ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಬೆಳವಣಿಗೆಆರ್‌ಎಸ್‌ಎಸ್ ಮುಜುಗರ

Last Updated 22 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ರಾಜ್ಯ ರಾಜಕೀಯದಲ್ಲಿ ರಾಮಾಯಣ ನಡೆದುಹೋಗಿದೆ. ಬಿಜೆಪಿ ಸರ್ಕಾರಕ್ಕೆ ಇನ್ನು ಒಂದೂವರೆ ವರ್ಷದ ಅವಧಿ ಉಳಿದಿದೆ. ಸರ್ಕಾರ ಜನರ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಮಾಡಲಿ. ಆದರೆ ಈ ಅವಧಿಯಲ್ಲಿ ಮತ್ತೊಂದು ಮಹಾಭಾರತ ಸಂಭವಿಸದಿರಲಿ...~

- ಇದು ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ರಾಷ್ಟ್ರೀಯ ಸಹ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ವ್ಯಕ್ತಪಡಿಸಿರುವ ಆಶಯ.

ಆರ್‌ಎಸ್‌ಎಸ್ ಕಚೇರಿ `ಕೇಶವಶಿಲ್ಪ~ದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಂಧನದಿಂದ ಸಂಘಕ್ಕೂ ಮುಜುಗರವಾಗಿದೆ. ಭ್ರಷ್ಟಾಚಾರವನ್ನು ಸಮರ್ಥಿಸುವುದು ನಮ್ಮಿಂದ ಸಾಧ್ಯವಿಲ್ಲ. ಸರ್ಕಾರದ ಶುದ್ಧೀಕರಣವನ್ನು ರಾಜ್ಯದ ಜನರೇ ಮಾಡುತ್ತಾರೆ~ ಎಂದರು.

`ನಮಗೂ ನೋವಿದೆ~: ಕಳೆದ ಮೂರು ವರ್ಷಗಳ ಅವಧಿಯಲ್ಲಿ ಬಿಜೆಪಿ ಸರ್ಕಾರದ ಕೆಲವು ಸಚಿವರ ನಡತೆ ಜನರ ಅಪೇಕ್ಷೆಗೆ ತಕ್ಕಂತೆ ಇರಲಿಲ್ಲ. ಈ ವಿಚಾರ ಸಂಘಕ್ಕೂ ನೋವು ತಂದಿದೆ. ಆದರೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಈ ಅವಧಿಯಲ್ಲಿ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳೂ ಆಗಿವೆ ಎಂದರು.

ಸ್ವಯಂಸೇವಕರೂ ಆದ ಯಡಿಯೂರಪ್ಪ ಅವರು ಸಂಘದ ಕಚೇರಿಗೆ ಭೇಟಿ ನೀಡುತ್ತಿದ್ದ ಸಂದರ್ಭ ಹಲವು ಬಾರಿ ಅವರಿಗೆ ಸಲಹೆ ನೀಡಲಾಗಿತ್ತು. ಆದರೆ ಅವರು ಆ ಸಲಹೆಗಳನ್ನು ಪಾಲಿಸದಿರುವುದಕ್ಕೆ ಸಂಘ ಹೊಣೆಯಲ್ಲ ಎಂದು ಅವರು ತಿಳಿಸಿದರು.

ಅಭಿಯಾನ: `ರಾಷ್ಟ್ರೀಯ ಸಲಹಾ ಮಂಡಳಿ ಸಿದ್ಧಪಡಿಸಿರುವ ಕೋಮು ಹಿಂಸಾಚಾರ ತಡೆ ಮಸೂದೆ ನ್ಯಾಯಶಾಸ್ತ್ರಕ್ಕೇ ವಿರುದ್ಧವಾಗಿದೆ. ಸಮಾಜವನ್ನು ವಿಭಜಿಸುವ ಇಂಥ ಮಸೂದೆ ಸಿದ್ಧಗೊಂಡಿರುವುದು ವಿಶ್ವದಲ್ಲೇ ಮೊದಲು.  ಮಸೂದೆಯನ್ನು ವಿರೋಧಿಸಿ ನವೆಂಬರ್ 1ರಿಂದ 20ರವರೆಗೆ ದೇಶವ್ಯಾಪಿ ವಿಚಾರಗೋಷ್ಠಿ, ಸಭೆಗಳನ್ನು ಹಮ್ಮಿಕೊಳ್ಳಲಾಗುವುದು. ಒಂದು ವೇಳೆ ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದರೆ ಬೀದಿಗಿಳಿದು ಹೋರಾಟ ನಡೆಸಲಾಗುವುದು~ ಎಂದು ತಿಳಿಸಿದರು.

ವಿವೇಕಾನಂದರ 150ನೇ ಜನ್ಮದಿನ: 2013ರ ಜನವರಿ 12 ಸ್ವಾಮಿ ವಿವೇಕಾನಂದರ 150ನೇ ಜನ್ಮದಿನ ಆಚರಿಸಲಾಗುವುದು ಎಂದರು. ಆರ್‌ಎಸ್‌ಎಸ್ ಪ್ರಾಂತ ಸಂಘಚಾಲಕ ಎಂ. ವೆಂಕಟರಾಮ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT