ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ರಾಜಕೀಯ ನಿರ್ವಹಣೆ'ಯಲ್ಲಿ ಎಂಬಿಎ ಪದವಿ!

ಕರ್ನಾಟಕ ವಿವಿಯಲ್ಲಿ ಪ್ರಸಕ್ತ ವರ್ಷದಿಂದ ಪ್ರಾಯೋಗಿಕ ಜಾರಿ
Last Updated 9 ಜುಲೈ 2013, 19:59 IST
ಅಕ್ಷರ ಗಾತ್ರ

ಹುಬ್ಬಳ್ಳಿ:  ಎಂಬಿಎ ಕೋರ್ಸ್‌ನಲ್ಲಿ `ರಾಜಕೀಯ ನಿರ್ವಹಣೆ' ವಿಷಯವನ್ನು ದೇಶದಲ್ಲಿಯೇ ಮೊದಲ ಬಾರಿಗೆ ಪ್ರಸಕ್ತ ವರ್ಷದಿಂದ  ಪರಿಚಯಿಸಲು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಮುಂದಾಗಿದೆ.

ಎಂಬಿಎ ಕೋರ್ಸ್‌ನಲ್ಲಿ `ಹೊಸ ವಿಷಯಗಳ ಅಳವಡಿಕೆ ಸಾಧ್ಯತೆ' ಕುರಿತು ಅಧ್ಯಯನಕ್ಕೆ, ವಿವಿಯು ಕೋಲ್ಕತ್ತ ಐಐಎಂನ ನಿವೃತ್ತ ಮುಖ್ಯಸ್ಥ ಆರ್.ಪಿ.ಅಯ್ಯರ್ ನೇತೃತ್ವದಲ್ಲಿ ಅಖಿಲ ಭಾರತ ನಿರ್ವಹಣಾ ಅಧ್ಯಯನ ಮಂಡಳಿ (ಎಐಬಿಎಂಎಸ್) ಸಮಿತಿ ನೇಮಿಸಿತ್ತು.

ರಾಜಕೀಯ ನಿರ್ವಹಣೆ ಸೇರಿದಂತೆ 10ಕ್ಕೂ ಹೆಚ್ಚು ವಿಷಯಗಳನ್ನು ಹೊಸದಾಗಿ ಅಳವಡಿಸುವಂತೆ ಸಮಿತಿ ಶಿಫಾರಸು ಮಾಡಿದೆ. ಸಮಿತಿ  ವರದಿಯಂತೆ ಪ್ರಾಯೋಗಿಕವಾಗಿ ಹುಬ್ಬಳ್ಳಿಯ ಐಎಂಎಸ್‌ಆರ್ ಕಾಲೇಜಿನಲ್ಲಿ `ರಾಜಕೀಯ ನಿರ್ವಹಣೆ' ಯನ್ನು ಐಚ್ಛಿಕ ವಿಷಯವಾಗಿ ವಿದ್ಯಾರ್ಥಿಗಳಿಗೆ ಪರಿಚಯಿಸಲಾಗುತ್ತಿದೆ.

`ಸಾಂಪ್ರದಾಯಿಕ ಉಕ್ತಿಯಂತೆ ರಾಜಕೀಯ ಕ್ಷೇತ್ರ ಇಂದು ಮೂರ್ಖರ ಕೊನೆಯ ನಿಲ್ದಾಣವಾಗಿ ಉಳಿದಿಲ್ಲ. ಬದಲಿಗೆ ಜಾಣರ ಮೊದಲ ಆಯ್ಕೆಯಾಗಿದೆ. ಎಂಬಿಎ ಕೋರ್ಸ್‌ನ ಭಾಗವಾಗಿಸುವ ಮೂಲಕ ಅದನ್ನೀಗ ಅಧಿಕೃತವಾಗಿ ಅಧ್ಯಯನ ಶಿಸ್ತಿಗೆ ಒಳಪಡಿಸಲಾಗುತ್ತಿದೆ' ಎನ್ನುತ್ತಾರೆ ಕರ್ನಾಟಕ ವಿಶ್ವವಿದ್ಯಾಲಯದ ನಿರ್ವಹಣಾ ಶಾಸ್ತ್ರ ಅಧ್ಯಯನ ವಿಭಾಗದ ಡೀನ್ ಹಾಗೂ ಕೌಸಾಳಿ ವ್ಯವಹಾರ ನಿರ್ವಹಣೆ ಸಂಸ್ಥೆಯ ನಿರ್ದೇಶಕ ಡಾ.ಎ.ಎಚ್. ಚಚಡಿ.

ಪಠ್ಯಕ್ರಮ ಏನು?:  ಚುನಾವಣೆಯಲ್ಲಿ ಖರ್ಚು ಕಡಿಮೆ ಮಾಡಿ ಗೆಲ್ಲುವ ಸಾಧ್ಯತೆಗಳನ್ನು, ಕಡಿಮೆ ಅವಧಿಯಲ್ಲಿ ಹೆಚ್ಚಿನ ಜನರ ಗಮನ ಸೆಳೆಯುವ ವಿಧಾನ ಹೇಳಿಕೊಡಲಾಗುತ್ತದೆ. ಗೆದ್ದ ನಂತರ ಅಭ್ಯರ್ಥಿ ಕ್ಷೇತ್ರದ ಎಲ್ಲಾ ಭಾಗದ ಮತದಾರರ ಆದ್ಯತೆಗಳನ್ನು ಸಮಾನವಾಗಿ ನಿರ್ವಹಿಸಿ ಅವರ ಮನಗೆಲ್ಲುವುದು. ಶಾಸಕರು, ಸಂಸದರ ನಿಧಿ ದುರುಪಯೋಗವಾಗದಂತೆ ಕ್ಷೇತ್ರದ ಎಲ್ಲಾ ಭಾಗಕ್ಕೂ ಹಂಚಿಕೆ ಮಾಡುವುದು. ಚುನಾವಣೆ ಹತ್ತಿರ ಬಂದಾಗ ಮತದಾರರ ಮನಗೆಲ್ಲುವ ಪ್ರಯತ್ನ ಮಾಡುವ ಬದಲಿಗೆ ಸದಾ ಕ್ಷೇತ್ರದ ಜನರ ಗಮನದಲ್ಲಿ ಇರುವ ಮಾರ್ಗ. ಜೊತೆಗೆ ಜನಪ್ರತಿನಿಧಿಗಳು ವೈಯಕ್ತಿಕ ವರ್ಚಸ್ಸು ಹೆಚ್ಚಳಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಾದ ವಿಷಯಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಲಾಗಿದೆ' ಎಂದು ಡಾ. ಚಚಡಿ ಹೇಳುತ್ತಾರೆ.

`ಇಂದಿನ ರಾಜಕೀಯ ಮುಖಂಡರಲ್ಲಿ ಕೆಲವೇ ಮಂದಿ ಮಾತ್ರ ವೈಜ್ಞಾನಿಕವಾಗಿ ತಮ್ಮ ಪಾತ್ರ ನಿರ್ವಹಣೆ ಮಾಡಿ ಅದರಲ್ಲಿ ನಿರಂತರ ಯಶಸ್ಸು ಸಾಧಿಸುತ್ತಿದ್ದಾರೆ. ಬಹುತೇಕರು ರಾಜಕೀಯ ನಿರ್ವಹಣೆಯ ಕೌಶಲ ಕರಗತ ಮಾಡಿಕೊಳ್ಳದೇ ಬಂದಷ್ಟೇ ವೇಗವಾಗಿ ಕಣ್ಮರೆಯಾಗುತ್ತಿದ್ದಾರೆ. ಮತದಾರರೊಟ್ಟಿಗೆ ಇ-ಮೇಲ್, ಎಸ್‌ಎಂಎಸ್, ಟ್ವಿಟರ್, ಫೇಸ್‌ಬುಕ್ ಮೂಲಕ ಮತದಾರರನ್ನು ನೇರವಾಗಿ ಸಂಪರ್ಕಿಸುವ  ವಿಧಾನವನ್ನು ಕೋರ್ಸ್‌ನಲ್ಲಿ ಹೇಳಿಕೊಡಲಾಗುವುದು. ರಾಜಕೀಯ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನತೆಯನ್ನು ಸಿದ್ಧಗೊಳಿಸುವುದು ಕೋರ್ಸ್‌ನ ಉದ್ದೇಶವಾಗಿದೆ' ಎನ್ನುತ್ತಾರೆ ಚಚಡಿ.

ಸಂಪನ್ಮೂಲ ವ್ಯಕ್ತಿಗಳು:  `ಈಗಾಗಲೇ ವಿವಿಯ ನಿರ್ವಹಣಾಶಾಸ್ತ್ರ ವಿಭಾಗದ ಹಿರಿಯ ಉಪನ್ಯಾಸಕ ಪ್ರೊ.ಸುಭಾಷ್ ಅವರೊಂದಿಗೆ ಸೇರಿ ಪಠ್ಯಕ್ರಮ ಸಿದ್ಧಗೊಳಿಸಲಾಗಿದೆ.  ಸಂಪನ್ಮೂಲ ವ್ಯಕ್ತಿಗಳಾಗಿ ಗ್ರಾಮ ಪಂಚಾಯಿತಿಯಿಂದ ರಾಷ್ಟ್ರಮಟ್ಟದವರೆಗಿನ ಯಶಸ್ವಿ ರಾಜಕಾರಣಿಗಳನ್ನು ಕರೆಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ಏರ್ಪಡಿಸುವುದನ್ನು ಪಠ್ಯಕ್ರಮದ ಭಾಗವಾಗಿ ಮಾಡಲಾಗುವುದು.

ಇಲ್ಲಿಯವರೆಗೆ ಐಐಎಂಗಳಲ್ಲಿ ಮಾತ್ರ `ರಾಜಕೀಯ ನಿರ್ವಹಣೆ' ಅಧ್ಯಯನ ವಿಷಯವಾಗಿತ್ತು. ಇದೀಗ ಮೊದಲ ಬಾರಿಗೆ ವಿವಿ ವ್ಯಾಪ್ತಿಯಲ್ಲಿ ಕಲಿಸಲಾಗುತ್ತಿದೆ' ಎನ್ನುವ ಡಾ. ಚಚಡಿ, `ಈ ವರ್ಷ ವಿದ್ಯಾರ್ಥಿಗಳ ಸ್ಪಂದನೆ ಅರಿತು ಮುಂದಿನ ವರ್ಷದಿಂದ ಪ್ರತ್ಯೇಕ ಅಧ್ಯಯನ ವಿಷಯವಾಗಿ ಬದಲಾಯಿಸಲಾಗುವುದು' ಎಂದರು.

`ಪ್ರಸಕ್ತ ವರ್ಷವೇ ಪಠ್ಯ'
ಪ್ರಸ್ತಕ ವರ್ಷ ಎಂಬಿಎ ಎರಡನೇ ಸೆಮಿಸ್ಟರ್‌ನಲ್ಲಿ ಒಂದು ವಿಷಯವಾಗಿ `ರಾಜಕೀಯ ನಿರ್ವಹಣೆ' ಪಠ್ಯ ಇರಲಿದೆ ಎಂದು ಹುಬ್ಬಳ್ಳಿಯ ಐಎಂಎಸ್‌ಆರ್ ಕಾಲೇಜು ಪ್ರಾಚಾರ್ಯ ಪ್ರಸಾದ್ ರೂಡಗಿ ಹೇಳುತ್ತಾರೆ.

`ಇತ್ತೀಚೆಗೆ ರಾಜಕೀಯ ಪಕ್ಷಗಳು ತಮ್ಮ ಚಟುವಟಿಕೆಗಳಲ್ಲಿ ಎಂಬಿಎ ಪದವೀಧರರನ್ನು ಬಳಸಿಕೊಳ್ಳುತ್ತಿವೆ. ಚುನಾವಣಾ ಪೂರ್ವ, ಮತದಾನದ ನಂತರದ ಸಮೀಕ್ಷೆ, ಜಾತಿವಾರು ಮತಗಳ ಅಂದಾಜು, ಜನಾಭಿಪ್ರಾಯ ಅರಿಯಲು ನೆರವು ಪಡೆದಿವೆ.

ರಾಜಕೀಯ ನಿರ್ವಹಣೆಯಲ್ಲಿಯೇ ಸ್ನಾತಕೋತ್ತರ ಪದವಿ ಪಡೆದರೆ ಅವರಿಗೆ ಇನ್ನಷ್ಟು ಅನುಕೂಲವಾಗಲಿದೆ. ಆದ್ದರಿಂದ ಹೊಸ ಕೋರ್ಸ್‌ಗೆ ಹೆಚ್ಚಿನ ಬೇಡಿಕೆ ಬರಲಿದೆ' ಎಂಬುದು ರೂಡಗಿ ಅಭಿಮತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT