ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣ-ಅಭಿವೃದ್ಧಿ ಮಂತ್ರ; ಟೀಕೆ- ಟಿಪ್ಪಣಿ

Last Updated 15 ಫೆಬ್ರುವರಿ 2012, 10:00 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ವಿ.ಎಸ್. ಆಚಾರ್ಯರ ಆಕಸ್ಮಿಕ ನಿಧನ ಉಡುಪಿ ಜನತೆಗೆ ಬರಸಿಡಿನಂತೆ ಬಂದೆರಗಿದೆ. ಆಚಾರ್ಯರ ರಾಜಕೀಯ ನಿಲುವನ್ನು ವಿರೋಧಿಸುತ್ತಿದ್ದವರಿಗೆ ಕೂಡ ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

`ಆಚಾರ್ಯ ನೇರವಾಗಿ ಜನರಿಂದ ಆಯ್ಕೆಯಾದವರಲ್ಲ, ಹೀಗಾಗಿ ಅವರಿಗೆ ಜನರ ಸಮಸ್ಯೆಗಳೇ ಗೊತ್ತಿಲ್ಲ,ಆಚಾರ್ಯರು ಉಡುಪಿಗೆ ಮಾಡಿದ್ದೇನು?~ ಎಂದೆಲ್ಲ ದೂಷಣೆ ಮಾಡುವವರು ಇಲ್ಲಿದ್ದರು. `ಆಚಾರ್ಯರಿಗೆ ದೃಢ ನಿಲುವುಗಳಿಲ್ಲ, ಅಭಿವೃದ್ಧಿ ನೆಪದಲ್ಲಿ ಕರಾವಳಿ ಜಿಲ್ಲೆ ನಾಶ ಮಾಡುತ್ತಿದ್ದಾರೆ~ ಎಂದು ವಿರೋಧಪಕ್ಷಗಳು, ರೈತಸಂಘದಾದಿಯಾಗಿ ಬಹಳ ಟೀಕೆಗಳನ್ನು ಆಚಾರ್ಯ ಇಲ್ಲಿ ಕೇಳಿಸಿಕೊಂಡಿದ್ದರು.

ವಿಶೇಷವಾಗಿ ನಂದಿಕೂರಿನ ಉಷ್ಣವಿದ್ಯುತ್ ಸ್ಥಾವರ ವಿಚಾರದಲ್ಲಿ ಆಚಾರ್ಯರ ವಿರುದ್ಧ ಬಹಳ ಟೀಕೆಗಳು ಇಲ್ಲಿ ಕೇಳಿಬಂದಿದ್ದವು. ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಆಚಾರ್ಯ ಈ ಯೋಜನೆ ವಿರೋಧಿಸುತ್ತಿದ್ದರು, ಅಧಿಕಾರಕ್ಕೆ ಬಂದ ಬಳಿಕ ಆಚಾರ್ಯರು ಯುಪಿಸಿಎಲ್ ಯೋಜನೆ ಬೆಂಬಲಿಸಿದರು, ಈ ಭಾಗದ ರೈತರಿಗೆ ಕಂಟಕರಾದರು ಎಂಬ ಆರೋಪಗಳು ಆಚಾರ್ಯರ ಮೇಲಿದ್ದವು. ಕೆಟ್ಟ ಮಾತುಗಳನ್ನು ಕೂಡ ಆಚಾರ್ಯರು ಕೇಳಿಸಿಕೊಳ್ಳಬೇಕಾದ ಸ್ಥಿತಿ ಬಂದಿತ್ತು.

 ಇಂತಹ ಟೀಕೆಗಳನ್ನು ಆಚಾರ್ಯರು ಬೆಂಗಳೂರಿನಿಂದ ಉಡುಪಿಗೆ ಬಂದಾಗಲೆಲ್ಲ ಕೇಳಿಸಿಕೊಳ್ಳುತ್ತಿದ್ದರು. ಸಭೆ ಸಮಾರಂಭಗಳಲ್ಲಿ ಈ ಬಗ್ಗೆ ಆಚಾರ್ಯರು ಪ್ರಸ್ತಾಪಿಸುತ್ತಿದ್ದರು.

`ನಮ್ಮ ರಾಜ್ಯಕ್ಕೆ ವಿದ್ಯುತ್ ಬೇಕು, ಹೀಗಾಗಿ ಯುಪಿಸಿಎಲ್ ಯೋಜನೆ ಬಹಳ ಅಗತ್ಯ, ಯಾರೋ ಕೆಲವರು (ರೈತಸಂಘ) ಹುಯಿಲೆಬ್ಬಿಸುತ್ತಾರೆ ಎಂದು ಈ ಯೋಜನೆ ಬಿಡಲಿಕ್ಕೆ ಆಗದು, ಇದೇನು ಗೂಡಂಗಡಿಯೇ ಬಂದ್ ಮಾಡಲಿಕ್ಕೆ~ ಎಂದು ಆಚಾರ್ಯರು ಇತ್ತೀಚೆಗೆ ಗುಡುಗಿದ್ದರು. ಅಷ್ಟರಮಟ್ಟಿಗೆ ಆಚಾರ್ಯ ಈ ಯೋಜನೆ ಸಮರ್ಥಿಸಿಕೊಂಡಿದ್ದರು.
 
ದುರಂತವೆಂದರೆ ಮಂಗಳವಾರ ಕೂಡ ರೈತ ಸಂಘದ ಉಡುಪಿ ಜಿಲ್ಲಾ ಘಟಕದವರು ಸುದ್ದಿಗೋಷ್ಠಿ ನಡೆಸಿ ಆಚಾರ್ಯರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಇಲ್ಲದಿದ್ದರೆ ನಾವು ಅವರ ಮುಂದಿನ ಎಲ್ಲ ಕಾರ್ಯಕ್ರಮಗಳಿಗೂ ಕಪ್ಪು ಬಟ್ಟೆ ತೋರಿಸಿ ಪ್ರತಿಭಟಿಸುತ್ತೇವೆ ಎಂದು ಹೇಳಿದ್ದರು. ಅವರ ಸುದ್ದಿಗೋಷ್ಠಿ ಮುಗಿಸಿ ಹೊರಬರುವಷ್ಟರಲ್ಲಿ ನಿಧನದ ವಾರ್ತೆ ಬಿತ್ತರವಾಗುತ್ತಿತ್ತು !


ಅಭಿವೃದ್ಧಿಯೇ ಆಡಳಿತ ಮಂತ್ರ:
ಅಭಿವೃದ್ಧಿಯೇ ನಮ್ಮ ಪಕ್ಷದ ಆಡಳಿತ ಮಂತ್ರ ಎಂದು ಪದೇ ಪದೇ ಹೇಳುತ್ತಿದ್ದ ಆಚಾರ್ಯರು ಪ್ರತಿ ಬಾರಿಯ ಸಭೆ ಸಭಾರಂಭದಲ್ಲಿಯೂ ಉಡುಪಿ ಜಿಲ್ಲೆ ಕಳೆದ 60 ವರ್ಷಗಳಲ್ಲಿ ಆಗದೇ ಇದ್ದ ಅಭಿವೃದ್ಧಿಯನ್ನು ಬಿಜೆಪಿ ಸರ್ಕಾರ ಮೂರುವರೆ ವರ್ಷದಲ್ಲಿ ಮಾಡಿ ತೋರಿಸಿದೆ, ಉನ್ನತ ಶಿಕ್ಷಣದಲ್ಲಿಯಂತೂ ಅಪಾರವಾಗಿ ಸಾಧನೆಯಾಗಿದ್ದು  ಸ್ವಯಂ ನಿಯಂತ್ರಣಕ್ಕೆ ಸರ್ಕಾರವೇ ಕಡಿವಾಣ ಹಾಕಿಕೊಳ್ಳಬೇಕಿದೆ ಎಂದು ಇತ್ತೀಚೆಗಷ್ಟೇ ಹೇಳಿದ್ದರು.

 ಉಡುಪಿ ನಗರಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆಯಾಗಿ ಸ್ವರ್ಣ ಮೊದಲ ಹಂತದ ಯೋಜನೆ ರೂಪಿಸಿದರು. ಮಲ ಹೊರುವ ಪದ್ಧತಿ ಸಂಪೂರ್ಣ ನಿಷೇಧ, ಉಡುಪಿಯಲ್ಲಿ ಒಳ ಚರಂಡಿ ಸುಧಾರಣೆಗೆ ಕ್ರಮ. ನಗರಸಭೆಗೆ ಎರಡು ಬಾರಿ ಅಧ್ಯಕ್ಷರಾದರು. ಪಂ.ದೀನದಯಾಳ್ ಉಪಾಧ್ಯರ ಪ್ರೇರಣೆಯಿಂದ ರಾಜಕೀಯಕ್ಕೆ ಬಂದಿದ್ದಾಗಿ ಅನುಗಾಲವೂ ಹೇಳಿಕೊಳ್ಳುತ್ತಲೇ ಬಂದಿರುವ ಡಾ.ಆಚಾರ್ಯರು ಉಡುಪಿ ಜಿಲ್ಲೆಯ ಎರಡನೇ ಮುಖ್ಯಮಂತ್ರಿ ಎಂದೇ ಕರೆಯಿಸಿಕೊಂಡಿದ್ದೂ ಇದೆ.

ಇತ್ತೀಚಿನ ಕೆಲವು ವರ್ಷಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ತ್ವರಿತ ಗತಿಯ ಕೆಲಸ ಕಾರ್ಯಗಳೂ ಆರಂಭವಾಗಿದ್ದವು. ಉಡುಪಿ-ಮಣಿಪಾಲ ಚತುಷ್ಪಥ ರಸ್ತೆ, ಬ್ರಹ್ಮಗಿರಿ-ಅಜ್ಜರಕಾಡು ಚತುಷ್ಪಥ, ಜೋಡುಟ್ಟೆ-ಉಡುಪಿ ಚತುಷ್ಪಥ, ಅಜ್ಜರಕಾಡುವಿನಲ್ಲಿ ಜಿಲ್ಲಾ ಕ್ರೀಡಾಂಗಣ, ರಜತಾದ್ರಿಯ ಜಿಲ್ಲಾ ಕಚೇರಿ ಸಂಕೀರ್ಣ ಹೀಗೆ ಹಲವು ಅಭಿವೃದ್ಧಿ ಕೆಲಸಗಳು ಆಚಾರ್ಯರ ಕಾಲದಲ್ಲಿ ಆದವು. ನಗರಸಭೆಯ ಅಮೃತ ಮಹೋತ್ಸವವನೂ ಅದ್ಧೂರಿಯಾಗಿ ನಡೆಯಿತು. ಜಿಲ್ಲಾ ಕಚೇರಿ ಸಂಕೀರ್ಣದ ಉದ್ಘಾಟನೆಯ ದಿನವಂತೂ ಅಕ್ಷರಶಃ ಅವರು ಭಾವುಕರಾಗಿದ್ದರು.

ಮಣಿಪಾಲದ ರಜತಾದ್ರಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಉದ್ಘಾಟನೆಯ ಸಂದರ್ಭದಲ್ಲಿ ತಮ್ಮ ಸ್ವಂತ ಮನೆಯ ಗೃಹ ಪ್ರವೇಶವೇನೋ ಎಂಬಂತೆ ಅಂದು ಸಂಭ್ರಮಿಸಿದರು. ಅಂದಿನ ಸಭಾ ಕಾರ‌್ಯಕ್ರಮದಲ್ಲಿ ಅವರು ಅಂತಹುದೇ ಸಂಭ್ರಮದಿಂದ ಮಾತನಾಡುತ್ತಾ ಶತಮಾನಕ್ಕೊಮ್ಮೆ ಊರಿನಲ್ಲಿ ನಡೆಯಬಹುದಾಗಿರುವ ಕಾರ‌್ಯಕ್ರಮವಿದು ಎಂದು ಭಾವುಕರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT