ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಂಪುರ ಶಾಲೆಗೆ `ಪರಿಸರ ಮಿತ್ರ' ಗರಿಮೆ

Last Updated 21 ಏಪ್ರಿಲ್ 2013, 6:45 IST
ಅಕ್ಷರ ಗಾತ್ರ

ಮದ್ದೂರು: `ಸುಜಲಾಂ ಸುಪಲಾಂ ಮಲಯಜ ಶೀತಲಾಂ ಸಸ್ಯ ಶ್ಯಾಮಲಾಂ ಮಾತರಂ' ಎಂಬಂತೆ ಎಳವೆಯಲ್ಲೇ ಮಕ್ಕಳಿಗೆ ಹಸಿರಿನ ಮಹತ್ವ ತಿಳಿಸುವ ಹಸಿರು ಶಾಲೆ ನಮ್ಮ ನಡುವೆಯೇ ಇದೆ.

ತಾಲ್ಲೂಕಿನ ರಾಂಪುರದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಮಂಗಲದ ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಪಾಯೋಜಿತ `ಪರಿಸರ ಮಿತ್ರ ಶಾಲಾ ಕಾರ್ಯಕ್ರಮ'ದಲ್ಲಿ ಪಾಲ್ಗೊಂಡು ಇದೀಗ ಜಿಲ್ಲಾಮಟ್ಟದ `ಪರಿಸರ ಮಿತ್ರ ಶಾಲಾ ಪ್ರಶಸ್ತಿ-2012-13' ಪಡೆದಿದೆ.

ಪಟ್ಟಣದಿಂದ 12ಕಿ.ಮೀ ದೂರದಲ್ಲಿರುವ ರಾಂಪುರ ಗ್ರಾಮದ ಈ ಶಾಲೆ ಯಾವುದೇ ಖಾಸಗಿ ಕಾನ್ವೆಂಟ್ ಶಾಲೆಗಿಂತ ಕಡಿಮೆಯೇನಲ್ಲ ಎನ್ನುವಷ್ಟು ಸುಸಜ್ಜಿತವಾಗಿದೆ. ಸುಸಜ್ಜಿತ ಕಟ್ಟಡ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಯಾವುದೇ ಮೂಲ ಸೌಲಭ್ಯಗಳಿಗೆ ಈ ಶಾಲೆಯಲ್ಲಿ ಕೊರತೆಯಿಲ್ಲ.

ಶಾಲಾ ಆವರಣದಲ್ಲಿ ತರಕಾರಿ ತೋಟವಿದೆ. ಈ ತೋಟದಿಂದಲೇ ಪ್ರತಿನಿತ್ಯ ಬಿಸಿಯೂಟಕ್ಕೆ ತಾಜಾ ತರಕಾರಿಗಳು ಹಾಗೂ ಹಸಿರುಸೊಪ್ಪು ಪೂರೈಕೆಯಾಗುತ್ತಿದೆ. ಇದಲ್ಲದೇ ಶಾಲಾ ಆವರಣದಲ್ಲಿ ಔಷಧಿ ಸಸ್ಯಗಳು ಸೇರಿದಂತೆ ನೆರಳು ನೀಡುವ ಪ್ರಭೇದದ ಗಿಡಗಳನ್ನು ಬೆಳೆಸಲಾಗುತ್ತಿದೆ. ಈ ಗಿಡಗಳಿಗೆ ರಾಷ್ಟ್ರನಾಯಕರ ಹೆಸರನ್ನು ನಾಮಕರಣ ಮಾಡಿ ಮಕ್ಕಳಿಗೆ ದತ್ತು ನೀಡಲಾಗಿದೆ.

ಶಾಲೆಯಲ್ಲಿ ಮಳೆ ಕೂಯ್ಲು ಯೋಜನೆ ಅಳವಡಿಸಲಾಗಿದೆ. ಹನಿ ನೀರಾವರಿ ಅಳವಡಿಕೆ, ಇಂಗುಗುಂಡಿ ನಿರ್ಮಾಣ, ಸ್ವಾಭಾವಿಕ ಎರೆಹುಳ ಗೊಬ್ಬರ ತಯಾರಿಕೆ ಸೇರಿದಂತೆ ಸೌರಶಕ್ತಿ ಬಳಕೆಯನ್ನು ಮಾಡಿಕೊಳ್ಳಲಾಗುತ್ತಿದೆ. ಒಟ್ಟಾರೆ ಪರಿಸರ ಸ್ನೇಹಿ ವಾತಾವಾರಣವನ್ನು ಶಾಲೆಯಲ್ಲಿ ರೂಪಿಸಲಾಗಿದೆ. 

ಶಾಲಾ ಆವರಣದಲ್ಲಿ ರೇಷ್ಮೆ ಹುಳು ಸಾಕಾಣಿಕೆಯ ಚಂದ್ರಿಕೆಗಳನ್ನು ಬಳಸಿಕೊಂಡು ಹಸಿರು ಮನೆ ನಿರ್ಮಿಸಲಾಗಿದೆ. ಬೇಸಿಗೆ ಸಂದರ್ಭದಲ್ಲಿ ಮಕ್ಕಳು ಇಲ್ಲಿ ಕುಳಿತು ಗುಂಪು ಓದು ಚಟುವಟಿಕೆ ನಡೆಸಲು ಅನುವು ಮಾಡಿಕೊಡಲಾಗಿದೆ.

ಪ್ಲಾಸ್ಟಿಕ್ ಮಾಲಿನ್ಯದ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಲಾಗಿದ್ದು, ಇದೀಗ ಶಾಲೆ ಪ್ಲಾಸ್ಟಿಕ್ ಮುಕ್ತ ಶಾಲೆಯಾಗಿದೆ. ಇದಲ್ಲದೇ ಇಡೀ ಗ್ರಾಮವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಬೇಕೆಂಬ ಹಂಬಲವನ್ನು ಮಕ್ಕಳಲ್ಲಿ ತುಂಬಲಾಗಿದೆ. ಈ ಎಲ್ಲಾ ಕಾರ್ಯಗಳ ಹಿಂದೆ ಕ್ರಿಯಾಶೀಲ ಮುಖ್ಯಶಿಕ್ಷಕ ಪುಟ್ಟಸ್ವಾಮಿ ಹಾಗೂ ಶಿಕ್ಷಕರು ಇದ್ದಾರೆ. ಇದೀಗ ಶಾಲೆಗೆ ಜಿಲ್ಲಾಮಟ್ಟದ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಲಭಿಸಿದ್ದು, ಪ್ರಶಸ್ತಿಯೊಂದಿಗೆ ದೊರಕುವ 20ಸಾವಿರ ರೂಪಾಯಿ ನಗದು ಹಣವನ್ನು ಪರಿಸರ ಸ್ನೇಹಿ ಚಟುವಟಿಕೆಗಳಿಗೆ ಬಳಕೆ ಮಾಡಲು ಶಾಲಾ ಶಿಕ್ಷಕ ವರ್ಗ ಪಣ ತೊಟ್ಟಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT