ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಹಣ ಮಾಡುವ ವ್ಯವಹಾರ

Last Updated 23 ಆಗಸ್ಟ್ 2012, 19:10 IST
ಅಕ್ಷರ ಗಾತ್ರ

ಬೆಂಗಳೂರು: `ಟಿ.ಆರ್. ಶಾಮಣ್ಣ ಮತ್ತು ಇತರೆ ಆದರ್ಶ ರಾಜಕಾರಣಿಗಳ ಬಗೆಗೆ ನಮ್ಮ ಮುಂದಿನ ಪೀಳಿಗೆಗೆ ಅರಿವು ಮೂಡಿಸಲು ಅವರ ಹೆಸರಿನಲ್ಲಿ ಅಧ್ಯಯನ ಕೇಂದ್ರಗಳನ್ನು ಸ್ಥಾಪನೆ ಮಾಡಬೇಕು~ ಎಂದು ವಿಧಾನ ಪರಿಷತ್ತಿನ ಸದಸ್ಯ ಎಂ.ವಿ. ರಾಜಶೇಖರನ್ ಹೇಳಿದರು.

ಭಾರತ ಯಾತ್ರಾ ಕೇಂದ್ರ ರಾಜಕೀಯ ಚಿಂತಕರ ವೇದಿಕೆಯು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗುರುವಾರ ಏರ್ಪಡಿಸಿದ್ದ ಜನಸೇವಕ ಟಿ.ಆರ್. ಶಾಮಣ್ಣ ಜನ್ಮ ಶತಮಾನೋತ್ಸವ, ಗೌರವ ಸಮರ್ಪಣೆ, `ನಮ್ಮ ಶಾಮಣ್ಣ~ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಶಾಮಣ್ಣ ಅವರದು ವಿಶಿಷ್ಟ ವ್ಯಕ್ತಿತ್ವವಾಗಿತ್ತು. ಅವರು ಬೆಂಗಳೂರು ನಗರಕ್ಕೆ ಯಾರೂ ಮರೆಯದಂತಹ ಕೊಡುಗೆ ನೀಡಿದ್ದಾರೆ. ಅವರ ಆದರ್ಶಗಳು ಎಲ್ಲರಿಗೂ ದಾರಿದೀಪವಾಗಬೇಕು. ನಮ್ಮ ಮುಂದಿನ ಪೀಳಿಗೆಗೆ ಅವರ ಆದರ್ಶಗಳ ಬಗ್ಗೆ ಅರಿವು ಮೂಡಿಸುವುದು ಅವಶ್ಯಕವಾಗಿದೆ~ ಎಂದರು.

`ರಾಜಕೀಯವೊಂದು ಬಂಡವಾಳವಿಲ್ಲದೇ ಲಾಭ ಗಳಿಸುವ ಒಂದು ವ್ಯವಹಾರವಾಗಿ ಮಾರ್ಪಟ್ಟಿದೆ~ ಎಂದು ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯ ಹೇಳಿದರು.

`ಇಂದು ರಾಜಕೀಯ ಜನಸೇವೆಯ ಮಾರ್ಗವಾಗಿರದೇ, ಹಣ ಮಾಡುವ ವ್ಯವಹಾರವಾಗಿದೆ. ಇಂದಿನವರಿಗೆ ಶಾಮಣ್ಣ ಅವರು ಆದರ್ಶವಾಗುತ್ತಾರೆ. ಅವರಿಗೆ ಇಂದಿನ ರಾಜಕಾರಣಿಗಳ ಹೋಲಿಕೆ ಅಸಾಧ್ಯವಾಗಿದೆ. ಅವರು ನಿಧನವಾಗಿ 22 ವರ್ಷಗಳಾದರೂ ಅವರು ನಮ್ಮ ನೆನಪಿನಂಗಳದಲ್ಲಿ ಜೀವಂತವಾಗಿದ್ದಾರೆ. ಅವರ ಆದರ್ಶಗಳನ್ನು ಅನುಕರಿಸುವಲ್ಲಿ ನಾವು ಸೋತಿದ್ದೇವೆ~ ಎಂದರು.

ವಿಧಾನ ಪರಿಷತ್ತಿನ ಸದಸ್ಯ ರಾಮಚಂದ್ರೇಗೌಡ ಮಾತನಾಡಿ, `ಉದ್ಯಾನ ನಗರಿ ಇಂದು ಕಸದ ನಗರಿಯಾಗಿ ಮಾರ್ಪಟ್ಟಿದೆ. ಜನ ಪ್ರತಿನಿಧಿಗಳಿಗೆ ಇದರ ಕಡೆಗೆ ಯಾವುದೇ ಗಮನವಿಲ್ಲ. ಯಾವ ಸರ್ಕಾರವಾಗಲೀ ಅಥವಾ ಯಾವುದೇ ಜನ ಪ್ರತಿನಿಧಿಯಾಗಲೀ ಅವರನ್ನು ಜನರು ಪ್ರಶ್ನಿಸಬೇಕು. ಜನರಲ್ಲಿ ಮುಖ್ಯವಾಗಿ ಜಾಗೃತಿ ಮೂಡಬೇಕು~ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ, `ಇಂದಿನ ರಾಜಕಾರಣಿಗಳು ಶಾಮಣ್ಣ ಅವರಿಂದ ರಾಜಕೀಯದ ಸ್ವಚ್ಛತೆಯನ್ನು ಕಲಿಯಬೇಕು~ ಎಂದು ಕಿವಿಮಾತು ಹೇಳಿದರು.

ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್, ವಿಧಾನ ಪರಿಷತ್ತಿನ ಸದಸ್ಯ ರಾಮಚಂದ್ರೇಗೌಡ, ಬಿಬಿಎಂಪಿ ಮಾಜಿ ಸದಸ್ಯ ಟಿ.ಕೆ. ತಿಮ್ಮೇಶ ಪ್ರಭು ಅವರಿಗೆ ಶತಮಾನೋತ್ಸವ ನೆನಪಿನ ಜನಸೇವಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

`ಜಿ. ನಾರಾಯಣ, ಕೃಷ್ಣಯ್ಯ, ಚಂದ್ರಶೇಖರ್, ಶಾಮಣ್ಣ ಅವರ ಪ್ರತಿಮೆಯನ್ನು ನಗರದಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು. ಬಸವನಗುಡಿಯಲ್ಲಿ ಶಾಮಣ್ಣ ಅವರ ರಂಗ ಮಂದಿರ ಸ್ಥಾಪನೆಗೂ ಸಹ ಕ್ರಮ ಕೈಗೊಳ್ಳಲಾಗುವುದು~ ಎಂದು ಶಾಸಕ ರವಿ ಸುಬ್ರಹ್ಮಣ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT