ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗಿಣಿಯ ಒಡವೆ `ಕಣಿ'

Last Updated 10 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಕೆನೆಬಣ್ಣದ ಮೈಗೆ ಕಡು ಗುಲಾಬಿ ವರ್ಣದ ಅಂಚುಳ್ಳ ಆ ಸೀರೆ ಥೇಟ್ ಸೊಳ್ಳೆ ಪರದೆಯಷ್ಟೇ ಪಾರದರ್ಶಕವಾಗಿತ್ತು. ರಾಗಿಣಿ ದ್ವಿವೇದಿ ಎಂಬ ಕಟ್ಟುಮಸ್ತು ಕಾಯದ ನಟಿ ಅದನ್ನು ಉಟ್ಟು ಬಂದರು. ರವಿಕೆಯ ಪ್ರತಿ ಹೊಲಿಗೆಯೂ, ಬೆನ್ನಿನಲ್ಲಿ ಅದರ ಅಂಚಿಗೆ ಹಾಕಿದ್ದ ಹೆಣಿಗೆಯನ್ನೂ ಮುಚ್ಚಿಡಲಿಲ್ಲ ಆ ಸೀರೆ.

ಕಮರ್ಷಿಯಲ್ ಸ್ಟ್ರೀಟ್‌ಗೆ ಕೂಗಳತೆ ದೂರದಲ್ಲಿ ಡಿಕನ್ಸನ್ ರಸ್ತೆಯ ತುದಿಯಲ್ಲಿ ಆರಂಭವಾಗಿರುವ `ಓರ‌್ರಾ' ವಜ್ರ-ಚಿನ್ನಾಭರಣ ಮಳಿಗೆಗೆ ಮಂಗಳವಾರ ಅತಿಥಿಯಾಗಿ ಆಗಮಿಸಿದ ರಾಗಿಣಿ, ಮಳಿಗೆಯ ಮೇಲಂತಸ್ತಿಗೆ ಹೋಗಿ ಐದೇ ನಿಮಿಷದಲ್ಲಿ ಮರಳಿದರು. ಬೋಳು ಕತ್ತಿನಲ್ಲಿ ಒಂದು ದೊಡ್ಡ ಕಂಠಹಾರ ಮತ್ತೆ ಕತ್ತಿನಿಂದ ಭುಜದವರೆಗೆ ಇಳಿದಿದ್ದ ಭಾರೀ ಚೋಕರ್ ಇತ್ತು. ಅದರಲ್ಲಿನ ಪೋಣಿಸಿದಂಥ ವಜ್ರದ ಹರಳುಗಳು ಸೀರೆಯೊಳಗಿನಿಂದಲೇ ಕಣ್ಣು ಮಿಟುಕಿಸಿದವು. ಮಳಿಗೆಯ ದೀಪಗಳಿಗೆ ಒಮ್ಮೆ, ಕ್ಯಾಮೆರಾ ದೀಪ, ಫ್ಲ್ಯಾಶ್‌ಗಳಿಗೆ ಇನ್ನೊಮ್ಮೆ ಮಿಣಿಮಿಣಿ ಅನ್ನುತ್ತಿದ್ದವು.

ಒಡವೆಯೆಂದರೆ...
`ನನಗೇನೂ ಒಡವೆ ವ್ಯಾಮೋಹವಿಲ್ಲ. ಆದರೆ ಚಿನ್ನ ಮತ್ತು ವಜ್ರದೊಡವೆಗಳು ಆಪದ್ಬಾಂಧವರಂತೆ ಕಷ್ಟಕಾಲಕ್ಕೆ ನೆರವಾಗುತ್ತವೆ ಮಾತ್ರವಲ್ಲ ಹೂಡಿಕೆಯ ದೃಷ್ಟಿಯಲ್ಲಿ ಒಡವೆಗಳನ್ನು ಪರಿಗಣಿಸುತ್ತೇನೆ. ನಾನೊಬ್ಬಳೇ ಅಲ್ಲ. ಈಗ ಒಡವೆಗಳನ್ನು ಆಲಂಕಾರಿಕ ವಸ್ತುವಾಗಿ ನೋಡುವುದಕ್ಕಿಂತ ಕಮರ್ಷಿಯಲ್ ದೃಷ್ಟಿಯಿಂದಲೇ ನೋಡುವುದು ಹೆಚ್ಚು. ನಾನು ಧರಿಸಿರೋ ಈ ನೆಕ್‌ಲೇಸ್ ತುಂಬಾ ಹೆವಿಯಾಗಿದೆ.ಇದನ್ನು ಬಹಳ ಅಪರೂಪಕ್ಕೊಮ್ಮೆ ಹಾಕ್ಕೋಬಹುದು. ಆದರೆ ಇನ್‌ವೆಸ್ಟ್‌ಮೆಂಟ್ ಅಂತ ಖರೀದಿ ಮಾಡಬಹುದು' ಎಂದು ಒಡವೆ ವ್ಯಾಪಾರ ಮತ್ತು ವ್ಯಾಮೋಹವನ್ನು ಲೋಕೋತ್ತರಕ್ಕೆ ಬೆಸೆದರು.

ನಂತರ ಅವರ ಮಾತು `ಒರ‌್ರಾ'ದ ಹೊಸ ಮಳಿಗೆಯತ್ತ ಹೊರಳಿತು. `ಡಿಕನ್ಸನ್ ರಸ್ತೆಯ ಈ ಭಾಗ `ಜ್ಯುವೆಲ್ಸ್ ಸ್ಟ್ರೀಟ್' ಎಂಬಂತಿದೆ. ಒಂದಾದ ಮೇಲೊಂದರಂತೆ ಆಭರಣ ಮಳಿಗೆಗಳು ಇಲ್ಲಿವೆ. ಆದರೂ ಮಗ್ಗುಲಲ್ಲೇ ತಮ್ಮ ಹೊಸ ಮಳಿಗೆಯನ್ನು ತೆರೆದಿದ್ದಾರೆಂದರೆ, ತಮ್ಮ ಬ್ರಾಂಡ್‌ಗಿರುವ ಮಾರುಕಟ್ಟೆ ಬಗ್ಗೆ `ಒರ‌್ರಾ'ದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ನಿರ್ದೇಶಕರಾದ ವಿಜಯ್ ಜೈನ್ ಅವರಿಗೆ ಎಂತಹ ಆತ್ಮವಿಶ್ವಾಸವಿರಬೇಕು! ಅಂತಹ ಗ್ರಾಹಕರ ವಿಶ್ವಾಸಾರ್ಹತೆಯನ್ನು ಗಳಿಸುವುದು ಸುಲಭದ ಮಾತಲ್ಲ' ಎಂದು ರಾಗಿಣಿ ಹೊಗಳಿದರು.

ಅವರ ಮಾತಿನ ಎಳೆ ಹಿಡಿದು ಮುಂದುವರಿದವರು ವಿಜಯ್ ಜೈನ್. ಯುಗಾದಿಯನ್ನು ಮುಂದಿಟ್ಟುಕೊಂಡು `ಓರ‌್ರಾ' ವಜ್ರಾಭರಣಗಳ ಒಟ್ಟು ಬೆಲೆಯ ಮೇಲೆ ಗ್ರಾಹಕರಿಗೆ ಶೇ. 25ರಷ್ಟು, 22 ಕ್ಯಾರೆಟ್ ಬಿಐಎಸ್ ಹಾಲ್‌ಮಾರ್ಕ್ ಚಿನ್ನಾಭರಣಗಳ ತಯಾರಿಕಾ ವೆಚ್ಚದ ಮೇಲೆ ಶೇ. 50ರಷ್ಟು ರಿಯಾಯಿತಿ ಕೊಡುತ್ತಿದ್ದೇವೆ. ಹೂಡಿಕೆ ಮಾಡುವವರಿಗೆ ಚಿನ್ನ ಮತ್ತು ಬೆಳ್ಳಿಯ ಬಾರ್‌ಗಳು ಮತ್ತು ನಾಣ್ಯಗಳ  ತಯಾರಿಕಾ ವೆಚ್ಚದಲ್ಲಿ ಶೇ 50ರ ರಿಯಾಯಿತಿ ಇದೆ. ಏ.11ರಿಂದ ಮೇ 14ರ ಅಕ್ಷಯ ತೃತೀಯಾದವರೆಗೂ ಈ ಕೊಡುಗೆ ಮತ್ತು ರಿಯಾಯಿತಿ ಬೆಲೆ ಅನ್ವಯವಾಗುತ್ತದೆ' ಎಂದು ಮಾಹಿತಿ ನೀಡಿದರು.

ಯುಗಾದಿಯೆಂದರೆ...
ಒಡವೆಗಳ ಮೇಲೆ ವ್ಯಾಮೋಹವಿಲ್ಲ ಎಂದರೂ ಅವರು ಧರಿಸಿದ್ದ ಆ ಭಾರೀ ಆಭರಣಗಳಲ್ಲಿ ಮದುಮಗಳಂತೆ ಕಂಗೊಳಿಸುತ್ತಿದ್ದರು ರಾಗಿಣಿ.
`ಹಬ್ಬ ಹೇಗೆ ಆಚರಿಸುತ್ತೀರಿ?' ಎಂದು ಕೇಳಿದರೆ, `ನಾವು ಯುಗಾದಿ ಆಚರಿಸುವುದಿಲ್ಲ. ಆದರೆ ಬೆಂಗಳೂರಿನಲ್ಲಿ ನೆಲೆಸಿದ ಮೇಲೆ ಅಮ್ಮ ಅಷ್ಟಿಷ್ಟು ಹಬ್ಬ ಮಾಡ್ತಾರೆ. ಮನೇಲಿ ಪೂಜೆ, ದೇವಸ್ಥಾನಕ್ಕೆ ಹೋಗೋದು, ಸಿಹಿಯೂಟ ಮಾಡೋದು ಅಷ್ಟೇ' ಎಂದು ನಕ್ಕರು.

`ಹಬ್ಬದ ಸಂದರ್ಭದಲ್ಲಿ ಆಭರಣಗಳನ್ನು ತೊಡಬೇಕು, ಖರೀದಿಸಬೇಕು ಅಂದ್ರಿ. ನೀವು ಖರೀದಿ ಮಾಡ್ತೀರಾ?' ಎಂಬ ಪ್ರಶ್ನೆಗೆ, `ನಾನು ಅಂದ್ರೆ ನಮ್ಮಮ್ಮ ಖರೀದಿ ಮಾಡ್ತಾರೆ. ಹಾಕ್ಕೋ ಅಂತಾರೆ. ನಾನು ಇಷ್ಟಪಡುವುದಿಲ್ಲ. ಆದರೆ ಇನ್ವೆಸ್ಟ್‌ಮೆಂಟ್ ಅಂತ ನಾನೂ ಅವರ ಜತೆ ಹೋಗ್ತೀನಿ. ನೋಡಿ ಇಂತಹ ಹೆವಿ ಆಭರಣಗಳನ್ನು ಧರಿಸುವುದಕ್ಕಾಗುತ್ತಾ? ಇಟ್ಕೋಬೇಕಷ್ಟೇ ಅಲ್ವಾ?' ಅಂತ ಪ್ರಶ್ನೆಯನ್ನೇ ಮುಂದಿಟ್ಟರು.

`ಯುಗಾದಿಯನ್ನು ಹಬ್ಬ ಅಂತ ನೋಡುವುದಕ್ಕಿಂತ ಹೆಚ್ಚಾಗಿ ಹೊಸ ವರ್ಷದ ಆರಂಭ ಅಂತ ನೋಡ್ತೀನಿ. ಅವತ್ತು ಏನೇ ಮಾಡಿದರೂ ಶುಭವಾಗುತ್ತೆ ಅಂತಾರೆ. ಹಾಗಾಗಿ ಒಳ್ಳೆಯ ಕೆಲಸಕ್ಕೆ ನಾಂದಿ ಹಾಡ್ಬೇಕು. ಕಳೆದ ವರ್ಷಗಳಲ್ಲಿ ನನಗೆ ಒಳ್ಳೆಯದೇ ಆಗಿದೆ. ನನ್ನ ಚಿತ್ರಗಳು ಗೆದ್ದವು. ಅವಕಾಶಗಳು ಕನ್ನಡದಲ್ಲಷ್ಟೇ ಅಲ್ಲ ಮಲಯಾಳಂ, ತೆಲುಗು, ತಮಿಳಿನಲ್ಲೂ ಸಿಕ್ಕಿದವು. ಈ ಯುಗಾದಿಯೂ ಅಂತಹುದೇ ಶುಭ ಸಮಾಚಾರ ಕೊಡುತ್ತದೆ ಎಂಬ ವಿಶ್ವಾಸ ನನ್ನದು' ಎಂದರು ರಾಗಿಣಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT