ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಉದ್ದೇಶದ ಉಪವಾಸವಲ್ಲ

Last Updated 18 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಅಹಮದಾಬಾದ್, (ಪಿಟಿಐ): ಗೋದ್ರಾ ನಂತರದ ಹಿಂಸಾಚಾರದ  ನೈತಿಕ ಹೊಣೆ ಹೊರುವ ವಿಚಾರ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಕಾಡುತ್ತಿದೆಯೇ?

ಸದ್ಬಾವನಾ ಉಪವಾಸದ ಎರಡನೇ ದಿನವಾದ ಭಾನುವಾರ ನಡೆದ ಕೆಲವು ಘಟನಾವಳಿಗಳ ಹಿನ್ನೆಲೆಯಲ್ಲಿ ಪರ್ತಕರ್ತರು ಈ ಪ್ರಶ್ನೆಯನ್ನು ಮೋದಿ ಅವರ ಮುಂದಿಟ್ಟಾಗ ತೀವ್ರ ಸಿಡಿಮಿಡಿಗೊಂಡರಲ್ಲದೆ, `ನೀವು (ಪತ್ರಕರ್ತರು) ನಿಮಗೆ ಇಷ್ಟವಾದ ಸುಳ್ಳನ್ನು ಉದ್ದ ಮಾಡುತ್ತಾ ಹೋಗುತ್ತೀರಿ~ ಎಂದು ಹೇಳಿದರು.

`2002ರ ಹಿಂಸಾಚಾರದಲ್ಲಿ ಮಡಿದವರ ಬಗ್ಗೆ ನೀವು ಯಾವ ರೀತಿ ವಿಷಾದ ವ್ಯಕ್ತಪಡಿಸುತ್ತೀರಿ ಎಂದು ಮತ್ತೆ ಪ್ರಶ್ನಿಸಿದಾಗ, ` ನಾನು ಈ ದೇಶದ ಜನತೆಯನ್ನು ಉದ್ದೇಶಿಸಿ ಬರೆದಿರುವ ಬಹಿರಂಗ ಪತ್ರದಲ್ಲಿ ಈ ಬಗ್ಗೆ ವಿವರವಾಗಿಯೇ ಎಲ್ಲವನ್ನೂ ಹೇಳಿದ್ದೇನೆ , ಮುಖ್ಯಮಂತ್ರಿಯಾಗಿ ರಾಜ್ಯದ ಯಾವುದೆ ವ್ಯಕ್ತಿಗೆ ನೋವಾದರೂ ಅದು ನನ್ನ ನೋವು ಎಂದು ಭಾವಿಸುತ್ತೇನೆ ಮತ್ತು ಅಂತಹ ಜನರಿಗೆ ನ್ಯಾಯ ಒದಗಿಸುವುದು ನನ್ನ ಕರ್ತವ್ಯ~ ಎಂದು ತಿಳಿಸಿದ್ದೇನೆ ಎಂದು ಹೇಳಿದರು.

ನನ್ನ ಹೇಳಿಕೆಯನ್ನು `ಮೊದಲ ಬಾರಿಗೆ ಮೋದಿ ಅವರು ವಿಷಾದ ವ್ಯಕ್ತಪಡಿಸುವ ಸೂಚನೆ ನೀಡಿದ್ದಾರೆ~ ಎಂದು ನೀವು ಅರ್ಥೈಸಿದ್ದೀರಿ ಎಂದು ಹೇಳಿದರು.

ಎಹ್ಸಾನ್ ಜಾಫ್ರಿ ಕೊಲೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶಕ್ಕೆ ಸಂತೋಷ ಆಚರಿಸುತ್ತಿದ್ದೇನೆ ಎಂಬುದು ಸುಳ್ಳು, ನಾನು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದೇನೆ ಎಂದು ಮೋದಿ ಹೇಳಿದರು.

`ನೀವು ಯಾವ ತೀರ್ಪಿನ ಬಗ್ಗೆ ಮಾತನಾಡುತ್ತಿದ್ದೀರಿ, ಈ ಮೋದಿಯ ವಿರುದ್ಧ ಯಾವುದಾದರೂ ಪೊಲೀಸ್ ಠಾಣೆಯಲ್ಲಿ ಒಂದಾದರೂ ಎಫ್‌ಐಆರ್ ದಾಖಲಾಗಿದೆಯೇ, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಯಾವುದಾದರು ಪ್ರಕರಣದಲ್ಲಿ ನನ್ನ ಹೆಸರು ಸೇರಿದೆಯೇ~ ಎಂದು ಅವರು ಪತ್ರಕರ್ತರಿಗೆ ಪ್ರಶ್ನೆಗಳ ಸುರಿಮಳೆಗೈದರು.

`ಯಾರೂ ಪರಿಪೂರ್ಣರಲ್ಲ, ಯಾವ ವ್ಯವಸ್ಥೆಯೂ ಸಂಪೂರ್ಣ ಸರಿಯಾಗಿ ಇರುವುದಿಲ್ಲ~ ಎಂದು ತಿಳಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ಟೀಕೆಗೆ ಸ್ವಾಗತವಿದೆ; ಆದರೆ ನನ್ನ ವಿರುದ್ಧ ಆಪಾದನೆಗಳನ್ನು ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒಳ್ಳೆಯ ಆಡಳಿತ ನೀಡಿದರೆ ಎಲ್ಲರನ್ನೂ ಒಟ್ಟಿಗೆ ಒಯ್ಯಲು ಸಾಧ್ಯ ಎಂಬುದನ್ನು ಗುಜರಾತ್ ಆಡಳಿತ ತೋರಿಸಿಕೊಟ್ಟಿದೆ. ಇಡೀ ದೇಶಕ್ಕೆ ಗುಜರಾತ್ ಆಡಳಿತ ಮಾದರಿಯಾಗಬೇಕು ಎಂದು ತಿಳಿಸುವುದೇ ನನ್ನ ಉಪವಾಸದ ಉದ್ದೇಶ ಎಂದರು.

ಕೋಮು ಸೌಹಾರ್ದವೇ ನನ್ನ ಉಪವಾಸದ ಉದ್ದೇಶ. ಅನೇಕ ಪಕ್ಷಗಳ ಮುಖಂಡರು ಇಲ್ಲಿದ್ದಾರೆ. ನನಗೆ ಇಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಮೊದಿ ಸ್ಪಷ್ಟಪಡಿಸಿದರು.

ಜೆಡಿ (ಯು) ವಿರೋಧ: ಎನ್‌ಡಿಎದ ಪ್ರಮುಖ ಪಾಲುದಾರ ಪಕ್ಷವಾದ ಜೆಡಿ(ಯು) ಮೊದಿ ಉಪವಾಸ ಸತ್ಯಾಗ್ರಹಕ್ಕೆ ವಿರೋಧ ವ್ಯಕ್ತಪಡಿಸಿದೆ.

ರಾಜ್ಯದ ಆರು ಕೋಟಿ ಜನತೆಗೆ ಸಂಬಂಧಿಸಿದಂತೆ ರಾಜಧರ್ಮ ಅನುಸರಿಸಲು ವಿಫಲರಾದ ಮೋದಿ ಅವರು 125 ಕೋಟಿ ಜನರಿಗೆ ನ್ಯಾಯ ಒದಗಿಸಲು ಸಾಧ್ಯವೆ ಎಂದು ಜೆಡಿ (ಯು) ಮುಖಂಡರು ಪ್ರಶ್ನಿಸಿದ್ದಾರೆ.

`ಮುಸ್ಲಿಮರ ಬೆಂಬಲ~: ಮೋದಿ ಅವರನ್ನು ಬೆಂಬಲಿಸಿ ರಾಜ್ಯದ ಮುಸ್ಲಿಮರು `ಸದ್ಭಾವನಾ ಉಪವಾಸ~ ಸ್ಥಳಕ್ಕೆ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದಾರೆ ಎಂದು ಬಿಜೆಪಿ ವಕ್ತಾರ ಶಹನಾವಾಜ್ ಹುಸೇನ್ ಹೇಳಿದ್ದಾರೆ.

ಜಾರ್ಖಂಡ್ ವರದಿ: ಮೋದಿ ಅವರಿಗೆ ಬೆಂಬಲ ನೀಡಲು ಸೋಮವಾರ ಜಾರ್ಖಂಡ್ ಮುಖ್ಯಮಂತ್ರಿ ಅರ್ಜುನ್ ಮುಂಡಾ ಕೂಡ ಅಹಮದಾಬಾದ್‌ಗೆ ತೆರಳಲಿದ್ದಾರೆ.

ಶ್ರೀನಗರ ವರದಿ: ಮೋದಿ ಅವರನ್ನು ಬೆಂಬಲಿಸಿ ಭಾನುವಾರ ಕಾಶ್ಮೀರದ ಬಿಜೆಪಿ ಕಾರ್ಯಕರ್ತರು ಶ್ರೀನಗರದ ಪ್ರತಾಪ್ ಉದ್ಯಾನದಲ್ಲಿ ರ‌್ಯಾಲಿ ನಡೆಸಿದರು.

ಕಾಂಗ್ರೆಸ್ ಉಪವಾಸ: ಈ ನಡುವೆ, ಮೋದಿಗೆ ಪ್ರತಿಯಾಗಿ ಗುಜರಾತ್ ಕಾಂಗ್ರೆಸ್ ಮುಖಂಡರಾದ ಶಂಕರ್‌ಸಿಂಗ್ ವಘೇಲಾ, ಅರ್ಜುನ್ ಮೊಧ್ವಾಡಿಯಾ ಮತ್ತಿತರರು ಸಬರಮತಿ ಆಶ್ರಮದಲ್ಲಿ ಆರಂಭಿಸಿರುವ ಉಪವಾಸವು ಭಾನುವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. 

ಹವಾನಿಯಂತ್ರಿತ ಸಭಾಭವನದಲ್ಲಿ ಮೋದಿ ಉಪವಾಸ ಕೈಗೊಂಡಿರುವುದನ್ನು `ಇದೊಂದು ಪಂಚತಾರಾ~ ಉಪವಾಸ ಎಂದು ಈ ನಾಯಕರು ಗೇಲಿ ಮಾಡಿದ್ದಾರೆ.

ಮೋದಿ ಉಪವಾಸ ನಾಟಕಕ್ಕೆ 100 ಕೋಟಿಗೂ ಅಧಿಕ ಹಣ ಪೋಲಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದಾರೆ.
 

ಮೋದಿ ಉಪವಾಸಕ್ಕೆ ಅಮೆರಿಕದಲ್ಲೂ ಬೆಂಬಲ
ವಾಷಿಂಗ್ಟನ್, (ಪಿಟಿಐ): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಶನಿವಾರದಿಂದ ಆರಂಭಿಸಿರುವ ಮೂರು ದಿನಗಳ `ಸದ್ಭಾವನಾ ಉಪವಾಸ~ವನ್ನು ಬೆಂಬಲಿಸಿ `ಬಿಜೆಪಿಯ ಕಡಲಾಚೆಯ ಗೆಳೆಯರು (ಒಎಫ್‌ಬಿಜೆಪಿ)~ ಅಮೆರಿಕದ ಸುಮಾರು ಹನ್ನೆರಡು ನಗರಗಳಲ್ಲಿ ಉಪವಾಸ ಆರಂಭಿಸಿದ್ದಾರೆ.

ನ್ಯೂಯಾರ್ಕ್, ನ್ಯೂಜೆರ್ಸಿ, ಪೆನ್ಸಿಲ್ವೆನಿಯಾ, ದೆಲವಾರೆ, ವಾಷಿಂಗ್ಟನ್, ಅಟ್ಲಾಂಟಾ, ಸೆಂಟ್ ಲೂಯಿಸ್, ಷಿಕಾಗೊ, ಕೆಂಟುಕಿ, ಮಿನೆಸೊಟ, ಫ್ಲಾರಿಡಾ, ಟೆಕ್ಸಾಸ್ ಹಾಗೂ ಕ್ಯಾಲಿಫೋರ್ನಿಯಾಗಳಲ್ಲಿ ಮೋದಿಯವರನ್ನು ಬೆಂಬಲಿಸಿ ಉಪವಾಸ ನಡೆಸಲಾಗುತ್ತದೆ ಎಂದು ಬಿಜೆಪಿಯ ಕಡಲಾಚೆಯ ಗೆಳೆಯರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸುಳ್ಳು ಪ್ರಕರಣಗಳು, ಕ್ಷುದ್ರ ಕಾನೂನು ಸಂಗತಿಗಳು ಹಾಗೂ ಬಹುಸಂಖ್ಯಾತರ ಸುಳ್ಳು ಆರೋಪಗಳ ನಡುವೆ ಉಲ್ಲೇಖಾರ್ಹ ಸಹನೆ, ಧೈರ್ಯ ಪ್ರದರ್ಶಿಸಿದ್ದಕ್ಕಾಗಿ ಗೆಳೆಯರ ಬಳಗ ಮೋದಿ ಅವರನ್ನು ಅಭಿನಂದಿಸುವುದಾಗಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT