ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗಿ: ಗುಣಿ ಪದ್ಧತಿ ಕಡೆಗೆ ಹೆಚ್ಚಿದ ಒಲವು

Last Updated 1 ಆಗಸ್ಟ್ 2013, 9:34 IST
ಅಕ್ಷರ ಗಾತ್ರ

ಮಾಲೂರು: ರಾಗಿ ಬೆಳೆಯನ್ನು ಗುಣಿ ಪದ್ಧತಿ ಅಳವಡಿಸಿಕೊಂಡು ಅತಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯುವ ಕೌಶಲವನ್ನು ಇಲ್ಲಿನ ರೈತರು ಕಂಡುಕೊಂಡಿದ್ದಾರೆ.

ತಾಲ್ಲೂಕಿನ ದೊಡ್ಡಶಿವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ನಹಳ್ಳಿಯ ಪ್ರಗತಿ ಪರ ರೈತ ವೆಂಕಟೇಶಪ್ಪ ಕಳೆದ 2 ವರ್ಷಗಳಿಂದ ರಾಗಿ ಬೆಳೆಯನ್ನು ಗುಣಿ ಪದ್ಧತಿ ಅಳವಡಿಸಿಕೊಂಡು ಬೆಳೆಯುತ್ತಿದ್ದು, ಕಡಿಮೆ ವಿಸ್ತೀರ್ಣದ ಭೂಮಿಯಲ್ಲಿ ಅಲ್ಪ ವೆಚ್ಚದಿಂದ ಹೆಚ್ಚು ಇಳುವರಿ ಪಡೆಯುತ್ತಿದ್ದಾರೆ. ಅದನ್ನು ಗಮನಿಸಿದ ಸುತ್ತ-ಮುತ್ತಲ ಗ್ರಾಮಗಳ  ರೈತರು ಈ ಬಾರಿ ಗುಣಿ ಪದ್ಧತಿಯನ್ನು ಅಳವಡಿಸಿಕೊಂಡು ಹೆಚ್ಚು ಇಳುವರಿ ಪಡೆಯಲು ಮುಂದಾಗಿದ್ದಾರೆ.

ಪಟ್ಟಣ ಸೇರಿದಂತೆ ತಾಲ್ಲೂಕಿನ ದೊಡ್ಡಶಿವಾರ, ವಡಗನಹಳ್ಳಿ, ಬ್ಯಾಟರಾಯನಪುರ, ದೊಡ್ಡಕಡತೂರು, ಹನುಮಂತಪುರ, ಬರಗೂರು, ತಂಬಹಳ್ಳಿ ಹಾಗೂ ಕೋಲಾರ, ಮುಳಬಾಗಲು, ಬಂಗಾರಪೇಟೆ, ತಾಲ್ಲೂಕಿನ ಗ್ರಾಮಗಳಲ್ಲೂ ಗುಣಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದು, ತಾಲ್ಲೂಕು ಸೇರಿದಂತೆ ಇತರೆ ತಾಲ್ಲೂಕುಗಳಲ್ಲಿ  ಸುಮಾರು 600 ರಿಂದ 800 ಎಕರೆ ಭೂಮಿಯಲ್ಲಿ ರಾಗಿ ಬೆಳೆಯನ್ನು ನಾಟಿ ಮಾಡಲಾಗಿದೆ.

ಬಡತನದ ಬೇಗೆಯಲ್ಲಿ ಬೆಂದು ಬಸವಳಿದಿರುವ ತಾಲ್ಲೂಕಿನ ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಮಳೆ ಮತ್ತು ಕೊಳವೆ ಬಾವಿಗಳ ಮೇಲೆ ಆಧಾರವಾಗಿದ್ದಾರೆ. ಇತ್ತೀಚೆಗೆ ರಾಜ್ಯದಾದ್ಯಂತ ಉತ್ತಮ ಮಳೆಯಾಗುತ್ತಿದ್ದರೂ ಬಯಲು ಸೀಮೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಈ ವೇಳೆಗಾಗಲೇ ರಾಗಿ ನಾಟಿ ಮಾಡಬೇಕಾಗಿದ್ದು, ಮಳೆಯಾಗದೆ ರಾಗಿ ನಾಟಿ ವಿಳಂಬವಾಗಿದೆ. ಇಂಥ ಸಂದರ್ಭದಲ್ಲಿ ಗುಣಿಪದ್ಧತಿಯು ರೈತರಲ್ಲಿ ಆಶಾವಾದ ಮೂಡಿಸಿದೆ.

ಸಾಮಾನ್ಯವಾಗಿ ಒಂದು ಎಕರೆ ಭೂಮಿಗೆ 10 ರಿಂದ 12 ಕೆ.ಜಿ ರಾಗಿ ಬಿತ್ತನೆ ಮಾಡಲಾಗುತ್ತದೆ. ಆದರೆ ಗುಣಿ ಪದ್ಧತಿಯನ್ನು ಅಳವಡಿಸಿಕೊಂಡು ಎಂ.ಆರ್-6 ತಳಿಯ 50 ಗ್ರಾಂ ರಾಗಿಯನ್ನು ಒಂದು ರಾತ್ರಿ ನೆನೆಹಾಕಿ ಬೆಳಿಗ್ಗೆ ನರ್ಸರಿಗೆ ನೀಡಬೇಕು. ನಂತರ ಒಂದು ಕ್ರೇಟ್‌ನಲ್ಲಿ 98 ರಾಗಿ ಕಾಳನ್ನು ಬಿತ್ತನೆ ಮಾಡಿ ಪೈರನ್ನು ಬೆಳೆಸಲಾಗುತ್ತದೆ.  20ದಿನ ಪೈರನ್ನು ಪೋಷಿಸಿ ನಂತರ ನಾಟಿ ಮಾಡಲಾಗುತ್ತದೆ.

ಒಂದು ಎಕರೆಗೆ 10,880 ರಾಗಿ ಪೈರು  ಮತ್ತು ಒಂದು ಗುಂಟೆಗೆ 272 ರಾಗಿ ಪೈರುಗಳು ಬೇಕು.  2 ಅಡಿಗೆ 2 ಅಡಿ ಅಂತರದಲ್ಲಿ ಅರ್ಧ ಅಡಿ  ಆಳ ಗುಣಿ ತೆಗೆದು ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ, ಝಿಂಕ್, ಬೋರಾನ್ ಸೇರಿದಂತೆ ಸೂಕ್ಷ್ಮಾಣು ಗೊಬ್ಬರವನ್ನು ಅಗತ್ಯಕ್ಕೆ ತಕ್ಕಂತೆ ನೀಡಬೇಕಾಗುತ್ತದೆ ಎನ್ನುತ್ತಾರೆ ರೈತ ವೆಂಕಟೇಶಪ್ಪ.

ಪೈರನ್ನು ನಾಟಿ ಮಾಡಿದ 40 ದಿನಗಳ ನಂತರ ಅದನ್ನು ತುಳಿದು ಬಗ್ಗಿಸುವುದರಿಂದ ಒಂದು ಪೈರು ಸುಮಾರು 20 ರಿಂದ 30 ತೆಂಡೆ ಹೊಡೆಯುತ್ತದೆ. ತೆನೆಗಳ ಸಂಖ್ಯೆ ಏರಿಕೆಯಾಗಿ ಇಳುವರಿ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಒಂದು ಎಕರೆ ಭೂಮಿಯಲ್ಲಿ ಬಿತ್ತನೆ ಮಾಡಿದ ರಾಗಿಯಿಂದ 10 ರಿಂದ 15 ಕ್ವಿಂಟಲ್ ಇಳುವರಿ ಪಡೆದರೆ, ಗುಣಿ ಪದ್ಧತಿ ಅಳವಡಿಸಿ ಬೆಳೆದ ರಾಗಿಯಲ್ಲಿ ಒಂದು ಎಕರೆ ಭೂಮಿಗೆ 25 ರಿಂದ 30 ಕ್ವಿಂಟಲ್ ರಾಗಿ ಸಿಗಲಿದೆ.

ಆದ್ದರಿಂದ ಕಡಿಮೆ ವೆಚ್ಚದಲ್ಲಿ ಅತಿ ಹೆಚ್ಚು ಇಳುವರಿಯನ್ನು ಪಡೆಯುವ ನೂತನ ಪದ್ಧತಿಯನ್ನು ಇಲ್ಲಿನ ರೈತರು ಕಂಡುಕೊಂಡಿದ್ದಾರೆ. ಮಾಲೂರು- ಕೋಲಾರ ರಸ್ತೆಯಲ್ಲಿರುವ ಶಿವಣ್ಣ ಅವರ ಗ್ರೀನ್‌ಹೌಸ್‌ನಲ್ಲಿ ಇದುವರೆಗೆ 1.78 ಲಕ್ಷ ರಾಗಿ ಸಸಿಗಳನ್ನು ರೈತರು ಪಡೆದಿದ್ದಾರೆ.

ರೈತರು ಗುಣಿ ಪದ್ಧತಿಯನ್ನು ಅಳವಡಿಸಿಕೊಂಡು ರಾಗಿ ಬೆಳೆಯುವುದರಿಂದ ಪೋಷಕಾಂಶಗಳು ಅಗತ್ಯಕ್ಕೆ ತಕ್ಕಂತೆ ಸಮರ್ಪಕವಾಗಿ ಸಿಗುತ್ತವೆ. ನೀರು ಕಡಿಮೆಯಾದರೂ ಪೈರುಗಳ ಶಕ್ತಿಗೆ ಕುಂದುಂಟಾಗುವುದಿಲ್ಲ. ಅದರಿಂದ ಹೆಚ್ಚು ಇಳುವರಿ ಸಿಗಲಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎ.ರಂಗಸ್ವಾಮಿ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT