ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ `ಅಸ್ತ್ರ'ವಾದ ಕಾಲುವೆ ನೀರು!

Last Updated 7 ಡಿಸೆಂಬರ್ 2012, 6:16 IST
ಅಕ್ಷರ ಗಾತ್ರ

ಶಹಾಪುರ: ಕೃಷ್ಣಾ ಭಾಗ್ಯ ಜಲ ನಿಗಮದ(ಕೆಬಿಜೆಎನ್‌ಎಲ್)ಉನ್ನತಾಧಿಕಾರಿ ಸಭೆಯು  ಆಲಮಟ್ಟಿಯಲ್ಲಿ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ಸೇರಿ ಫೆ. 20ವರೆಗೆ ನಾರಾಯಣಪೂರ ಎಡದಂಡೆ ಕಾಲುವೆ (ಎನ್‌ಎಲ್‌ಬಿಸಿ)ಗೆ ನೀರು ಹರಿಸುವ ನಿರ್ಣಯ ರೈತರಿಗಿಂತ ರಾಜಕೀಯ ಮುಖಂಡರಿಗೆ ನಿದ್ದೆಗೆಡಿಸಿದೆ ಎಂಬ ಆರೋಪ ಕೇಳಿ ಬರುತ್ತಲಿದೆ.

ನೀರಾವರಿ ವ್ಯಾಪ್ತಿಯ ರಾಜಕೀಯ ಮುಖಂಡರು ಏಪ್ರಿಲ್ ಅಂತ್ಯದವರೆಗೆ ನೀರು ಹರಿಸಲಾಗುವುದೆಂಬ ಹುಸಿ ಭರವಸೆಯನ್ನು ನೀಡುತ್ತಾ ಬಂದವರಿಗೆ  ನಿಜಸ್ಥಿತಿ ಕೇಳಿ ಕಂಗಾಲಾಗಿಸಿದೆ.  ರಾಜಕೀಯ ಪಕ್ಷಗಳು ಸಂಘ-ಸಂಸ್ಥೆಗಳು ಹೋರಾಟದ `ಕಪಟ ನಾಟಕ' ನಡೆಸಿದರು ಸಹ ಬರುವ ದಿನಗಳಲ್ಲಿ ಬತ್ತ ಬೆಳೆಗೆ  ಎರಡು ಅವಧಿಗೆ ನೀರನ್ನು ಪೂರೈಸುವುದು ಸಾಧ್ಯವಿಲ್ಲ ಎಂಬ ವಾಸ್ತವ ಚಿತ್ರಣದ ನಿಜಸ್ಥಿತಿಯನ್ನು ಹೇಳುವ ಧೈರ್ಯ ರಾಜಕೀಯ ಮುಖಂಡರಿಗೆ ಹಾಗೂ ಜನಪ್ರತಿನಿಧಿಗಳಿಗೆ ಇಲ್ಲ ಎನ್ನುತ್ತಾರೆ ನೀರು ವಂಚಿತ ಕೆಳಭಾಗದ ರೈತ ಸಾಯಿಬಣ್ಣ ಗೊಂದೆನೂರ.

ನಿಜಸ್ಥಿತಿ ಬಹಿರಂಗಪಡಿಸಿದರೆ ರೈತರ ಓಟ್ ಬ್ಯಾಕ್‌ಗೆ ಧಕ್ಕೆಯಾಗುವ ಭೀತಿ ಕಾಡುತ್ತಲಿದೆ. `ಎಷ್ಟು ವರ್ಷಗಳ ಕಾಲ ಸುಳ್ಳನ್ನು ನಿಜವೆಂದು ಭ್ರಮಿಸುತ್ತಾ ಹೊರಡಿರುವುದು ಸರಿಯಲ್ಲ.' ಯೋಜನೆಯ ಮೂಲ ಉದ್ಧೇಶ ಮರೆತಿರುವ ರಾಜಕೀಯ ಪಕ್ಷಗಳು ಹಾಗೂ ಸಂಘ -ಸಂಸ್ಥೆಗಳು ರೈತರಿಗೆ ತಪ್ಪು ಸಂದೇಶ ಬಿತ್ತರಿಸುತ್ತಾ ಸಾಗಿರುವುದು ನೋವಿನ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.

ಉದ್ದೇಶ: ಬರಗಾಲದ ದವಡೆಯಿಂದ ಮುಕ್ತಿಗೊಳಿಸಲು ಗುಲ್ಬರ್ಗ, ರಾಯಚೂರು, ವಿಜಾಪೂರ, ಯಾದಗಿರಿ ಜಿಲ್ಲೆಯ ರೈತರಿಗೆ ನೆರವಿನ ಅಭಯ ನೀಡಲಾಗಿತ್ತು. ಯೋಜನೆ ರೂಪಿಸುವಾಗ ನೀರಾವರಿ ತಜ್ಞರು, ಅಂದಿನ ಸರ್ಕಾರವು ಸಾಮಾಜಿಕ ನ್ಯಾಯವನ್ನು ಗಮನದಲ್ಲಿಟ್ಟುಕೊಂಡು ಲಭ್ಯವಾಗುವ ನೀರಿನಲ್ಲಿ ಹೆಚ್ಚಿನ ರೈತರಿಗೆ ನೀರಾವರಿ ಭಾಗ್ಯ ದೊರೆಯಲೆಂದು ಅಧಿಕ ನೀರು ಪಡೆಯುವ ಬತ್ತ, ಬಾಳೆ, ವೀಳ್ಯಾದೆಲೆ, ಕಬ್ಬು ಬೆಳೆಯನ್ನು ನಿಷೇಧಿಸಿ ಲಘು ಬೆಳೆಗಳಾದ ಶೇಂಗಾ, ಹತ್ತಿ, ಮೆಣಸಿನಕಾಯಿ, ಮೆಕ್ಕೆಜೋಳ, ಸಜ್ಜೆ, ಗೋಧಿ ಬೆಳೆಗಳನ್ನು ಬೆಳೆಯಲು ಅವಕಾಶ ನೀಡಲಾಗಿತ್ತು.  ಇಪ್ಪತ್ತು ವರ್ಷಗಳ ಹಿಂದೆ ಕೇವಲ 5 ಲಕ್ಷ ನೀರಾವರಿ ಪ್ರದೇಶವಿದ್ದು ಇಂದು 20 ಲಕ್ಷ ಎಕರೆಗೆ ನೀರು ಒದಗಿಸಬೇಕಾಗಿದೆ. ಅಂದಿನ ನೀರಿನಂತೆ ಇಂದಿಗೂ ಬೆಳೆಗಳಿಗೆ ನೀರು ಬರಬೇಕೆಂಬ ಬೇಡಿಕೆಯು ರೈತರ ಹಗಲುಗನಸಾಗಿದೆ ಎಂಬುದು ರೈತ ಶಿವಣ್ಣನ ನಿಲವು.

ಕಾನೂನು: ಕಾನೂನು ಪ್ರಕಾರ ನೀರಾವರಿ ಸಲಹಾ ಸಮಿತಿಯು ಜಲಾಶಯದಲ್ಲಿ ಸಂಗ್ರಹವಾಗಿರುವ ನೀರಿನ ಲಭ್ಯತೆಯ ಜತೆಗೆ ಬೆಳೆಗೆ ಉಪಯೋಗಿಸಲು ಅವಕಾಶವಿರುವ ಅಂಶವನ್ನು ಗಮನದಲ್ಲಿಟ್ಟುಕೊಂಡು ಕಾಲುವೆಯಲ್ಲಿ ನೀರು ಹರಿಸುವ ಹಾಗೂ ಸ್ಥಗಿತಗೊಳಿಸುವ ಶಾಸನಬದ್ಧ ಸಂಸ್ಥೆಯಾಗಿದೆ. ಸಮಿತಿ ಸಭೆಯಲ್ಲಿ ಚುನಾಯಿತ ಸದಸ್ಯರು ಸಭೆಯಲ್ಲಿ ಭಾಗವಹಿಸುವುದು ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ತಮ್ಮನ್ನು ಸಲಹಾ ಸಮಿತಿ ಸದಸ್ಯರನ್ನಾಗಿ ಮಾಡಿಲ್ಲವೆಂದು ಕುಂಟು ನೆಪ ಹೇಳುವುದು  ರೈತರಿಗೆ ದ್ರೋಹ ಬಗೆದಂತೆ. ಜನಪ್ರತಿನಿಧಿಗಳು ಸಮಿತಿ ಸಭೆಯಲ್ಲಿ ಭಾಗವಹಿಸಿ ಸಲಹೆಗಳನ್ನು ನೀಡುವುದರಲ್ಲಿ ಯಾವುದೇ ಅಭ್ಯಂತರವಿಲ್ಲ.

ಸಮಿತಿಯ ಪ್ರತಿ ನಿರ್ಣಯದ ಸಮಯದಲ್ಲಿ ನಿಷೇಧಿತ ಬೆಳೆಯನ್ನು ಬೆಳೆಯಬಾರದೆಂದು ನಿರ್ಣಯಿಸುತ್ತದೆ. ಸಮಿತಿ ನಿರ್ಧಾರವನ್ನು ಬದಿಕೊತ್ತಿ ಬತ್ತಕ್ಕೆ ನೀರು ಕೊಡಿ ಎನ್ನುವ ಹೋರಾಟ ಬೇಕೆ? ಇವೆಲ್ಲ ದಾರಿ ತಪ್ಪಿಸುವ ಗಿಮಿಕ್ ಆಗಿದೆ. ಹೈಕೋರ್ಟ್‌ನಲ್ಲಿ  ನಿಷೇಧಿತ ಬೆಳೆಗಾರರು ಹೋರಾಟ ನಡೆಸಿ ವಿಫಲರಾಗಿದ್ದಾರೆ  ಎನ್ನುವುದು ನೀರು ವಂಚಿತ ಕೆಳಭಾಗದ ರೈತ ಚಂದ್ರಶೇಖರ ನಾಯ್ಕಲ್ ಅಭಿಪ್ರಾಯ.

ನೀರಿನಿಂದ ವಂಚಿತ: ಯೋಜನೆ ಕೆಳಭಾಗದ ರೈತರು 1985ರಿಂದ ಸುಮಾರು 27 ವರ್ಷಗಳಿಂದ ನೀರಿನ ಹಕ್ಕಿನಿಂದ ವಂಚಿತರಾಗಿದ್ದಾರೆ. ಕಣ್ಣೀರು ಮಾತ್ರ ಸಾಂತ್ವನವಾಗಿದೆ. ನಿಜವಾಗಿ ನ್ಯಾಯಬದ್ದ ಬೆಳೆ ಹಾಗೂ ನೀರಿನ ಹಕ್ಕು ಹೊಂದಿದ ಕೆಳಭಾಗದ ಅಸಹಾಯಕ ಧ್ವನಿ ಕಳೆದುಕೊಂಡ ರೈತರ ಪರ ಹೋರಾಟ ನಡೆಸಿಲ್ಲ. ರೈತ ಪರ ಸಂಘಟನೆ, ರಾಜಕೀಯ ಮುಖಂಡರು ಬೌದ್ಧಿಕ ಗುಮಾಮರಂತೆ ವರ್ತಿಸುತ್ತಿದ್ದಾರೆ. ಕಾಲುವೆ ಮೇಲ್ಭಾಗದ ರೈತರ ಪರ ವಕಾಲತ್ತು ವಹಿಸಿದಂತೆ  ಹೋರಾಟದ ಹಾದಿ, ಪಾದಯಾತ್ರೆ, ಮುತ್ತಿಗೆ, ಧರಣಿ ನಡೆಸುವ ಮುಖಂಡರಿಗೆ ಕಣ್ಣೀರಿನಲ್ಲಿ ಬದುಕು ಸವೆಸುತ್ತಿರುವ ಕೆಳಭಾಗದ ರೈತರ ಚಿಂತಾಜನಕ ಸ್ಥಿತಿ ಅರ್ಥವಾಗುವುದಿಲ್ಲವೇ ? ಎಂದು ಪ್ರಶ್ನಿಸುತ್ತಾರೆ ಚಂದ್ರಶೇಖರ.

ನಿರ್ವಹಣೆ: ಇಂದಿಗೂ ಕಾಲುವೆ ಜಾಲದಲ್ಲಿ ನೀರು ನಿರ್ವಹಣೆ ಬಗ್ಗೆ ಗಂಭೀರವಾದ ಚಿಂತನೆ ನಡೆದಿಲ್ಲ. ನೀರು ಸದ್ಭಳಕೆ ಮಾಡಿಕೊಳ್ಳುವಲ್ಲಿ ಸಂಪೂರ್ಣವಾಗಿ ರೈತರು ವಿಫಲರಾಗಿದ್ದಾರೆ. ಕಾಲುವೆ ಸೀಳಿ ಅಕ್ರಮವಾಗಿ ನೀರು ಸೆಳೆದುಕೊಳ್ಳುವುದು. ಕಾಲುವೆಗಳನ್ನು ಹಾಳುಗೆಡವಿದ್ದಾರೆ. ರೈತ- ರೈತರ ನಡುವೆ ಶೋಷಣೆ ನಡೆಯುತ್ತಲಿದೆ. ನೀರು ನಿರ್ವಹಣೆಯಲ್ಲಿ ತುಂಬಾ ಸೋತಿದ್ದಾರೆ. ಲಕ್ಷಾವಧಿ ಹಣ ರಿಪೇರಿಯ ಹೆಸರಿನಲ್ಲಿ ದುರ್ಬಳಕೆಯಾಗುತ್ತಲಿದೆ ಎನ್ನುವುದು ರೈತ ಅಂಬರೇಶರ ದೂರು.

ಅದೇ ರಾಗ ಅದೇ ಹಾಡು ಮತ್ತೆ ರಾಜಕೀಯ ಪಕ್ಷಗಳಿಂದ ಕೇಳಿ ಬರುತ್ತಲಿದೆ. ವಾಸ್ತವ ಚಿತ್ರ ಮರೆ ಮಾಚಿ ದಿನಕೊಂದು ಹೇಳಿಕೆ ಪತ್ರಿಕೆಯಲ್ಲಿ ನೀಡಿ ರೈತರನ್ನು ಮತ್ತಷ್ಟು ದುಃಖಿಗಳನ್ನಾಗಿ ಮಾಡುವುದು ಸರಿಯಲ್ಲ. ವಾಸ್ತವ ಬದುಕಿನ ಚಿತ್ರವನ್ನು ಅರಿತು ಮುನ್ನಡೆಯುವುದು ರೈತರಿಗೆ ಉಳಿದಿರುವ ಏಕೈಕ ಮಾರ್ಗ ಎನ್ನುವುದು ರೈತಪರ ಕಾಳಜಿ ಮನಸ್ಸುಗಳ ಅನಿಸಿಕೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT