ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಘವೇಂದ್ರ ಶ್ರೀಗಳದು ಬಹುಮುಖ ಪ್ರತಿಭೆ

Last Updated 12 ಜನವರಿ 2013, 10:36 IST
ಅಕ್ಷರ ಗಾತ್ರ

ಹೊಳಲ್ಕೆರೆ: ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮ ಕಟ್ಟಿ ಬೆಳೆಸಿದ ರಾಘವೇಂದ್ರ ಸ್ವಾಮೀಜಿ ಅವರದು ಬಹುಮುಖ ಪ್ರತಿಭೆ ಎಂದು ನಟ, ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ ಹೇಳಿದರು. ತಾಲ್ಲೂಕಿನ ಮಲ್ಲಾಡಿಹಳ್ಳಿಯಲ್ಲಿ ನಡೆಯುತ್ತಿರುವ ತಿರುಕನೂರಿನಲ್ಲಿ ರಂಗದಾಸೋಹ ನಾಟಕೋತ್ಸವದ ಶುಕ್ರವಾರದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವಾಮೀಜಿ ಕೇವಲ ಯೋಗಸಾಧಕ, ಶಿಕ್ಷಕ, ಆಯುರ್ವೇದ ಪಂಡಿತ ಆಗಿರಲಿಲ್ಲ. ಇವೆಲ್ಲವುಗಳ ಜತೆಗೆ ಕಲೆ, ಸಾಹಿತ್ಯ, ನಾಟಕ, ಅಭಿನಯದಂತಹ ಪ್ರತಿಭೆಗಳನ್ನು ಹೊಂದಿದ್ದರು. ಅವರ ಆದರ್ಶಗಳು ಇಂದಿಗೂ ಅನುಕರಣೀಯ. ಆಶ್ರಮದಲ್ಲಿ ಕಲಿತ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಪಡೆಯುತ್ತಿರುವುದು ಶ್ಲಾಘನೀಯ. ಇಂದು ಜಗತ್ತು ಹತ್ತಿರವಾಗುತ್ತಿದ್ದು, ಮಾನವೀಯ ಸಂಬಂಧಗಳು ದೂರವಾಗುತ್ತಿವೆ. ಯಾಂತ್ರಿಕ ಜೀವನಕ್ರಮದಿಂದ ಮೌಲ್ಯಗಳು ಬೆಲೆ ಕಳೆದುಕೊಳ್ಳುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ನಾರಾಯಣ ಸ್ವಾಮಿ ಮಾತನಾಡಿ, ವ್ಯಕ್ತಿಗೆ ಅಧಿಕಾರ, ಅಂತಸ್ತು, ಐಶ್ವರ್ಯಗಳ ದುರಾಸೆ ಇರಬಾರದು. ನೊಂದವರ ಸೇವೆ ಮಾಡುವ ಮೂಲಕ ಜೀವನದ ಸಾರ್ಥಕತೆ ಕಾಣಬೇಕು ಎಂದರು.ಬ್ರಾಹ್ಮಣ ಸಂಘದ ರಾಜ್ಯಘಟಕದ ಅಧ್ಯಕ್ಷ ಬಿ.ಎನ್.ವಿ. ಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಘವೇಂದ್ರ ಸ್ವಾಮೀಜಿ ಅತ್ಯಂತ ಕಷ್ಟದಿಂದ ಆಶ್ರಮ ಕಟ್ಟಿದರು. ಒಂದಿಷ್ಟೂ ಧಕ್ಕೆಯಾಗದಂತೆ ಆಶ್ರಮ ಉಳಿಸಿಕೊಳ್ಳುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.

ಯೋಗತರಬೇತುದಾರ ಸಂತೋಶ್‌ಕುಮಾರ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಯೋಗನಮನ ಸಲ್ಲಿಸಿದರು. ಡಾ.ಚಂದ್ರಶೇಖರ ಕಂಬಾರ ವಿರಚಿತ `ಶಿವರಾತ್ರಿ' ನಾಟಕವನ್ನು ಆಶ್ರಮದ ಶಿಕ್ಷಕರು ಮತ್ತು ಸಿಬ್ಬಂದಿ ಅಭಿನಯಿಸಿದರು. ಶ್ರೀನಿವಾಸ ಶರ್ಮ, ರಾಜಶೇಖರ ಹತಗುಂದಿ, ಕೆ.ಎಂ. ವೀರೇಶ್, ಮಹದೇವಪ್ಪ, ಶ್ರೀನಿವಾಸ್, ಡಾ.ಎನ್.ಬಿ. ಸಜ್ಜನ್, ರಾಘವೇಂದ್ರ ಪಾಟೀಲ ಹಾಜರಿದ್ದರು. ಜಿ.ಟಿ. ಶಂಕರಮೂರ್ತಿ ಸ್ವಾಗತಿಸಿದರು. ಬಿ. ಕೃಷ್ಣಮೂರ್ತಿ ನಿರೂಪಿಸಿದರು. ಕೆ.ಆರ್. ಶಂಕರ ಪ್ರಸಾದ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT