ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗಶ್ರೀ ಸಮ್ಮೇಳನ

Last Updated 23 ನವೆಂಬರ್ 2011, 19:30 IST
ಅಕ್ಷರ ಗಾತ್ರ

ವಿದ್ವಾನ್ ಡಿ. ಸುಬ್ಬರಾಮಯ್ಯ ಅವರು (1903-1986) ಗಾಯಕ, ಬೋಧಕ, ಬರಹಗಾರರಾಗಿ ಸಂಗೀತ ಕ್ಷೇತ್ರದಲ್ಲಿ ಗಣ್ಯ ಸೇವೆ ಸಲ್ಲಿಸಿದವರು. ಗಾನ ಕಲಾಸಿಂಧು  ಬಿರುದಾಂಕಿತರಾಗಿ, ರಾಜ್ಯ ಅಕಾಡೆಮಿಯ ಪ್ರಶಸ್ತಿಯನ್ನೂ ಗಳಿಸಿದವರು.

ಅವರ ಶಿಷ್ಯರಲ್ಲಿ ಒಬ್ಬರಾದ ವಿದುಷಿ ಟಿ.ಎಸ್. ವಸಂತ ಮಾಧವಿ ಅವರು ಗುರುವಿನ ಸ್ಮರಣಾರ್ಥ `ಡಿ. ಸುಬ್ಬರಾಮಯ್ಯ ಫೈನ್ ಆರ್ಟ್ ಟ್ರಸ್ಟ್~  ಸ್ಥಾಪಿಸಿ 18 ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಉಪಯುಕ್ತ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ನಿಯತವಾಗಿ ಗಣ್ಯ ಕಲಾವಿದರ ಸಂಗೀತ ಕಛೇರಿ, ಪ್ರಾತ್ಯಕ್ಷಿಕೆ, ಉಪನ್ಯಾಸಗಳನ್ನು ಆಯೋಜಿಸುತ್ತಿದ್ದಾರೆ. ಪ್ರತಿ ವರ್ಷ ನವಂಬರ್ ತಿಂಗಳಲ್ಲಿ ರಾಗಶ್ರೀ ಸಮ್ಮೇಳನ ಹಮ್ಮಿಕೊಳ್ಳುತ್ತಾರೆ.

ಇದರ ಮೂಲಕ ಸಂಗೀತ, ನೃತ್ಯ, ನಾಟಕ, ಗಮಕ, ಕ್ವಿಜ್ ಮುಂತಾದ 500ಕ್ಕೂ ಹೆಚ್ಚು ಕಾರ್ಯಕ್ರಮಗಳು ಈವರೆಗೆ ನಡೆದಿವೆ. ಉತ್ಸವದಲ್ಲಿ ಹಿರಿಯ ಕಲಾವಿದರೊಬ್ಬರಿಗೆ  `ಗಾಂಧರ್ವ ವಿದ್ಯಾನಿಧಿ~  ಹಾಗೂ ಕಲಾಪೋಷಕರೊಬ್ಬರಿಗೆ  `ಲಲಿತಕಲಾಶ್ರಯ~  ಬಿರುದು ನೀಡಿ ಗೌರವಿಸಲಾಗುತ್ತದೆ. ಅಲ್ಲದೆ ಲಲಿತಕಲಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಕಲಾವಿದರುಗಳನ್ನೂ ವಿದ್ವತ್ ಸದಸ್ಸಿನಲ್ಲಿ ಸನ್ಮಾನಿಸಲಾಗುತ್ತದೆ. ಈ ವರ್ಷ  ಕುಮಾರಿ ಜ್ಯೋತಿ ಸುಬ್ರಹ್ಮಣ್ಯ ಸ್ಮಾರಕ ಸ್ಪರ್ಧೆ ಯಲ್ಲಿ ಉದಯೋನ್ಮುಖ ಕಲಾವಿದರಿಗೆ ಬಹುಮಾನಗಳನ್ನೂ ನೀಡಲಾಗುತ್ತಿದೆ. ಸಂಸ್ಥೆ ಈ ವರೆಗೆ 170 ಜನ ಶಿಕ್ಷಣಾರ್ಥಿಗಳಿಗೆ ಶಿಷ್ಯವೇತನ ನೀಡಿದೆ.

ಗಾಂಧರ್ವ ವಿದ್ಯಾನಿಧಿ
ಈ ಸಲದ ರಾಗಶ್ರೀ ಸಮ್ಮೇಳನ ಶುಕ್ರವಾರದಿಂದ ಭಾನುವಾರ ವರೆಗೆ (ನ. 25ರಿಂದ 27) ನಡೆಯಲಿದ್ದು, ಅಧ್ಯಕ್ಷತೆಯನ್ನು  ಹಿರಿಯ ಕಲಾವಿದ ಬಳ್ಳಾರಿ ಎಂ. ವೆಂಕಟೇಶಾಚಾರ್ ವಹಿಸುತ್ತಿದ್ದಾರೆ.

ಸಂಗೀತ ಕುಟುಂಬದಿಂದ ಬಂದ ಇವರು ಗಾಯಕ, ಬೋಧಕರಾಗಿ ಬೆಳಗಿದವರು. ತಮ್ಮ ಸಹೋದರ ಎಂ. ಶೇಷಗಿರಿ ಆಚಾರ್ ಅವರೊಂದಿಗೆ  ಬಳ್ಳಾರಿ ಸಹೋದರರು  ಎಂಬ ನಾಮಧೇಯದೊಂದಿಗೆ ಅನೇಕ ಕಡೆ ಯುಗಳ ಗಾಯನ ಮಾಡಿದ್ದಾರೆ. ಮೈಸೂರು ಆಕಾಶವಾಣಿಯ ಕಲಾವಿದರಾಗೂ ಸೇವೆ ಸಲ್ಲಿಸಿದ್ದಾರೆ. ಸಂಗೀತ ಕಲಾರತ್ನ  (ಬೆಂಗಳೂರು ಗಾಯನ ಸಮಾಜ) ಹಾಗೂ  ಸಂಗೀತ ವಿದ್ಯಾನಿಧಿ (ಜೆಎಸ್‌ಎಸ್ ಸಂಗೀತ ಸಭೆ) ಬಿರುದುಗಳಲ್ಲದೆ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ  ಕರ್ನಾಟಕ ಕಲಾಶ್ರೀ  ಪ್ರಶಸ್ತಿಗೂ ಭಾಜನರಾಗಿದ್ದಾರೆ. ಇದೀಗ ಸುಬ್ಬರಾಮಯ್ಯ ಟ್ರಸ್ಟ್‌ನಿಂದ  ಗಾಂಧರ್ವ ವಿದ್ಯಾನಿಧಿ  ಬಿರುದು ಸ್ವೀಕರಿಸಲಿದ್ದಾರೆ.

ಇದಲ್ಲದೆ ಈ ವರ್ಷದ ಉತ್ಸವದಲ್ಲಿ ಡಾ. ಬಿ.ವಿ. ರಾಜಾರಾಂ (ನಾಟಕ), ಪದ್ಮಿನಿ ರವಿ (ನತ್ಯ), ಡಾ. ಜಯಶ್ರೀ ಅರವಿಂದ್ (ಸುಗಮ ಸಂಗೀತ), ಗಂಗಮ್ಮ ಕೇಶವಮೂರ್ತಿ (ಗಮಕ) ಹಾಗೂ ಡಾ. ಶಕುಂತಲಾ ನರಸಿಂಹನ್ (ಸಂಗೀತ) ಅವರನ್ನು ಸನ್ಮಾನಿಸಲಾಗುವುದು. ಸಂಗೀತವಲ್ಲದೆ, ತೊಗಲು- ಗೊಂಬೆಯಾಟ, ಪ್ರಾತ್ಯಕ್ಷಿಕೆಗಳೂ ಸಂಜೆಯ ವೇಳೆ ನಡೆಯಲಿದೆ.

ಕಾರ್ಯಕ್ರಮ

ಡಿ. ಸುಬ್ಬರಾಮಯ್ಯ ಫೈನ್ ಆರ್ಟ್ಸ್ ಟ್ರಸ್ಟ್: ಶುಕ್ರವಾರ 19ನೇ ರಾಗಶ್ರೀ ಸಮ್ಮೇಳನೋತ್ಸವ. ಎಚ್.ವಿ. ರಾಮಚಂದ್ರರಾವ್ ಅವರಿಂದ ಉದ್ಘಾಟನೆ ಮತ್ತು  ಕೃತಿಮಣಿ ಮಂಜೂಷಾ  ಸೀಡಿ ಲೋಕಾರ್ಪಣೆ. ನಂತರ ನಾಗವಲ್ಲಿ ನಾಗರಾಜ್ (ಗಾಯನ), ವೆಂಕಟೇಶ ಜೋಸ್ಯರ್ (ಪಿಟೀಲು), ಸಿ. ಚೆಲುವರಾಜ್ (ಮೃದಂಗ), ಎಸ್. ಶ್ರೀಶೈಲನ್ (ಘಟ). ಅಧ್ಯಕ್ಷರು: ಬಳ್ಳಾರಿ ಎಂ. ವೆಂಕಟೇಶಾಚಾರ್.
ಸ್ಥಳ: ಗಾಯನ ಸಮಾಜ, ಕೆ ಆರ್ ರಸ್ತೆ. ಸಂಜೆ 5.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT