ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣಕ್ಕೂ ನನಗೂ ಸಂಬಂಧವೇ ಇಲ್ಲ

Last Updated 1 ಆಗಸ್ಟ್ 2011, 18:50 IST
ಅಕ್ಷರ ಗಾತ್ರ

ಬೆಂಗಳೂರು: `ಯಾವುದೇ ಪೂರ್ವಸಿದ್ಧತೆ ಇಲ್ಲದೆ ಇಲ್ಲಿಗೆ ಬಂದಿದ್ದೆ. ಐದು ವರ್ಷಗಳ ಅವಧಿಯಲ್ಲಿ ನನಗೆ ಈ ಕೆಲಸ ಬಹಳಷ್ಟು ತೃಪ್ತಿ ನೀಡಿದೆ. ಆದರೆ, ಹಲವು ಬಾರಿ ಬೇಸರವೂ ಆಗಿದೆ. ಪಕ್ಷಪಾತ, ರಾಗ, ದ್ವೇಷಗಳಿಲ್ಲದೇ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಅದೇ ತೃಪ್ತಿಯಿಂದ ಈ ಹುದ್ದೆಯಿಂದ ನಿರ್ಗಮಿಸುತ್ತಿದ್ದೇನೆ~.

- ಇವು ಬುಧವಾರ ಲೋಕಾಯುಕ್ತ ಹುದ್ದೆಯಿಂದ ನಿವೃತ್ತಿ ಹೊಂದುತ್ತಿರುವ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರ ನುಡಿಗಳು.

ನಿವೃತ್ತಿಗೆ ಒಂದೇ ದಿನ ಬಾಕಿ ಇದ್ದು, ಸೋಮವಾರವೂ ಬೆಳಿಗ್ಗೆಯಿಂದ ಸಂಜೆಯವರೆಗೆ ಎಡೆಬಿಡದ ಕೆಲಸದಲ್ಲಿ ನಿರತರಾಗಿದ್ದರು. ಸಂಸ್ಥೆಯ ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು, ಅಭಿನಂದಿಸಲು ಬರುತ್ತಿರುವ ನೂರಾರು ನಾಗರಿಕರ ಭೇಟಿಯ ನಡುವೆಯೇ `ಪ್ರಜಾವಾಣಿ~ಗೆ ಸಂದರ್ಶನ ನೀಡಿದ ಅವರು, `ಯಾವುದೇ ಬೇಸರ ಇಲ್ಲದೇ ಇಲ್ಲಿಂದ ಎದ್ದು ಹೋಗುತ್ತಿದ್ದೇನೆ~ ಎಂದರು.

ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ 2008ರ ಡಿಸೆಂಬರ್‌ನಲ್ಲಿ ತಾವು ಸಲ್ಲಿಸಿದ್ದ ವರದಿಯ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ನೋವು ಅವರಿಗೆ ಇದೆ. ಆದರೆ, ರಾಜ್ಯದ ಯಾವುದೋ ಮೂಲೆಯಿಂದ ಸಮಸ್ಯೆ ಹೊತ್ತುಕೊಂಡು ನಡುರಾತ್ರಿಯಲ್ಲೂ ದೂರವಾಣಿ ಕರೆಮಾಡುತ್ತಿದ್ದ ಜನರಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ ಎನ್ನುವ ಸಂತೋಷವೂ ಅವರಲ್ಲಿದೆ.
 
ಹಿಂದಿನ ಲೋಕಾಯುಕ್ತ ನ್ಯಾಯಮೂರ್ತಿ ಎನ್. ವೆಂಕಟಾಚಲ ಅವರಿಂದ ಈ ಸಂಸ್ಥೆಯ ಪರಿಚಯ ಜನರಿಗೆ ಆಗಿತ್ತು. ಕಾನೂನಿನ ವ್ಯಾಪ್ತಿಯಲ್ಲಿ ಲೋಕಾಯುಕ್ತಕ್ಕೆ ಇರುವ ಶಕ್ತಿಯನ್ನು ಸಾಬೀತುಪಡಿಸಿದ ವಿಶ್ವಾಸ ಸಂತೋಷ್ ಹೆಗ್ಡೆ ಅವರಲ್ಲಿದೆ. ಈವರೆಗಿನ ಸೇವೆ, ಭ್ರಷ್ಟಾಚಾರದ ವಿರುದ್ಧದ ಸಮರ, ಅಕ್ರಮ ಗಣಿಗಾರಿಕೆ ಕುರಿತ ತನಿಖೆ, ಮುಂದಿನ ದಾರಿ ಮತ್ತಿತರ ವಿಷಯಗಳ ಬಗ್ಗೆ ಅವರು ಮುಕ್ತವಾಗಿ ಮಾತನಾಡಿದ್ದಾರೆ.

ಪ್ರಶ್ನೆ: ಲೋಕಾಯುಕ್ತರಾಗಿ ಐದು ವರ್ಷಗಳ ಸೇವಾವಧಿ ಹೇಗನ್ನಿಸಿದೆ?
ನ್ಯಾಯಾಧೀಶನಾಗಿದ್ದಾಗ ಎಲ್ಲವನ್ನೂ ಕಾನೂನಿನ ಆಧಾರದಲ್ಲೇ ತೀರ್ಮಾನಿಸಬೇಕಿತ್ತು. ಉಳಿದ ಅಂಶಗಳು ಅಲ್ಲಿ ನಗಣ್ಯ ಆಗುತ್ತಿದ್ದವು. ಆದರೆ, ಇಲ್ಲಿ ಹಾಗಲ್ಲ. ಕಾನೂನಿನ ಅಡಿಯಲ್ಲಿ ಜನರಿಗೆ ಸಹಾಯ ಮಾಡುವುದು ಒಂದು ವಿಧ. ಸಮಸ್ಯೆಯ ಸಾಮಾಜಿಕ ಮುಖವನ್ನೂ ಅರಿತು ಪರಿಹಾರ ಒದಗಿಸಬಹುದು. ಅಂತಹ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದೇನೆ.

ಪ್ರಶ್ನೆ: ಈ ಅವಧಿಯಲ್ಲಿ ನಿಮ್ಮ ವ್ಯಕ್ತಿತ್ವದಲ್ಲಿ ಆದ ಬದಲಾವಣೆಗಳೇನು?
ಕೆಟ್ಟ ಬದಲಾವಣೆಗಳೇನೂ ಆಗಿಲ್ಲ. 2006ರ ಆಗಸ್ಟ್ 3ರಂದು ಹೇಗಿದ್ದೆನೋ, ಹಾಗೆಯೇ ಇದ್ದೇನೆ. ಒಂದು ದಿನವೂ ಇಲ್ಲಿ ಯಾರನ್ನೂ ಬೈದಿಲ್ಲ. ತಮ್ಮ ಸಮಸ್ಯೆಗೆ ಪರಿಹಾರ ಪಡೆಯುವುದಕ್ಕಾಗಿ ರಾಜ್ಯದ ಯಾವುದೋ ಮೂಲೆಯಿಂದ ಜನರು ನನ್ನ ದೂರವಾಣಿಗೆ ಕರೆ ಮಾಡುತ್ತಿದ್ದರು. ನಡುರಾತ್ರಿ ಕರೆ ಬಂದರೂ ಸಾವಧಾನವಾಗಿ ಕೇಳಿಸಿಕೊಂಡು, ಪರಿಹಾರದ ವ್ಯವಸ್ಥೆ ಮಾಡುವುದನ್ನು ಇಲ್ಲಿ ಕಲಿತಿದ್ದೇನೆ.

ಪ್ರಶ್ನೆ: ನಿವೃತ್ತಿಯ ಅಂಚಿನಲ್ಲಿರುವ ನಿಮಗೆ ಇಲ್ಲಿನ ಸೇವೆ ತೃಪ್ತಿ ನೀಡಿದೆಯೇ?
ಹಲವು ವಿಷಯಗಳಲ್ಲಿ ತೃಪ್ತಿ ಇದೆ. ಕೆಲವು ವಿಷಯಗಳಲ್ಲಿ ಬೇಸರವೂ ಇದೆ. ಇಲ್ಲಿನ ಅನುಭವ ನನಗೆ ಒಂದು ರೀತಿ `ಕಟ್ಟಾ-ಮೀಟಾ~. ಕರುಳು ಬೆಳವಣಿಗೆಯಾಗದೇ ತೊಂದರೆಗೆ ಸಿಲುಕಿದ್ದ ಬಾಗಲಕೋಟೆಯ ಮಗುವಿಗೆ ಚಿಕಿತ್ಸೆ ನೀಡಿ, ಎಲ್ಲ ಮಕ್ಕಳಂತೆ ಅದು ಜೀವಿಸಲು ನೆರವಾದುದು ನನಗೆ ಅತ್ಯಂತ ಸಂತಸ ನೀಡಿದ ಘಟನೆ. ಅಕ್ರಮ ಗಣಿಗಾರಿಕೆ ಕುರಿತ ನನ್ನ ಮೊದಲ ವರದಿಯ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ಹೆಚ್ಚು ಬೇಸರ ನೀಡಿದ ಸಂಗತಿ.

ಪ್ರಶ್ನೆ: ಭ್ರಷ್ಟಾಚಾರ ನಿಯಂತ್ರಣಕ್ಕೆ ಇನ್ನೂ ಕಠಿಣ ಕಾನೂನು ಅಗತ್ಯವೇ?
`ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ~ ಬಲಶಾಲಿಯಾಗಿಯೇ ಇದೆ. ಅದನ್ನು ಬಳಸಿಕೊಳ್ಳುವ ಅಧಿಕಾರಿಗಳ ಮೇಲೆ ಅದರ ಯಶಸ್ಸು ಅವಲಂಬಿತ. ನಮ್ಮ ಪೊಲೀಸರು ಅತ್ಯಂತ ಸಮರ್ಪಕವಾಗಿ ಈ ಕಾಯ್ದೆಯನ್ನು ಬಳಸಿದ್ದು, ಮಂತ್ರಿಗಳು, ಶಾಸಕರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಹಿರಿಯ ಅಧಿಕಾರಿಗಳನ್ನು ಕಾನೂನಿನ ತೆಕ್ಕೆಗೆ ತರುವಲ್ಲಿ ಸಫಲರಾಗಿದ್ದಾರೆ. ಆದರೆ, ದುರಾಡಳಿತಕ್ಕೆ ನಿಯಂತ್ರಣ ಹಾಕುವ ನಿಟ್ಟಿನಲ್ಲಿ ಲೋಕಾಯುಕ್ತ ಕಾಯ್ದೆಗೆ ಮತ್ತಷ್ಟು ಬಲ ನೀಡುವ ಅಗತ್ಯವಿದೆ.

ಪ್ರಶ್ನೆ: ಅಕ್ರಮ ಗಣಿಗಾರಿಕೆ ಕುರಿತ ಎರಡನೇ ವರದಿಯ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂಬ ನಂಬಿಕೆ ಇದೆಯೇ?
ನಮ್ಮ ಅಧಿಕಾರಿಗಳು ವರ್ಷಗಟ್ಟಲೆ ಬೆವರು ಹರಿಸಿ ತನಿಖೆ ನಡೆಸಿದ್ದಾರೆ. ಸರ್ಕಾರ ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ನಿಷ್ಠುರ ಕ್ರಮ ಜರುಗಿಸಿದರೆ ನನಗೆ ಅದಕ್ಕಿಂತ ಹೆಚ್ಚು ಸಂತೋಷ ನೀಡುವ ಯಾವ ಸಂಗತಿಯೂ ಇಲ್ಲ.

ಪ್ರಶ್ನೆ: ವರದಿ ಸಲ್ಲಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ರಾಜೀನಾಮೆ ನಿರೀಕ್ಷಿಸಿದ್ದೀರಾ?
ನಾನು ನನ್ನ ಕೆಲಸವನ್ನಷ್ಟೇ ಮಾಡಿದ್ದೇನೆ. ಅಕ್ರಮ ಗಣಿಗಾರಿಕೆ ಕುರಿತ ತನಿಖಾ ವರದಿಯ ರಾಜಕೀಯ ಪರಿಣಾಮಗಳ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ಯಾರ ರಾಜೀನಾಮೆಗೂ ನಾನು ವರದಿಯಲ್ಲಿ ಶಿಫಾರಸು ಮಾಡಿಲ್ಲ. ತಪ್ಪು ಮಾಡಿದವರ ವಿರುದ್ಧ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕೆಂಬ ಶಿಫಾರಸು ಮಾಡಲಾಗಿದೆ. ರಾಜಕಾರಣಕ್ಕೂ ನನಗೂ ಸಂಬಂಧವೇ ಇಲ್ಲ.

ಪ್ರಶ್ನೆ: ಅಕ್ರಮ ಗಣಿಗಾರಿಕೆ ಕುರಿತ ವರದಿ ಸಲ್ಲಿಸಿದ ಬೆನ್ನಲ್ಲೇ ನಿವೃತ್ತಿ ಹೊಂದುತ್ತಿದ್ದೀರಿ. ನಿಮಗೆ ಬೆದರಿಕೆ ಇದೆ ಎನಿಸುತ್ತಿದೆಯೇ?
ನನಗೆ ಈಗ 72 ವರ್ಷ ವಯಸ್ಸು. ನನ್ನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ಅಕ್ರಮ ಗಣಿಗಾರಿಕೆ ಕುರಿತ ತನಿಖೆಯಲ್ಲಿ ನನ್ನ ಜೊತೆ ಕೈಜೋಡಿಸಿದ ಅಧಿಕಾರಿಗಳ ರಕ್ಷಣೆ ಮುಖ್ಯ. ಅವರಲ್ಲಿ ಹಲವರು ಬಹಳ ಕಿರಿಯರು. ಹಲವು ವರ್ಷಗಳ ಸೇವಾ ಅವಧಿ ಇದೆ. ಅವರಿಗೆ ತೊಂದರೆ ಆಗದಂತೆ ಎಚ್ಚರ ವಹಿಸಬೇಕಾದ ಹೊಣೆ ಸರ್ಕಾರದ ಮೇಲಿದೆ.

ಪ್ರಶ್ನೆ: ಸುಪ್ರೀಂಕೋರ್ಟ್ ತೀರ್ಪಿನ ನಂತರವೂ ಬಳ್ಳಾರಿಯಲ್ಲಿ ಅಕ್ರಮ ಅದಿರು ಸಾಗಣೆ ನಡೆಯುತ್ತಿರುವುದಕ್ಕೆ ನಿಮ್ಮ ಅಭಿಪ್ರಾಯವೇನು?
ಅಲ್ಲಿ ಕಾನೂನಿನ ಆಡಳಿತವಿಲ್ಲ ಎಂಬುದನ್ನು ನನ್ನ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದ್ದೇನೆ. ಈಗ ಅದು ಸಾಬೀತಾಗಿದೆ. ಯಾರಾದರೂ ಈ ಸಂಗತಿಯನ್ನು ನ್ಯಾಯಾಲಯದ ಮುಂದಿಟ್ಟರೆ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ಕಠಿಣ ಕ್ರಮ ಕೈಗೊಳ್ಳುವುದು ಖಚಿತ.

ಪ್ರಶ್ನೆ: ನಿವೃತ್ತಿಯ ನಂತರದ ಜೀವನದ ಬಗ್ಗೆ ನಿಮ್ಮ ಯೋಚನೆ, ಯೋಜನೆ ಏನಿದೆ?
ಮುಂದಿನ ಬದುಕಿನ ಬಗ್ಗೆ ಏನನ್ನೂ ಯೋಚಿಸಿಲ್ಲ. ಯಾವುದೇ ಹೊಸ ಸಂದರ್ಭಕ್ಕೂ ನನ್ನನ್ನು ಅರ್ಪಿಸಿಕೊಳ್ಳುವ ಮನೊಭಾವ ನನ್ನಲ್ಲಿದೆ. ಬೆಂಗಳೂರಿ ನಲ್ಲೇ ನೆಲೆಸಬೇಕು ಎಂಬ ಆಸೆಯಿಂದಲೇ ಇಲ್ಲಿಗೆ ಬಂದಿದ್ದು, ಇಲ್ಲೇ ಇರುತ್ತೇನೆ. ಯಾವುದೇ ರಾಜಕೀಯ ಪಕ್ಷ, ಸಂಘ ಸಂಸ್ಥೆಗಳನ್ನು ಸೇರುವುದಿಲ್ಲ. ಭ್ರಷ್ಟಾ ಚಾರದ ವಿರುದ್ಧದ ಹೋರಾಟಕ್ಕೆ ವಿಷಯಾಧಾರಿತ ಬೆಂಬಲ ನೀಡುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT