ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ `ಕುಸ್ತಿ'ಯ `ಚಿತ್'ತಂತ್ರ

ಮತದಾರರ ಮನದಂಗಳದಲ್ಲಿ
Last Updated 25 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯ `ಕುಸ್ತಿ' ಅಖಾಡ ಸಜ್ಜಾಗಿದೆ. ಕಣದಲ್ಲಿ `ಜಟ್ಟಿ'ಗಳು ಎದುರಾಳಿಗಳನ್ನು `ಚಿತ್' ಮಾಡಲು ಎಲ್ಲ ತಂತ್ರಗಳನ್ನು ಹೆಣೆಯುತ್ತಿದ್ದಾರೆ. `ಪಟ್ಟು'ಗಳನ್ನು ಪ್ರದರ್ಶಿಸಲು ಅಭ್ಯರ್ಥಿಗಳು ಸಿದ್ಧರಾಗಿದ್ದು, ಇದಕ್ಕಾಗಿ ತಾಲೀಮು ನಡೆಸಿದ್ದಾರೆ.

18 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿರುವ ಜಿಲ್ಲೆಯು ಬೆಳಗಾವಿ, ಚಿಕ್ಕೋಡಿ ಹಾಗೂ ಕೆನರಾ ಎಂಬ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಹಂಚಿ ಹೋಗಿದೆ. ಬೆಳಗಾವಿ ಹಾಗೂ ಕೆನರಾ ಲೋಕಸಭಾ ವ್ಯಾಪ್ತಿಗೆ ಬರುವ 10 ವಿಧಾನಸಭೆ ಕ್ಷೇತ್ರಗಳ ಪೈಕಿ ಕಳೆದ ಚುನಾವಣೆಯಲ್ಲಿ 7 ಕಡೆ ಬಿಜೆಪಿ ಹಾಗೂ 3ಕಡೆ ಕಾಂಗ್ರೆಸ್ ಗೆದ್ದಿದ್ದವು.

ಜಿಲ್ಲೆಯ ಒಂದು ತುದಿಯಲ್ಲಿ ಕುಟುಂಬ ರಾಜಕಾರಣ `ಮೇಲುಗೈ' ಸಾಧಿಸಿದರೆ, ಮತ್ತೊಂದು ಬದಿಯಲ್ಲಿ `ಮರಾಠಿ'ಗರು ವಿಧಾನಸಭೆಯನ್ನು ಪುನಃ ಪ್ರವೇಶಿಸಲು ಹವಣಿಸುತ್ತಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಬಂಡಾಯ ಹಾಗೂ ಸ್ವತಂತ್ರ ಅಭ್ಯರ್ಥಿಗಳು ವಿವಿಧ ರಾಜಕೀಯ ಪಕ್ಷಗಳ ಉಮೇದುವಾರರಿಗೆ ಅಡ್ಡಿಯಾಗಿದ್ದಾರೆ.

ಅಣ್ಣ- ತಮ್ಮ ಹಣಾಹಣಿ: ರಾಜ್ಯದ ಗಮನ ಸೆಳೆದಿರುವ ಗೋಕಾಕ ಕ್ಷೇತ್ರದಲ್ಲಿ 1999ರಿಂದಲೂ ಜಾರಕಿಹೊಳಿ ಕುಟುಂಬ ಮೇಲುಗೈ ಸಾಧಿಸುತ್ತ ಬಂದಿದೆ. ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ರಮೇಶ ಜಾರಕಿಹೊಳಿ ನಾಲ್ಕನೇ ಬಾರಿಗೆ ವಿಧಾನಸಭೆ ಪ್ರವೇಶಿಸಲು ಅದೃಷ್ಟವನ್ನು ಪರೀಕ್ಷೆಗೆ ಒಡ್ಡಿದ್ದಾರೆ. ರಮೇಶ ಅವರಿಗೆ ಅವರ ಸಹೋದರ ಭೀಮಶಿ ಜಾರಕಿಹೊಳಿ ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿರುವುದು ದೊಡ್ಡ ತಲೆನೋವಾಗಿದೆ. ಬಿಜೆಪಿ ಅಭ್ಯರ್ಥಿ ವಾಸುದೇವ ಸವತಿಕಾಯಿ ಅವರ ಪ್ರಭಾವ ಇನ್ನಷ್ಟೇ ಬಲಗೊಳ್ಳಬೇಕಿದೆ.

ಕಳೆದ ಬಾರಿಯೂ ಸ್ಪರ್ಧಿಸಿದ್ದ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಪ್ರಬಲ ಪೈಪೋಟಿ ನೀಡ್ದ್ದಿದಾರೆ.
ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರಗೊಳಿಸಿ, ಜಾರಕಿಹೊಳಿ ಕುಟುಂಬದವರು ಹಿಡಿತ ಸಾಧಿಸಿರುವ ಮತ್ತೊಂದು ಕ್ಷೇತ್ರ ಅರಭಾವಿ. ಸತತ ಮೂರು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿರುವ ಬಿಜೆಪಿ ಅಭ್ಯರ್ಥಿ, ಸಚಿವ ಬಾಲಚಂದ್ರ ಜಾರಕಿಹೊಳಿ ನಾಲ್ಕನೇ ಬಾರಿಗೆ ವಿಧಾನಸಭೆ ಪ್ರವೇಶಿಸಲು ತಯಾರಿ ನಡೆಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರಾಮಪ್ಪ ಉಟಗಿ, ಕೆಜೆಪಿ ಅಭ್ಯರ್ಥಿ ಸುರೇಶ ಲಾತೂರ ಕಣದಲ್ಲಿದ್ದು, ಪೈಪೋಟಿ ನೀಡಲು ಸಜ್ಜಾಗಿದ್ದಾರೆ.

ಸವದತ್ತಿ-ಯಲ್ಲಮ್ಮ ಕ್ಷೇತ್ರದಲ್ಲಿ 1985ರಿಂದ ಈವರೆಗೂ ಮಾಮನಿ ಹಾಗೂ ಕೌಜಲಗಿ ಕುಟುಂಬಗಳ ನಡುವೆಯೇ ಅಧಿಕಾರ ಹಸ್ತಾಂತರ ಆಗುತ್ತ ಬಂದಿದೆ. ಆದರೆ, ಈ ಚುನಾವಣೆಯಲ್ಲಿ ಮಾಮನಿ ಸೋದರರ ನಡುವೆ ಕಾದಾಟ ಏರ್ಪಟ್ಟಿದೆ. ಕೆಜೆಪಿಯಿಂದ ವಿಶ್ವನಾಥ (ರಾಜಣ್ಣ) ಮಾಮನಿ ಹಾಗೂ ಬಿಜೆಪಿಯಿಂದ ವಿಶ್ವನಾಥ (ಆನಂದ) ಮಾಮನಿ ನಡುವೆ ಪೈಪೋಟಿ ಇದ್ದು, ಕಾಂಗ್ರೆಸ್ ಅಭ್ಯರ್ಥಿ ರವೀಂದ್ರ ಯಲಿಗಾರ ಪ್ರಬಲ ಸ್ಪರ್ಧೆ ನೀಡಿದ್ದಾರೆ. ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ನಡೆಯುವ ಸಾಧ್ಯತೆ ಕಂಡುಬರುತ್ತಿದೆ.

ಜಾತಿ ಲೆಕ್ಕಾಚಾರದ ಮೇಲೆ ರಾಮದುರ್ಗ ಕ್ಷೇತ್ರದ ಚುನಾವಣೆ ನಡೆದಿದೆ. ಕುರುಬ ಹಾಗೂ ದಲಿತ ಸಮಾಜದ ಮತಗಳು ಇಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ. ಕುರುಬ ಸಮಾಜದವರಾದ ಜೆಡಿಯು ಅಭ್ಯರ್ಥಿ ಅರವಿಂದ ದಳವಾಯಿ ತಮ್ಮ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಅಶೋಕ ಪಟ್ಟಣ, ಬಿಜೆಪಿಯಿಂದ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ಜೆಡಿಎಸ್‌ನಿಂದ ಪಿ.ಎಫ್.ಪಾಟೀಲ ಹುರಿಯಾಳುಗಳಾಗಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಜೆಡಿಯು ನಡುವೆ ಚತುಷ್ಕೋನ ಸ್ಪರ್ಧೆ ಏರ್ಪಟ್ಟಿದೆ.  `ಜೆಡಿಯು ಅಭ್ಯರ್ಥಿ ಕುರುಬ ಸಮಾಜದ ಮತಗಳನ್ನು ಪಡೆಯಲು ಯತ್ನಿಸು ತ್ತಿದ್ದಾರೆ. ಆದರೆ, ಈ ಸಮಾಜದ ಮತಗಳು ಹರಿದು ಹಂಚಿ ಹೋಗಲಿವೆ' ಎನ್ನುತ್ತಾರೆ ರಾಮದುರ್ಗದ ಗೊಬ್ಬರ ವ್ಯಾಪಾರಿ ಲಕ್ಕಪ್ಪ ಕ್ವಾರಿ.

ಚನ್ನಮ್ಮನ ನಾಡು ಕಿತ್ತೂರು ಕ್ಷೇತ್ರದಲ್ಲಿ ಬಿಜೆಪಿ (ಶಾಸಕ ಸುರೇಶ ಮಾರಿಹಾಳ)- ಕಾಂಗ್ರೆಸ್ (ಮಾಜಿ ಸಚಿವ ಡಿ.ಬಿ.ಇನಾಮದಾರ) ನಡುವೆ ಹಣಾಹಣಿ ನಡೆದಿದೆ. ಕಾಂಗ್ರೆಸ್ ಟಿಕೆಟ್ ಲಭಿಸದ ಬಳಿಕ ಜೆಡಿಎಸ್‌ನಿಂದ ಕಣಕ್ಕಿಳಿದಿರುವ ಆನಂದ ಅಪ್ಪುಗೋಳ ಸಹ ಪೈಪೋಟಿ ನೀಡುತ್ತಿದ್ದಾರೆ. ಕೆಜೆಪಿಯಿಂದ ಸ್ಪರ್ಧಿಸಿರುವ ಬಿ.ಸಿ.ಪಾಟೀಲ ಬಿಜೆಪಿ ಅಭ್ಯರ್ಥಿಗೆ ಅಡ್ಡಗಾಲು ಹಾಕಿದ್ದಾರೆ.

ಬೈಲಹೊಂಗಲದಲ್ಲಿ ಕಾಂಗ್ರೆಸ್‌ನ ಬಸವರಾಜ ಕೌಜಲಗಿ, ಬಿಜೆಪಿಯ ಶಾಸಕ ಜಗದೀಶ ಮೆಟಗುಡ್ಡ ನಡುವೆ ಸ್ಪರ್ಧೆ ನಡೆಯಲಿದೆ ಎಂದು ಮೇಲ್ನೋಟಕ್ಕೆ ಕಂಡುಬಂದರೂ, ಜೆಡಿಎಸ್ ಅಭ್ಯರ್ಥಿ ಶಂಕರ ಮಾಡಲಗಿ, ಕೆಜೆಪಿ ಅಭ್ಯರ್ಥಿ ವಿಶ್ವನಾಥ ಪಾಟೀಲ ಪೈಪೋಟಿ ನೀಡಿದ್ದಾರೆ.

ಎಂಇಎಸ್‌ಗೂ ಬಂಡಾಯ ಕಾಟ: ಬೆಳಗಾವಿಯ ಮೂರು ಹಾಗೂ ಖಾನಾಪುರ ಕ್ಷೇತ್ರಗಳನ್ನು ಪುನಃ ತನ್ನ ತೆಕ್ಕೆಗೆ ಪಡೆಯಬೇಕು ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ತಂತ್ರ ನಡೆಸುತ್ತಿದೆ. ಆದರೆ, ಎಂಇಎಸ್ ಬಂಡಾಯ ಅಭ್ಯರ್ಥಿಗಳು ಸಮಿತಿಯ ನಿರ್ಧಾರಕ್ಕೆ ತಡೆಯೊಡ್ಡುವ ಸಾಧ್ಯತೆ ಹೆಚ್ಚಿದೆ.

ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಮೂಲ ಕಾಂಗ್ರೆಸ್ ಪಕ್ಷದವರಲ್ಲಿಯೇ ಹಣಾಹಣಿ ಏರ್ಪಟ್ಟಿದೆ. ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಫಿರೋಜ್ ಸೇಠ್, ಕಾಂಗ್ರೆಸ್ ತೊರೆದು ಬಿಎಸ್‌ಆರ್‌ಸಿ ಸೇರಿದ ಮಾಜಿ ಶಾಸಕ ರಮೇಶ ಕುಡಚಿ ಹಾಗೂ ಕಾಂಗ್ರೆಸ್ ತೊರೆದು ಕೆಜೆಪಿ ಸೇರಿದ ಮಾಜಿ ಶಾಸಕ ಸಿ.ಎಸ್.ಮಾಳಗಿ ಹರಿಯಾಳುಗಳಾಗಿದ್ದಾರೆ. ಇವರ ಜೊತೆಗೆ ಬಿಜೆಪಿಯ ಕಿರಣ ಜಾಧವ್ ಸೆಣಸಾಟ ನಡೆಸಿದ್ದಾರೆ.
ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ ಮಾಳಗಿ ಕೆಜೆಪಿ ಸೇರಿದರೆ, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ರಮೇಶ ಕುಡಚಿ, ಈ ಬಾರಿ ಬಿಎಸ್‌ಆರ್ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ.

ಬೆಳಗಾವಿ ದಕ್ಷಿಣದಲ್ಲಿ ಬಿಜೆಪಿಯ ಶಾಸಕ ಅಭಯ ಪಾಟೀಲ, ಕಾಂಗ್ರೆಸ್ ಪಕ್ಷದ ಅನಿಲ ಪೋತದಾರ ಹಾಗೂ ಎಂಇಎಸ್ ಬೆಂಬಲಿತ ಅಭ್ಯರ್ಥಿ ಸಂಭಾಜಿ ಪಾಟೀಲ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಈ ಕ್ಷೇತ್ರದಲ್ಲಿ ಮರಾಠಿ ಭಾಷಿಕರ ಸಂಖ್ಯೆ ಹೆಚ್ಚಿದ್ದು, ಇವರ ಮತಗಳು ನಿರ್ಣಾಯಕ ಪಾತ್ರ ವಹಿಸಲಿವೆ. ಜೆಡಿಎಸ್‌ನ ಬಸವರಾಜ ಜವಳಿ ಹಾಗೂ ಎಂಇಎಸ್ ಬಂಡಾಯ ಅಭ್ಯರ್ಥಿ ನೇತಾಜಿ ಮಣಗೂತ್ಕರ್ ಮತ ಪಡೆಯಲು ಪೈಪೋಟಿಯಲ್ಲಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪ್ರಚಾರದಲ್ಲಿ ಮುಂದಿದ್ದು, ಅಧಿಕೃತ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ನೇರ ಸವಾಲೊಡ್ಡಿದ್ದಾರೆ. ಎಂಇಎಸ್ ಬೆಂಬಲಿತ ಮನೋಹರ ಕಿಣೇಕರ ಅವರಿಗೆ ಬಂಡಾಯ ಅಭ್ಯರ್ಥಿ ಶಿವಾಜಿ ಸುಂಟಕರ ತಲೆನೋವಾಗಿ ಪರಿಣಮಿಸಿದ್ದಾರೆ. ಬಿಜೆಪಿಯ ಶಾಸಕ ಸಂಜಯ ಪಾಟೀಲ ತೀವ್ರ ಪೈಪೋಟಿ ನೀಡಿದ್ದಾರೆ.

ಖಾನಾಪುರದಲ್ಲಿಯೂ ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ಅಧಿಕೃತ ಅಭ್ಯರ್ಥಿ ರಫೀಕ್ ಖಾನಾಪುರಿ ಅವರಿಗೆ ಭಾರೀ ಪೈಪೋಟಿ ನೀಡುತ್ತಿದ್ದಾರೆ. ಅಂಜಲಿ ಅವರು ಮೂಲತಃ ಮಹಾರಾಷ್ಟ್ರದವರಾದರೂ ಇದೇ ಜಿಲ್ಲೆಯಲ್ಲಿ ಕೆಲ ಕಾಲ ಜಿಲ್ಲ ಪೊಲೀಸ್ ಮುಖ್ಯಸ್ಥರಾಗಿದ್ದ ಹೇಮಂತ ನಿಂಬಾಳ್ಕರ್ ಪತ್ನಿ. ಹೀಗಾಗಿ ಅವರ ಸ್ಪರ್ಧೇ ಭಾರೀ ಕುತೂಹಲ ಕೆರಳಿಸಿದೆ.

 ಇಲ್ಲಿ ಎಂಇಎಸ್ ಬೆಂಬಲಿತ ಅಭ್ಯರ್ಥಿ ಅರವಿಂದ ಪಾಟೀಲರಿಗೆ ಬಂಡಾಯ ಅಭ್ಯರ್ಥಿ ಸುರೇಶ ದೇಸಾಯಿ ಮತ್ತು ವಿಠ್ಠಲ ಹಲಗೇಕರ ಸೆಡ್ಡು ಹೊಡೆದಿದ್ದಾರೆ. ಸದ್ಯಕ್ಕಂತೂ ಜೆಡಿಎಸ್‌ನ ನಾಸೀರ್ ಬಾಗವಾನ, ಬಿಜೆಪಿಯ ಶಾಸಕ ಪ್ರಹ್ಲಾದ ರೇಮಾನಿ ಹಾಗೂ ಅಂಜಲಿ ನಿಂಬಾಳ್ಕರ ನಡುವೆ ಪೈಪೋಟಿ ಕಂಡುಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT