ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಕ್ ಮೋಡಿ

Last Updated 14 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಅರೆ ಅದು ಹುಡುಗೀನಾ ಅಥವಾ ಹುಡುಗನಾ? ಅಷ್ಟುದ್ದ ಕೂದಲನ್ನು ಬೆಳೆಸಿಕೊಂಡಿದ್ದಾನಲ್ವಾ ಎಂದು ಪಕ್ಕದಲ್ಲೇ ಕುಳಿತವರೊಬ್ಬರು ಉದ್ಗಾರ ತೆಗೆದರು. ಸನಿಹದಲ್ಲೇ ಇದ್ದ ಹುಡುಗನೊಬ್ಬ ನಗು ಬೀರಿ `ಹೀ ಈಸ್ ರಾಕ್ ಸಿಂಗರ್ ಯೂ ನೊ~ ಎಂದು ಹೇಳಿ ತನ್ನ ತುಟಿಯ ಮೇಲೆ ಚುಚ್ಚಿಸಿಕೊಂಡ ರಿಂಗ್ ಮುಟ್ಟಿಕೊಂಡ.

ಏನು ಕಾಲ ಬಂತಪ್ಪಾ; ಹುಡುಗಿಯರು ಹಾಕುವ ಓಲೆ, ರಿಂಗನ್ನು ಈ ಹುಡುಗರು ಹಾಕುತ್ತಾರೆ. ಆದರೆ ನಮ್ಮ ಹುಡುಗಿಯರು ಮಾತ್ರ ಇದರ ಗೊಡವೆಗೆ ಹೋಗಲ್ಲ ಎಂದು  ಮಧ್ಯ ವಯಸ್ಕರೊಬ್ಬರು ತಮ್ಮ ಮನಸ್ಸಿನ ಭಾವನೆಗಳನ್ನು ನಿಧಾನವಾಗಿ ಮಾತಿನ ಮೂಲಕ ಹೊರಹಾಕಿದರು. ಅಲ್ಲಿದ್ದವರಿಗೆ ಮಾತ್ರ ಯಾರ ಮಾತನ್ನೂ ಕೇಳಿಸಿಕೊಳ್ಳುವಷ್ಟು ಸಮಯವಿರಲಿಲ್ಲ. ಎಲ್ಲಾ ವಿದ್ಯಾರ್ಥಿಗಳೂ ಸಜ್ಜುಗೊಳ್ಳುತ್ತಿದ್ದ ವೇದಿಕೆ ಮೇಲೆ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ತಯಾರಿ ನಡೆಸುತ್ತಿದ್ದರು.

ಆ ಸಂಜೆಯ ವೇದಿಕೆ ಸಿದ್ಧವಾಗಿದ್ದು ಐಎಫ್‌ಐಎಂ ಬಿಸಿನೆಸ್ ಶಾಲೆಯಲ್ಲಿ. ವಾರ್ಷಿಕ ರಾಷ್ಟ್ರೀಯ ಮಟ್ಟದ ಆಡಳಿತ ಮತ್ತು ಸಾಂಸ್ಕೃತಿಕ ಉತ್ಸವ `ನಮನ್~ ಆಚರಿಸಲು ವಿದ್ಯಾರ್ಥಿಗಳೆಲ್ಲಾ ಅಲ್ಲಿ ಒಂದೆಡೆ ಸೇರಿದ್ದರು.

ಆಡಳಿತ ವೈಖರಿಗೆ ಸಂಬಂಧಪಟ್ಟ ವಿವಿಧ ಕಾರ್ಯಕ್ರಮಗಳು ನಡೆದವು. ವಿದ್ಯಾರ್ಥಿಗಳು ನಾ ಮುಂದು ತಾ ಮುಂದು ಎಂದು ಪೈಪೋಟಿಯಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಕಷ್ಟಕರವಾದ ಮ್ಯಾನೇಜ್‌ಮೆಂಟ್ ಸವಾಲುಗಳಲ್ಲದೇ ಎಲ್ಲರಿಗೂ ಮನರಂಜನೆ ನೀಡುವ ಉದ್ದೇಶದಿಂದ `ನಮನ್~ ಅಂತರ-ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮವೂ ಅಲ್ಲಿತ್ತು. ಅಲ್ಲಿ ಸೇರಿದ್ದ ವಿದ್ಯಾರ್ಥಿಗಳು ಕಾಯುತ್ತಿದ್ದದ್ದು ಹುಚ್ಚೆಬ್ಬಿಸುವ `ರಾಕ್ ಶೋ~ಗೆ. 

ತೆಳ್ಳಗಿನ ದೇಹದ ಹುಡುಗನೊಬ್ಬ ಮೈಕ್ ಹಿಡಿದು ಬಂದು ಕಿರುಚಿದಾಗ ಅಲ್ಲಿದ್ದ ವಿದ್ಯಾರ್ಥಿಗಳೆಲ್ಲ ತಾವೂ ದನಿ ಸೇರಿಸಿದರು. ಇದೇನು ಈ ರೀತಿ ಕಿರುಚುತ್ತಾನೆ ಎಂದು ನೋಡಿದರೆ ಅದರಲ್ಲಿಯೇ ಸಂಗೀತವಿದೆ ಎಂಬ ಸಂದೇಶವನ್ನು ಒಂದೆರೆಡು ಸಾಲಿನ ಹಾಡಿನಲ್ಲಿಯೇ ನೀಡುತ್ತಿದ್ದ.

ತನ್ನ ಉದ್ದ ಕೂದಲನ್ನು ತಿರುಗಿಸುತ್ತಾ ನೃತ್ಯ ಮಾಡುತ್ತಿದ್ದ ಅವನ ಶೈಲಿ ಕಂಡು ಅಲ್ಲಿದ್ದವರೆಲ್ಲಾ ಹಾವಾಡಿಗನ ಪುಂಗಿಗೆ ಸಿಕ್ಕವರಂತೆ ನರ್ತಿಸುತ್ತಿದ್ದರು. ಹಾಡಿನ ಮಧ್ಯೆ ತಮ್ಮನ್ನೇ ತಾವು ರಾಕ್‌ಸ್ಟಾರ್ ಎಂದು ಪರಿಚಯ ಮಾಡಿಕೊಳ್ಳುವ ಅವರ ಪರಿ ಅವರಲ್ಲಿನ ಸಂಗೀತಪ್ರೇಮ ತೋರಿಸುತ್ತಿತ್ತು.

ಒಂದು ತಂಡದ ನಂತರ ಮತ್ತೊಂದು ತಂಡ ವೇದಿಕೆಗೇರಿತು. ಗಾಯಕನ ಜತೆ ಒಬ್ಬ ಗಿಟಾರ್ ಮತ್ತೊಬ್ಬ ಬೇಸ್ ಗಿಟಾರ್, ಇನ್ನೊಬ್ಬ ಡ್ರಮ್  ಹಿಡಿದು ಸಿದ್ಧರಾದರು. ತಮಗೆ ನೀಡಿದ ಕಾಲಾವಕಾಶದೊಳಗೆ ಸ್ಪರ್ಧಿಸಬೇಕಿರುವುದು ಅವರ ಮುಂದಿದ್ದ ಸವಾಲು. ಉದ್ದ ಕೂದಲೇ ರಾಕ್ ಸಂಗೀತಕ್ಕೆ ಮುಖ್ಯವೇನೋ ಎಂಬಂತೆ ಅವರೆಲ್ಲಾ ಸ್ಟೆಪ್ ಕಟ್ ಮಾಡಿಕೊಂಡ ಕೂದಲನ್ನು ಬಿಟ್ಟುಕೊಂಡಿದ್ದರು. ಹುಡುಗಿಯರು ಕೂಡ ಅಷ್ಟೂ ಚೆನ್ನಾಗಿ ಹೇರ್‌ಸ್ಟೈಲ್ ಮಾಡಬಲ್ಲರೇ ಎಂದು ಆಶ್ಚರ್ಯ ಮೂಡಿಸಿತ್ತು.

ಹಾಡು ಶುರುವಾದಾಗ ವೇದಿಕೆ ಮೇಲೆ ಇದ್ದ ತಂಡದವರು ತಮ್ಮ ತಲೆಯನ್ನು ತಿರುಗಿಸುತ್ತಾ ಕುಣಿಯಲು ಸಜ್ಜಾದರು. ಅದಕ್ಕೆ ಬೆಂಬಲವಾಗಿ ಹುಡುಗಿಯರು ಕೂಡ ತಾವು ಕಟ್ಟಿಕೊಂಡ ಕೂದಲನ್ನು ಬಿಚ್ಚಿ ಕುಣಿಯಲು ಶುರು ಮಾಡಿದರು. ಚಪ್ಪಾಳೆ ಸಿಳ್ಳೆಗಳಿಂದ ಇಡೀ ಸ್ಕೂಲಿನ ಆವರಣ ಮಾರ್ದನಿಸುತ್ತಿತ್ತು. ಇವರ ಸಂಗೀತಕ್ಕೆ ಹೊರಗಡೆಯಿಂದಲೂ ಜನ ಇಣುಕುತ್ತಿದ್ದರು.

`ಇದೇನು ಸಂಗೀತ ಕಿವಿ ಮುಚ್ಚಿಕೊಳ್ಳುವ ಹಾಗೆ ಇದೆ ಸಾರ್ವಜನಿಕರಿಗೂ ಇದರಿಂದ ಸಮಸ್ಯೆ, ಈ ರೀತಿ ಕಿರುಚುತ್ತೀರಿ? ಆರೋಗ್ಯಕ್ಕೆ ಏನೂ ಸಮಸ್ಯೆ ಆಗಲ್ವಾ?~ ಎಂಬಿತ್ಯಾದಿ ಪ್ರಶ್ನೆಗಳನ್ನು ವಿದ್ಯಾರ್ಥಿಯೊಬ್ಬನನ್ನು ಕೇಳಿದಾಗ, `ಇದು ಸಂಗೀತವಷ್ಟೇ. ಒಬ್ಬೊಬ್ಬರಿಗೆ ಒಂದೊಂದು ಮ್ಯೂಸಿಕ್ ಇಷ್ಟ. ಇದರ ಶೈಲಿ ಹೀಗೆಯೇ. ರಾಕ್ ಸಂಗೀತವನ್ನು ಇನ್ನೂ ಉತ್ತಮಪಡಿಸಬೇಕು~ ಎಂದು ನಗು ಸೂಸಿ ಕಾರ್ಯಕ್ರಮ ನೋಡಲು ವೇದಿಕೆಯತ್ತ ನಡೆದ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT