ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ

Last Updated 12 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ತುಮಕೂರು: ಗ್ರಾಮಕ್ಕೆ ಸಂಪರ್ಕ ರಸ್ತೆ ಕಲ್ಪಿಸುವಂತೆ ಆಗ್ರಹಿಸಿ ತುಮಕೂರು ತಾಲ್ಲೂಕು ಹೆಬ್ಬೂರು ಹೋಬಳಿಗೆ ಸೇರಿದ ಗುಲಗಂಜಿಹಳ್ಳಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಇದಕ್ಕೂ ಮುನ್ನ ನಗರದ ಟೌನ್‌ಹಾಲ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದರು.

ದಶಕಗಳಿಂದಲೂ ಗುಲಗಂಜಿಹಳ್ಳಿಯಿಂದ ಪ್ರಭುವನಹಳ್ಳಿಗೆ ಒಂದು ಕಿಲೋಮೀಟರ್ ದೂರ ರಸ್ತೆ ನಿರ್ಮಿಸಿಕೊಡುವಂತೆ ಶಾಸಕರು, ಸಂಸದರು ಸೇರಿದಂತೆ ಅಧಿಕಾರಿಗಳಿಗೆ ಮನವಿ ನೀಡುತ್ತಲೇ ಬಂದಿದ್ದೇವೆ. ಆದರೂ ಯಾವುದೇ ಪ್ರಯೋಜನ ವಾಗಿಲ್ಲ ಎಂದು ದೂರಿದರು.

ಕಂದಾಯ ಇಲಾಖೆಯ ದಾಖಲೆಗಳಲ್ಲಿ ಗುಲಗಂಜಿಹಳ್ಳಿಯಿಂದ ಪ್ರಭುವನಹಳ್ಳಿಗೆ ರಸ್ತೆ ಇದೆ. ಆದರೆ ಗ್ರಾಮದ ಕೆಲವು ಪಟ್ಟಭದ್ರರು ರಸ್ತೆಯನ್ನು ಅತಿಕ್ರಮಿಸಿಕೊಂಡಿದ್ದಾರೆ. ಹೀಗಾಗಿ ಕೇವಲ 6 ಕಿ.ಮೀ ದೂರವಿರುವ ಗುಬ್ಬಿಗೆ ತೆರಳು ಗ್ರಾಮಸ್ಥರು ಇನ್ನಿಲ್ಲದ ಕಷ್ಟ ಪಡುತ್ತಿದ್ದಾರೆ. ಪ್ರತಿಯೊಂದಕ್ಕೂ ಗುಬ್ಬಿ ಪಟ್ಟಣಕ್ಕೆ ತೆರಳಬೇಕಾಗಿರುವುದರಿಂದ ರಸ್ತೆ ಅತಿಕ್ರಮಣ ತೆರವುಗೊಳಿಸಿ ಸಂಪರ್ಕ ರಸ್ತೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.

ನಾಟಕ ರತ್ನ ಗುಬ್ಬಿ ವೀರಣ್ಣ ಹುಟ್ಟೂರು ಇದಾಗಿದ್ದು, ಅವರು ಬೆಳೆದ ಮನೆ, ಅವರೇ ಕಟ್ಟಿದ ಶಾಲೆ ಇದ್ದರೂ ಊರಿಗೆ ರಸ್ತೆ ಇಲ್ಲವಾಗಿದೆ.  ಅತಿಕ್ರಮಣಗೊಂಡಿರುವ ರಸ್ತೆಯನ್ನು ತಹಶೀಲ್ದಾರ್ ಕೂಡಲೇ ತೆರವುಗೊಳಿಸಿಕೊಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ನಾಳೆಯೇ ಅತಿಕ್ರಮಣ ತೆರವಿಗೆ ಕ್ರಮ ಕೈಗೊಳ್ಳಲಾಗುವುದು. ರಸ್ತೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು. ಬಳಿಕ ಪ್ರತಿಭಟನೆ ವಾಪಸ್ ಪಡೆದರು.

ಪ್ರತಿಭಟನೆ ನೇತೃತ್ವವನ್ನು ಗ್ರಾಮದ ಮುಖಂಡರಾದ ಜಿ.ಸಿ.ಸುರೇಶ್, ಶಿವಗಂಗಮ್ಮ, ಸಮುದ್ರನಹಳ್ಳಿ ಸಿ.ಬಿ.ರಂಗಯ್ಯ, ಪ್ರಭಣ್ಣ, ಮಹಾಲಿಂಗಯ್ಯ, ಮಂಜುನಾಥ್, ರವಿ, ಕುಮಾರ್, ರಂಗಯ್ಯ, ಬಸವರಾಜು, ಹೋಟೆಲ್ ಚೆನ್ನಬಸವಣ್ಣ ಇತರರು ವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT