ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣದಲ್ಲಿ ಮನೆತನಗಳದ್ದೇ ಕದನ

ಚಿಂತಾಮಣಿ ವಿಧಾನಸಭೆ ಕ್ಷೇತ್ರ
Last Updated 4 ಏಪ್ರಿಲ್ 2013, 8:44 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯ ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ ಚಿಂತಾಮಣಿಯಲ್ಲಿ ಚುನಾವಣೆಯೆಂದರೆ, ಪ್ರತಿಷ್ಠೆಗಳ ಸಮರವೆಂದೇ ಅರ್ಥ. ಬೇರೆಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷಗಳು ಪ್ರಮುಖವಾದರೆ, ಚಿಂತಾಮಣಿಯಲ್ಲಿ ಮಾತ್ರ ವ್ಯಕ್ತಿಯೇ ಮುಖ್ಯ.

ಯಾವ ಪಕ್ಷವು ತಮ್ಮ ನಾಯಕನನ್ನು ಸೆಳೆದುಕೊಳ್ಳುತ್ತದೆ ಎನ್ನುವುದರಕ್ಕಿಂತ ತಮ್ಮ ನಾಯಕ ಯಾವ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂಬುದಕ್ಕೆ ಇಲ್ಲಿನ ಮತದಾರರು ಹೆಚ್ಚು ಆದ್ಯತೆ ನೀಡುತ್ತಾರೆ. ಈ ಕಾರಣದಿಂದಲೇ ಪ್ರತಿಯೊಂದು ಚುನಾವಣೆಯಲ್ಲೂ ಅಭ್ಯರ್ಥಿಗಳು ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧಿಸಿದ್ದಾರೆ. ಪಕ್ಷೇತರರಾಗಿಯೂ ಸ್ಪರ್ಧಿಸಿದ್ದಾರೆ.

ಚಿಂತಾಮಣಿಯಲ್ಲಿ ಹಲವಾರು ದಶಕಗಳಿಂದ ನಡೆದುಕೊಂಡು ಬಂದಿರುವುದು ಎರಡು ಮನೆತನಗಳ ರಾಜಕಾರಣ. ಒಮ್ಮೆ ಎಂ.ಸಿ.ಆಂಜನೇಯರೆಡ್ಡಿ ಮನೆತನದವರು ಗೆಲುವು ಸಾಧಿಸಿದರೆ, ಮಗದೊಮ್ಮೆ ಟಿ.ಕೆ.ಗಂಗಿರೆಡ್ಡಿ ಮನೆತನದವರಿಗೆ ಗೆಲುವು ಕಟ್ಟಿಟ್ಟ ಬುತ್ತಿ ಎಂದೇ ಅರ್ಥ. ಈ ಮನೆತನಗಳ ಪರಂಪರೆ ಎರಡು-ಮೂರು ದಶಕಗಳದ್ದಲ್ಲ. 1957ರಿಂದಲೂ ಎರಡೂ ಮನೆತನಗಳ ನಡುವಿನ ಜಿದ್ದಾಜಿದ್ದಿ ರಾಜಕಾರಣ ನಡೆಯುತ್ತಲೇ ಬಂದಿದೆ. ಎರಡೂ ಮನೆತನದವರಿಗೆ ಹೊರತುಪಡಿಸಿದರೆ, ಮೂರನೆಯವರಿಗೆ ಗೆಲ್ಲಲು ಅವಕಾಶ ಸಿಗದಿರುವುದೇ ಒಂದು ದಾಖಲೆ !

ಚಿಂತಾಮಣಿಯಲ್ಲಿ ನಡೆದ ಬಹುತೇಕ ಚುನಾವಣೆಗಳಲ್ಲಿ ನೇರವಾದ ಹಣಾಹಣಿ ಏರ್ಪಟ್ಟಿದ್ದು ಕಾಂಗ್ರೆಸ್‌ನ ಚೌಡರೆಡ್ಡಿ ಮತ್ತು ಕೆ.ಎಂ.ಕೃಷ್ಣಾರೆಡ್ಡಿ ನಡುವೆ. ಬಹುತೇಕ ಎಲ್ಲ ಚುನಾವಣೆಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಚೌಡರೆಡ್ಡಿಯವರು 1999ರ ಚುನಾವಣೆಯಲ್ಲಿ ಮಾತ್ರ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ದಾಖಲಿಸಿದರು. 1983 ಮತ್ತು 1989ರ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ ಅವರು 1985 ಮತ್ತು 1989ರ ಚುನಾವಣೆಯಲ್ಲಿ ಸೋಲು ಅನುಭವಿಸಿದರು.  1994ರ ಚುನಾವಣೆಯಲ್ಲಿ ಕೇವಲ 898 ಮತಗಳ ಅಂತರದಿಂದ ಕೆ.ಎಂ.ಕೃಷ್ಣಾರೆಡ್ಡಿ ವಿರುದ್ಧ ಚೌಡರೆಡ್ಡಿ ಪರಾಭವಗೊಂಡರು.

ಆದರೆ ಕೆ.ಎಂ.ಕೃಷ್ಣಾರೆಡ್ಡಿಯವರು ಬಹುತೇಕ ಚುನಾವಣೆಗಳನ್ನು ಜನತಾ ಪರಿವಾರದ ಪಕ್ಷಗಳ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. 1983 ಮತ್ತು 1985ರ ಚುನಾವಣೆಗಳಲ್ಲಿ ಸ್ಪರ್ಧಿಸಿದ ಅವರು 1989 ಮತ್ತು 1994ರ ಚುನಾವಣೆಗಳಲ್ಲಿ ಜನತಾ ದಳ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಆದರೆ ನಂತರದ ಮೂರು ಚುನಾವಣೆಗಳಲ್ಲೂ ಅವರು ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧಿಸಿ ಸತತ ಸೋಲು ಅನುಭವಿಸಿದರು. 1999ರಲ್ಲಿ ಜೆಡಿಯು, 2004ರಲ್ಲಿ ಬಿಜೆಪಿ ಮತ್ತು 2008ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರು.

2008ರವರೆಗೆ ಎರಡೂ ಮನೆತನಗಳದ್ದೇ ರಾಜಕಾರಣ ಮುಂದುವರೆದಿದ್ದರಿಂದ ಗದ್ದುಗೆಯೇರಲು ಬೇರೆಯವರಿಗೆ ಅವಕಾಶ ಸಿಗಲಿಲ್ಲ. ಬೇರೆಯವರು ಪ್ರಯತ್ನಿಸಿದರು ಯಶಸ್ವಿಯಾಗಲಿಲ್ಲ. ಆದರೆ ಪ್ರಸಕ್ತ 2013ರ ಚುನಾವಣೆಯು ಹೊಸ ಬದಲಾವಣೆಗೆ ಕಾರಣವಾಗಬಹುದು ಎನ್ನಲಾಗುತ್ತಿದೆ.

ಚಿಂತಾಮಣಿಯಲ್ಲಿ ಮೊಟ್ಟಮೊದಲ ಬಾರಿಗೆ ಇಡೀ ರಾಜಕೀಯ ಚಿತ್ರಣವೇ ಬದಲಾಗಿದ್ದು, ಯಾರು ಗೆಲ್ಲುತ್ತಾರೆ ಎಂಬುದು ಪಕ್ಷದ ಕಾರ್ಯಕರ್ತರಲ್ಲಿ ಅಷ್ಟೇ ಅಲ್ಲ, ಕ್ಷೇತ್ರದ ಜನರಲ್ಲೂ ಕುತೂಹಲ ಮೂಡಿಸಿದೆ.

ಚುನಾವಣೆಯು ಹೊಸ ಬದಲಾವಣೆಗೆ ಕಾರಣವಾಗುವುದಾ ಅಥವಾ ಹಳೆಯ ಪರಂಪರೆ ಮುಂದುವರೆಸುವುದಾ ಎಂಬ ಪ್ರಶ್ನೆ ಅಲ್ಲಿನ ಜನರಲ್ಲಿ ಕಾಡುತ್ತಿದೆ.

ತಮ್ಮ ತಾತಾ ಎಂ.ಸಿ.ಆಂಜನೇಯರೆಡ್ಡಿಯವರ ಕಾಲದಿಂದಲೂ ಇಡೀ ಕುಟುಂಬವು ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡು ಬಂದಿದ್ದರೂ ಹಾಲಿ ಶಾಸಕ ಡಾ. ಎಂ.ಸಿ.ಸುಧಾಕರ್ ಅವರು ಈ ಬಾರಿ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಹೇಳಿ ಅಚ್ಚರಿ ಮೂಡಿಸಿದ್ದಾರೆ. `ಕಾಂಗ್ರೆಸ್‌ನಲ್ಲಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಅವರ ಕಿರಿಕಿರಿ ತಾಳಲಾರದೇ ಇಂತಹ ನಿರ್ಧಾರಕ್ಕೆ ಬಂದಿದ್ದೇನೆ' ಎಂದು ಹೇಳಿರುವ ಅವರು ಟಿಕೆಟ್‌ಗಾಗಿ ಕಾಂಗ್ರೆಸ್‌ನಲ್ಲಿ ಅರ್ಜಿಯನ್ನು ಕೂಡ ಸಲ್ಲಿಸಿಲ್ಲ. ಪ್ರಥಮ ಬಾರಿ ಪಕ್ಷೇತರರಾಗಿ ಸ್ಪರ್ಧಿಸಲಿರುವ ಅವರು ಹಲವಾರು ಸವಾಲುಗಳನ್ನು ಎದುರಿಸುವ ಸಾಧ್ಯತೆಯಿದೆ.

ಮೊದಲ ಬಾರಿಗೆ ರಾಜಕೀಯ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿರುವ ವಾಣಿ ಕೃಷ್ಣಾರೆಡ್ಡಿಯವರು ಕಾಂಗ್ರೆಸ್‌ನಿಂದ ಮತ್ತು ಸಮಾಜಸೇವಕರಾಗಿ ಗುರುತಿಸಿಕೊಂಡು ಈಗ ರಾಜಕಾರಣಿಯಾಗಿರುವ ಜೆ.ಕೆ.ಕೃಷ್ಣಾರೆಡ್ಡಿಯವರು ಜೆಡಿಎಸ್‌ನಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಮನೆತನಗಳ ರಾಜಕಾರಣದಲ್ಲಿ ಮೂರನೆಯವರ ಪ್ರವೇಶವಾಗಿದ್ದು, ರಾಜಕೀಯ ಯಾವ ದಿಕ್ಕು ಪಡೆಯುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಡಾ. ಎಂ.ಸಿ.ಸುಧಾಕರ್ ಅವರು ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾಗುವರೇ? ವಾಣಿಕೃಷ್ಣಾರೆಡ್ಡಿ ಅಥವಾ ಜೆ.ಕೆ.ಕೃಷ್ಣಾರೆಡ್ಡಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗುವುರೋ ಎಂಬುದು ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT