ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಆಟ ಆರಂಭ

Last Updated 9 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

`ಕರ್ನಾಟಕ ಜನತಾ ಪಕ್ಷ' ಉದಯವಾಗುವುದರೊಂದಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹಟಸಾಧನೆ ಆಗಿದೆ. ಪಳಗಿದ ರಾಜಕಾರಣಿಯ ಪಟ್ಟುಗಳ ಮುಂದೆ ಬಿಜೆಪಿ ಸರ್ಕಾರದ ಭವಿಷ್ಯ ಡೋಲಾಯಮಾನವಾಗಿದೆ. ಪ್ರಾದೇಶಿಕ ಪಕ್ಷಗಳಿಗೆ ಭವಿಷ್ಯವಿದೆಯೋ ಇಲ್ಲವೋ ಎನ್ನುವುದು ಈಗ ಚರ್ಚೆಯ ವಿಷಯವೇ ಅಲ್ಲ. ಬಿಜೆಪಿಗೆ ಸೆಡ್ಡು ಹೊಡೆಯುವಂಥ ಪಕ್ಷವೊಂದನ್ನು ಕಟ್ಟುವುದು ಯಡಿಯೂರಪ್ಪ ಅವರ ಶಪಥವಾಗಿತ್ತು.

ನಲವತ್ತು ವರ್ಷಗಳಿಂದ ತಾವು ಕಟ್ಟಿಬೆಳೆಸಿದ ಪಕ್ಷದಲ್ಲಿ ತಮಗೆ ಅವಮಾನವಾಗಿದೆ ಎನ್ನುವುದು ಅವರ ಕೊರಗು. ಬಿಜೆಪಿಗೆ ಇತಿಶ್ರೀ ಹಾಡುವುದೇ ಅವರ ಅಂತಿಮ ಉದ್ದೇಶವಾದಂತಿರುವುದು `ಸರ್ಕಾರ ವಿಸರ್ಜಿಸಿ ಚುನಾವಣೆಗೆ ಬನ್ನಿ' ಎನ್ನುವ ಹಾವೇರಿ ಸಮಾವೇಶದ ಘೋಷಣೆಯಲ್ಲಿ ಸ್ವಷ್ಟವಾಗಿಯೇ ಗೊತ್ತಾಗುತ್ತದೆ. ಯಡಿಯೂರಪ್ಪ ಅವರಿಗೆ ಬಿಜೆಪಿಗೆ ಪರ್ಯಾಯವಾದ ಒಂದು ಪಕ್ಷ ಕಟ್ಟುವುದು ಬೇಕಾಗಿತ್ತು.

ಅದು ಈಡೇರಿದೆ. ಅಧ್ಯಕ್ಷ ಸ್ಥಾನ ಬೇಕಾಗಿತ್ತು. ಅದೂ ದೊರಕಿದೆ. ಅವರ ಮುಂದಿನ ಗುರಿ ರಾಜ್ಯದಲ್ಲಿ ಸರ್ಕಾರ ಸ್ಥಾಪಿಸುವುದು, ಮತ್ತೆ ಮುಖ್ಯಮಂತ್ರಿಯಾಗುವುದು. ಆ ಗುರಿ ಸಾಧನೆಗಾಗಿ ಅವರು ಈಗ ರಾಜ್ಯದಾದ್ಯಂತ ಪ್ರವಾಸ ಆರಂಭಿಸಿದ್ದಾರೆ. ರಾಜ್ಯದಲ್ಲಿ ಈ ಮೂಲಕ ರಾಜಕೀಯ ಹೋರಾಟ ಆರಂಭವಾಗಿಯೇ ಬಿಟ್ಟಿದೆ.

ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವ ಸೂಚನೆಯನ್ನೂ ನೀಡಿದೆ. ಬಿಜೆಪಿ ಸರ್ಕಾರ ಈಗ ಸಮ್ಮಿಶ್ರ ಸರ್ಕಾರ ಎಂದು ಯಡಿಯೂರಪ್ಪ ಹೇಳಿರುವುದು, ಶಾಸಕರ ಬೆಂಬಲವನ್ನು ಯಾವ ಕ್ಷಣದಲ್ಲಾದರೂ ವಾಪಸು ಪಡೆದು, ಸರ್ಕಾರ ಪತನಕ್ಕೆ ಮುನ್ಸೂಚನೆ ನೀಡಿರುವುದು ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಎಪ್ಪತ್ತು ಶಾಸಕರ ಬೆಂಬಲ ಇದೆ ಎಂದು ಹೇಳಿಕೊಳ್ಳುತ್ತಿರುವ ಯಡಿಯೂರಪ್ಪ ಅವರು ಹಾವೇರಿಯಲ್ಲಿ ನಡೆಸಿದ ಸಮಾವೇಶದಲ್ಲಿ 14 ಶಾಸಕರು ಬಹಿರಂಗವಾಗಿಯೇ ಕಾಣಿಸಿಕೊಳ್ಳುವುದರ ಮೂಲಕ ಮತ್ತಷ್ಟು ಇಕ್ಕಟ್ಟು ಸೃಷ್ಟಿಸಿದ್ದಾರೆ. ಈ ಮೂಲಕ ಬಹುಮತವನ್ನು ಕಳೆದುಕೊಂಡ ಸ್ಥಿತಿ ತಲುಪಿರುವ ಬಿಜೆಪಿಗೆ ಇದು ನುಂಗಲಾರದ ತುತ್ತು.

ಹಾವೇರಿ ಸಮಾವೇಶಕ್ಕೆ ಮುನ್ನವೇ, ಶಿಸ್ತಿನ ಕ್ರಮಕ್ಕೆ ಮುಂದಾದ ಬಿಜೆಪಿ,  ಸಹಕಾರ ಸಚಿವ ಬಿ.ಜೆ.ಪುಟ್ಟಸ್ವಾಮಿ ಅವರನ್ನು ಸಂಪುಟದಿಂದ ವಜಾ ಮಾಡುವ ಮೂಲಕ ಶಿಸ್ತಿನ ಕ್ರಮದ ಸಂದೇಶ ರವಾನಿಸಿತ್ತು. ಸಂಸದ ಜಿ. ಎಸ್.ಬಸವರಾಜು ಅವರನ್ನೂ ಪಕ್ಷದಿಂದ ಅಮಾನತು ಮಾಡಿತು. ಆದರೆ ಈ ಕ್ರಮ ಹಾವೇರಿ ಸಮಾವೇಶದ ಮೇಲೆ ಯಾವುದೇ ಪರಿಣಾಮ ಬೀರಿದಂತೆ ಕಾಣಲಿಲ್ಲ. ಮೂಲಸೌಕರ್ಯ ಸಚಿವ ಸುನೀಲ್ ವಲ್ಯಾಪುರೆ ಅವರೂ ರಾಜೀನಾಮೆ ಪತ್ರ ರವಾನಿಸುವ ಮೂಲಕ ಮುಂದಿನ ಬೆಳವಣಿಗೆಗಳಿಗೆ ಮುನ್ನುಡಿ ಹಾಡಿದ್ದಾರೆ.

ದಿಕ್ಕು ತಪ್ಪಿದಂತಾಗಿರುವ ಬಿಜೆಪಿ, ಬೆಂಕಿಯನ್ನು ಸೆರಗಿಗೆ ಕಟ್ಟಿಕೊಂಡು ಚಡಪಡಿಸುತ್ತಿದೆ. ಭಿನ್ನ ಪಕ್ಷವೆಂದು ಬಿಜೆಪಿಗೆ ಅವಕಾಶ ನೀಡಿದ ರಾಜ್ಯದ ಜನತೆಗೆ ಈ ರೀತಿಯ `ರಾಜಕೀಯ ಆಟ' ಕಂಡು ಭ್ರಮನಿರಸನವಾಗಿದೆ. ಅವಧಿಪೂರ್ತಿ ಪಕ್ಷದ ಆಂತರಿಕ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳುವುದರಲ್ಲೇ ಹೆಚ್ಚು ಸಮಯವನ್ನು ಕಳೆದ ಬಿಜೆಪಿ ಹೇಗೆ ವಿಭಿನ್ನ ಸಂಸ್ಕೃತಿಯ ಪಕ್ಷ ಎಂದು ಹೇಳಿಕೊಳ್ಳುತ್ತದೆ? ತಾನು ಇತರರಿಗೆ ಅನುಕರಣೀಯ ಎನ್ನುವ ಯಾವುದೇ ಉತ್ತಮ ನಡೆಯನ್ನು ಬಿಜೆಪಿ ಪ್ರದರ್ಶಿಸಿಲ್ಲ ಎನ್ನುವುದು ವಿಪರ್ಯಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT