ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಂಪೂ ರಸ್ತೆಯೂ

Last Updated 7 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬಣ್ಣದ ಬೆಳಕಿನಲ್ಲಿ ಬೆಳಗುವ ವಸ್ತ್ರಗಳು ರ‌್ಯಾಂಪ್ ಎನ್ನುವ ಸೀಮಿತ ಚೌಕಟ್ಟಿನಲ್ಲಿ ಉಳಿಯುವುದೇ ಹೆಚ್ಚು. ಝಗಮಗಿಸುವ ಸ್ಪಾಟ್‌ಲೈಟ್‌ಗೆ ಮೈಯೊಡ್ಡಿ ಪಟ್ಟಿಯ ಮೇಲೆ `ಬೆಕ್ಕಿನ ನಡಿಗೆ~ ಹಾಕುವಾಗ ಮಾತ್ರ ಸಾಕು ಎನ್ನುವಂಥ ಅದೆಷ್ಟೋ ಡಿಸೈನ್‌ಗಳು ವಿನ್ಯಾಸಕರ ಮಿದುಳಿನಿಂದ ಇಳಿದು ಬಂದಿವೆ.
 
ಅವುಗಳಲ್ಲಿ ನಿತ್ಯ ಬದುಕಿಗೆ ಇಲ್ಲವೇ ಸಭೆ-ಸಮಾರಂಭಗಳಿಗೆ ಒಪ್ಪುವ ಉಡುಪುಗಳು ಮಾತ್ರ ಅಲ್ಪ. ಆದರೆ ಭಾರತದ ಫ್ಯಾಷನ್ ವಿನ್ಯಾಸಕರು ರ‌್ಯಾಂಪ್‌ನಿಂದ ಇಳಿದು ರಸ್ತೆಗೂ ಬರುವಂಥ ಹಲವಾರು ವಸ್ತ್ರಗಳನ್ನು ನೀಡಿದ್ದಾರೆ.

ಸರಳ ಹಾಗೂ ಸುಂದರ ಎನ್ನುವಂಥ ತತ್ವವನ್ನು ಪಾಲಿಸಿಕೊಂಡು ಯಶಸ್ವಿಯಾದ ದೇಶಿ ಡಿಸೈನರ್‌ಗಳು ವಿದೇಶದಲ್ಲಿಯೂ ಖ್ಯಾತಿ ಪಡೆದಿದ್ದಾರೆ. ಸಲೋನಿ ಲೋಧಾ ಅವರಂತೆ `ಕ್ಲಿಕ್~ ಆಗುತ್ತಿರುವ ಭಾರತೀಯರ ಸಂಖ್ಯೆಯೂ ಹೆಚ್ಚುತ್ತಿದೆ. ನಾವು ರ‌್ಯಾಂಪ್‌ಗಾಗಿ ಮಾತ್ರವಲ್ಲ ರಸ್ತೆಗಾಗಿಯೂ ವಸ್ತ್ರವಿನ್ಯಾಸಗಳನ್ನು ರೂಪಿಸುತ್ತೇವೆ ಎನ್ನುವ ವಿಶ್ವಾಸದೊಂದಿಗೆ ಅನೇಕ ಪ್ರದರ್ಶನಗಳನ್ನೂ ನೀಡಿದ್ದಾರೆ.
 
ಅಂಥ ಕೆಲವು ಫ್ಯಾಷನ್ ಕಲ್ಪನೆಗಾರರು ಬೆಂಗಳೂರು ಫ್ಯಾಷನ್ ವೀಕ್‌ನಲ್ಲಿ ತಮ್ಮ ಕಲಾಕೌಶಲವನ್ನು ಅನಾವರಣಗೊಳಿಸಿದರು. ಅವರೆಲ್ಲರ ನಡುವೆ ಎದ್ದು ಕಾಣಿಸಿದ್ದು ಅಬ್ದುಲ್ ಹಲ್ದೇರ್.

ಸ್ವದೇಶಿ ಬೇರುಗಳಿಗೆ ಅಂಟಿಕೊಂಡು ವಿದೇಶಿ ಲೇಪವನ್ನು ಬಳಸಿ ಉಡುಪು ರೂಪಿಸುವ ಅಬ್ದುಲ್ ಎಲ್ಲ ವಿನ್ಯಾಸಗಳಲ್ಲಿಯೂ ದೇಶಿ ಸೊಬಗು ಪ್ರವಹಿಸುವಂತೆ ಮಾಡಿದವರು. ಮೈಕಲ್ ಜಾಕ್ಸನ್ ಅವರಂಥ ಪಾಪ್ ಸಾಮ್ರಾಟನಿಗೆ ವಸ್ತ್ರಗಳನ್ನು ಸಿದ್ಧಪಡಿಸಿದವರು. ಉದ್ಯಾನನಗರಿಯಲ್ಲಿ ಅವರು ಪ್ರದರ್ಶಿಸಿದ ಪೋಷಾಕುಗಳಲ್ಲಿ ಎಂಬತ್ತರಷ್ಟು ನಿತ್ಯ ಬದುಕಿಗೆ ಒಪ್ಪಿಗೆ ಆಗುವಂಥವುಗಳೇ.

ಮಹಿಳೆಯರಿಗೆ ಅವರು ತೊಡಿಸಿದ ಡ್ರೆಸ್ ಸಂಪ್ರದಾಯಸ್ಥರಿಗೂ ಕೋಪ ಬರಿಸುವುದಿಲ್ಲ. ಬಿಚ್ಚಿಡುವುದಕ್ಕಿಂತ ಮುಚ್ಚಿಡುವುದರಲ್ಲಿ ಸೌಂದರ್ಯ ಹೆಚ್ಚು ಎನ್ನುವ ತತ್ವವನ್ನು ಹಿಂದಿನಿಂದಲೂ ಅವರು ತಮ್ಮ ವಿನ್ಯಾಸಗಳಲ್ಲಿ ಶಿಸ್ತಿನಿಂದ ಪಾಲಿಸಿಕೊಂಡು ಬಂದಿದ್ದಾರೆ.

ಬ್ರಿಟನ್‌ನಲ್ಲಿ ಯಶಸ್ವಿ ಆಗಿರುವ ಸಲೋನಿಯಂಥ ಯುವ ವಿನ್ಯಾಸಕಿಗೂ ಪ್ರೇರಣೆಯಾಗಿ ನಿಂತವರು ಅಬ್ದುಲ್. ಗಾಢ ವರ್ಣಗಳನ್ನು ಯಥೇಚ್ಚವಾಗಿ ಬಳಸಿದರೂ ಅವು ಕಣ್ಣಿಗೆ ಕಸಿವಿಸಿ ಎನಿಸುವುದಿಲ್ಲ. ಸಾಂಪ್ರದಾಯಿಕ ಉಡುಪುಗಳನ್ನು ಮಾಡರ್ನ್ ಡ್ರೆಸ್‌ಗಳಾಗಿ ಮಾಡುವ ಕಲೆ ಇವರಿಗೆ ಕರಗತ.
 
ಮಾಡರ್ನ್ ಸೂಟ್‌ನಲ್ಲಿ ಶೇರ್ವಾನಿ ಬೆರೆಸಲು ಸಾಧ್ಯವೇ ಎಂದು ಹುಬ್ಬೇರಿಸುವವರಿಗೆ ಖಂಡಿತ ಸಾಧ್ಯವೆಂದು ತೋರಿಸಿಕೊಟ್ಟಿದ್ದಾರೆ. ಇಂಥ ಪ್ರಯೋಗಗಳಿಂದಾಗಿಯೇ ರೀತೂ ಬೇರಿ ಅವರಿಂದ ಮತ್ತಷ್ಟು ವಿಭಿನ್ನವಾಗಿ ನಿಲ್ಲುತ್ತಾರೆ ಅಬ್ದುಲ್.

`ಹೊಸ ವಿನ್ಯಾಸ ನೋಡಿದಾಕ್ಷಣ ನಾನು ತೊಟ್ಟುಕೊಳ್ಳಬೇಕು ಎಂದು ಎಲ್ಲರಿಗೂ ಅನಿಸಬೇಕು. ಅಲ್ಲಿ ವಿನ್ಯಾಸವು ಜಯಗಳಿಸುತ್ತದೆ~ ಎನ್ನುವ ಅವರು ವಿದೇಶಗಳಲ್ಲಿ ಪ್ರದರ್ಶನ ನೀಡುವಾಗಲೂ ಸ್ವಂತಿಕೆ ಬಿಟ್ಟುಕೊಡುವುದಿಲ್ಲವೆಂದು ಸ್ಪಷ್ಟವಾಗಿ ಹೇಳುತ್ತಾರೆ. ಕೆಲವು ಫ್ಯಾಷನ್ ವಿನ್ಯಾಸಕರು ರೀತೂ ಬೇರಿ ಜೊತೆಗೆ ಇವರನ್ನು ತೂಗಿ ನೋಡುವುದುಂಟು.
 
ಆದರೆ ರೀತು ಬೇರಿ ಅವರ ಆಡಂಬರದ ಅಲಂಕಾರ ಹಾಗೂ ಕುಸುರಿಯು ಅಬ್ದುಲ್ ವಿನ್ಯಾಸಗಳಲ್ಲಿ ಸೂಕ್ಷ್ಮವಾಗಿ ವ್ಯಕ್ತವಾಗುತ್ತದೆ. ಕಣ್ಣಿಗೆ ಕುಕ್ಕುವಂಥ ಆಡಂಬರದ ಕುಸುರಿಯನ್ನು ಇವರು ಬಳಸಿದ್ದು ಬಹಳ ಕಡಿಮೆ. ಆದ್ದರಿಂದಲೇ ರ‌್ಯಾಂಪ್ ಹೊರಗೂ ಜನರು ಒಪ್ಪಿ ಅಪ್ಪಿಕೊಂಡಿದ್ದಾರೆ.

ದಟ್ಟ ಬಣ್ಣಗಳ ಜೊತೆಗೆ ಆಟವಾಡುವ ಮೆಹ್ನಾಜ್ ನೂರಾನಿ ಅವರು ವಿಕ್ಟೋರಿಯನ್ ಫ್ಯಾಷನ್ ಪ್ರಭಾವಕ್ಕೆ ಒಳಗಾಗಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಹೇಳಬಹುದು. ಗೋಥಿಕ್ ಶೈಲಿಯನ್ನು ವಿಭಿನ್ನವಾದ ರೀತಿಯಲ್ಲಿ ಪ್ರಯೋಗಿಸುವ ಪ್ರಯತ್ನವನ್ನು ಅವರು ಮುಂದುವರೆಸಿದ್ದಾರೆ. ಬ್ರಿಟನ್ ಅರಮನೆಯ ಕಿಟಕಿ ಕರ್ಟನ್‌ವೊಂದು ಡ್ರೆಸ್‌ನಲ್ಲಿ ಕಾಣುತ್ತದೆ. ಅದು ವಿಚಿತ್ರವೆಂದು ಅನಿಸುವುದೂ ಸಹಜ.

ಆದ್ದರಿಂದಲೇ ಅವರು ಉದ್ಯಾನನಗರಿಯಲ್ಲಿ ಪ್ರದರ್ಶಿಸಿದ ಅನೇಕ ವಿನ್ಯಾಸಗಳನ್ನು ಆಡಂಬರ ಇಷ್ಟಪಡುವವರೂ ಸ್ವೀಕರಿಸುವುದು ಕಷ್ಟ. ಇದೇ ಕಾರಣಕ್ಕಾಗಿ ಮೆಹ್ನಾಜ್ ಅವರ ಅನೇಕ ವಿನ್ಯಾಸಗಳು ರ‌್ಯಾಂಪ್ ಎಂಬ ಅಟ್ಟ ಬಿಟ್ಟು ಕೆಳಗೆ ಬರುವುದೇ ಇಲ್ಲ.

`ಲೈಟ್‌ವೇಟ್ ವಸ್ತ್ರಕ್ಕೆ ಹೆವಿ ಲುಕ್~ ನೀಡುವ ರೀಮಾ ಕುಮಾರ್ ಅವರದ್ದು ವಿಶಿಷ್ಟವಾದ ಪ್ರಯತ್ನ. ಅವರಿಗೆ ತಮ್ಮ ವಸ್ತ್ರಗಳು ಮಾರುಕಟ್ಟೆಯಲ್ಲಿಯೂ ಕಾಣಿಸಿಕೊಳ್ಳಬೇಕು ಎನ್ನುವ ಆಶಯ.
 
ಆದ್ದರಿಂದಲೇ ಸರಳ-ಸುಂದರ ಎನ್ನುವತ್ತ ಅವರ ಗಮನ. ರಮೇಶ್ ದೆಂಬ್ಲಾ ಕೂಡ ಅದೇ ಹಾದಿಯನ್ನು ಹಿಡಿದವರು. ಬಾಲಿವುಡ್ ಹಾಗೂ ಸ್ಯಾಂಡಲ್‌ವುಡ್ ತಾರೆಯರಿಗೆ ಇಷ್ಟವಾಗಿರುವ ರಮೇಶ್ ಅನಗತ್ಯ ಎನಿಸುವ ಅಲಂಕಾರವನ್ನು ದೂರವಿಟ್ಟವರು.

ಆದ್ದರಿಂದಲೇ ಅವರು ಗೆರೆ ಎಳೆದು ರೂಪಿಸಿದ ಪ್ರತಿಯೊಂದು ವಸ್ತ್ರ ವಿನ್ಯಾಸವೂ ಎಲ್ಲ ವರ್ಗದವರಿಗೆ ಸುಲಭವಾಗಿ ಹತ್ತಿರವೆನಿಸುತ್ತವೆ. ಹೀಗೆ ಜನರ ಮನಸ್ಸು ಒಪ್ಪುವಂತೆ ಉಡುಪು ಇದ್ದರೆ ಅದೇ ಯಶಸ್ವಿ ಫ್ಯಾಷನ್ ಎನಿಸಿಕೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT