ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ರಾಜಕೀಯ ಪ್ರವೇಶ ರೈತರಿಗೆ ಅನಿವಾರ್ಯ'

Last Updated 14 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಅಮೃತಭೂಮಿ (ಚಾಮರಾಜನಗರ ಜಿಲ್ಲೆ):  `ರೈತರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ರಾಜಕೀಯ ಪ್ರವೇಶಿಸುವುದು ಅನಿವಾರ್ಯವಾಗಿದ್ದು ಭೂಮಿ, ಮತ ಹಾಗೂ ಸ್ವಾಭಿಮಾನ ಎಂಬ ಮೂರು ಅಂಶಗಳ ಸೂತ್ರದೊಂದಿಗೆ ಅಖಾಡಕ್ಕೆ ಇಳಿಯುವುದು ಈಗ ಸಕಾಲ' ಎಂದು ಸಾಮಾಜಿಕ ಚಿಂತಕ ಪ್ರೊ.ಯೋಗೇಂದ್ರ ಯಾದವ್ ಪ್ರತಿಪಾದಿಸಿದರು.

ತಾಲ್ಲೂಕಿನ ಅಮೃತಭೂಮಿಯಲ್ಲಿ ಗುರುವಾರ ರೈತೋತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ `ಜನಾಂದೋಲನಗಳ ಪರ್ಯಾಯ ರಾಜಕಾರಣ'  ವಿಷಯ ಕುರಿತು ಅವರು ಮಾತನಾಡಿದರು.

`ದೇಶದಲ್ಲಿ ಶೇ 60ರಷ್ಟು ರೈತರಿದ್ದೇವೆ. ಹೀಗಾಗಿ, ಚುನಾವಣೆಯಲ್ಲಿ ಗೆಲ್ಲಲು ಮತಗಳಿಗೆ ಕಷ್ಟಪಡಬೇಕಿಲ್ಲ. ನಮ್ಮ ಬಳಿಯೇ ಭೂಮಿ ಇದೆ. ಸಹಜವಾಗಿ ನಮ್ಮಲ್ಲಿ ಅನ್ನದಾತರೆಂಬ ಸ್ವಾಭಿಮಾನ ಮೇಳೈಸಿದೆ. ಈ ಸೂತ್ರಗಳು ಅಸ್ತ್ರಗಳಾಗಬೇಕು. ಆಗ ಮಾತ್ರ ಭ್ರಷ್ಟಾಚಾರದಿಂದ ಕೊಳೆತು ನಾರುತ್ತಿರುವ ರಾಜಕೀಯ ಪಕ್ಷಗಳಿಗೆ ತಕ್ಕಪಾಠ ಕಲಿಸಲು ಸಾಧ್ಯ' ಎಂದು ವಿಶ್ಲೇಷಿಸಿದರು.

80ರ ದಶಕದಲ್ಲಿ ರಾಷ್ಟ್ರ ವ್ಯಾಪಿ ರೈತ ಸಂಘಟನೆಗಳ ಹೋರಾಟ ಉತ್ತುಂಗದ ಸ್ಥಿತಿಯಲ್ಲಿತ್ತು. ಆ ವೇಳೆ ಕರ್ನಾಟಕದಲ್ಲೂ ಪ್ರೊ.ಎಂ.ಡಿ. ನಂಜುಂಡಸ್ವಾಮಿ ನಡೆಸಿದ ಹೋರಾಟ ಸ್ಮರಣೀಯವಾದುದು. 1995ರ ನಂತರ ರೈತ ಹೋರಾಟ ಚಲನಶೀಲತೆ ಕಳೆದುಕೊಂಡಿತು. ಸೈದ್ಧಾಂತಿಕ ಹಿನ್ನೆಲೆ ಹೊಂದಿದ್ದ ರೈತ ಸಂಘಟನೆಗಳು ಪ್ರಾಂತ್ಯ, ಜಾತೀಯತೆಯ ಕಬಂಧಬಾಹುವಿಗೆ ಸಿಲುಕಿ ನಲುಗಿದವು. ಕೆಲವು ಮುಖಂಡರ ರಾಜಕೀಯ ಸ್ವಾರ್ಥದಿಂದಲೂ ಹೋರಾಟ ದಿಕ್ಕು ತಪ್ಪಿತು. ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಕೂಡಿ ಬಂದಿದೆ' ಎಂದರು.

ಮುಕ್ತ ಆರ್ಥಿಕ ನೀತಿಯ ಆಪತ್ತು: ಕೃಷಿ ತಜ್ಞ ಡಾ.ದೇವೇಂದರ್ ಶರ್ಮ ಮಾತನಾಡಿ, `ಕೇಂದ್ರ ಸರ್ಕಾರ ಮುಕ್ತ ಆರ್ಥಿಕ ನೀತಿಗೆ ಜೋತು ಬಿದ್ದಿದೆ. ಇದರ ಪರಿಣಾಮ ರೈತರು ವಿದೇಶಿ ಕಂಪೆನಿಗಳ ಕುಣಿಕೆಗೆ ಕೊರಳೊಡ್ಡುವಂತಾಗಿದೆ' ಎಂದು ಆತಂಕ ವ್ಯಕ್ತಪಡಿಸಿದರು.

`ಇಂದಿನ ರೈತರ ಮುಂದಿನ ಸವಾಲುಗಳು' ಎಂಬ ವಿಷಯ ಕುರಿತು ಮಾತಿಗಿಳಿದ ಅವರು, ಬಹುರಾಷ್ಟ್ರೀಯ ಕಂಪೆನಿಗಳ ಷಡ್ಯಂತ್ರಕ್ಕೆ ಸರ್ಕಾರಗಳು ಮರಳಾಗುತ್ತಿವೆ. ಹೀಗಾಗಿ, ರೈತರ ಬದುಕು ಅತಂತ್ರವಾಗಿದೆ. ಅಮೆರಿಕದ ಕೃಷಿ ಕ್ಷೇತ್ರದಲ್ಲಿ ಬಹು ರಾಷ್ಟ್ರೀಯ ಕಂಪೆನಿಗಳು ಸೃಷ್ಟಿಸಿರುವ ಅವಾಂತರ ಬೆಳಕಿಗೆ ಬರುತ್ತಿವೆ. ಆ ರಾಷ್ಟ್ರದಲ್ಲಿ ಕೃಷಿಕರ ಸಂಖ್ಯೆ ಶೇ 1ರಷ್ಟಕ್ಕೆ ಇಳಿದಿದೆ. ಅಲ್ಲಿ ಈಗ ದೈತ್ಯ ಕಂಪೆನಿಗಳಿಗೆ ಮಣೆ ಹಾಕುತ್ತಿಲ್ಲ' ಎಂದರು.

ಕೊಳ್ಳುಬಾಕ ಸಂಸ್ಕೃತಿ ಮೇಳೈಸಿರುವ ಕಂಪೆನಿಗಳು ಇಲ್ಲಿ ತಳವೂರಲು ಹವಣಿಸುತ್ತಿವೆ. ಅವುಗಳಿಗೆ ಸೌಲಭ್ಯ ಕಲ್ಪಿಸಲು ಮುಂದಾಗಿರುವ ಸರ್ಕಾರದ ನೀತಿಗಳು ಅವೈಜ್ಞಾನಿಕವಾಗಿವೆ. ಕಂಪೆನಿಗಳು ಬಂದರೆ ಮಧ್ಯವರ್ತಿ ಹಾವಳಿ ತಗ್ಗಲಿದೆ ಎಂಬುದು ಕೇವಲ ನೆಪ. ಈ ಹಿನ್ನೆಲೆಯಲ್ಲಿ ಅವುಗಳ ಪ್ರವೇಶದ ವಿರುದ್ಧ ರೈತರು ಸಂಘಟಿತ ಹೋರಾಟ ಮಾಡಬೇಕಿದೆ ಎಂಬ ಸಲಹೆ ಮುಂದಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT