ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗಿಳಿದ ಜಿಲ್ಲಾಧಿಕಾರಿ

Last Updated 8 ಜನವರಿ 2011, 9:20 IST
ಅಕ್ಷರ ಗಾತ್ರ

ಕೋಲಾರ: ನಗರದ ಕ್ಲಾಕ್ ಟವರ್ ವೃತ್ತ, ಸಮೀಪದ ಮಸೀದಿ, ಹೊಸ ಬಸ್ ನಿಲ್ದಾಣ ವೃತ್ತ, ಕಾಳಮ್ಮ ಗುಡಿ ಬೀದಿ, ಕೋಳಿ ಮಾರುಕಟ್ಟೆ ಮಾರ್ಗದ ಜನರಿಗೆ ಶುಕ್ರವಾರ ಅಚ್ಚರಿ ಮತ್ತು ಸಂತಸದ ದಿನ. ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ ಅವರಿಗೆ ಮಾತ್ರ ನಗರ ಪರಿಚಯದ ದಿನ ! ನಗರದ ಜನ ಮತ್ತು ಜಿಲ್ಲಾಧಿಕಾರಿ ಇಬ್ಬರೂ ಶುಕ್ರವಾರ ಅನಿರೀಕ್ಷಿತವಾಗಿ ಮುಖಾಮುಖಿಯಾದರು. ಅದೂ ಬಿಸಿಲಿನಲ್ಲಿ, ರಸ್ತೆ ಬದಿಯಲ್ಲಿ, ವೃತ್ತಗಳಲ್ಲಿ. ಅಚಾನಕ್ಕಾಗಿ ಜಿಲ್ಲಾಧಿಕಾರಿಯೇ ಬಂದು ನಿಂತಾಗ ಜನ ಹಲವು ಸಮಸ್ಯೆಗಳನ್ನು ಹೇಳಿಕೊಂಡರು.

ಅಧಿಕಾರಿಗಳೊಡನೆ ನಗರ ಸಂಚಾರ ಕೈಗೊಂಡಿದ್ದ ಜಿಲ್ಲಾಧಿಕಾರಿ ತಾಳ್ಮೆಯಿಂದ ಅವರ ಮಾತುಗಳನ್ನು ಕೇಳಿಸಿಕೊಂಡರು. ಅಗತ್ಯವಿದ್ದೆಡೆ ಅಧಿಕಾರಿಗಳಿಗೆ ಸ್ಥಳದಲ್ಲೆ ಸೂಚನೆಗಳನ್ನೂ ನೀಡಿದರು. ಭೇಟಿ ಬಗ್ಗೆ ಮಾಹಿತಿ ನೀಡದಿರುವುದಕ್ಕೆ ನಗರಸಭೆ ಆಯುಕ್ತರ ಬಳಿ ಆಕ್ಷೇಪಣೆ ವ್ಯಕ್ತಪಡಿಸಿದ ಸದಸ್ಯರೊಬ್ಬರ ಬಳಿ ತೆರಳು ‘ಇದು ಜಿಲ್ಲಾಡಳಿತದ ಕಾರ್ಯಕ್ರಮ. ನಿಮಗೆ ಮೊದಲು ಹೇಳಿ ಭೇಟಿ ಮಾಡುವ ಅಗತ್ಯವಿಲ್ಲ’ ಎಂದು ಖಡಕ್ಕಾಗಿ ನುಡಿದ ಘಟನೆಯೂ ನಡೆಯಿತು.

ಬೆಳಿಗ್ಗೆ 10 ಗಂಟೆಗೆ ತಮ್ಮ ಕಚೇರಿಯಿಂದ ಹೊರಬಂದ ಜಿಲ್ಲಾಧಿಕಾರಿ ಎರಡೂವರೆ ಗಂಟೆ ಕಾಲ ವಿವಿಧೆಡೆ ಸುತ್ತಾಡಿದರು. ಮೊದಲಿಗೆ ಕೋಡಿಕಣ್ಣೂರು, ಕೋಲಾರಮ್ಮ ಕೆರೆ ಬಳಿಯ ನೀರು ಸರಬರಾಜು ಕೇಂದ್ರಕ್ಕೆ ಭೇಟಿ ನೀಡಿದ ಅವರು ನಂತರ ಪ್ರಮುಖ ರಸ್ತೆ ಮತ್ತು ವೃತ್ತಗಳೆಡೆಗೆ ನಡೆದರು. ನೀರು ಸರಬರಾಜು ಕೇಂದ್ರದಿಂದ ಗಡಿಯಾರ ಗೋಪುರ ವೃತ್ತಕ್ಕೆ ಬಂದ ಸಚಿವರು ವೃತ್ತದಲ್ಲಿ ನಿರ್ಮಿಸಲಾಗಿದ್ದ ವಿಭಜಕಗಳಲ್ಲಿ ಆಕರ್ಷಣೆ, ಸ್ವಚ್ಛತೆ ಇಲ್ಲದಿರುವುದು ಕಾಣಿಸಿತು. ವಿಭಜಕಗಳ ನಡುವೆ ಖಾಲಿ ಇರುವ ಸ್ಥಳವನ್ನು ಹಸಿರುಮಯವಾಗಿಸಿ. ಹೂವಿನ ಗಿಡ ಬೆಳೆಸಿ ಎಂದರು.

ವೃತ್ತಕ್ಕೆ ಸಮೀಪದಲ್ಲಿರುವ ಮಸೀದಿಯ ಆವರಣದೊಳಕ್ಕೆ ಬಂದ ಅವರಿಗೆ ಕಸದ ರಾಶಿ ಕಾಣಿಸಿತ್ತು. ನಿಯಮಿತವಾಗಿ ಕಸವಿಲೇವಾರಿ ಮಾಡುವ ಕುರಿತು ತಕ್ಷಣವೇ ಅವರು ಸೂಚಿಸಿದರು.ಅಲ್ಲಿಂದ ಅವರು ಹೊಸ ಬಸ್‌ನಿಲ್ದಾಣ ವೃತ್ತಕ್ಕೆ ತೆರಳಿದಾಗ ಅಲ್ಲಿದ್ದ ಜನ ವೃತ್ತದಲ್ಲಿ ಸಂಚಾರಿ ದೀಪ ವ್ಯವಸ್ಥೆಯನ್ನು ಅಳವಡಿಸಬೇಕು ಎಂಬ ಮನವಿಯನ್ನು ಮುಂದಿಟ್ಟರು. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿ ನಂತರ ಕಾಳಮ್ಮ ಗುಡಿಬೀದಿ, ಕೋಳಿ ಮಾರುಕಟ್ಟೆಗೂ ಭೇಟಿ ನೀಡಿ ಪರಿಶೀಲಿಸಿದರು. ನಂತರ ನಗರಸಭೆ ಕಡೆಗೆ ನಡೆದರು.

ನಗರಸಭೆಯಲ್ಲಿ: ನಗರಸಭೆಯಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಡನೆ ಚರ್ಚಿಸಿದ ಜಿಲ್ಲಾಧಿಕಾರಿ ಆಡಳಿತದಲ್ಲಿರುವ ಹಲವು ಸಮಸ್ಯೆ, ಅನುದಾನ ಬಳಕೆಗೆ ಸಂಬಂಧಿಸಿ ಹಲವು ಮಾಹಿತಿಗಳನ್ನು ಪಡೆದುಕೊಂಡರು. ನಂತರ ತಮ್ಮ ಕಚೇರಿಗೆ ತೆರಳಿದರು. ನಗರಸಭೆ ಅಧ್ಯಕ್ಷೆ ನಾಜಿಯಾ, ಉಪಾಧ್ಯಕ್ಷ ಎಸ್.ಆರ್.ಮುರಳಿಗೌಡ, ಸದಸ್ಯರಾದ ಎಲ್.ಖಲೀಲ್ ಅಹ್ಮದ್, ಜಾಫರ್, ಕೃಷ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT