ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಆಕಾಂಕ್ಷೆಯ ಸನ್ಯಾಸಿ

Last Updated 16 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಹೊರನೋಟಕ್ಕೆ ಯೋಗ ಗುರು. ಕಾವಿಧಾರಿ. ಗಡ್ಡ, ಮೀಸೆ ಬಿಟ್ಟ ಆಧುನಿಕ ಋಷಿ. ಪತಂಜಲಿಯ ಯೋಗ ಸೂತ್ರಗಳಿಗೆ ಮರುಹುಟ್ಟು ನೀಡಿ ಜನಪ್ರಿಯಗೊಳಿಸಿದ ಸಾಧಕ. ಆದರೆ, ಒಡಲಾಳದಲ್ಲಿ ರಾಜಕೀಯ ಮಹತ್ವಾಕಾಂಕ್ಷೆಯ ಅಗ್ನಿಯನ್ನೇ ಇಟ್ಟುಕೊಂಡ ಸನ್ಯಾಸಿ. ಇಷ್ಟರಿಂದಲೇ ಯೋಗಗುರು ಬಾಬಾ ರಾಮದೇವ್ ಅವರ ವ್ಯಕ್ತಿತ್ವ ಕಟ್ಟಿಕೊಟ್ಟಂತಾಗುವುದಿಲ್ಲ.

ಮೊನ್ನೆ ಅಣ್ಣಾ ಹಜಾರೆ ದೆಹಲಿಯ ಜಂತರ್ ಮಂತರ್‌ನಲ್ಲಿ ಭಾರತದ ರಾಜಕೀಯ ವ್ಯವಸ್ಥೆ, ನೌಕರಶಾಹಿಯಲ್ಲಿ ತುಂಬಿ ತುಳುಕುತ್ತಿರುವ ಭ್ರಷ್ಟಾಚಾರದ ವಿರುದ್ಧ ಸತ್ಯಾಗ್ರಹಕ್ಕೆ ಇಳಿದಾಗ ಬಾಬಾ ರಾಮದೇವ್ ಅವರ ಪಕ್ಕದಲ್ಲಿಯೇ ಕಾಣಿಸಿಕೊಂಡರು. ಅಣ್ಣಾ ಹಜಾರೆ ಗಾಂಧಿ ಮಾರ್ಗದಲ್ಲಿ ನಿರಶನಕ್ಕೆ ಕುಳಿತರೆ, ಇವರು ಅದೇ ಪೆಂಡಾಲ್‌ನಲ್ಲಿ ಬೊಬ್ಬಿರಿದು ಗುಡುಗಿದರು.

ಜನ ಲೋಕಪಾಲ್ ವ್ಯವಸ್ಥೆಗಾಗಿ ಅಣ್ಣಾ ಹಜಾರೆ ನಿರಶನಕ್ಕೆ ಕುಳಿತಾಗ 4ನೇ ದಿನ ಇಡೀ ಸತ್ಯಾಗ್ರಹವನ್ನೇ ಹೈಜಾಕ್ ಮಾಡುವ ರೀತಿಯಲ್ಲಿ ರಾಮ್‌ದೇವ್ ಜಂತರ್ ಮಂತರ್‌ನಲ್ಲಿ ಭಾಷಣ ಮಾಡಿದರು. ಈ ದೇಶದಲ್ಲಿ ಹುಟ್ಟಿದವರೆಲ್ಲ ಋಷಿಗಳು. ಇದೇ ಮಾತನ್ನು ವಿದೇಶದಲ್ಲಿ ಹುಟ್ಟಿರುವವರಿಗೆ ಹೇಳಲು ಸಾಧ್ಯವಿಲ್ಲ ಅಂದಾಗ ಅದು ಪರೋಕ್ಷವಾಗಿ ಸೋನಿಯಾ ಗಾಂಧಿ ಅವರನ್ನು ಉದ್ದೇಶಿಸಿ ಹೇಳಿದ್ದು ಎಂದೇ ಅಲ್ಲಿದ್ದವರೆಲ್ಲ ಅರ್ಥೈಸಿಕೊಂಡರು.

ಜನ ಲೋಕಪಾಲ ಮಸೂದೆ ರೂಪಿಸುವ ಸಮಿತಿಯಲ್ಲಿ ಮಾಜಿ ಕಾನೂನು ಸಚಿವ ಶಾಂತಿಭೂಷಣ್ ಮತ್ತು ಅವರ ಪುತ್ರ ಪ್ರಶಾಂತ್‌ಭೂಷಣ್ ಇಬ್ಬರೂ ಇರುವುದು ಏಕೆ ಎಂದೂ ರಾಮ್‌ದೇವ್ ಜಗಳ ತೆಗೆದರು. ಅಣ್ಣಾ ಹಜಾರೆಯವರಿಗೆ ಹೆಗಲು ಜೋಡಿಸಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಕಿರಣ್ ಬೇಡಿ ಈ ವಿವಾದ ತಣ್ಣಗಾಗಿಸಿದರು.

ಕಳೆದ ಕೆಲ ವರ್ಷಗಳಿಂದ ಬಾಬಾ ರಾಮದೇವ್ ನಡೆಯುತ್ತಿರುವ ಹಾದಿಯನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಅವರು ಅಣ್ಣಾ ಹಜಾರೆಗೆ ಬೆಂಬಲ ನೀಡಿದ್ದು ಭಾವಾವೇಶದಿಂದ ಅಲ್ಲ ಎಂಬುದು ಸ್ಫಟಿಕ ಸ್ಪಷ್ಟ. ತಮ್ಮ ರಾಜಕೀಯ ಆಕಾಂಕ್ಷೆಗಳನ್ನು ಗಟ್ಟಿಗಳಿಸಿಕೊಳ್ಳಲು ಅಲ್ಲಿ ಬಾಬಾಗೆ ಮತ್ತೊಂದು ವೇದಿಕೆ ಸಿಕ್ಕಿತು ಅಷ್ಟೇ.

ದಶಕದ ಹಿಂದೆ ಬಾಬಾ ರಾಮ್‌ದೇವ್ ಹರಿದ್ವಾರ, ಹರಿಯಾಣಕ್ಕಷ್ಟೇ ಸೀಮಿತವಾಗಿದ್ದರು. ಸ್ಯಾಟ್‌ಲೈಟ್ ಟಿವಿ ಭಾರತೀಯರ ಮನೆ, ಮನ ತುಂಬಿದ ಮೇಲೆ ಮಕ್ಕಳಿಗೆ, ವೃದ್ಧರಿಗೆ ಎಂಬಂತೆ ಚಾನೆಲ್‌ಗಳು ಹುಟ್ಟಿದಾಗ ಧಾರ್ಮಿಕ ವಿಚಾರಗಳನ್ನಷ್ಟೇ ಪ್ರಸಾರ ಮಾಡುವ ‘ಆಸ್ತಾ’ ಚಾನೆಲ್ ಮೂಲಕ ಧಿಡೀರ್ ಖ್ಯಾತಿ ಗಳಿಸಿದವರು ರಾಮ್‌ದೇವ್. ಯೋಗ, ಜೀವನಶೈಲಿಗೆ ಸಂಬಂಧಿಸಿದಂತೆ ಮಾಡುತ್ತಿದ್ದ ಭಾಷಣಗಳಿಂದ ಮನೆ ಮಾತಾದರು.

ಆ ಜನಪ್ರಿಯತೆಯ ಅಲೆಯಲ್ಲಿಯೇ ದೇಶದೆಲ್ಲೆಡೆ ಯೋಗ ಶಿಬಿರಗಳನ್ನು ಆಯೋಜಿಸತೊಡಗಿದರು. ಊರ ಮಕ್ಕಳೆಲ್ಲ ಕಿಂದರಿಜೋಗಿಯ ಹಿಂದೆ ಹೋಗುವಂತೆ ನೂರಾರು, ಸಾವಿರಾರು ಸಂಖ್ಯೆಯಲ್ಲಿನ ಜನ ಈ ಶಿಬಿರಗಳಿಗೆ ಮುತ್ತತೊಡಗಿದರು.

ರಾಮ್‌ದೇವ್ ಅವರ ಈ ಚಟುವಟಿಕೆಗೆಲ್ಲ ಕೇಂದ್ರ ಸ್ಥಾನ ಹರಿದ್ವಾರದಲ್ಲಿ ಅವರೇ ಸ್ಥಾಪಿಸಿರುವ ‘ದಿವ್ಯ ಯೋಗ ಮಂದಿರ’. ರಾಜಕೀಯದಿಂದ ದೂರಾದ, ಲಾಭ ರಹಿತ ಸಂಸ್ಥೆ. ಆದರೆ, ಇದೇ ಮಂದಿರದಲ್ಲಿ ಕುಳಿತು ವರ್ಷದ ಹಿಂದೆ ‘ಭಾರತ್ ಸ್ವಾಭಿಮಾನ್’ ಅಭಿಯಾನದ ಮೂಲಕ ರಾಜಕೀಯ ಪ್ರವೇಶಿಸುವುದಾಗಿ ಪ್ರಕಟಿಸಿದರು.

ಇದಕ್ಕೆಲ್ಲ ಸ್ವದೇಶಿ ಆಂದೋಲನದ ನಾಯಕ ಇತ್ತೀಚೆಗೆ ನಿಧನರಾದ ರಾಜೀವ್ ದೀಕ್ಷಿತ್ ಬೆಂಬಲ ಅವರಿಗಿತ್ತು. ಶೇ 100ರಷ್ಟು ಮತದಾನ, ವಿದೇಶಿ ಕಂಪೆನಿಗಳ ಬಹಿಷ್ಕಾರ, ಸ್ವದೇಶಿ ಜೀವನ ಕ್ರಮ ಅಳವಡಿಕೆ, ದೇಶದ ಜನರಲ್ಲಿ ಒಗ್ಗಟ್ಟು ಸಾಧಿಸುವುದು..ಇತ್ಯಾದಿ ‘ಭಾರತ್ ಸ್ವಾಭಿಮಾನ್’ ಅಭಿಯಾನದ ಧ್ಯೇಯಗಳು.

ಈ ಟ್ರಸ್ಟ್ ಸ್ಥಾಪನೆ ನಂತರ, ರಸಗೊಬ್ಬರ- ಕೀಟನಾಶಕ ಬಳಕೆ, ಯುವಜನರಲ್ಲಿ ಫಾಸ್ಟ್‌ಫುಡ್, ಸಾಫ್ಟ್‌ಡ್ರಿಂಕ್‌ಗಳ ಅತಿ ಬಳಕೆ, ರೈತರ ಬಡತನ, ನಷ್ಟಕ್ಕೆ ಸಿಕ್ಕಿದ ಸ್ಥಳೀಯ ಕೈಗಾರಿಕೆಗಳು...ಇವೆಲ್ಲ ರಾಮ್‌ದೇವ್ ಯೋಗ ಶಿಬಿರಗಳಲ್ಲಿ ಚರ್ಚೆಯಾಗತೊಡಗಿವು.

ಭಾರತ್ ಸ್ವಾಭಿಮಾನ್ ಟ್ರಸ್ಟ್‌ಗೂ ಮುನ್ನ 2006ರಲ್ಲಿ ರಾಮ್‌ದೇವ್ ‘ಪತಂಜಲಿ ಯೋಗ ಪೀಠ’ ಎಂಬ ಮತ್ತೊಂದು ಟ್ರಸ್ಟ್ ಸ್ಥಾಪಿಸಿದ್ದರು. ಆಯುರ್ವೇದ ಮತ್ತು ಯೋಗದಲ್ಲಿ ಸಂಶೋಧನೆ ಮತ್ತು ಚಿಕಿತ್ಸೆ ಒಳಗೊಂಡ ಜಗತ್ತಿನ ಅತಿದೊಡ್ಡ ಕೇಂದ್ರ ಸ್ಥಾಪಿಸುವ ಆಶಯವನ್ನು ಟ್ರಸ್ಟ್ ಹೊಂದಿದೆ. ‘ಪತಂಜಲಿ ಯೋಗ ಪೀಠ’ದ ‘ವೆಲ್‌ನೆಸ್ ರಿಟ್ರೀಟ್’ ಸ್ಥಾಪನೆಗೆ ಎರಡು ವರ್ಷಗಳ ಹಿಂದೆ ಸ್ಕಾಟ್ಲೆಂಡ್ ಬಳಿ ಪುಟ್ಟ ದ್ವೀಪವೊಂದನ್ನು 2 ದಶಲಕ್ಷ ಪೌಂಡ್‌ಗೆ ಖರೀದಿಸಲಾಗಿತ್ತು ಅಂದರೆ ಈ ಟ್ರಸ್ಟ್‌ನ ವ್ಯಾಪ್ತಿಯನ್ನು ಊಹಿಸಬಹುದು.

ಒಂದೆರಡು ದಶಕಗಳಲ್ಲಿ ಕೀರ್ತಿ, ಜನಪ್ರಿಯತೆಯ ಶಿಖರ ಏರಿರುವ ರಾಮ್‌ದೇವ್ ಅವರನ್ನು ವಿವಾದಗಳು ಅಷ್ಟೇ ವೇಗವಾಗಿ ಸುತ್ತಿಕೊಂಡಿವೆ.
2006ರಲ್ಲಿ ಸಿಪಿಎಂ ನಾಯಕಿ ಬೃಂದಾ ಕಾರಟ್ ‘ದಿವ್ಯ ಯೋಗ ಮಂದಿರ’ದ ಚಿಕಿತ್ಸಾಲಯದಲ್ಲಿ ನೀಡುವ ಔಷಧಿಗಳಲ್ಲಿ ಮನುಷ್ಯರ ಮತ್ತು ಪ್ರಾಣಿಗಳ ಎಲುಬಿನ ಪುಡಿ ಮಿಶ್ರ ಮಾಡಲಾಗುತ್ತಿದೆ ಎಂದು ತಕರಾರು ಎತ್ತಿದ್ದರು. ಶರದ್ ಪವಾರ್, ಮುಲಾಯಂ ಸಿಂಗ್, ಅಂಬಿಕಾ ಸೋನಿಯವರಂತಹ ನಾಯಕರೆಲ್ಲ ಆಗ ರಾಮ್‌ದೇವ್ ಪರ ನಿಂತಿದ್ದರು. ಅಂತಿಮವಾಗಿ ದೆಹಲಿಯ ರಾಷ್ಟ್ರೀಯ ಪ್ರಯೋಗಾಲಯ ಆ ಔಷಧಿಗಳಲ್ಲಿ ಕೇವಲ ಗಿಡಮೂಲಿಕೆಗಳಿವೆ ಎಂದು ವರದಿ ನೀಡಿತು.

ಉಸಿರಾಟದ ವ್ಯಾಯಾಮದ ಮೂಲಕ ಕ್ಯಾನ್ಸರ್ ಗುಣಪಡಿಸುವ, ಯೋಗದ ಮೂಲಕ ಏಡ್ಸ್‌ಗೆ ಚಿಕಿತ್ಸೆ ನೀಡುವ ರಾಮ್‌ದೇವ್ ಹೇಳಿಕೆಗಳೂ ವಿವಾದಕ್ಕೆ ಸಿಲುಕಿದ್ದವು.

ನೈತಿಕ ಮೌಲ್ಯಗಳ ಆಧಾರದಲ್ಲಿ ಭ್ರಷ್ಟಾಚಾರ ರಹಿತ ಸಮಾಜ ಕಟ್ಟುವ ಆಶಯ ಹೊಂದಿರುವ ರಾಮ್‌ದೇವ್ ಆಶ್ರಮದಲ್ಲಿಯೇ 100ಕ್ಕೂ ಹೆಚ್ಚು ನೌಕರರು ಕನಿಷ್ಠ ವೇತನ, ಜೀವವಿಮೆ, ಭವಿಷ್ಯ ನಿಧಿ ಸೌಲಭ್ಯ ನೀಡುವಂತೆ ಪ್ರತಿಭಟನೆ ಆರಂಭಿಸಿದ್ದರು. ಜಿಲ್ಲಾಡಳಿತದ ಮಧ್ಯಪ್ರವೇಶದ ಮೂಲಕ ಈ ಪ್ರತಿಭಟನೆ ಕೊನೆಗೊಂಡಿತ್ತು. ಆಗ ಕಿತ್ತುಹಾಕಿದ ಕೆಲ ಉದ್ಯೋಗಿಗಳನ್ನು 6 ವರ್ಷ ಕಳೆದರೂ ಬಾಬಾ  ಮರುನೇಮಕ ಮಾಡಿಕೊಂಡಿಲ್ಲ.

ಎರಡು ವರ್ಷಗಳ ಹಿಂದೆ ದೆಹಲಿ ಹೈಕೋರ್ಟ್ ಸಲಿಂಗ ಕಾಮಅಪರಾಧವಲ್ಲ ಎಂಬ ತೀರ್ಪು ನೀಡಿದಾಗಲೂ ಬಾಬಾ ದೊಡ್ಡ ದನಿಯಲ್ಲೇ ಕೂಗು ಹಾಕಿದ್ದರು. ಇದು ಪಶ್ಚಿಮದ ಅಂಧಾನುಕರಣೆ, ಭಾರತದ ಕೌಟುಂಬಿಕ ವ್ಯವಸ್ಥೆಯನ್ನೇ ಇದು ಹಾಳುಗೆಡವುತ್ತದೆ ಎಂದು ವಿಷಾದ ವ್ಯಕ್ತಪಡಿಸಿದ್ದರು.

ತಮ್ಮ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಿದ್ಧಪಡಿಸಿಕೊಳ್ಳಲೋ ಎಂಬಂತೆ ರಾಮ್‌ದೇವ್ ಆಗಾಗ ಇಂಥ ಹೇಳಿಕೆ ನೀಡುತ್ತಲೇ ಇದ್ದರು. ರ್ಷದ ಹಿಂದೆ ರಾಜಕೀಯ ಪ್ರವೇಶ ಮಾಡುವುದಾಗಿ ಅವರು ಹೇಳಿಕೆ ನೀಡಿದಾಗ ಮಾಯಾವತಿ, ಮುಲಾಯಂ ಸಿಂಗ್ ಸೇರಿದಂತೆ ಉತ್ತರ ಭಾರತದ ರಾಜಕಾರಣಿಗಳ ಮುಖದಲ್ಲಿ ಬೆವರಿಳಿದಿತ್ತು.

ರಾಮ್‌ದೇವ್ ಚಿಂತನೆ, ಅವರ ತತ್ವ, ಸಿದ್ಧಾಂತಗಳ ಹಿಂದೆ ಹಿಂದೂ ರಾಷ್ಟ್ರೀಯವಾದದ ಗುಪ್ತ ಕಾರ್ಯಸೂಚಿ ಅಡಗಿದೆ ಎಂಬ ಆರೋಪ ಅವರ ವಿರೋಧಿಗಳದ್ದು. 

 ‘ಭಾರತ್ ಸ್ವಾಭಿಮಾನ್’ ಟ್ರಸ್ಟ್ ಮೂಲಕ ಹಸು ಸಾಕಿಕೊಳ್ಳಲು ಹಣ ನೀಡುವುದು, ಗೋಮೂತ್ರದ ಔಷಧೀಯ ಗುಣಗಳ ಬಗ್ಗೆ ಪ್ರಚಾರ ನೀಡುವುದು. ಎಲ್ಲರೂ ಯೋಗ ಮಾಡಬೇಕು, ಸಸ್ಯಾಹಾರ ಪದ್ಧತಿಯನ್ನೇ ಅನುಸರಿಸಬೇಕು ಎಂದು ಕರೆ ನೀಡುವುದನ್ನು ನೋಡಿದಾಗ ಈ ಆರೋಪಗಳಲ್ಲೂ ಸತ್ಯ ಅಡಗಿದೆ ಎಂಬುದು ಮನದಟ್ಟಾಗುತ್ತದೆ.

ಭಾರತದಂತಹ ಬಹು ಸಂಸ್ಕೃತಿಯ, ಬಹು ಜನಾಂಗಗಳ ದೇಶದಲ್ಲಿ ಅಡಗಿರುವ ಭ್ರಷ್ಟಾಚಾರ, ಜಾತಿ ವ್ಯವಸ್ಥೆ, ಶೋಷಣೆಗೆಲ್ಲ ಸಸ್ಯಾಹಾರ, ಯೋಗ, ಧ್ಯಾನಗಳು ಮದ್ದಾಗಬಲ್ಲವೇ..? ಈ ಹಿಂದೆ ಇಂತಹ ಸಾಮಾಜಿಕ ಅನಿಷ್ಟಗಳನ್ನು ತೊಡೆಯಲು ಯತ್ನಿಸಿದ್ದ ಅಂಬೇಡ್ಕರ್, ಜಯಪ್ರಕಾಶ್ ನಾರಾಯಣ್, ಲೋಹಿಯಾ ಅವರಿಗೆ ಸಾಧ್ಯವಾಗದ್ದು ರಾಮ್‌ದೇವ್‌ಗೆ ಸಾಧ್ಯವಾಗಬಹುದೇ? ಎಂಬ ಸಂಶಯಗಳು ಏಳುತ್ತವೆ.

ಆದರೆ, ಹರಿಯಾಣದ ಹಳ್ಳಿಯೊಂದರ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ವ್ಯಕ್ತಿಯೊಬ್ಬರು ಯೋಗ, ಧ್ಯಾನ, ಆಯುರ್ವೇದದ ಮೂಲಕವೇ ಜಾಗತಿಕ ಮಟ್ಟದಲ್ಲಿ ಹೆಸರು ಗಳಿಸಿರುವುದು, ಅವರು ಹೋದಲ್ಲೆಲ್ಲ ಸಕ್ಕರೆಗೆ ಮುತ್ತುವ ಇರುವೆಯಂತೆ ಜನ ಸೇರುವುದನ್ನು ಗಮನಿಸಿದಾಗ ಮುಂಬರುವ ವರ್ಷಗಳಲ್ಲಿ ದೇಶದ ರಾಜಕೀಯದಲ್ಲಿ ಈ ಸನ್ಯಾಸಿ ನಿರ್ಣಾಯಕ ಪಾತ್ರ ವಹಿಸುವ ಸೂಚನೆಯೂ ಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT