ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ ಸುಧನ್ವನ ಸಂಪಿಗೆ

Last Updated 19 ಜುಲೈ 2013, 10:22 IST
ಅಕ್ಷರ ಗಾತ್ರ

ಹಿಂದುಳಿದನಾಹವಕ್ಕೆಂದು ಹಂಸಧ್ವಜಂ
ನಂದನನನೆಣೆಗಾಯಿರ್ದ ಕೊಪ್ಪರಿಗೆಯೊಳ್
ತಂದು ಕೆಡಹಿಸಲಚ್ಚುತಧ್ಯಾನದಿಂ ತಂಪುವಡೆದವನಚ್ಚರಿಯನೆ

-ಇದು ಜೈಮಿನಿ ಭಾರತದ ಒಂದು ಪ್ರಸಂಗ. ಕೊತಕೊತನೆ ಕುದಿಯುವ ಎಣ್ಣೆಯ ಕೊಪ್ಪರಿಗೆ ಹಾಕಿದರೂ ಸುಧನ್ವನಿಗೆ ಏನು ಆಗಲಿಲ್ಲವಂತೆ. ಇಂಥ ಸುಧನ್ವ ಆಳಿದ ಊರು ತುರುವೇಕೆರೆ ತಾಲ್ಲೂಕಿನ ಸಂಪಿಗೆ.

ಪಾಂಚಾಲ ದೇಶದ ರಾಜ ಸುಧನ್ವನ ಉಲ್ಲೇಖ ಮಹಾಭಾರತದಲ್ಲಿದೆ. ಸಂಪಿಗೆ ಆಗ ಚಂಪಕಾನಗರಿ ಆಗಿತ್ತು. ಈ ಚಂಪಕಾನಗರಿಯೇ ಇಂದಿನ ನಮ್ಮ ಸಂಪಿಗೆ ಎಂಬ ನಂಬಿಕೆಗಳಿವೆ.

ಸಂಪಿಗೆ ಸುಧನ್ವದ ರಾಜಧಾನಿಯೂ ಆಗಿತ್ತು ಎಂಬ ಐತಿಹ್ಯವಿದೆ. ಪರಮ ವಿಷ್ಣುಭಕ್ತನಾಗಿದ್ದ ಸುಧನ್ವ ಸಂಪಿಗೆಯಲ್ಲಿ ಈಗಿರುವ ಶ್ರೀನಿವಾಸಸ್ವಾಮಿ ದೇವಸ್ಥಾನ ಕಟ್ಟಿಸಿದ ಎಂದು ನಂಬಲಾಗಿದೆ. ದ್ವಾಪರಾಯುಗ ಕಾಲದ ಸ್ಥಳ ಪುರಾಣ ಇದೆಲ್ಲವನ್ನು ಹೇಳುತ್ತದೆ ಎನ್ನುತ್ತಾರೆ ಇಲ್ಲಿನ ಜನ. ವ್ಯಾಸ ಮಹರ್ಷಿಯ ಮಹಾಭಾರತದ ದ್ರೋಣಪರ್ವದಲ್ಲೂ ಸುಧನ್ವನ ಪ್ರಸ್ತಾಪವಿದೆ.

ಅರ್ಜುನನ ವಿರುದ್ಧ ಯುದ್ಧ ಮಾಡಲು ತಡವಾಗಿ ಬಂದ ಕಾರಣಕ್ಕೆ ಕೋಪಗೊಂಡ ಸುಧನ್ವನ ಅಪ್ಪ ಹಂಸಧ್ವಜನು ಮಗನಿಗೆ ಏನು ಶಿಕ್ಷೆ ಕೊಡಬೇಕು ಎಂದು ಶಂಖಲಿಖಿತರೆಂಬ ಬ್ರಾಹ್ಮರನ್ನು ಕೇಳುತ್ತಾನೆ. ಕಾದ ಎಣ್ಣೆಯ ಕೊಪ್ಪರಿಕೆಗೆ ಹಾಕುವಂತೆ ಆ ಬ್ರಾಹ್ಮಣರ ಸಲಹೆ ಮನ್ನಿಸಿ ಸುಧನ್ವನನ್ನು ಎಣ್ಣೆಯ ಕೊಪ್ಪರಿಕೆಗೆ ಹಾಕುತ್ತಾನೆ ಎಂಬುದು ಕಥೆ. ಸುಧನ್ವನ ಆಳ್ವಿಕೆಗೆ ಸಂಪಿಗೆ ಒಳಪಟ್ಟಿತ್ತು. ಕೋಟೆ ಕೂಡ ಇತ್ತು ಎನ್ನಲಾಗಿದೆ.

ಸಂಪಿಗೆ ಎಂಬುದು ಈಗಿನಂತೆ ಸಣ್ಣ ಊರಾಗಿರಲಿಲ್ಲ. ಒಂದು ಕಾಲದಲ್ಲಿ ದೊಡ್ಡ ವಾಣಿಜ್ಯ ಕೇಂದ್ರವಾಗಿತ್ತು. 200 ವರ್ಷಗಳಿಗಿಂತಲೂ ಹಿಂದೆಯೇ ಇಲ್ಲಿಗೆ ಪ್ರವಾಸಿಗ ಫ್ರಾನ್ಸಿಸ್ ಬುಖಾನಿನ್ ಭೇಟಿ ನೀಡಿದ್ದ.

ಶಂಖ, ಶಕ್ರ, ಗದಾಧಾರಿ ಶ್ರೀನಿವಾಸಮೂರ್ತಿ ಇಲ್ಲಿನ ವೈಶಿಷ್ಯ. ಜಿಲ್ಲೆಯಲ್ಲಿ ವೈಕುಂಠ ಏಕಾದಶಿಗೆ ಖ್ಯಾತಿ ಪಡೆದಿರುವ ಮೂರನೇ ಊರಿದು. ವೈಕುಂಠ ಏಕಾದಶಿಗೆ ಸಾವಿರಾರು ಭಕ್ತರು ಸೇರುತ್ತಾರೆ.

ದೇಶದಲ್ಲಿ ಎಲ್ಲೂ ಕಾಣದ ಸ್ವರ್ಣಗೌರಮ್ಮನ ಉತ್ಸವ ಈ ಊರಿನ ಮತ್ತೊಂದು ಹೆಮ್ಮೆ. ಶಿವರಾತ್ರಿ ಸಮಯದಲ್ಲಿ ಗೋಧಿ, ಮೈದಾ, ಮಣ್ಣು ಬಳಸಿ ನಾಲ್ಕೈದು ಅಡಿ ಎತ್ತರದ ಸ್ವರ್ಣಗೌರಮ್ಮನ ಮೂರ್ತಿ ಮಾಡಲಾಗುತ್ತದೆ. ಅದನ್ನು ಪೂಜಿಸಿ ಗ್ರಾಮದ ಕೆರೆಯಲ್ಲಿ ವಿಸರ್ಜನೆ ಮಾಡಲಾಗುತ್ತದೆ.

ಗ್ರಾಮದ ಕೆರೆ ದಂಡೆ ಹಾಗೂ ವೀರಭದ್ರೇಶ್ವರ ದೇವಸ್ಥಾನದ ಬಳಿ ಎರಡು ಶಾಸನ ದೊರೆತಿವೆ. ಇಲ್ಲಿ ಕೋಟೆ ಇತ್ತು ಎಂಬುದಕ್ಕೆ ಇನ್ನೂ ಕುರುಹು ಉಳಿದಿವೆ. ಬುರುಜು ಅವಶೇಷವಿದೆ ಎನ್ನುತ್ತಾರೆ ಶ್ರೀನಿವಾಸ ದೇವಸ್ಥಾನ ಆಡಳಿತ ಮಂಡಳಿ ಮಾಜಿ ಸಂಚಾಲಕ ಶ್ರೀಧರ್
.
ಕನ್ನಡದ ಕಣ್ವ ಬಿಎಂಶ್ರೀ ತಾಯಿಯ ಊರು ಸಂಪಿಗೆ. ಬಿಎಂಶ್ರೀ ಹುಟ್ಟಿದ ನೆನಪಿಗೆ ಇಲ್ಲಿ ಭವನ ನಿರ್ಮಿಸಲಾಗಿದೆ. ಜಿಲ್ಲೆಯಲ್ಲಿ ಮೊದಲು ಅಡಿಕೆ ಬೆಳೆದ ಊರು. ತುಮಕೂರು ತಾಲ್ಲೂಕಿನ ಹೊನ್ನುಡಿಕೆ ಜನರಿಗೆ ಅಡಿಕೆ ಸಸಿ ಕೊಟ್ಟು ಬೆಳೆಸುವುದನ್ನು ಕಲಿಸಿಕೊಟ್ಟ ಹೆಗ್ಗಳಿಕೆ ಈ ಊರಿನ ಜನರದು.

ದಶಕಗಳ ಹಿಂದೆ ಪ್ರತಿ ಭಾನುವಾರ ರಾತ್ರಿ ಇಲ್ಲಿ ಅಡಿಕೆ ಮಂಡಿ ನಡೆಯುತ್ತಿತ್ತು. ಬೆಳಿಗ್ಗೆ ವೇಳೆ ಮಂಡಿ ನಡೆಯುವುದು ಸಾಮಾನ್ಯ. ಆದರೆ ಇಲ್ಲಿ ರಾತ್ರಿ ವ್ಯಾಪಾರ ವಿಶೇಷ. ಶಿವಮೊಗ್ಗ, ಮೈಸೂರು ಮುಂತಾದ ಕಡೆಗಳಿಂದ ಅಡಿಕೆ ಕೊಳ್ಳಲು ವ್ಯಾಪಾರಿಗಳು ಬರುತ್ತಿದ್ದರು. ಸಂಪಿಗೆ ಅಡಿಕೆಗೆ ಗ್ರಾಹಕರು ಮುಗಿಬೀಳುತ್ತಿದ್ದರಂತೆ.

ಛಾಯಾಪತಿ ಶಾಸ್ತ್ರಿಗಳು ಸಂಪಾದಿಸಿರುವ ಓಲೆಗರಿಗಳಲ್ಲೂ ಸಂಪಿಗೆ ಕುರಿತು ಒಂದಷ್ಟು ದಾಖಲೆಗಳಿವೆ. ಭಾಸ್ಕರ್‌ನೆಂಬ ಋಷಿಮುನಿ ಸಂಪಿಗೆಗೆ ಬಂದು ಇಲ್ಲಿನ ಕಲ್ಯಾಣಿಯಲ್ಲಿ ತಪಸ್ಸಾಚರಿಸಿದ ಎಂಬ ಉಲ್ಲೇಖವಿದೆ.

ಸುಧನ್ವನ ಮರಣದ ನಂತರ ಪಾಳು ಬಿದ್ದಿದ್ದ ಸಂಪಿಗೆಯ ಶ್ರೀನಿವಾಸ ದೇವಸ್ಥಾನವನ್ನು ಭಾಸ್ಕರ ಮುನಿ ಪುನುರುಜ್ಜೀವನ ಮಾಡಿದ ಎಂಬ ಮಾಹಿತಿ ತಾಳೆಗರಿಯಲ್ಲಿದೆ. ಈ ಋಷಿಮುನಿ ಇಲ್ಲಿಯೇ ದೇಹತ್ಯಾಗ ಮಾಡಿದ ಎಂಬ ವಿವರಗಳಿವೆ ಎನ್ನುತ್ತಾರೆ ಶ್ರೀಧರ್. ಈ ತಾಳೆಗರಿಗಳು ಬೆಂಗಳೂರಿನಲ್ಲಿರುವ ಮಾಯಸಂದ್ರದ ಶ್ರೀನಿವಾಸಮೂರ್ತಿ ಮನೆಯಲ್ಲಿವೆ.

ಬೆಂಗಳೂರಿನ ಕೈಲಾಶ್ ಚಿತ್ರಮಂದಿರದಲ್ಲಿ ನೂರು ದಿನ ಪ್ರದರ್ಶನಗೊಂಡು ದಾಖಲೆ ಮಾಡಿದ ಶಂಖನಾದ ಸಿನಿಮಾ ಚಿತ್ರೀಕರಣ ನಡೆದಿದ್ದು ಸಂಪಿಗೆಯಲ್ಲಿ ಎಂಬುದು ಎಲ್ಲರ ನೆನಪಿನಲ್ಲಿ ಈಗಲೂ ಉಳಿದಿದೆ.

ಸುಧನ್ವನ ಆಳ್ವಿಕೆಯ ಕಥೆಗಳೇನೆ ಇರಲಿ, ಜಿಲ್ಲೆಗೆ ಮೊದಲು ಅಡಿಕೆ ತಂದು ಕೊಟ್ಟ, ಗೌರಮ್ಮನ ಉತ್ಸವದ ವಿಶೇಷತೆಗಳ ಈ ಊರು ಜಿಲ್ಲೆಯ ಹೆಮ್ಮೆ.  

ಕೃಷಿ ಕಲಿತ ಮೊದಲ ಊರು!
ತುರುವೇಕೆರೆ ತಾಲ್ಲೂಕಿನಲ್ಲಿ ಕೃಷಿ ಕಲಿತ ಮೊದಲು ಊರು ಸಂಪಿಗೆ ಎಂಬುದು ಇಲ್ಲಿನ ಮತ್ತೊಂದು ಹೆಮ್ಮೆ. ನೂತನ ಶಿಲಾಯುಗದಲ್ಲಿ ದಾಖಲಾಗಿರುವ ಈ ತಾಲ್ಲೂಕಿನ ಏಕೈಕ ಪ್ರದೇಶ ಸಂಪಿಗೆ. ಜಿಲ್ಲೆಯಲ್ಲಿ ಇಂಥ 31 ಪ್ರದೇಶಗಳಿವೆ.

ನೂತನ ಶಿಲಾಯುಗ ಸಂಸ್ಕೃತಿಯ ಕ್ರಾಂತಿಕಾರಕ ಯುಗ. ಈ ಯುಗದಲ್ಲೇ ಮಾನವನು ಒಂದೆಡೆ ನಿಂತು ಕೃಷಿ ಕಲಿತದ್ದು. ಪಶು ಸಂಗೋಪನೆ ಮಾಡುತ್ತಾ ಉಜ್ಜಿ ನಯಗೊಳಿಸಿದ ಉಪಕರಣ ತಯಾರಿಸುತ್ತಿದ್ದ. ಹೀಗೆ ಮಾನವ ಚರಿತ್ರೆಯ ಸಾಂಸ್ಕೃತಿಕ ಹಂತ ವಿಕಾಸಗೊಂಡ ಯುಗದಲ್ಲೇ ಸಂಪಿಗೆ ಇತ್ತು. ಶಿಲಾ ಉಪಕರಣಗಳು, ಮಣ್ಣಿನ ಉಪಕರಣಗಳು, ಬೂದಿ ದಿಬ್ಬಗಳು (ಬೆಂಕಿ ಬಳಸಲು ಸಹ ಕಲಿತ) ಸಂಪಿಗೆಯಲ್ಲಿ ಸಿಕ್ಕಿವೆ.

1238ರ ಶಾಸನದ ಪ್ರಕಾರ ಸಂಪಿಗೆ ಪಟ್ಟಣವಾಗಿತ್ತು. ಇಲ್ಲಿ ನಗರಾಡಳಿತದ ವ್ಯವಸ್ಥೆ ಇತ್ತು ಎಂದು ಉಲ್ಲೇಖಿಸುತ್ತದೆ. 1889ರಲ್ಲಿ ಬೆಂಗಳೂರು- ತುಮಕೂರು ರೈಲು ಮಾರ್ಗ ಹರಿಹರದವರೆಗೂ ವಿಸ್ತರಣೆಯಾದಾಗ ಗ್ರಾಮಕ್ಕೆ ರೈಲು ಸಂಪರ್ಕ ದಕ್ಕಿತು. 1952ರ ವೇಳೆಗೆ ತುರುವೇಕೆರೆಗೆ ವಿದ್ಯುತ್ ಬಂತು. ಆಗ ಸಂಪಿಗೆಗೂ ವಿದ್ಯುತ್ ಕಾಲಿಟ್ಟಿತು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT