ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣದಲ್ಲಿ ನೈತಿಕತೆ ಕಣ್ಮರೆ: ವಿಷಾದ

Last Updated 15 ಫೆಬ್ರುವರಿ 2012, 7:55 IST
ಅಕ್ಷರ ಗಾತ್ರ

ಚಾಮರಾಜನಗರ: `ಮಾಜಿ ರಾಜ್ಯಪಾಲ ದಿ.ಬಿ.ರಾಚಯ್ಯ ಪ್ರಾಮಾಣಿಕ ಹಾಗೂ ಸಜ್ಜನ ರಾಜಕಾರಣಿಯಾಗಿದ್ದರು. ಅವರ ಆದರ್ಶಗಳು ಇಂದಿನ ಯುವಜನರಿಗೆ ಮಾದರಿಯಾಗಿವೆ~ ಎಂದು ಮಾಜಿ ಸಚಿವ ಬಿ. ಸೋಮಶೇಖರ್ ಹೇಳಿದರು.

ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಮಂಗಳವಾರ ದಲಿತ ಸಂಘರ್ಷ ಸಮಿತಿ(ಸಂಯೋಜಕ)ಯಿಂದ ನಡೆದ ಮಾಜಿ ರಾಜ್ಯಪಾಲ ದಿ.ಬಿ. ರಾಚಯ್ಯ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ, ಕ್ಯಾಲೆಂಡರ್ ಬಿಡುಗಡೆ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ರಾಜಕಾರಣ ಭ್ರಷ್ಟಗೊಂಡಿದ್ದು, ರಾಜಕೀಯ ಧುರೀಣರು ನೈತಿಕತೆ ಕಳೆದುಕೊಂಡಿದ್ದಾರೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ  ಪ್ರಾಮಾಣಿಕ ರಾಜಕಾರಣಿಯಾಗಿದ್ದ ರಾಚಯ್ಯ ಅವರನ್ನು ಸ್ಮರಣೆ ಮಾಡಿಕೊಳ್ಳುತ್ತಿರುವುದು ಶ್ಲಾಘನೀಯವಾದುದು. ಹಿಂದೆ ಒಳ್ಳೆಯ ವಿದ್ಯಾವಂತರು, ಸಜ್ಜನರನ್ನು ಹುಡುಕಿ ರಾಜಕಾರಣಕ್ಕೆ ತಂದು ಜನರೇ ಹಣಕೊಟ್ಟು ಓಟು ನೀಡಿ ಗೆಲ್ಲಿಸುತ್ತಿದ್ದರು. ಇದಕ್ಕೆ ರಾಚಯ್ಯ ನಿರ್ದಶನವಾಗಿದ್ದಾರೆ ಎಂದರು.

ಭ್ರಷ್ಟಾಚಾರಿಗಳು, ಅಪರಾಧ ಚಟುವಟಿಕೆಯಲ್ಲಿ ತೊಡಗಿರುವ ಮಂದಿಯೇ ರಾಜಕೀಯ ಪ್ರವೇಶ ಮಾಡುತ್ತಿದ್ದಾರೆ. ಇದರಿಂದ ದೇಶಕ್ಕೆ ಭದ್ರತೆ ಇದೆಯೇ? ಎಂಬ ಪ್ರಶ್ನೆಯೂ ಉದ್ಭವವಾಗಿದೆ ಎಂದ ಅವರು, ರಾಜಕಾರಣದಲ್ಲಿ ಸ್ವಜನಪಕ್ಷಪಾತ, ಜಾತಿಯತೆ ತಾಂಡವವಾಡುತ್ತಿದೆ ಎಂದು ವಿಷಾದಿಸಿದರು.

ಇಂದಿನ ರಾಜಕೀಯದಲ್ಲಿ ಓಲೈಸುವವರು ಮಾತ್ರವೇ ನಾಯಕರಾಗುತ್ತಿದ್ದಾರೆ. ನಾವಿಂದು ಡಾ.ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳನ್ನು ಮರೆಯುತ್ತಿದ್ದೇವೆ. ಬೇರೆಯವರ ಮಾರ್ಗದರ್ಶನ ನಂಬಿ ಜನರು ಹಾಳಾಗಿದ್ದಾರೆ ಎಂದ ಅವರು, ದಲಿತರು ರಾಜಕೀಯ ಬದಲಾವಣೆ ತರದಿದ್ದರೆ ಜೀತ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬಿಎಸ್‌ಪಿ ಮುಖಂಡ ಎನ್. ಮಹೇಶ್ ಮಾತನಾಡಿ, ರಾಚಯ್ಯ ಅವರು ಅತ್ಯಂತ ಸಂಭಾವಿತ, ಪ್ರಾಮಾಣಿಕ ರಾಜಕಾರಣಿಯಾ ಗಿದ್ದರು. ಯಾರನ್ನೂ ವಿರೋಧ ಕಟ್ಟಿಕೊಳ್ಳದೆ ಅಭಿವೃದ್ಧಿ ಕೆಲಸ ಮಾಡುತ್ತಿದ್ದರು ಎಂದು ನುಡಿದರು.

ನಿವೃತ್ತ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಎಸ್. ಮರಿಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ವೆಂಕಟರಮಣಸ್ವಾಮಿ, ಡಯಟ್ ಪ್ರಾಂಶುಪಾಲ ರುದ್ರಯ್ಯ, ಹನುಮಯ್ಯ, ಪ್ರೊ.ದಯಾನಂದ ಮಾನೆ, ಸಿ.ಎಂ. ನರಸಿಂಹಮೂರ್ತಿ, ಡಾ.ಕೇಶವನ್ ಪ್ರಸಾದ್ ಅವರನ್ನು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ಆರ್. ಕೃಷ್ಣಮೂರ್ತಿ ಸನ್ಮಾನಿಸಿದರು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT