ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಂಪುರ ‘ಸಾಮ್ರಾಟ’ನ ಪ್ರತಿಷ್ಠೆ ಪಣಕ್ಕೆ

ಅಭಿವೃದ್ಧಿ ಮಾತಿಲ್ಲ, ಜಾತಿ ಲೆಕ್ಕವೇ ಎಲ್ಲ
Last Updated 13 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ರಾಂಪುರ (ಉತ್ತರ ಪ್ರದೇಶ): ವಿವಾದಕ್ಕೆ ಮತ್ತೊಂದು ಹೆಸರೇ ರಾಂಪುರದ ಅಜಂಖಾನ್‌. ಅವರು ಹೇಳುವುದೆಲ್ಲ ವಿವಾದವಾಗುತ್ತಿದೆ. ಈಚೆಗೆ ಕಳೆದುಹೋಗಿದ್ದ ಅಜಂಖಾನ್‌ ಎಮ್ಮೆಗಳ ಪತ್ತೆಗಾಗಿ ಉತ್ತರ ಪ್ರದೇಶದ ಪೊಲೀಸರು ಪಟ್ಟ ಪಡಿಪಾಟಲು ನಗೆಪಾಟಲಿಗೆ ಗುರಿಯಾಗಿದೆ. ಅದು ಮರೆಯುವ ಮೊದಲೇ ಅಜಂಖಾನ್‌ ಕಳೆದ ವಾರ ‘ಕಾರ್ಗಿಲ್‌ ಗೆಲುವಿಗೆ ಮುಸ್ಲಿಂ ಯೋಧರೇ ಕಾರಣ’ವೆಂಬ ಹೇಳಿಕೆ ನೀಡಿ ವಿವಾದ ಹುಟ್ಟುಹಾಕಿದ್ದಾರೆ. ಈ ಕಾರಣಕ್ಕೆ ಚುನಾವಣಾ ಆಯೋಗ ಪ್ರಚಾರ ಸಭೆಗಳಲ್ಲಿ ಭಾಗವಹಿಸದಂತೆ ನಿಷೇಧ ಹೇರಿದೆ.

ಚುನಾವಣಾ ಆಯೋಗ ಅಕ್ಷರಶಃ ಅಜಂಖಾನ್‌ ಅವರನ್ನು ಕಟ್ಟಿಹಾಕಿದೆ. ಆದರೂ  ಅವರು ಸುಮ್ಮನೆ ಕುಳಿತಿಲ್ಲ. ಆಯೋಗದ ಕ್ರಮದ ಬಳಿಕವೂ ಬಂದೂಕುಧಾರಿ ಪೊಲೀಸರ ಬೆಂಗಾವಲಿನಲ್ಲಿ ಬಿಡುವಿಲ್ಲದೆ ಓಡಾಡುತ್ತಿದ್ದಾರೆ. ನಾಲ್ಕಾರು ಪೊಲೀಸ್‌ ಜೀಪುಗಳು, ಅಷ್ಟೇ ಸಂಖ್ಯೆ ಕಾರುಗಳು ಅವರನ್ನು ಹಿಂಬಾಲಿಸುತ್ತಿವೆ. ಬಹಿರಂಗ ಪ್ರಚಾರದಲ್ಲಿ ಕಾಣಿಸಿಕೊಳ್ಳದಿದ್ದರೂ, ಪರೋಕ್ಷವಾಗಿ ಮತದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ.

ಅಜಂಖಾನ್‌ ರಾಂಪುರದ ಪ್ರಶ್ನಾತೀತ ‘ಸಾಮ್ರಾಟ’. ಮುಸ್ಲಿಂ ಪ್ರಾಬಲ್ಯವಿರುವ ಈ ಪ್ರದೇಶದಲ್ಲಿ ಅವರನ್ನು ಪ್ರಶ್ನಿಸುವ ಎದೆಗಾರಿಕೆಯುಳ್ಳ ಮತ್ತೊಬ್ಬ ನಾಯಕನಿಲ್ಲ. ಒಂದು ಪಕ್ಷ ಯಾರಾದರೂ ಪ್ರಶ್ನೆ ಮಾಡಿದರೆ, ಅವರನ್ನು ರಾಜಕೀಯವಾಗಿ ಮುಗಿಸುವ ಕಲೆ ಖಾನ್‌ ಕರಗತವಾಗಿದೆ. ಅನೇಕ ಮುಖಂಡರು ಅವರ ಸೇಡಿಗೆ ಬೆಲೆ ತೆತ್ತಿದ್ದಾರೆ.

ರಾಜ್ಯ ಸರ್ಕಾರದಲ್ಲಿ ಅಜಂಖಾನ್‌ ಅವರದ್ದು ಎರಡನೇ ಸ್ಥಾನ. ಮುಸ್ಲಿಂ ಸಮಾಜದ  ಪ್ರಭಾವಿ ನಾಯಕರಾಗಿರುವುದರಿಂದ ಮುಲಾಯಂಸಿಂಗ್‌ ಅವರಿಗೆ ಅಜಂಖಾನ್‌ ಗೆಳೆತನ ಅಗತ್ಯವಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಮುಲಾಯಂ ಮತ್ತು ಅಜಂಖಾನ್‌ ಸಂಬಂಧ ಹಳಸಿತ್ತು. ಅದು ಚುನಾವಣೆ ಮೇಲೂ ಪರಿಣಾಮ ಬೀರಿತ್ತು. ಬಳಿಕ ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಅನಿವಾರ್ಯವಾಗಿ ಸಂಬಂಧ ಸರಿಪಡಿಸಿಕೊಂಡಿದ್ದಾರೆ.

ಮುಲಾಯಂಸಿಂಗ್‌ ಅವರಾಗಲೀ ಅಥವಾ ಅಖಿಲೇಶ್‌ ಅವರಾಗಲೀ ರಾಂಪುರದ ರಾಜಕೀಯ ವ್ಯವಹಾರಗಳಲ್ಲಿ ತಲೆ ಹಾಕುವುದಿಲ್ಲ. ಎಲ್ಲ ನಿರ್ಧಾರಗಳನ್ನು ಅಜಂ ಅವರಿಗೆ ಬಿಟ್ಟಿದ್ದಾರೆ.  ಲೋಕಸಭೆ ಅಭ್ಯರ್ಥಿಯನ್ನು ಅವರೇ ಆಯ್ಕೆ ಮಾಡಿದ್ದಾರೆ. ರಾಜ್ಯ ಅಲ್ಪಸಂಖ್ಯಾತ ಆಯೋಗದ ಮಾಜಿ ಸದಸ್ಯ ನಾಸಿರ್‌ ಅಹಮದ್‌ ಖಾನ್‌  ಸಮಾಜವಾದಿ ಪಕ್ಷದ ಅಭ್ಯರ್ಥಿ. ನಾಸಿರ್‌ ಹೆಸರಿಗೆ ಮಾತ್ರ. ನಿಜವಾದ ಅಭ್ಯರ್ಥಿ ಅಜಂಖಾನ್‌. ಕಾಂಗ್ರೆಸ್‌ ‘ನೂರ್‌ಮಹಲ್‌’ ನವಾಬ ಮನೆತನದ ಖಾಸಿಂ ಆಲಿಖಾನ್‌ ಅವರಿಗೆ ಟಿಕೆಟ್‌ ನೀಡಿದೆ.

ರಾಂಪುರ ಐತಿಹಾಸಿಕ ಸ್ಥಳ. ಮೊದಲ ಸ್ವಾತಂತ್ರ್ಯ ಸಂಗ್ರಾಮದ ಕಿಡಿ ಈ ನೆಲದಲ್ಲೂ ಕಾಣಿಸಿಕೊಂಡಿತ್ತು. ಶ್ರೀಮಂತ ಪರಂಪರೆಯ ಐತಿಹಾಸಿಕ ಪ್ರದೇಶದ ಅಭಿವೃದ್ಧಿಗೆ ರಾಜಕೀಯ ನಾಯಕರು ಎಷ್ಟು ಗಮನ ಕೊಡಬೇಕಿತ್ತೋ ಅಷ್ಟು ನೀಡಿಲ್ಲ. ಈ ಪ್ರದೇಶದಲ್ಲಿ ಹೆಚ್ಚುಕಡಿಮೆ ಶೇ. 50 ಭಾಗ ಮುಸ್ಲಿಮರು. ಬಹಳಷ್ಟು ಯುವಕರು ಅಲಿಗಢ ವಿವಿಯಲ್ಲಿ ಓದಿದ್ದಾರೆ. ಮುಸ್ಲಿಂ ಸಮಾಜ ಸಂಪೂರ್ಣ­ವಾಗಿ ಅಜಂಖಾನ್‌ ಅವರ ಹಿಂದೆ ಹೋಗುವುದಿಲ್ಲ. ಪ್ರಬುದ್ಧವಾಗಿ ಆಲೋಚಿಸುವವರೂ ಬೇಕಾದಷ್ಟು ಜನರಿದ್ದಾರೆ. ಅಲ್ಪಸಂಖ್ಯಾತರು ಬಹಿರಂಗವಾಗಿ ಅಜಂ­ಖಾನ್‌ ಅವರನ್ನು ಬೆಂಬಲಿಸುವಂತೆ ಕಂಡರೂ, ಒಳಗೊಳಗೇ ವಿರೋಧಿಸುತ್ತಾರೆ. ಅಜಂ ಮೇಲೆ ಎಷ್ಟೊಂದು ಸಿಟ್ಟಿದೆ ಎನ್ನುವುದು ಅವರ ಮುಖಭಾವ­ದಲ್ಲೇ ವ್ಯಕ್ತವಾಗುತ್ತದೆ.

ಆಲಂಖಾನ್‌ ತಳ್ಳುವ ಗಾಡಿ ಮೇಲೆ ಚಹಾ ಅಂಗಡಿ ಇಟ್ಟುಕೊಂಡಿದ್ದಾರೆ. ನಾಲ್ಕು  ದಶಕದಿಂದ ಈ ಕಸುಬು ಮಾಡಿಕೊಂಡು ಬಂದಿರುವ 50 ವರ್ಷದ ಆಲಂಖಾನ್‌ ಲೋಕಸಭೆ ಚುನಾವಣೆ ಕುರಿತು ಮಾತಿಗೆಳೆದರೆ, ಅಜಂಖಾನ್‌ ವಿರುದ್ಧ ಕಿಡಿ ಕಾರುತ್ತಾರೆ. ‘ರಾಂಪುರ ಸಾಮ್ರಾಜ್ಯ ಅಜಂಖಾನ್‌ ಅವರಿಗೆ ಸೇರಿರಬಹುದು. ಆದರೆ, ಮತದಾರ ಅವರ ಸ್ವತ್ತಲ್ಲ. ಯಾರನ್ನು ಬೆಂಬಲಿಸಬೇಕು ಎನ್ನುವುದು ನಮಗೆ ಚೆನ್ನಾಗಿ ಗೊತ್ತಿದೆ. ಮತಗಳಿಗಾಗಿ ಅವರೀಗ ಭಿಕ್ಷೆ ಬೇಡುತ್ತಿದ್ದಾರೆ. ಮೊದಲಿನ ಸ್ಥಿತಿ ಈಗಿಲ್ಲ. ಸಂಪೂರ್ಣ ಬದಲಾಗಿದೆ. ಮತದಾರರಿಗೆ ಜಾಗೃತಿ ಬಂದಿದೆ’ ಎಂದು ಹೇಳುತ್ತಾರೆ.

‘ಅಜಂಖಾನ್‌ ಐದು ಸಲ ಶಾಸಕರಾಗಿದ್ದಾರೆ. ರಾಜ್ಯ ಸರ್ಕಾರದ ಮಂತ್ರಿ ಆಗಿದ್ದಾರೆ. ಕ್ಷೇತ್ರಕ್ಕೆ ಏನು ಮಾಡಿದ್ದಾರೆಂದು ನೀವೇ ನೋಡಿ. ಅವರ ಮನೆಗೊಂದು ರೋಡು... ಅವರ ವಿಶ್ವವಿದ್ಯಾಲಯಕ್ಕೊಂದು ರೋಡು ಬಿಟ್ಟರೆ ರಾಂಪುರದಲ್ಲಿ ಇನ್ನೇನಿದೆ?’ ಎಂದು ಆಲಂಖಾನ್‌ ಬೆರಳು ಮಾಡುತ್ತಾರೆ.

ಸುಮಿತ್‌ ತ್ಯಾಗಿ ಅಭಿಪ್ರಾಯವೇ ಬೇರೆ. ‘ರಸ್ತೆ ಅಗಲೀಕರಣಕ್ಕೆ ಬೇಕಾದಷ್ಟು ಮನೆ, ಅಂಗಡಿಗಳನ್ನು ನೆಲಸಮ ಮಾಡಲಾಗಿದೆ. ಅದೊಂದು ಒಳ್ಳೆ ಕೆಲಸ. ಆದರೆ, ಇನ್ನೂ ಪೂರ್ಣವಾಗಿಲ್ಲ. ಆ ವಿಷಯ ಬೇರೆ. ರಸ್ತೆ ಅಗಲೀಕರಣದ ನೆಪದಲ್ಲಿ ರಾಂಪುರದ ಇತಿಹಾಸಕ್ಕೆ ಸಾಕ್ಷಿಯಾಗಿದ್ದ ‘ನವಾಬಿ ಗೇಟ್‌’ ನೆಲಸಮ ಮಾಡಲಾಗಿದೆ. ಈ ಐತಿಹಾಸಿಕ ಸ್ಮಾರಕವನ್ನು ಉಳಿಸಿಕೊಳ್ಳಬೇಕಿತ್ತು.  ನವಾಬ ಮನೆತನದ ಮೇಲಿನ ಸಿಟ್ಟಿಗೆ ಅಜಂಖಾನ್‌ ಅದನ್ನು ಉರುಳಿಸಿದ್ದಾರೆ ಎಂದು ವಿಷಾದಿಸುತ್ತಾರೆ.

‘ಸಾವಿರಾರು ಕೋಟಿ ಹಣ ಸಂಗ್ರಹಿಸಿ ಅಜಂಖಾನ್‌ ‘ಮೌಲಾನ ಮಹಮ್ಮದ್‌ ಜೌಹರ್‌ ವಿಶ್ವವಿದ್ಯಾಲಯ’ ಸ್ಥಾಪಿಸಿದ್ದಾರೆ. ಇದೊಂದು ವಿವಿ ಬಿಟ್ಟರೆ ಅವರ ಕೊಡುಗೆ ಮತ್ತೇನಿಲ್ಲ. ರಸ್ತೆಗಳು ಕೆಟ್ಟ  ಸ್ಥಿತಿಯಲ್ಲಿವೆ. ಹಳ್ಳಿಗಳ ಪಾಡಂತೂ ಹೇಳುವುದೇ ಬೇಡ. ಕರೆಂಟ್‌ ಇಲ್ಲವೇ ಇಲ್ಲ. ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ಬಾಕಿ ಪಾವತಿಸಿಲ್ಲ. ರೈತರಿಗೆ ಸುಮಾರು ₨400 ಕೋಟಿ ಬಾಕಿ ಕೊಡಬೇಕಿದೆ’ ಎಂದು  ಹಿರಿಯ ನಾಗರಿಕ ಮಹೇಂದ್ರ ಗುಪ್ತಾ ಅಂಕಿಸಂಖ್ಯೆ ಕೊಡುತ್ತಾರೆ.

ರಾಂಪುರ ಲೋಕಸಭೆ ಕ್ಷೇತ್ರದಲ್ಲಿ ನಾಲ್ಕು ವಿಧಾನಸಭೆ ಕ್ಷೇತ್ರಗಳಿವೆ. ಎರಡು ಕಡೆ ಕಾಂಗ್ರೆಸ್‌, ಸಮಾಜವಾದಿ ಪಕ್ಷ ಮತ್ತು ಬಿಜೆಪಿ ತಲಾ ಒಂದು ಕ್ಷೇತ್ರಗಳಲ್ಲಿ ಗೆದ್ದಿವೆ. ಬಹುಜನ ಸಮಾಜ ಪಕ್ಷಕ್ಕೆ ರಾಂಪುರದಲ್ಲಿ ನೆಲೆ ಇಲ್ಲ. ಈ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದೂ ಅಭಿವೃದ್ಧಿ ಕಂಡಿಲ್ಲ. ಅಭಿವೃದ್ಧಿ ಯಾರಿಗೂ ಬೇಕಿಲ್ಲ. ಎಲ್ಲ ಪಕ್ಷಗಳು ಜಾತಿ, ಧರ್ಮದ ಮತಗಳನ್ನು ಒಗ್ಗೂಡಿಸುವ ಕಡೆ ಗಮನ ಹರಿಸುತ್ತಿವೆ ಎಂದು 70 ವರ್ಷದ ಗುಪ್ತಾ ವಸ್ತುಸ್ಥಿತಿ ಮೇಲೆ ಬೆಳಕು ಚೆಲ್ಲುತ್ತಾರೆ. ಈ ಚುನಾವಣೆಗೂ ಅಭಿವೃದ್ಧಿ ಮಾನದಂಡವಾಗಲಾರದು ಎಂಬ ನೋವು ಅವರ ಮಾತಿನಲ್ಲಿ ಇಣಕುತ್ತದೆ.

ಕಳೆದ ಎರಡು ಚುನಾವಣೆಯಲ್ಲಿ ರಾಂಪುರ ಸಮಾಜವಾದಿ ಪಕ್ಷಕ್ಕೆ ಒಲಿದಿದೆ. ಚಿತ್ರ ನಟಿ ಜಯಪ್ರದಾ ಎರಡು ಸಲವೂ ಆಯ್ಕೆಯಾಗಿದ್ದಾರೆ. ಆದರೆ, ಅಮರ್‌ಸಿಂಗ್‌ ಹಾಗೂ ಅಜಂಖಾನ್‌ ಕಿತ್ತಾಟದಿಂದ ಜಯಪ್ರದಾ ಸಮಾಜವಾದಿ ಪಕ್ಷ ಬಿಟ್ಟಿದ್ದಾರೆ. ರಾಂಪುರದಿಂದಲೂ ವಲಸೆ ಹೋಗಿದ್ದಾರೆ. ಈ ಕ್ಷೇತ್ರ ಅನೇಕ ಸಲ ಕಾಂಗ್ರೆಸ್‌ ಮತ್ತು ಒಂದೆರಡು ಸಲ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಕಳುಹಿಸಿದೆ. ಬಿಎಸ್‌ಪಿ, ಬಿಜೆಪಿ ಮತ್ತು ಎಎಪಿ ಅಭ್ಯರ್ಥಿಗಳು ಅಖಾಡದಲ್ಲಿದ್ದರೂ, ಕಾಂಗ್ರೆಸ್‌– ಎಸ್‌ಪಿ ನಡುವೆ ನೇರ ಹಣಾಹಣಿ ನಡೆಯುವಂತೆ ಕಾಣುತ್ತಿದೆ. ಮುಸ್ಲಿಂ ಮತಗಳು ಬಿಜೆಪಿ ಬಿಟ್ಟು ಉಳಿದೆಲ್ಲ ಪಕ್ಷಗಳಿಗೆ ಹಂಚಿಕೆಯಾದರೆ ಮಾತ್ರ ಅನಿರೀಕ್ಷಿತ ಫಲಿತಾಂಶ ಬರಬಹುದು. ಉಳಿದೆಡೆಯಂತೆ ಇಲ್ಲೂ ಅಲ್ಪಸಂಖ್ಯಾತ ಮತದಾರ ಬಿಜೆಪಿ ವಿರುದ್ಧವಾಗಿ ನಿಂತಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT