ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ-ವಾಗ್ಗೇಯಕಾರ ವೈಭವ

ಲಯ- ಲಾಸ್ಯ
Last Updated 1 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಸಂಗೀತ ತ್ರಿಮೂರ್ತಿಗಳೂ ಸಂತ ವಾಗ್ಗೇಯಕಾರರೂ ಆದ ತ್ಯಾಗರಾಜ, ಮುತ್ತುಸ್ವಾಮಿ ದೀಕ್ಷಿತ್ ಮತ್ತು ಶಾಮಾಶಾಸ್ತ್ರಿಗಳಷ್ಟೇ ಜನಪ್ರಿಯತೆಯನ್ನು ಅವರ ನಂತರದ ಕಾಲಘಟ್ಟದಲ್ಲಿ ಗಳಿಸಿಕೊಂಡವರಲ್ಲಿ ರಾಜ-ವಾಗ್ಗೇಯಕಾರ ಸ್ವಾತಿ ತಿರುನಾಳ (1813-1847)ರದು ಅತ್ಯಂತ ಪ್ರಮುಖ ಹೆಸರು. ಅವರು ಉತ್ಕೃಷ್ಟ ವಾಗ್ಗೇಯಕಾರರೂ ಉದಾತ್ತ ಸಂಗೀತಗಾರರೂ ಆಗಿದ್ದರು. ಕೇರಳದ ಸ್ವದೇಶೀ ಸಂಸ್ಕೃತಿಯನ್ನು ಸಾಹಿತ್ಯ  ಮತ್ತು ಕಲೆಗಳ ಮೂಲಕ ಪೋಷಿಸಿ ಸಂವರ್ಧಿಸಿ ಅನುಪಮ ಕೊಡುಗೆಯನ್ನು ನೀಡಿದವರು ಅವರು. ತಿರುನಾಳರು ಬಹುಭಾಷಾ ವಾಗ್ಗೇಯಕಾರರು. ಸಂಸ್ಕೃತ, ಮಲೆಯಾಳಂ, ತೆಲುಗು, ಮರಾಠಿ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ನಿಷ್ಣಾತರಾಗಿದ್ದ ಅವರು ಆ ಭಾಷೆಗಳಲ್ಲಿ ರಚನೆಗಳನ್ನು ಯಶಸ್ವಿಯಾಗಿ ಮಾಡಿದವರು. ಸಂಗೀತ ಪ್ರಕಾರದಲ್ಲಿರುವ ಗೀತೆ, ಸ್ವರಜತಿ, ಪದ ವರ್ಣ, ತಾನ ವರ್ಣ, ಕೀರ್ತನೆಗಳು, ಪದ, ಜಾವಳಿ, ರಾಗಮಾಲಿಕೆಗಳು, ತಿಲ್ಲಾನ ಮತ್ತು ಸಮೂಹ ಕೃತಿಗಳು ಅಥವಾ ಕೃತಿ ಗುಚ್ಚಗಳು ಇವೆಲ್ಲ ಬಗೆಯ ರಚನೆಗಳನ್ನೂ ಮಾಡಿರುವ ಶ್ರೇಯಸ್ಸಿಗೆ ಅವರು ಪಾತ್ರರಾಗಿದ್ದಾರೆ. ಇವಿಷ್ಟೂ ಅವರ ವಿದ್ವತ್ತು ಮತ್ತು ಸಂಗೀತ ಪರಿಣತಿಯನ್ನೂ ಸಾರಿ ಹೇಳುವಂತಹವು.

ಈ ಗಟ್ಟಿ ಹಿನ್ನೆಲೆಯಲ್ಲಿ ಸ್ವಾತಿ ತಿರುನಾಳರು ವಾಗ್ಗೇಯಕಾರರಾಗಿ ತಮ್ಮದೇ ಆದ ಸ್ವಂತಿಕೆಯ ಹಾಗೂ ಹೊಸ ರೀತಿಯ ಶೈಲಿಯನ್ನು ತಮ್ಮ ರಚನೆಯಲ್ಲಿ ಕಂಡುಕಂಡವರು. ಒಂದಕ್ಕಿಂತ ಹೆಚ್ಚಾದ ಮುದ್ರೆ ಅಥವಾ ಅಂಕಿತಗಳನ್ನು ಬಳಸಿಕೊಂಡು ಅವರು ಬಹು ಮುದ್ರಾ ವಾಗ್ಗೇಯಕಾರ ಎನಿಸಿಕೊಂಡರು. ಪದ್ಮನಾಭ, ಕಮಲನಾಭ ಮುಂತಾದ ಅಂಕಿತಗಳನ್ನು ಯಥೇಚ್ಛವಾಗಿ ಉಪಯೋಗಿಸಿ ತಮ್ಮ ವೈಶಿಷ್ಟ್ಯವನ್ನು ಅವರು ತೋರಿದರು. ಅವರ ರಚನೆಗಳಲೆಲ್ಲ ಅವರು ತಮ್ಮ ಇಷ್ಟ ದೇವತೆಯಾದ ಪದ್ಮನಾಭನನ್ನು ಕುರಿತೇ ಬಣ್ಣಿಸಿದ್ದಾರೆ. ಒಂದೇ ವಸ್ತು ಅಥವಾ ಒಬ್ಬ ದೇವತೆಯನ್ನು ಕುರಿತಾಗಿ ಅನೇಕ ಕೃತಿಗಳನ್ನು ರಚಿಸಿದಾಗ ಅವೆಲ್ಲಾ ಸಮೂಹ ಕೃತಿಗಳಾಗುತ್ತವೆ. ಅಂತಹ ಸಮೂಹ ಕೃತಿಗಳಲ್ಲಿ ಐದು ಅಥವಾ ಒಂಭತ್ತು ರಚನೆಗಳಿರಬಹುದು. ಸ್ವಾತಿ ತಿರುನಾಳರು ರಚಿಸಿರುವ ನವರಾತ್ರಿ ಕೀರ್ತನೆಗಳು, ನವ ವಿಧ ಭಕ್ತಿ ಕೀರ್ತನೆಗಳು ಮತ್ತು ಉತ್ಸವ ಪ್ರಬಂಧ ಕೀರ್ತನೆಗಳು ಅನನ್ಯವಾಗಿವೆ.

ಅಮೃತಗಾಯನ
ಜೆ.ಪಿ. ನಗರದಲ್ಲಿರುವ ಶ್ರಿ ರಮಣ ಮಹರ್ಷಿ ಅಂಧರ ಅಕಾಡೆಮಿಯ ಸಭಾಂಗಣದಲ್ಲಿ ಸೇರಿದ್ದ ಸಂಗೀತ ಪ್ರಿಯರಿಗೆ ಸ್ವಾತಿ ತಿರುನಾಳರ ವ್ಯಕ್ತಿತ್ವ ಮತ್ತು ಕೃತಿತ್ವಗಳ ಬಗೆಗೆ ಹಿಂದಿನ ಅನುಭವವನ್ನು ಆಸ್ವಾದಿಸುವ ಸದವಕಾಶ ಕಳೆದ ವಾರ ಲಭಿಸಿತ್ತು. ಯುವ ಗಾಯಕಿ ಅಮೃತಾ ವೆಂಕಟೇಶ್ ಸ್ವಾತಿ ತಿರುನಾಳ ಟ್ರಸ್ಟ್‌ಗಾಗಿ ಅವರು ಏಕ ವಾಗ್ಗೇಯಕಾರರ ಪ್ರಧಾನ ಕಛೇರಿಯನ್ನು ಸುಲಲಿತವಾಗಿ ನಡೆಸಿಕೊಟ್ಟರು.

ಸ್ವಾತಿ ತಿರುನಾಳರ ಬಗೆಗೆ ಅವರು ಹಂಚಿಕೊಂಡ ವಿಷಯಗಳು ಅಧಿಕಾರಯುತವಾಗಿದ್ದವು. ಶ್ರೇಷ್ಠ ಕಲಾವಿದರೂ ಸ್ವಾತಿ ತಿರುನಾಳ ವಂಶಸ್ಥರೂ ಆಗಿರುವ ತಿರುವಾಂಕೂರಿನ ರಾಜಕುಮಾರ ರಾಮ ವರ್ಮ ಅವರ ಮಾರ್ಗದರ್ಶನದಲ್ಲೂ ಅಮೃತಾ ಅವರು ಸಂಗೀತಾಭ್ಯಾಸವನ್ನು ಮಾಡಿರುವುದರಿಂದ ಅದು ಸಾಧ್ಯವಾಯಿತು.

ಸುಶ್ರಾವ್ಯ ಕಂಠದ ಅಮೃತಾ ಸಂಗೀತ ಕಲ್ಪನೆಯನ್ನು ಯಥಾವತ್ತಾಗಿ ಒಡಮೂಡಿಸುವಂತೆ ಅದನ್ನು ಒಗ್ಗಿಸಿಕೊಂಡಿರುವುದರಿಂದ ರಾಗ ಮತ್ತು ಸಾಹಿತ್ಯ ಭಾವಗಳು ಸ್ಫುಟವಾಗಿ ಪ್ರಕಟಗೊಂಡವು. ವೇದಿಕೆಯ ಅನುಭವ ಮತ್ತು ಗಣಿತದಲ್ಲಿ ಪ್ರಾವೀಣ್ಯದಿಂದ ಅವರ ಲಯಗಾರಿಕೆಯೂ ಗಂಭೀರವಾಗಿದೆ. ಹಾಗಾಗಿ ಅಮೃತಾ ಅವರು ರಾಜ-ವಾಗ್ಗೇಯಕಾರ ಸ್ವಾತಿ ತಿರುನಾಳರ ಸಂಗೀತ ವೈಭವವನ್ನು ಸಾರ್ಥಕವಾಗಿ ದರ್ಶಿಸಿದರು. ಕಾಂಭೋಜಿ ಅಟತಾಳ ವರ್ಣ ಹಾಗೂ ರಾಜ-ವಾಗ್ಗೇಯಕಾರ ಉತ್ಸವ ಪ್ರಬಂಧ ಕೃತಿಗಳಲ್ಲಿ ಒಂದಾದ  ಪಂಕಜಾಕ್ಷ ರಚನೆಯನ್ನು ತೋಡಿ ರಾಗಾಲಾಪನೆ, ನೆರೆವಲ್ ಮತ್ತು ಸ್ವರಪ್ರಸ್ತಾರ ಸಹಿತ ಹಾಡಿ ಗಮನ ಸೆಳೆದರು.

ತಿರುನಾಳರ ನವರಾತ್ರಿ ಕೃತಿಗಳ ಸೌಂದರ್ಯಕ್ಕೆ ಉದಾಹರಣೆಯಂತಿ, ಆರಭಿ ರಾಗದ `ಪರ್ವತ ನಂದಿನಿ'ಯನ್ನು ಸೊಗಸಾಗಿ ಹಾಡಿದರು. ಸಂಕ್ಷಿಪ್ತ ರಾಮಾಯಣದ ಸುಪರಿಚಿತ ಭಾವಯಾಮಿ ರಘುರಾಮಮ್ ಕೃತಿಯನ್ನು ಮೊಟ್ಟ ಮೊದಲಿಗೆ ಕೇವಲ ಸಾವೇರಿ ರಾಗಕ್ಕೇ ಅಳವಡಿಸಲಾಗಿತ್ತು. ಆದರೆ ಹಿರಿಯ ಗಾಯಕರಾಗಿದ್ದ ಶೆಮ್ಮಂಗುಡಿ ಶ್ರಿನಿವಾಸ ಅಯ್ಯರ್ ಅವರು ಸ್ವಾತಿ ತಿರುನಾಳರ ಮೇಲಿನ ತಮ್ಮ ಅಪಾರ ಗೌರವ ಶ್ರದ್ಧೆಗಳಿಂದ ಅದನ್ನು ಸಾವೇರಿ, ನಾಟ್ಟಿಕುರಂಜಿ, ಧನ್ಯಾಸಿ, ಮೋಹನ, ಮುಖಾರಿ, ಪೂರ್ವಿಕಲ್ಯಾಣಿ ಮತ್ತು ಮಧ್ಯ ಮಾವತಿ ರಾಗಗಳ ರಾಗಮಾಲಿಕಾ ಕೃತಿಯನ್ನಾಗಿ ಪರಿವರ್ತಿಸಿ ಜನಪ್ರಿಯಗೊಳಿಸಿದರು.

ಅದೇ ಮಾದರಿಯಲ್ಲಿ ಅಮೃತಾ ಅವರೂ ಸಹ ಅದರ ಬೆಡಗನ್ನು ತೋರಿ ಪ್ರಶಂಸೆಗೆ ಪಾತ್ರರಾದರು. ಸ್ವಾತಿ ಅವರ ಹರಿಕಥಾ ರಚನೆಗಳಲ್ಲಿ ಒಂದಾದ  ಕುಚೇಲೋಪಾಖ್ಯಾನ (ಸುದಾಮ-ಕೃಷ್ಣರ ಕಥೆ)ದಿಂದ ಆಯ್ದು ಕೊಂಡಿದ್ದ `ಅಹಾಹಾ ನೈಮಜಾನೆ' (ಅಮೃತವರ್ಷಿಣಿ) ಕೃತಿಯನ್ನು ಭಾವಪೂರ್ಣವಾಗಿ ಸ್ವರಗಳೊಂದಿಗೆ ಪ್ರಸ್ತುತಪಡಿಸಿದರು.

ಸಾವಕಾಶವಾಗಿ ಹಾಡಿದ `ವಿಹರ ಮಾನಸರಮೆ' (ಕಾಪಿ) ಆಲಾಪನೆ, ಸಾಹಿತ್ಯ ಮತ್ತು ಸ್ವರ ವಿನ್ಯಾಸದೊಂದಿಗೆ ಮಂಡಿಸಿ ರಸಿಕರ ಅಭಿನಂದನೆಗೆ ಪಾತ್ರರಾದರು. ಮಣಿಪ್ರವಾಳ ಕೃತಿ ಅಲಿವೇಣಿ (ಕುರಂಜಿ), ಹಿಂದಿ ಭಜನ್ (ಜಪತ್ ಜಪತ್ ಹರಿ ನಾಮ್ ರಾಗಮಾಲಿಕೆ) ಮುಂತಾದ ರಚನೆಗಳ ಗಾಯನ ವಾಗ್ಗೇಯಕಾರರ ವೈವಿಧ್ಯತೆಯನ್ನು ಅನಾವರಣಗೊಳಿಸಿತು. ಬಿ.ಕೆ. ರಘು (ಪಿಟೀಲು), ಚೆಲುವರಾಜು(ಮೃದಂಗ) ಮತ್ತು ಸುನಾದ್ ಆನೂರ್(ಖಂಜರಿ) ಅವರು ಪ್ರಭಾವಕಾರಿ ಪಕ್ಕವಾದ್ಯಗಳನ್ನೊದಗಿಸಿದರು.

ಪ್ರತಿಪಾದನಾ ನಿಷ್ಠೆ
ಹಿರಿಯ ಭರತನಾಟ್ಯ ಗುರುಗಳಾದ ಬಿ. ಭಾನುಮತಿ ಮತ್ತು ಶೀಲಾ ಚಂದ್ರಶೇಖರ್ ಅವರ ಶಿಷ್ಯೆ ಡಾ. ರಕ್ಷಾ ಕಾರ್ತಿಕ್ ಅವರು ಎಡಿಎ ರಂಗಮಂದಿರದಲ್ಲಿ ನಡೆದ ತಮ್ಮ ಭರತನಾಟ್ಯದಲ್ಲಿ ತಮ್ಮ ಗುರುಗಳು ಹೆಮ್ಮೆಪಡುವಂತಹ ಪ್ರಸ್ತುತಿಗಳಿಂದ ರಸಿಕನ್ನು ರಂಜಿಸಿದರು. ವೃತ್ತಿಯಲ್ಲಿ ದಂತ ವೈದ್ಯೆಯಾಗಿರುವ ರಕ್ಷಾ ಅವರು ಭಾವ, ರಾಗ ಮತ್ತು ಲಯಗಳಿಗೆ ವಿಶೇಷ ಮೆರುಗು ಉಂಟಾಗುವಂತೆ ಮಾಡಿದರು.

ಗುರು ಶೀಲಾ ಚಂದ್ರಶೇಖರ್ (ನಟುವಾಂಗ), ಬಾಲಸುಬ್ರಹ್ಮಣ್ಯ ಶರ್ಮ (ಗಾಯನ), ನರಸಿಂಹಮೂರ್ತಿ (ಕೊಳಲು), ಶಂಕರರಾಮನ್ (ವೀಣೆ), ಗುರುಮೂರ್ತಿ (ಮೃದಂಗ) ಮತ್ತು ಶ್ರಿಹರಿ (ಮೋರ್ಸಿಂಗ್) ಅವರ ಪ್ರೇರಕ ಸಹಕಾರದೊಂದಿಗೆ  ವಂದಿಸುವುದಾದಿಯಲಿ (ಗಂಭೀರನಾಟ)ದ ಮೂಲಕ ಗಣೇಶ ವಂದನೆ ಮತ್ತು ರಾವಣನ ಆತ್ಮಲಿಂಗ ಪ್ರಸಂಗವನ್ನು ಸುಂದರವಾಗಿ ಅಭಿನಯಿಸಿದರು. ಚಿರಪರಿಚಿದ ಖಮಾಚ್‌ದರು ಮಾತೇ ಮಲಯಧ್ವಜವನ್ನು ಆಧರಿಸಿ ಗಣೇಶ, ಸುಬ್ರಹ್ಮಣ್ಯ ಜನನ ಮತ್ತು ಆ ರಚನೆಯ ಶಾತೋದರಿ, ಶಂಕರಿ ಚಾಮುಂಡೇಶ್ವರಿ  ಸಾಲನ್ನು ಅವಲಂಬಿಸಿ ದೇವಿಯ ಔನ್ನತ್ಯ ವನ್ನು ಚಿತ್ರಿಸಿ ಖಚಿತವಾಗಿದ್ದ ನೃತ್ತ, ನೃತ್ಯ  ಮತ್ತು ಅಭಿನಯಗಳಿಂದ ಆಕರ್ಷಿಸಿದರು.

ಚುರುಕಾಗಿ ಮೂಡಿ ಬಂದ ಚರಣ ಭಾಗವು ಖುಷಿಕೊಟ್ಟಿತು.  ಜಗದೋದ್ಧಾರನ (ಕಾಪಿ) ಪದಾಭಿನಯ ಆತ್ಮೀಯವಾಗಿತ್ತು. ಜಯದೇವನ ಅಷ್ಟಪದಿ, ಖಂಡಿತಾ ನಾಯಕಿಯ ಚಿತ್ರಣದ ಜಾವಳಿ ಮತ್ತು ಹೆಜ್ಜೆಯ ರೂಪ-ವೈಶಿಷ್ಟ್ಯ ಗಳ ಸಾಹಿತ್ಯ ವನ್ನು ಹೊಂದಿರುವಂತಹ ಅಮೃತವರ್ಷಿಣಿ ರಾಗದ ತಿಲ್ಲಾನ ಅವರ ಆತ್ಮ ವಿಶ್ವಾಸ, ಪ್ರತಿಪಾದನಾ ನಿಷ್ಠೆ ಮತ್ತು ತಲ್ಲೆನತೆಗಳನ್ನು ಪ್ರತಿಬಿಂಬಿಸಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT