ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ವಿಪ್ಲವದಿಂದ ಅಭಿವೃದ್ಧಿ ಕುಂಠಿತ

Last Updated 17 ಜೂನ್ 2011, 9:40 IST
ಅಕ್ಷರ ಗಾತ್ರ

ಚಿಕ್ಕಮಗಳೂರು: `ಕಳೆದ ಮೂರು ವರ್ಷಗಳಲ್ಲಿ ಮೊದಲ ವರ್ಷ ಹೊರತುಪಡಿಸಿ, ಉಳಿದ ಎರಡು ವರ್ಷಗಳಲ್ಲಿ ಆಗಾಗ ಸಂಭವಿಸಿದ ರಾಜಕೀಯ ವಿಪ್ಲವಗಳಿಂದಾಗಿ ಅಭಿವೃದ್ಧಿ ವೇಗ ಕುಂಠಿತಗೊಂಡಿದೆ. ಆ ಎರಡು ವರ್ಷಗಳಲ್ಲಿ ಚುನಾವಣೆ ಭಯದ ನೆರಳಿನಲ್ಲಿದ್ದು, ಶಾಸಕನಾಗಿ ನಡೆದುಕೊಳ್ಳುವುದಕ್ಕಿಂತಲೂ ಹೆಚ್ಚಾಗಿ ಅಭ್ಯರ್ಥಿ ಮನಸ್ಥಿತಿಯಲ್ಲೇ ಇರುವಂತಾಗಿತ್ತು. ಅಂತಹ ಬೆಳವಣಿಗೆ ಘಟಿಸದಿದ್ದರೆ ಇಷ್ಟೊತ್ತಿಗೆ ಅಭಿವೃದ್ಧಿಗೆ ಹೆಚ್ಚಿನ ವೇಗ ಸಿಗುತ್ತಿತ್ತು~ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ಜಿಲ್ಲಾ ಪತ್ರಕರ್ತರ ಸಂಘ ನಗರ ಸಮೀಪದ ಮತ್ತಾವರ ಅರಣ್ಯ ಮಾಹಿತಿ ಕೇಂದ್ರದಲ್ಲಿ ಬುಧ ವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ತಮ್ಮ ಮನದಾಳದ ಮಾತು ಹಂಚಿ ಕೊಂಡು, ತಮ್ಮ ಮೂರು ವರ್ಷ ಅವಧಿ ಸಾಧನೆ ಹಾಗೂ ಸಾಧಿಸಬೇಕಿರುವುದನ್ನು ವಿವರಿಸಿದರು.

`ನನ್ನ ಕ್ಷೇತ್ರಕ್ಕೆ 479.73 ಕೋಟಿ ರೂಪಾಯಿ ಗಳನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದೆ. ಕೆಲವು ಕಾಮಗಾರಿಗಳು ಪ್ರಗತಿಯಲ್ಲಿದ್ದರೆ, ಮತ್ತೆ ಕೆಲವು ಪೂರ್ಣಗೊಂಡಿವೆ. ಇನ್ನು ಕೆಲವು ಕಾಮ ಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ತಮ್ಮ ಕ್ಷೇತ್ರದಲ್ಲಿ ಪ್ರವಾಸೋದ್ಯಮ ಹಾಗೂ ಶಿಕ್ಷಣಕ್ಕೆ ವಿಫುಲ ಅವಕಾಶವಿದೆ. ಅದನ್ನು ಬಳಸಿ ಕೊಳ್ಳುವ ಕನಸು ನನ್ನದು~ ಎಂದು ಹೇಳಿದರು.

ನಗರದಲ್ಲಿ ಎಂಬಿಎ ಮತ್ತು ಮಹಿಳಾ ಪದವಿ ಕಾಲೇಜು ಆರಂಭಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಮೂರು ವರ್ಷಗಳಲ್ಲಿ ಸಂಕಲ್ಪ ಮಾಡಿದ 5 ಕೆಲಸಗಳು ಈಡೇರುತ್ತಿವೆ. ಬೆಳವಾಡಿ ಕೆರೆಗೆ ನೀರು ಹರಿಸುವ ಯೋಜನೆ ಶೇ.80ರಷ್ಟು ಆಗಿದೆ. ಇನ್ನು 75 ದಿನಗಳಲ್ಲಿ ಬಾಕಿ ಕೆಲಸ ಪೂರ್ಣಗೊಳ್ಳಲಿದೆ ಎಂದರು.

ಕಡೂರು-ಚಿಕ್ಕಮಗಳೂರು ರಸ್ತೆಯನ್ನು ಚತುಷ್ಪದ ರಸ್ತೆಯನ್ನಾಗಿ ನಿರ್ಮಿಸುವ ನನ್ನ ಆಲೋಚನೆ ಹಲವು ಕಾರಣಗಳಿಂದ ಕೃತಿಗಿಳಿದಿಲ್ಲ.  ಕ್ಷೇತ್ರದಲ್ಲಿ 3 ಸಾವಿರ ಆಶ್ರಯ ಮನೆ ನಿರ್ಮಿಸುವ ಗುರಿ ಇದ್ದು, ಇಂದಾವರದಲ್ಲಿ 16 ಎಕರೆ ಜಾಗ ಗುರುತಿಸಿ, 850 ಮನೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

ದತ್ತಪೀಠವನ್ನು ತಾವು ಓಟ್ ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಂಡಿಲ್ಲ. ಇದೊಂದು ತಾತ್ವಿಕ ಹೋರಾಟ. ವಿಳಂಬವಾದರೂ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಇದೆ. ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ ವಿವಾದ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದೆ. ಈ ಬಗ್ಗೆ ಏನನ್ನೂ ಹೇಳುವುದಿಲ್ಲ. ಆದರೆ ಹಿಂದೂ ಅರ್ಚಕರ ನೇಮಕದ ಬೇಡಿಕೆಯನ್ನು ಹಿಂತೆಗೆದುಕೊಂಡಿಲ್ಲ. ವಿವಾದಿತ ಪ್ರದೇಶ ಹೊರತುಪಡಿಸಿ ಉಳಿದೆಡೆ ಅಭಿವೃದ್ಧಿ ಕೆಲಸ ಕೈಗೊಳ್ಳಲು ಸರ್ಕಾರ ಬಜೆಟ್‌ನಲ್ಲಿ ರೂ. 5 ಕೋಟಿ ಮೀಸಲಿಟ್ಟಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ನಗರದಲ್ಲಿ ಹದಗೆಟ್ಟಿರುವ ರಸ್ತೆಗಳ ಬಗ್ಗೆ ಗಮನ ಸೆಳೆದಾಗ, ಎರಡು ತಿಂಗಳ ಹಿಂದೆಯೇ ರಸ್ತೆಗಳ ಗುಂಡಿಗಳನ್ನು ಮುಚ್ಚಲು ಸೂಚಿಸಿದ್ದೆ. ಆದರೆ, ಅದು ಕಾರ್ಯಗತ ಆಗಿಲ್ಲ. ಆದರೆ ನಗರಸಭೆಯಲ್ಲಿರುವ ಸರ್ಕಾರದ ಹಣವನ್ನು ಪೋಲಾಗದಂತೆ ಇಡಲಾಗಿದೆ. ಕೆಎಂಆರ್‌ಪಿ ಯೋಜನೆಯಡಿ ಬಂದಿರುವ ರೂ. 28 ಕೋಟಿ ಹಾಗೂ ಮುಖ್ಯಮಂತ್ರಿಗಳ ವಿಶೇಷ ಅನುದಾನದ ರೂ. 20 ಕೋಟಿಯನ್ನು ಹಾಗೆಯೇ ಇಡ ಲಾಗಿದೆ. ಒಳಚರಂಡಿ ಕಾಮಗಾರಿ ಮುಗಿದ ತಕ್ಷಣ ನಗರದ ಎಲ್ಲ ರಸ್ತೆಗಳ ಡಾಂಬರೀಕರಣಕ್ಕೆ ಈ ಹಣ ಬಳಸುತ್ತೇವೆ ಎಂದು ಸ್ಪಷ್ಟಪಡಿಸಿದರು.

`ಲೋಕಾಯುಕ್ತಕ್ಕೆ ಸಲ್ಲಿಸಿರುವಷ್ಟೇ ಆಸ್ತಿ~

 ಚಿಕ್ಕಮಗಳೂರು:
`2004, 2008 ಮತ್ತು 2011ರಲ್ಲಿ ಲೋಕಾಯುಕ್ತಕ್ಕೆ ನನ್ನ ಆಸ್ತಿ ವಿವರ ಸಲ್ಲಿಸಿದ್ದೆೀನೆ. ದಾಖಲೆಯಲ್ಲಿ ಸಲ್ಲಿಸಿರುವಷ್ಟೇ ಆಸ್ತಿ ನನ್ನ ಬಳಿ ಇರುವುದು ಎಂದು ಈಗಲೂ ಖಚಿತವಾಗಿ ಹೇಳುತ್ತೇನೆ.

ಲೋಕಾಯುಕ್ತಕ್ಕೆ ಸಲ್ಲಿಸಿರುವ ಆಸ್ತಿ, ನಗದು ಹೊರತುಪಡಿಸಿ ತಮ್ಮ ಬಳಿ ಬೇರ‌್ಯಾವುದೇ ಆಸ್ತಿ ಇಲ್ಲ~ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ ಸ್ಪಷ್ಟಪಡಿಸಿದರು.ಜಿಲ್ಲಾ ಪತ್ರಕರ್ತರ ಸಂಘ ನಗರ ಸಮೀಪದ ಮತ್ತಾವರ ಅರಣ್ಯ ಮಾಹಿತಿ ಕೇಂದ್ರದಲ್ಲಿ ಬುಧವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಈ ರೀತಿ ಸ್ಪಷ್ಟನೆ ನೀಡಿದರು.

ಶಾಸಕರಾಗುವ ಮಿನ್ನ ತಾವು ಬರಿಗೈಯಾಗಿದ್ದೀರಿ. ಈಗ 100 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿ ಹೊಂದಿದ್ದೀರಿ ಎನ್ನುವ ಆರೋಪವಿದೆಯಲ್ಲ? ಈ ಬಗ್ಗೆ ನಿಮ್ಮ ಖಚಿತ ಅಭಿಪ್ರಾಯವೇನು? ಎಂದು ಮಾಧ್ಯಮ ಪ್ರತಿನಿಧಿಯೊಬ್ಬರು ಕೇಳಿದಾಗ,  `ನೀವು 100 ಕೋಟಿ ರೂಪಾಯಿ ಎಂದು ಕಡಿಮೆ ಹೇಳುತ್ತಿದ್ದೀರಿ.
 
ಆದರೆ ರವಿ 1000, 2000 ಕೋಟಿ ರೂಪಾಯಿ ಹಣ ಗಳಿಸಿದ್ದಾರೆ ಎನ್ನುವ ಆರೋಪವಿದೆ. ವಾಸ್ತವವೆಂದರೆ ನಾನು ಶಾಸಕನಾದ ಮೇಲೆ ನಮ್ಮ ತಂದೆ 40 ಎಕರೆ ತೋಟ ಮಾರಿದ್ದಾರೆ ಎಂದರೆ ನಂಬುತ್ತೀರಾ? ಮುಂದಿನ ಬಾರಿ ಲೋಕಾಯುಕ್ತಕ್ಕೆ ಸಲ್ಲಿಸಲಿರುವ ನನ್ನ ಆಸ್ತಿ ವಿವರವನ್ನು ನಿಮ್ಮ ಮುಂದಿಡುತ್ತೇನೆ~ ಪ್ರತಿಕ್ರಿಯಿಸಿದರು.

ನೀವು ಬಡ ಶಾಸಕರೇ? ಎಂದು ಮರುಪ್ರಶ್ನಿಸಿದಾಗ, `ನಾನು ಬಡ ಶಾಸಕನಲ್ಲ. ತಂದೆ 110 ಎಕರೆ ತೋಟ ಪಾಲು ನೀಡಿದ್ದಾರೆ. ನಿಜ ಹೇಳಬೇಕೆಂದರೆ ವ್ಯಕ್ತಿಗತವಾಗಿ ನಾನು ಭ್ರಷ್ಟನಲ್ಲ. ಭ್ರಷ್ಟ ಎನಿಸಿಕೊಳ್ಳಲು ನಾನು ಸಿದ್ಧವಿಲ್ಲ~ ಎಂದು ಖಡಕ್ಕಾಗಿ ಉತ್ತರಿಸಿದರು.

ಜಿ.ಪಂ.ಅಧ್ಯಕ್ಷೆ ಪ್ರಫುಲ್ಲಾ ಮಂಜುನಾಥ್, ಟಿಪಿಎಸ್ ಅಧ್ಯಕ್ಷ ಅರಸ್, ಎಪಿಎಂಸಿ ಅಧ್ಯಕ್ಷ ವೆಂಕಟೇಶ್, ನಗರಸಭೆ ಅಧ್ಯಕ್ಷ ನಿಂಗೇಗೌಡ, ರಾಜ್ಯ ತೆಂಗು ನಾರು ಮಂಡಳಿ ಅಧ್ಯಕ್ಷೆ ರೇಖಾಹುಲಿಯಪ್ಪಗೌಡ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಂ. ರಾಜಶೇಖರ್, ಖಜಾಂಚಿ ರಂಗನಾಥ್, ಕಾರ್ಯದರ್ಶಿ ಜಯಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT