ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯದಿಂದ ನಿವೃತ್ತಿ ಇಲ್ಲ: ದೇವೇಗೌಡ

Last Updated 17 ಫೆಬ್ರುವರಿ 2011, 6:50 IST
ಅಕ್ಷರ ಗಾತ್ರ

ಮೈಸೂರು: ‘ನಾನು ಸಕ್ರೀಯ ರಾಜಕಾರಣದಿಂದ ನಿವೃತ್ತಿ ಆಗುವ ಮಾತೇ ಇಲ್ಲ’ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬುಧವಾರ ಖಚಿತವಾಗಿ ಹೇಳಿದರು. ನಗರದ ಕಲಾಮಂದಿರದಲ್ಲಿ ಡಾ.ದೇಜಗೌ ಅಭಿಮಾನಿ ಬಳಗವು ನಾಡೋಜ ಡಾ.ದೇಜಗೌ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ದೇಶದಲ್ಲಿ 5 ಲಕ್ಷ ಹಳ್ಳಿ ಗಳಿದ್ದು, ಇಲ್ಲಿನ ಜನರ ಸ್ಥಿತಿಗತಿ ಇಂದಿಗೂ ಸುಧಾರಿಸಿಲ್ಲ.

ರೈತರು ಇಂದಿಗೂ ಕಷ್ಟದಲ್ಲಿ ಇದ್ದಾರೆ. ಯಾವುದೇ ಹಳ್ಳಿಗೆ ಹೋದರೂ ಸರ್ಕಾರಿ ನೌಕರಿ ಪಡೆದಿರುವ ಐದಾರು ಕುಟುಂಬಗಳನ್ನು ಬಿಟ್ಟರೆ ಉಳಿದವರ ಆರ್ಥಿಕ ಮಟ್ಟ ಉತ್ತಮವಾಗಿಲ್ಲ. ಅವರ ಕಷ್ಟಗಳಿಗೆ ಸ್ಪಂದಿಸುವ ದೃಷ್ಟಿಯಿಂದ ಸಕ್ರೀಯ ರಾಜಕಾರಣದಲ್ಲಿ ಮುಂದುವರೆಯುತ್ತೇನೆ’ ಎಂದು ತಿಳಿಸಿದರು. ‘ಕರ್ನಾಟಕ ನಮ್ಮದು ಎನ್ನುವ ಭಾವನೆ ರಾಜಕಾರಣಿಗಳಿಗೆ ಇನ್ನೂ ಬಂದಿಲ್ಲ. ಇನ್ನೂ ಮುಂಬೈ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ, ಹಳೆ ಮೈಸೂರು ಎನ್ನುವ ಭಾವನೆ ತುಂಬಿಕೊಂಡಿದ್ದೇವೆ. ಸಮಗ್ರ ಕರ್ನಾಟಕದ ಕನಸು ಕಂಡ ಕವಿಗಳು ಆಗಿಹೋಗಿದ್ದಾರೆ. ಚಿನ್ನದ ನಾಡು ಕರ್ನಾಟಕ ಸುದಿನವನ್ನು ಕಾಣಲು ಇನ್ನೂ ಕಷ್ಟಪಡಬೇಕಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಟೀಕೆ ಸಲ್ಲ
‘ಮೈಸೂರು ವಿಶ್ವವಿದ್ಯಾನಿಲಯ ಕೇಂದ್ರ ಸರ್ಕಾರದಿಂದ 100 ಕೋಟಿ ರೂಪಾಯಿ ಅನುದಾನ ಪಡೆಯಲು ಕಾರಣ ದೇಜಗೌ ಅವರ ಪುತ್ರ. ಆದರೆ ಇದನ್ನು ಗುರುತಿಸುವ ಸೌಜನ್ಯ, ವಿನಯ ಇಲ್ಲದ ಕೆಲವರು ಇಲ್ಲ ಸಲ್ಲದ ಆರೋಪ ಮಾಡುತ್ತಿರುವುದು ನೋವನ್ನುಂಟು ಮಾಡಿದೆ’ ಎಂದುಹೇಳಿದರು.
ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ ಮಾತನಾಡಿ, ‘ದೇಶದಲ್ಲಿ ಜಾತೀಯತೆ ಮಿತಿಮೀರಿದೆ. ಜಾತಿ ಹಿಡಿದು ಟೀಕೆ ಮಾಡುವುದು ಸುಲಭ. ಆದರೆ ಜಾತಿಯನ್ನು ಮೀರಿ ಬೆಳೆಯುವುದು ಮುಖ್ಯ. ವೈದ್ಯ, ಶಿಕ್ಷಕ, ವಕೀಲ, ದರ್ಜಿ ಯಾವ ಜಾತಿಗೆ ಸೇರಿದವರು ಎಂದು ನೋಡುವುದಿಲ್ಲ. ಆದರೆ ಉಳಿದ ವಿಚಾರದಲ್ಲಿ ಏತಕ್ಕೆ ಜಾತಿ? ಭಾರತ ಜಾತಿ, ಭ್ರಷ್ಟಾಚಾರದಿಂದಾಗಿ ಹಾಳಾಗುತ್ತಿದೆ’ ಎಂದು ವಿಷಾದಿಸಿದರು. ‘ದೇಜಗೌ ಇಂದು ಈ ಸ್ಥಿತಿಗೆ ಬಂದಿರುವುದೇ ಪವಾಡ. ನಿರಕ್ಷರಸ್ಥ ಕೃಷಿಕ ಕುಟುಂಬದಲ್ಲಿ ಹುಟ್ಟಿ ಬೆಳೆದು ಈಗ ದೊಡ್ಡ ಗೌರವಕ್ಕೆ ಪಾತ್ರರಾಗಿದ್ದಾರೆ.

ನೊಬೆಲ್ ಪ್ರಶಸ್ತಿ ಪಡೆದ ಶೇ. 75 ರಷ್ಟು ಮಂದಿ ಬಡತನ ಹಿನ್ನೆಲೆಯಿಂದ ಬಂದವರೇ ಹೊರತು ಶ್ರೀಮಂತರಲ್ಲ. ದೇಜಗೌ ಕುವೆಂಪು ಅವರ ಮೆಚ್ಚಿನ ಶಿಷ್ಯರಾಗಿದ್ದರು’ ಎಂದು ನೆನಪಿಸಿಕೊಂಡರು.
ಸಮಾರಂಭದಲ್ಲಿ ಪಾಟೀಲ ಪುಟ್ಟಪ್ಪ ಅವರು ಡಾ.ದೇಜಗೌ ಅವರಿಗೆ ಶಾಲು ಹೊದಿಸಿ, ಸರಸ್ವತಿಯ ಬೆಳ್ಳಿ ವಿಗ್ರಹ ಹಾಗೂ ಅಭಿನಂದನಾ ಪತ್ರವನ್ನು ನೀಡಿ ಅಭಿನಂದಿಸಿದರು. ಖ್ಯಾತ ಕವಿ ಎಂ.ಅಕಬರ ಆಲಿ ಹಾಗೂ ಪ್ರಸಿದ್ಧ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಅಭಿನಂದನಾ ಭಾಷಣ ಮಾಡಿದರು. ವಿಧಾನ ಪರಿಷತ್ ಸದಸ್ಯ ವೈ.ಎಸ್.ವಿ.ದತ್ತ ಪ್ರಾಸ್ತಾವಿಕವಾಗಿ ಮಾತನಾಡಿದರು.

ದೇ(ಜ)ಗೌ ಅಭಿಮಾನಿ
ಮೈಸೂರು: ಡಾ.ದೇಜಗೌ ಅಭಿಮಾನಿ ಬಳಗದ ಹೆಸರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರೇ ಅಭಿನಂದನಾ ಸಮಾರಂಭವನ್ನು ಏರ್ಪಡಿಸಿದ್ದರು! ಹೀಗಾಗಿ ಕಲಾಮಂದಿರದಲ್ಲಿ ಶೇ.99 ರಷ್ಟು ಮಂದಿ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಾಗೂ ದೇವೇಗೌಡರ ಅಭಿಮಾನಿಗಳು ತುಂಬಿದ್ದರು. ದೇವೇಗೌಡರ ಪರಮಾಪ್ತ ವೈಎಸ್‌ವಿ ದತ್ತ ಇಡೀ ಕಾರ್ಯಕ್ರಮವನ್ನು ನಿರ್ವಹಿಸಿದರು. ಇವರು ಪ್ರಾಸ್ತಾವಿಕವಾಗಿ ಮಾತನಾಡುವಾಗ ‘ಇದೊಂದು ಸಾಹಿತ್ಯಿಕ, ಸಾಂಸ್ಕೃತಿಕ ಸಮಾರಂಭವಷ್ಟೆ. ಇದರಲ್ಲಿ ರಾಜಕೀಯ ಲವಲೇಷವೂ ಇಲ್ಲ’ ಎಂದು ಒತ್ತಿ ಹೇಳುತ್ತಿದ್ದರು.

ಎಚ್.ಡಿ.ದೇವೇಗೌಡ ಮಾತನಾಡಿ ‘ನೀವೆಲ್ಲ ರಾಜಕೀಯ ಭಾಷಣಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದೀರಿ. ಆದರೆ ನಾನು ಇಂತಹ ಸಮಾರಂಭದಲ್ಲಿ ರಾಜಕೀಯ ಮಾತನಾಡುವುದಿಲ್ಲ.ಹಿರಿಯರಾದ ದೇಜಗೌ ಅವರು ತಮ್ಮ ಜಾನಪದ ಮಹಾ ಸಂಪುಟವನ್ನು ನನ್ನಂತಹ ಸಾಮಾನ್ಯ ರಾಜಕಾರಣಿಗೆ ಅರ್ಪಿಸಿದ್ದಾರೆ. ಏಕೆ ಗೊತ್ತಾಗುತ್ತಿಲ್ಲ. ಆದರೆ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಈ ಕಾರಣಕ್ಕಾಗಿ ಅಭಿನಂದನಾ ಸಮಾರಂಭ ಆಯೋಜಿಸುವ ಮೂಲಕ ಕಿರುಕಾಣಿಕೆಯನ್ನು ಅರ್ಪಿಸುತ್ತಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT