿಂದ ವಿಂಗಡಿಸಿದ ಹಸಿ ತ್ಯಾಜ್ಯವನ್ನಷ್ಟೇ ಸ್ವೀಕರಿಸುವಂತೆ ಬಿಬಿಎಂಪಿ ಪೌರ ಕಾರ್ಮಿಕರಿಗೆ ಸೂಚಿಸಿದೆ. ಆದರೆ, ಬಹುತೇಕ ಕಡೆಗಳಲ್ಲಿ ಜನತೆ ಹಸಿ ಹಾಗೂ ಒಣ ತ್ಯಾಜ್ಯವನ್ನು ವಿಂಗಡಿಸದೆ ಪೂರೈಸುತ್ತಿದ್ದಾರೆ. ಪರಿಣಾಮ, ಪೌರ ಕಾರ್ಮಿಕರಿಗೂ ತ್ಯಾಜ್ಯ ವಿಂಗಡಣೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಪ್ರತಿ ದಿನ ನಗರದಲ್ಲಿ ನಾಲ್ಕು ಸಾವಿರ ಟನ್‌ಗಳಷ್ಟು ಕಸ ಸಂಗ್ರಹವಾಗುತ್ತಿದೆ. ಕಳೆದ ಎರಡು ದಿನಗಳಿಂದ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿಯಾಗದ ಕಾರಣ ಏಳೆಂಟು ಸಾವಿರ ಟನ್‌ಗಳಷ್ಟು ಕಸ ರಸ್ತೆಗಳಲ್ಲೇ ಉಳಿದಿದೆ.

ತ್ಯಾಜ್ಯ ವಿಂಗಡಣೆಗೆ ಜನ ಒಗ್ಗಿಲ್ಲ: ಅ. 1ರಿಂದ ಜಾರಿಗೆ ಬರುವಂತೆ ತ್ಯಾಜ್ಯ ವಿಂಗಡಣೆ ಮಾಡುವುದನ್ನು ಪಾಲಿಕೆ ಕಡ್ಡಾಯಗೊಳಿಸಿದ್ದರೂ ಜನ ಆ ವ್ಯವಸ್ಥೆಗೆ ಇನ್ನೂ ಪರಿಪೂರ್ಣವಾಗಿ ಒಗ್ಗಿಲ್ಲ. ಒಣ ತ್ಯಾಜ್ಯವನ್ನು ವಾರ ಮನೆಯಲ್ಲಿಟ್ಟುಕೊಂಡು ಪೂರೈಸುವ ಮನಸ್ಥಿತಿಗೆ ನಾಗರಿಕರು ಕೂಡ  ಹೊಂದಿಕೊಂಡಿಲ್ಲ. ಇದರಿಂದ ಜನ ಹಸಿ ತ್ಯಾಜ್ಯದ ಜತೆಗೇ ಒಣ ತ್ಯಾಜ್ಯವನ್ನು ಪೂರೈಕೆ ಮಾಡುತ್ತಿದ್ದರೆ, ಇನ್ನೂ ಕೆಲವರು ವಿಂಗಡಿಸಿದ ಒಣ ತ್ಯಾಜ್ಯವನ್ನು ಮನೆಯಲ್ಲಿಟ್ಟುಕೊಳ್ಳುವ ಬದಲು ಪ್ಲಾಸ್ಟಿಕ್ ಕವರ್‌ಗಳಲ್ಲಿ ಹಾಕಿ ಕಸದ ರಾಶಿ ಬಳಿ ಎಸೆಯುತ್ತಿರುವುದು ಸಾಮಾನ್ಯವಾಗಿದೆ.

ಗುತ್ತಿಗೆ ಪೌರ ಕಾರ್ಮಿಕರಿಗೆ ತರಬೇತಿಯೇ ಇಲ್ಲ!:  ಇನ್ನು, ನಗರದಲ್ಲಿ ಸುಮಾರು 18 ಸಾವಿರ ಮಂದಿಯಷ್ಟಿರುವ ಗುತ್ತಿಗೆ ಪೌರ ಕಾರ್ಮಿಕರಿಗೆ ಪಾಲಿಕೆ ಹಸಿ ತ್ಯಾಜ್ಯ ವಿಂಗಡಿಸುವ ಕುರಿತು ಸೂಕ್ತ ತರಬೇತಿಯನ್ನೇ ನೀಡಿಲ್ಲ. ಮನೆ-ಮನೆಗಳಿಂದ ಕಸ ಸಂಗ್ರಹಿಸುವುದು, ವಿಂಗಡಿಸುವುದು ಹಾಗೂ ರಸ್ತೆ ಗುಡಿಸುವುದು ಈ ಗುತ್ತಿಗೆ ಪೌರಕಾರ್ಮಿಕರೇ. ಆದರೆ, ಪಾಲಿಕೆಯಿಂದ ಗುತ್ತಿಗೆ ಪೌರ ಕಾರ್ಮಿಕರಿಗೆ ಯಾವುದೇ ತರಬೇತಿ ನೀಡಿಲ್ಲ ಎಂದು ಪಾಲಿಕೆ ಗುತ್ತಿಗೆ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಬಾಲನ್ ಆರೋಪಿಸಿದ್ದಾರೆ.

`ಮನೆ-ಮನೆಗಳಿಂದ ಹಸಿ ತ್ಯಾಜ್ಯ ಸಂಗ್ರಹಿಸುವ ಸಂಬಂಧ ಪಾಲಿಕೆ ಗುತ್ತಿಗೆ ಪೌರ ಕಾರ್ಮಿಕರಿಗೆ ಯಾವುದೇ ತರಬೇತಿ ನೀಡಿಲ್ಲ. ಗುತ್ತಿಗೆದಾರರು ಕೂಡ ಯಾವುದೇ ಸೂಚನೆ ನೀಡಿಲ್ಲ. ಹೀಗಾಗಿ, ಗುತ್ತಿಗೆ ಪೌರ ಕಾರ್ಮಿಕರಿಗೆ ಈ ಬಗ್ಗೆ ಸರಿಯಾದ ಅರಿವೇ ಇಲ್ಲ~ ಎಂದು ಅವರು ದೂರಿದರು.

`ಗುತ್ತಿಗೆದಾರರು ಪಾಲಿಕೆಯ ಗುತ್ತಿಗೆ ಪೌರ ಕಾರ್ಮಿಕರಿಗೆ ಎರಡು ತಿಂಗಳಿಂದ ಸಂಬಳ ನೀಡಿಲ್ಲ. ಘನ ತ್ಯಾಜ್ಯ ವಿಲೇವಾರಿಗೆ ಪಾಲಿಕೆ 400 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದರೂ ಕಸ ಗುಡಿಸುವ ಪೌರ ಕಾರ್ಮಿಕರಿಗೆ ಸರಿಯಾಗಿ ಪೊರಕೆ, ಗ್ಲೌಸ್, ಬಿನ್ ಯಾವುದೂ ಸಮರ್ಪಕವಾಗಿ ನೀಡುತ್ತಿಲ್ಲ~ ಎಂದು ಬಾಲನ್ ದೂರಿದರು.

ಗುತ್ತಿಗೆದಾರರ ಅಸಹಕಾರ ಆರೋಪ: ಈ ನಡುವೆ, ತ್ಯಾಜ್ಯ ವಿಲೇವಾರಿಯ ಹೊಸ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದ ಗುತ್ತಿಗೆದಾರರು ವಿಂಗಡಿಸಿದ ಹಸಿ ತ್ಯಾಜ್ಯವನ್ನು ವಿಲೇವಾರಿ ಮಾಡುವುದಕ್ಕೆ ಪಾಲಿಕೆಗೆ ಸಹಕಾರ ತೋರುತ್ತಿಲ್ಲ ಎಂಬ ಆರೋಪಗಳೂ ಕೇಳಿ ಬರುತ್ತಿವೆ.

ಒಣ ತ್ಯಾಜ್ಯವನ್ನು ಆಯಾ ವಾರ್ಡ್ ಅಥವಾ ಸಮೀಪದ ಒಣ ತ್ಯಾಜ್ಯ ಘಟಕಗಳ ಬಳಿ ಬೇರ್ಪಡಿಸಿ ಮಾರಾಟ ಮಾಡುವುದರಿಂದ ಗುತ್ತಿಗೆದಾರರಿಗೆ ನಷ್ಟ ಉಂಟಾಗಲಿದೆ. ಗುತ್ತಿಗೆದಾರರ ಅಸಹಕಾರ ಕೂಡ ಹಸಿ ತ್ಯಾಜ್ಯ ಸಂಗ್ರಹಕ್ಕೆ ಅಡ್ಡಿಯಾಗಿ ಪರಿಣಮಿಸಿದೆ.

`ಸದಸ್ಯರ ಸಹಕಾರ ಅತ್ಯಗತ್ಯ~

ಬೆಂಗಳೂರು: ಬಿಬಿಎಂಪಿ ಸದಸ್ಯರು ಸಹಕಾರ ನೀಡದಿದ್ದಲ್ಲಿ ಹಸಿ ಹಾಗೂ ಒಣ ತ್ಯಾಜ್ಯ ವಿಂಗಡಿಸಿ ವಿಲೇವಾರಿ ಮಾಡುವ ವ್ಯವಸ್ಥೆ ಯಶಸ್ವಿಯಾಗಲಾರದು ಎಂದು ಪ್ರತಿಕ್ರಿಯಿಸಿರುವ ಪಾಲಿಕೆ ಆಯುಕ್ತ ರಜನೀಶ್ ಗೋಯಲ್, ಒಣ ತ್ಯಾಜ್ಯವನ್ನು ವಾರದ ಬದಲು ಪ್ರತಿ ದಿನ ಸಂಗ್ರಹಿಸುವ ಕುರಿತು ಚಿಂತನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ತಮ್ಮ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಪಾಲಿಕೆ ಸದಸ್ಯರು ತಮ್ಮ ತಮ್ಮ ವಾರ್ಡ್‌ಗಳಲ್ಲಿ ಪ್ರಚಾರಾಂದೋಲನ ಕೈಗೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಬೇಕು. ಅದಕ್ಕೆ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡಲು ಸಿದ್ಧ~ ಎಂದು ಘೋಷಿಸಿದರು.

ಒಣ ತ್ಯಾಜ್ಯ ವಿಲೇವಾರಿ ಸಮಸ್ಯೆಯಲ್ಲ:
`ಒಣ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ಪಾಲಿಕೆಗೆ ಸಮಸ್ಯೆಯಲ್ಲ. ನಗರದಲ್ಲಿ ನೂರು ಕಡೆಗಳಲ್ಲಿ ಒಣ ತ್ಯಾಜ್ಯ ಘಟಕಗಳಿಗೆ ಜಾಗ ಗುರುತಿಸಲಾಗಿದೆ. ಈ ಜಾಗಗಳಲ್ಲಿ ಕೂಡಲೇ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿ ಒಣ ತ್ಯಾಜ್ಯ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ~ ಎಂದು ಅವರು ಹೇಳಿದರು.

ಐಟಿಸಿ ಕಂಪೆನಿಯು ಸುಮಾರು 300 ಟನ್ ಒಣ ತ್ಯಾಜ್ಯವನ್ನು ಸದ್ಬಳಕೆ ಮಾಡಿಕೊಳ್ಳಲು ಮುಂದೆ ಬಂದಿದೆ. ಪ್ರಸ್ತುತ ಶಿವಾಜಿನಗರ ಕ್ರೀಡಾಂಗಣ ಆವರಣದಲ್ಲಿ ಸುರಿಯುತ್ತಿರುವ ಒಣ ತ್ಯಾಜ್ಯವನ್ನು ಕಂಪೆನಿಗೆ ನೀಡಲಾಗುತ್ತಿದೆ ಎಂದರು.

ಯಲಹಂಕ ವಲಯದಲ್ಲಿ ಹಸಿ ತ್ಯಾಜ್ಯವನ್ನು ವಿಂಗಡಿಸಿ ರೈತರಿಗೆ ಮಾರಾಟ ಮಾಡುವಲ್ಲಿ ಯಶಸ್ಸು ಸಾಧಿಸಲಾಗಿದೆ. ಅದೇ ರೀತಿ, ದಕ್ಷಿಣ ವಲಯದಲ್ಲಿಯೂ ಹಸಿ ತ್ಯಾಜ್ಯ ಸಂಗ್ರಹಣೆಗೆ ಕ್ರಮ ಕೈಗೊಳ್ಳುವಂತೆ ವಲಯ ಜಂಟಿ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ವಾರಕ್ಕೊಮ್ಮೆ ಕಸ ಸಂಗ್ರಹಿಸಲು ಅವಕಾಶವಿಲ್ಲ
ಈ ನಡುವೆ, ಕೆಎಂಸಿ ಕಾಯ್ದೆಯನ್ವಯ 24 ಗಂಟೆಯೊಳಗೆ ಕಸವನ್ನು ಸಂಗ್ರಹಿಸಿ ವಿಲೇವಾರಿ ಮಾಡುವುದು ಪಾಲಿಕೆಯ ಜವಾಬ್ದಾರಿ. ವಾರಕ್ಕೊಮ್ಮೆ ಒಣ ತ್ಯಾಜ್ಯ ಸಂಗ್ರಹಿಸಲು ಕಾಯ್ದೆಯಲ್ಲಿ ಅವಕಾಶವೇ ಇಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.

`ಇತ್ತೀಚೆಗೆ ನಡೆದ ಪಾಲಿಕೆ ಸಭೆಯಲ್ಲಿ ಈ ಬಗ್ಗೆ ಸಮಗ್ರ ಚರ್ಚೆಗೆ ಅವಕಾಶ ನೀಡದಿರುವುದರ ಜತೆಗೆ, ಪಾಲಿಕೆ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅವೈಜ್ಞಾನಿಕವಾಗಿ ತ್ಯಾಜ್ಯ ವಿಂಗಡಣೆ ಕಡ್ಡಾಯಗೊಳಿಸಿರುವುದು ಅದರ ವಿಫಲತೆಗೆ ಕಾರಣವಾಗಿದೆ~ ಎಂದು ಮಾಜಿ ಮೇಯರ್ ಕೆ. ಚಂದ್ರಶೇಖರ್ ದೂರಿದ್ದಾರೆ.

ಶೇ 32ರಷ್ಟು ಹಸಿ ತ್ಯಾಜ್ಯ
ನಗರದಲ್ಲಿ ಬುಧವಾರ ಶೇ 32ರಷ್ಟು ಹಸಿ ತ್ಯಾಜ್ಯ ಸಂಗ್ರಹಿಸಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ. ಒಟ್ಟು 801.34 ಮೆಟ್ರಿಕ್ ಟನ್ ಹಸಿ ಕಸ ಹಾಗೂ 2336.79 ಮೆಟ್ರಿಕ್ ಟನ್ ಮಿಶ್ರ ಕಸ ಸಂಗ್ರಹವಾಗಿದೆ ಎಂದು ಪಾಲಿಕೆ ಪ್ರಕಟಣೆ ತಿಳಿಸಿದೆ.

ಇಸ್ಟೀಟ್ ಆಟದಲ್ಲಿ ನಿರತರಾದ ಪೌರಕಾರ್ಮಿಕರು!
ತ್ಯಾಜ್ಯ ವಿಲೇವಾರಿ ಸಮಸ್ಯೆ ಮತ್ತೆ ಬಿಗಡಾಯಿಸಿರುವ ಹಿನ್ನೆಲೆಯಲ್ಲಿ ನಗರದ ಬನಶಂಕರಿ 2ನೇ ಹಂತದ 100 ಅಡಿ ವರ್ತುಲ ರಸ್ತೆಯಲ್ಲಿ ಪೌರ ಕಾರ್ಮಿಕರು ಬುಧವಾರ ಇಸ್ಪೀಟ್ ಆಡುವುದರಲ್ಲಿ ನಿರತರಾಗಿದ್ದರು.

ಗಣೇಶ ಮಂದಿರ ವಾರ್ಡ್‌ಗೆ ಸೇರಿದ ಈ ಪ್ರದೇಶದಲ್ಲಿ ಕಸ ಸಂಗ್ರಹಿಸಿದ ಕಾರ್ಮಿಕರು ಹಾಗೂ ಆಟೋ ಚಾಲಕರು, ಎಲ್ಲಿಗೆ ಕಸ ಸಾಗಿಸಬೇಕು ಎಂಬುದು ತೋಚದೆ ಇಸ್ಪೀಟ್ ಆಡಿ ಕಾಲಹರಣ ಮಾಡಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT