ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಪಕ್ಷಗಳಿಗೆ ಗಾಳವಾದ ಖಾತೆಸಾಲ

Last Updated 24 ಏಪ್ರಿಲ್ 2013, 8:26 IST
ಅಕ್ಷರ ಗಾತ್ರ

ಶಿರಸಿ: `ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ' ಎಂಬಂತಾಗಿದೆ ಇಲ್ಲಿನ ಅಡಿಕೆ ಬೆಳೆಗಾರರ ಸ್ಥಿತಿ. ಸಾಲದ ಸುಳಿಯಿಂದ ಮೇಲೆಳಲು ಸಾಧ್ಯವಾಗದೆ ಅಡಿಕೆ ಬೆಳೆಗಾರರು ಸಾಲ ಮನ್ನಾದ ಕೂಗನ್ನು ಸರ್ಕಾರಕ್ಕೆ ತಲುಪಿಸಲು ಸಾಮೂಹಿಕ ಹೋರಾಟ ನಡೆಸುತ್ತಿದ್ದಾರೆ. ಸಾಲದ ಶೂಲ ರೈತರನ್ನು ಇರಿಯುತ್ತಲೇ ಇದೆ. ಆದರೆ ಪ್ರಸ್ತುತ ಚುನಾವಣೆಯಲ್ಲಿ ರೈತರ ಖಾತೆಸಾಲ ಮನ್ನಾ ವಿಷಯ ರಾಜಕೀಯ ಪಕ್ಷಗಳಿಗೆ ಗಾಳವಾಗಿದೆ.

ಮೊನ್ನೆ ಮೊನ್ನೆ ಹುಟ್ಟಿಕೊಂಡ ರಾಜಕೀಯ ಪಕ್ಷಗಳಿಂದ ಹಿಡಿದು ಎಲ್ಲ ಪಕ್ಷಗಳು ರೈತರ ಖಾತೆಸಾಲ ಮನ್ನಾ ಮಾಡಿಸುವ ಗಾಳ ಹಾಕಿ ಹಳ್ಳಿಗರ ಮತಗಳನ್ನು ತಮ್ಮ ಮತಪೆಟ್ಟಿಗೆಯೊಳಗೆ ಬಂಧಿಸುವ ತಂತ್ರ ರೂಪಿಸಿವೆ. ಶಿರಸಿ-ಸಿದ್ದಾಪುರ ಕ್ಷೇತ್ರದಿಂದ ಸ್ಪರ್ಧಿಸಿರುವ ಎಲ್ಲ ಅಭ್ಯರ್ಥಿಗಳ ಬಾಯಲ್ಲಿ ಖಾತೆಸಾಲ ಮನ್ನಾ ಮಾಡುವ ಭರವಸೆ ಅಸ್ಖಲಿತವಾಗಿ ಉದುರುತ್ತಿದೆ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ದೀಪಕ ಹೊನ್ನಾವರ `ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದರೆ ಆರು ತಿಂಗಳೊಳಗೆ ಖಾತೆಸಾಲ ಮನ್ನಾ ಮಾಡಿಸುವೆ. ಇಲ್ಲವಾದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ' ನೀಡುವೆ ಎಂದು ಮತದಾರರನ್ನು ಸೆಳೆಯುತ್ತಿದ್ದಾರೆ. ಜೆಡಿಎಸ್‌ನ ಸ್ಪರ್ಧಿ ಶಶಿಭೂಷಣ ಹೆಗಡೆ ಸಹ `ರೈತರ ಖಾತೆಸಾಲದ ಸಮಸ್ಯೆ ಬಿಗಡಾಯಿಸಿದ್ದು, ಸಾಲ ಮನ್ನಾಕ್ಕೆ ಆದ್ಯತೆ ನೀಡುವೆ. ಹಾಲಿ ಶಾಸಕರು ಸಾಲ ಮನ್ನಾ ಸಮಸ್ಯೆಯನ್ನು ನಿರ್ಲಕ್ಷ್ಯಿಸಿದ್ದಾರೆ' ಎನ್ನುವ ಮೂಲಕ ಜನರಿಗೆ ಭರವಸೆ ನೀಡುತ್ತಿದ್ದಾರೆ. ಬಿಎಸ್‌ಆರ್ ಕಾಂಗ್ರೆಸ್, ಕೆಜೆಪಿ ಪಕ್ಷಗಳು ಸಹ ಮಾತೆತ್ತಿದರೆ ಖಾತೆಸಾಲ ಮನ್ನಾಗೊಳಿಸುವ ಆಶ್ವಾಸನೆ ನೀಡುತ್ತಿವೆ.  ಸಚಿವರಾಗಿಯೂ ಖಾತೆಸಾಲ ಮನ್ನಾ ಮಾಡಿಸುವಲ್ಲಿ ಎಡವಿರುವ ಜಿಲ್ಲಾ ಉಸ್ತುವಾರಿ ಸಚಿವ, ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ, `ಖಾತೆ ಸಾಲವನ್ನು ರಾಜಕೀಯಗೊಳಿಸಬೇಡಿ. ಅದು ಪಕ್ಷಾತೀತ ಹೋರಾಟ' ಎಂಬ ಸಮರ್ಥನೆ ನೀಡುತ್ತಿದ್ದಾರೆ.

ಸಾಲದ ಸಂಕಷ್ಟದಲ್ಲಿ ಸಿಲುಕಿ ಕಂಗಾಲಾಗಿರುವ ರೈತರು ಧಾರ್ಮಿಕ ಪೀಠದ ಮೊರೆ ಹೋಗಿ ಖಾತೆಸಾಲ ಮನ್ನಾ ಹೋರಾಟಕ್ಕೆ ಸ್ವರ್ಣವಲ್ಲೆ ಸ್ವಾಮೀಜಿ ನೇತೃತ್ವ ವಹಿಸಿದ್ದು ವಾಸ್ತವಿಕ ಸಂಗತಿ. ರೈತರ ಧ್ವನಿಯನ್ನು ದೆಹಲಿಗೆ ತಲುಪಿಸಲು ಮೂರು ವರ್ಷಗಳ ಹಿಂದೆ ಇಲ್ಲಿನ ಮಾರಿಕಾಂಬಾ ಕ್ರೀಡಾಂಗಣದಲ್ಲಿ ಖಾತೆಸಾಲ ಮನ್ನಾ ಕುರಿತು ರೈತರ ಬೃಹತ್ ಸಭೆ ನಡೆದಿತ್ತು. ಪಕ್ಷಾತೀತವಾಗಿ ನಡೆದ ಸಭೆಯಲ್ಲಿ ಉಪಸ್ಥಿತರಿದ್ದ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಸಹಿತ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಖಾತೆಸಾಲ ಮನ್ನಾ ಬಗ್ಗೆ ಸರ್ಕಾರ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದ್ದರು.

ಖಾತೆಸಾಲ ಮನ್ನಾದ ಮುಂಚೂಣಿಯಲ್ಲಿರುವ ಸ್ಥಳೀಯ ಪ್ರಮುಖರು ನಾಲ್ಕಾರು ಬಾರಿ ದೆಹಲಿಗೆ ಅಲೆದಾಡಿದರು. ನಂತರ ಅವಧಿಯಲ್ಲಿ ಒಂದೆರಡು ಬಾರಿ `ಖಾತೆಸಾಲ ಮನ್ನಾ ಆಗೇ ಹೋಯ್ತು' ಎಂಬ ಸುದ್ದಿ ರಾಕೆಟ್ ವೇಗದಲ್ಲಿ ಹರಡಿತು. ಮತ್ತೆ ಅದೇ ವೇಗದಲ್ಲಿ `ಮನ್ನಾ ಆಗಿಲ್ಲ, ಬಹುತೇಕ ಮನ್ನಾ ಆಗುವ ಹಂತದಲ್ಲಿದೆ' ಎನ್ನುವ ಇನ್ನೊಂದು ಹೇಳಿಕೆ ತೇಲಿಬಂತು. ಖಾತೆಸಾಲ ಮನ್ನಾ ಎಷ್ಟರ ಮಟ್ಟಿಗೆ ಸಾಧ್ಯವಿದೆ ಅಥವಾ ಸರ್ಕಾರ ಮಟ್ಟದಲ್ಲಿ ಈ ಕಡತ ಎಲ್ಲಿದೆ ಎಂಬುದು ಕೆಲವೇ ಜನರಿಗೆ ಅರಿವಿರಬಹುದು ಆದರೆ ರಾಜಕೀಯ ಪಕ್ಷಗಳು ಖಾತೆಸಾಲ ಮನ್ನಾ ಕಡ್ಡಿ ಮುರಿದಷ್ಟೇ ಸುಲಭ ಎಂಬಂತೆ ಭರವಸೆ ನೀಡಿ ಮತದಾರರನ್ನು ಮರುಳು ಮಾಡುತ್ತಿವೆ.

ಖಾತೆಸಾಲ ಮನ್ನಾ ಜೊತೆ ಅರಣ್ಯ ಹಾಗೂ ಕಂದಾಯ ಭೂಮಿ ಅತಿಕ್ರಮಣ ಈ ಕ್ಷೇತ್ರ ಇನ್ನೊಂದು ಪ್ರಮುಖ ಸಮಸ್ಯೆ. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಖಾತೆಸಾಲ ಮನ್ನಾ ಹಾಗೂ ಅತಿಕ್ರಮಣ ಭೂಮಿ ಸಕ್ರಮ ಭರವಸೆಗಳು ಐದು ವರ್ಷಗಳ ನಂತರ ಮತ್ತೆ ಚುನಾವಣಾ ಅಭ್ಯರ್ಥಿಗಳ ಬಾಯಲ್ಲಿ ಉಲಿಯುತ್ತಿವೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT