ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಕ್ಷೇತ್ರ ಅತ್ಯಂತ ಕಲುಷಿತ

Last Updated 10 ಫೆಬ್ರುವರಿ 2011, 20:20 IST
ಅಕ್ಷರ ಗಾತ್ರ

ಬೆಂಗಳೂರು: ‘ಧಾರ್ಮಿಕ, ಸಾಮಾಜಿಕ, ಕಲೆ, ಸಂಸ್ಕೃತಿ ಕ್ಷೇತ್ರಗಳಿಗಿಂತ ಅತ್ಯಂತ ಕಲುಷಿತವಾಗಿರುವುದು ರಾಜಕೀಯ ಕ್ಷೇತ್ರ. ಈ ಕ್ಷೇತ್ರದಿಂದಲೇ ಮೌಲ್ಯಗಳ ಅಧಃಪತನವೂ ನಡೆಯುತ್ತಿದೆ’ ಎಂದು ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ವಿಷಾದ ವ್ಯಕ್ತಪಡಿಸಿದರು.

ನಗರದ ಅರಮನೆ ಮೈದಾನದಲ್ಲಿ ಗುರುವಾರ ಆರಂಭವಾದ ಒಂಬತ್ತು ದಿನಗಳ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ‘ಸಾರ್ವಜನಿಕ ಜೀವನ ಮೌಲ್ಯಗಳು’ ಎಂಬ ವಿಷಯದ ಕುರಿತು ಮಾತನಾಡಿದ ಅವರು,‘ರಾಜಕೀಯದಲ್ಲಿರುವ ಕೆಲ ವ್ಯಕ್ತಿಗಳು ಚುನಾವಣೆ ಸಂದರ್ಭದಲ್ಲಿ ಸಾಮಾನ್ಯ ಪ್ರಜೆಗಳಿಗೆ ಹಣ ಹಂಚುವ ಮೂಲಕ ಭ್ರಷ್ಟಗೊಳಿಸುತ್ತಿದ್ದಾರೆ. ‘ಅಂಥ ಹಣ ಬೇಡ’ ಎಂದು ನಿರ್ಧಾರ ಕೈಗೊಳ್ಳುವ ಸ್ಥೈರ್ಯವನ್ನು ಮತದಾರರು ಮಾಡುತ್ತಿಲ್ಲ. ಅವರ ಈ ಮನಸ್ಥಿತಿಗೂ ರಾಜಕಾರಣಿಗಳೇ ಕಾರಣ ಎಂದು ಟೀಕಿಸಿದರು.

ಕೋಮು, ಜಾತಿಗಳ ಹೆಸರಲ್ಲಿ ಜನಗಳ ಮಧ್ಯೆ ವೈಮನಸ್ಸನ್ನು ಬಿತ್ತಲಾಗುತ್ತಿದೆ. ಚುನಾವಣೆಗೆ ದುಡ್ಡಿಲ್ಲದವರು ನಿಂತು ಗೆಲ್ಲುವುದೇ ಈಗ ಅಪರೂಪವಾಗಿದೆ. ಆ ಸ್ಥಿತಿ ಇರುವುದರಿಂದಲೇ ಬುಧವಾರ ತೀರಿಕೊಂಡ ಮಾಜಿ ಸಚಿವ ಎಂ.ಪಿ.ಪ್ರಕಾಶ್ ಅವರು 25,000 ಸಾವಿರ ಮತಗಳ ಅಂತರದಿಂದ ಸೋಲಬೇಕಾಯಿತು. ರಾಜಕಾರಣ ಈಗ ತಲುಪಿರುವ ಪರಿಸ್ಥಿತಿಯ ಬಗ್ಗೆ ಸ್ವತಃ ಪ್ರಕಾಶ್ ಅವರೇ ತೀರಿಕೊಳ್ಳುವ ನಾಲ್ಕು ದಿನಗಳ ಮುಂಚೆ ನನ್ನೊಂದಿಗೆ ಚರ್ಚಿಸಿದ್ದರು.

ಅದರಲ್ಲೂ ರಿಯಲ್ ಎಸ್ಟೇಟ್ ಉದ್ಯಮದಿಂದ ಬಂದವರ ಕಾರಣದಿಂದ ರಾಜಕಾರಣ ಈ ಸ್ಥಿತಿಗೆ ತಲುಪಿದೆ. ಭ್ರಷ್ಟಾಚಾರ ಹಾಗೂ ರಾಜಕೀಯ ಅವನತಿಗೆ ಬಿಹಾರವನ್ನು ಹೆಸರಿಸುವವರಿಗೆ, ಅಲ್ಲಿ ಯಾವ ರಾಜಕಾರಣಿಯೂ ಮತದಾರರಿಗೆ ಹಣ ಹಂಚುವುದಿಲ್ಲ ಎಂಬುದು ತಿಳಿದುಕೊಳ್ಳಬೇಕು. ಈ ಮಾತನ್ನು ಅಲ್ಲಿಯ ಸಚಿವರು ಹಾಗೂ ಐಎಎಸ್ ಅಧಿಕಾರಿಗಳೇ ಹೇಳಿದ್ದಾರೆ ಎಂದರು.

ಸಚಿವ ವಿ.ಸೋಮಣ್ಣ ಮಾತನಾಡಿ, ‘ಇಂದು ವೀರಶೈವ ಜನಾಂಗದವರನ್ನು ಒಂದು ಜಾತಿಗೆ ಸೀಮಿತಗೊಳಿಸುವ ವ್ಯವಸ್ಥಿತ ಹುನ್ನಾರಗಳು ನಡೆಯುತ್ತಿವೆ’ ಎಂದು ಟೀಕಿಸಿದರು. ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ‘ಜನಕೆಟ್ಟರೆ ಅವರನ್ನು ಸರಿಪಡಿಸಲು ಮಹಾತ್ಮರ ಆಗಮನವಾಗುತ್ತಲೇ ಇರುತ್ತದೆ. ಸ್ವಾಮೀಜಿಗಳು ತ್ಯಾಗ, ದೇಶಸಂಚಾರದ ಮೂಲಕ ತಾವು  ಗಳಿಸಿದ ಅನುಭವವನ್ನು ಭಕ್ತರಿಗೆ ಉಣಬಡಿಸುತ್ತಾರೆ.

ತರಳಬಾಳು ಮಠದ ಮರುಳಸಿದ್ಧರು ‘ತರಳಾ ಬಾಳು’ ಎಂದು ಹೇಳಿದ್ದರು. ಅಂದರೆ ಚನ್ನಾಗಿ ಬಾಳುವ ಅವಕಾಶ ನಮಗಿದೆಯೇ ಹೊರತು, ಬದುಕುವುದು ಆ ಶಿವನಿಗೆ ಬಿಟ್ಟದ್ದು’ ಎಂದರು, ಚಿತ್ರದುರ್ಗದ ಉಪನ್ಯಾಸಕ ಡಾ.ಲೋಕೇಶ್ ಅಗಸನಕಟ್ಟೆ ಅವರು ‘ತರಳಾ ಬಾಳು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಬಸವರಾಜ ಮುಗಳಖೋಡ್ ಅವರು ವಚನಗಾಯನವನ್ನು ಪ್ರಸ್ತುತಪಡಿಸಿದರು. ಜತಿನ್ ನೃತ್ಯ ಶಾಲೆಯ ನಿಶ್ಚಿತಾ ಕೊಂಡಜ್ಜಿ ಹಾಗೂ ಸಂಗಡಿಗರು ಹಚ್ಚೇವು ಕನ್ನಡದ ದೀಪ ಎಂಬ ಹಾಡಿಗೆ ನೃತ್ಯ ಪ್ರದರ್ಶನ ನೀಡಿದರು.

ಗೋಸಾಯಿ ಮಠದ ಸುರೇಶ್ವರಾನಂದ ಸ್ವಾಮೀಜಿ, ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಾಣೆಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸಚಿವ ಎಸ್.ಎ.ರವೀಂದ್ರನಾಥ್, ಸಂಸದ ಜಿ.ಎಂ.ಸಿದ್ಧೇಶ್ವರ ಹಾಜರಿದ್ದರು. 36 ವರ್ಷಗಳ ಬಳಿಕ: ತರಳಬಾಳು ಹುಣ್ಣಿಮೆ ಮಹೋತ್ಸವವು ಬೆಂಗಳೂರಿನಲ್ಲಿ 36 ವರ್ಷಗಳ ಬಳಿಕ ನಡೆಯುತ್ತಿದ್ದು, ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಅರಮನೆ ಮೈದಾನದ ಕೃಷ್ಣ ವಿಹಾರದ ಅರಮನೆ ಆವರಣದಲ್ಲಿ ಹಾಕಲಾದ ಬೃಹತ್ ಪೆಂಡಾಲ್ ಎದುರಿಗೆ ಸಿರಿಗೆರೆ ಮಠದ ಬೃಹತ್ ಪ್ರತಿಕೃತಿಯೂ ಗಮನ ಸೆಳೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT