ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ತಿರುವು: ಲೆಕ್ಕಾಚಾರ

Last Updated 5 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ಸುವರ್ಣ ವಿಧಾನಸೌಧ (ಬೆಳಗಾವಿ): ಶಾಸಕರು ಒಂದು ರೀತಿ ಗಣಿತಜ್ಞರು ಆಗಿಬಿಟ್ಟಿದ್ದಾರೆ! ಯಾರನ್ನು ಮಾತಿಗೆ ಎಳೆದರೂ ಲೆಕ್ಕಾಚಾರಗಳೇ ತೂರಿಬರುತ್ತವೆ. ವಿಧಾನಸೌಧ ಮೊಗಸಾಲೆಯಲ್ಲಿ ರಾಜಕೀಯ `ಕುಲುಕಾಟ' ಕುರಿತೇ ಹರಟೆ.

ವಿಧಾನಸಭೆ ಚುನಾವಣೆಗೆ ಇನ್ನೂ ಐದು ತಿಂಗಳು ಇದೆ. ಆಗಲೇ ಶಾಸಕರು ಚುನಾವಣೆಯ ಗುಂಗು ಹತ್ತಿಸಿಕೊಂಡಿದ್ದಾರೆ. ಹೊಸ ಪಕ್ಷಗಳು ಹುಟ್ಟಿಕೊಂಡಿವೆ. ಹೊಸ ಸಾಧ್ಯತೆಗಳು ತೆರೆದುಕೊಂಡಿವೆ. ರಾಜ್ಯ ರಾಜಕಾರಣ ಮುಂದಿನ ದಿನಗಳಲ್ಲಿ ಪಡೆಯಲಿರುವ ತಿರುವುಗಳ ಬಗ್ಗೆ ಒಬ್ಬೊಬ್ಬರದೂ ಒಂದೊಂದು ಬಗೆಯ ವಿಶ್ಲೇಷಣೆ.

ಪ್ರತ್ಯಕ್ಷವಾಗಿ ಮೂರು ವರ್ಷಗಳಿಗೂ ಹೆಚ್ಚು ಕಾಲ ಹಾಗೂ ಪರೋಕ್ಷವಾಗಿ ಇಲ್ಲಿಯವರೆಗೂ ಈ ಸರ್ಕಾರವನ್ನು ಮುನ್ನಡೆಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗೈರುಹಾಜರಿ (ಶಾಸಕ ಸ್ಥಾನ ತೊರೆದಿದ್ದಾರೆ) ಎಲ್ಲರ ಗಮನಕ್ಕೂ ಬರುತ್ತದೆ. ಅವರು ಸದನದಲ್ಲಿ ಇಲ್ಲದೇ ಇದ್ದರೂ ಅವರ ರಾಜಕೀಯ ನಡೆ ತರುವ ಲಾಭ-ನಷ್ಟಗಳ ಸುತ್ತಲೂ ಮಾತು ತಿರುಗುತ್ತಿದೆ.

ಕರ್ನಾಟಕ ಜನತಾ ಪಕ್ಷಕ್ಕೆ ಆಡಳಿತಾರೂಢ ಬಿಜೆಪಿಯ ಯಾರೆಲ್ಲ ಸೇರಬಹುದು, ಯಡಿಯೂರಪ್ಪ ಅವರ `ಹಿಟ್ ಲಿಸ್ಟ್'ನಲ್ಲಿ ಇರುವ ಹೆಸರುಗಳು ಮತ್ತು ಅವರು ಗೆಲ್ಲಿಸುತ್ತಾರೋ, ಸೋಲಿಸುತ್ತಾರೋ ಎಂಬಿತ್ಯಾದಿ ಅಂಶಗಳು ಚರ್ಚೆಯ ವಸ್ತು. `ಕನಿಷ್ಠ 30 ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಸೋಲಿಸುತ್ತಾರೆ' ಎಂಬುದು ಸಚಿವರೊಬ್ಬರ ಲೆಕ್ಕಾಚಾರ.

ಜಿ.ಜನಾರ್ದನ ರೆಡ್ಡಿ ಬಂಡಾಯದ ಬಾವುಟ ಹಾರಿಸಿದಾಗಲೇ ಅಧಿಕಾರದ ಲಾಲಸೆ ಬಿಟ್ಟು ದೃಢ ನಿರ್ಧಾರ ಕೈಗೊಂಡಿದ್ದರೆ ಪಕ್ಷಕ್ಕೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಅವರು ಮರುಗಿದರು. ಇದರ ನಡುವೆಯೇ ಅವರಿಗೊಂದು ಸಣ್ಣ ಆಶಾಕಿರಣ ಗೋಚರಿಸಿದೆ.

ಅಲ್ಪಸಂಖ್ಯಾತರನ್ನು ಯಡಿಯೂರಪ್ಪ ಹೆಚ್ಚಿನ ಪ್ರಮಾಣದಲ್ಲಿ ಕೆಜೆಪಿಗೆ ಸೆಳೆದರೆ ಈ ವರ್ಗದ ಸಾಂಪ್ರದಾಯಿಕ ಮತಗಳನ್ನು ನೆಚ್ಚಿಕೊಂಡಿರುವ ಕಾಂಗ್ರೆಸ್‌ಗೆ ಹೊಡೆತ ಬೀಳಬಹುದು. ಅದರಿಂದ ಬಿಜೆಪಿಗೆ ಅನುಕೂಲ ಆಗಲಿದೆ ಎಂಬುದು ಆ ಸಚಿವರ ಅಭಿಪ್ರಾಯ. 
ಬಿಎಸ್‌ಆರ್ ಕಾಂಗ್ರೆಸ್ ಜತೆ ಗುರುತಿಸಿಕೊಂಡಿರುವ ಶಾಸಕರೊಬ್ಬರು, ಕೆಜೆಪಿ ಜೊತೆಗಿನ ಮೈತ್ರಿಯಲ್ಲಿ `ಹಿತ' ಕಂಡಿದ್ದಾರೆ. `ಬಳ್ಳಾರಿ ಜಿಲ್ಲೆಯಲ್ಲಿ ಲಿಂಗಾಯತ ಸಮುದಾಯದ ಮತದಾರರ ಸಂಖ್ಯೆ ಹೆಚ್ಚು. ಯಡಿಯೂರಪ್ಪ ಜೊತೆ ಹೊಂದಾಣಿಕೆ ಮಾಡಿಕೊಂಡರೆ ಆ ಸಮುದಾಯದ ಒಲವು ಗಳಿಸಬಹುದು' ಎನ್ನುತ್ತಾರೆ.

ಇದನ್ನು ಅವರು ನಿಕಷಕ್ಕೂ ಒಡ್ಡಿದ್ದಾರೆ. `ಯಡಿಯೂರಪ್ಪ ಪರವಾಗಿ ಹೇಳಿಕೆ ನೀಡಿದಾಗೆಲ್ಲ ಲಿಂಗಾಯತ ಸಮುದಾಯದ ಮುಖಂಡರು ಫೋನ್ ಮಾಡಿ ಖುಷಿ ಹಂಚಿಕೊಳ್ಳುತ್ತಾರೆ' ಎಂದು ತಮ್ಮ ವಾದಕ್ಕೆ ನಿದರ್ಶನ ಒದಗಿಸಿದರು.

ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದು ವಿರೋಧ ಪಕ್ಷಗಳ ಮುಖಂಡರು ಬಹಿರಂಗವಾಗಿ ಟೀಕಿಸುತ್ತಾರೆ. ಆದರೆ, ಅವಿಶ್ವಾಸ ನಿರ್ಣಯ ಎಂದರೆ ಖಾಸಗಿಯಾಗಿ ಬೆಚ್ಚಿಬೀಳುತ್ತಾರೆ. `ಚುನಾವಣೆ ಬಾಗಿಲು ಬಡಿಯುತ್ತಿದೆ. ಇಂತಹ ಹೊತ್ತಲ್ಲಿ ಸರ್ಕಾರವನ್ನು ಕೆಡವಿ, ಕಳಂಕ ಅಂಟಿಸಿಕೊಳ್ಳಲು ಯಾವ ಪಕ್ಷ ಬಯಸುತ್ತದೆ' ಎಂದು ಪ್ರಶ್ನಿಸುತ್ತಾರೆ.

ಈ ಮರ್ಮ ಅರಿತೋ ಏನೋ `ಅವಿಶ್ವಾಸ ನಿರ್ಣಯ ಮಂಡಿಸಿದರೆ ಅದನ್ನು ಧೈರ್ಯವಾಗಿ ಎದುರಿಸುತ್ತೇವೆ' ಎಂದು  ಆಡಳಿತ ಪಕ್ಷದ ನಾಯಕರು ಜೋರು ದನಿಯಲ್ಲಿ ಹೇಳುತ್ತಿದ್ದಾರೆ. ಹಾಗೇನಾದರೂ ಆಗಿ ಸರ್ಕಾರ ಬಿದ್ದರೆ `ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ' ಎಂದು ಅವರು ಭಾವಿಸಿದಂತಿದೆ.

ಅಧಿವೇಶನ, ವಿರೋಧ ಪಕ್ಷಗಳ ವಾಗ್ದಾಳಿಗಿಂತ, ಕೆಜೆಪಿ ಇದೇ 9ರಂದು ಹಾವೇರಿಯಲ್ಲಿ ಆಯೋಜಿಸಿರುವ ಸಮಾವೇಶ ಕುರಿತೇ ಬಿಜೆಪಿ ಮುಖಂಡರು ಹೆಚ್ಚು ಚಿಂತೆಗೀಡಾಗಿದ್ದಾರೆ ಎಂಬುದನ್ನು ಅವರ ಮಾತುಗಳೇ ಧ್ವನಿಸುತ್ತವೆ. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದಿಲ್ಲ ಎಂದು ಯಡಿಯೂರಪ್ಪ ಜೊತೆ ಗುರುತಿಸಿಕೊಂಡಿರುವ ಸಚಿವರು, ಮುಖ್ಯಮಂತ್ರಿ ಎದುರು ವಾಗ್ದಾನ ಮಾಡಿದ್ದಾರಂತೆ. ಆದರೆ ಶಾಸಕರು ಅಂತಹ ಯಾವುದೇ ವಚನ-ವಾಗ್ದಾನಗಳ ಹಂಗಿಗೆ ಒಳಗಾಗಿಲ್ಲ. ಬಿಜೆಪಿಯ ಒಂದಷ್ಟು ಮಂದಿ ಶಾಸಕರು ಸಮಾವೇಶದಲ್ಲಿ ಪಾಲ್ಗೊಂಡರೆ ಸರ್ಕಾರ ಮುಜುಗರ ಎದುರಿಸಬೇಕಾಗುತ್ತದೆ. ಮುಖಂಡರ ತಳಮಳಕ್ಕೆ ಇದೇ ಕಾರಣ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT