ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕುಮಾರ ಮತ್ತೂ ಎತ್ತರ

Last Updated 25 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮಹೇಶ್‌ಬಾಬು ಈಗ ಎತ್ತರದಲ್ಲಿ ನಿಂತಿದ್ದಾರೆ. ಅವರ ಅಭಿನಯದ ಎರಡು ಚಿತ್ರಗಳು- `ದೂಕುಡು~ ಮತ್ತು `ಬಿಜಿನೆಸ್‌ಮನ್~- ಒಂದರ ಬೆನ್ನಿಗೆ ಮತ್ತೊಂದು ಬಿಡುಗಡೆ ಕಂಡು ಗಳಿಕೆಯಲ್ಲಿ ದಾಖಲೆ ಮಾಡಿವೆ. ಇದರಿಂದ ಮಹೇಶ್ `ರೇಂಜ್~ ಹೊಸ ಎತ್ತರ ಕಂಡಿದೆ.

ದಕ್ಷಿಣ ಭಾರತದ ಅತ್ಯಂತ ಸ್ಫುರದ್ರೂಪಿ ನಟರಲ್ಲಿ ಮಹೇಶ್ ಒಬ್ಬರು. ಆರು ಅಡಿ ಎತ್ತರದ ಚೆಲುವಾಂತ ಚೆನ್ನಿಗ. ಅಭಿಮಾನಿಗಳು ಪ್ರೀತಿಯಿಂದ `ಪ್ರಿನ್ಸ್~ ಅಂತ ಕರೆಯುತ್ತಾರೆ. ನೋಡಲಿಕ್ಕೆ ತುಂಬ `ಸಾಫ್ಟ್~ ಆಗಿ ಕಾಣಿಸುತ್ತಾರೆ. ಸ್ವಭಾವತಃ ಅಷ್ಟೇ ಮೃದು.

ಯಾರೊಂದಿಗೂ ಹೆಚ್ಚಿಗೆ ಬೆರೆಯುವುದಿಲ್ಲ. ಆದರೆ, ತೆರೆ ಮೇಲೆ ಗೂಳಿಯ ಗುಟುರು. ಅವರಿಗೆ ತುರಾಯಿ ತಂದುಕೊಟ್ಟಿರುವುದೆಲ್ಲ ತುರುಸಿನ ಪಾತ್ರಗಳೇ!
ಇದಕ್ಕೆ `ಒಕ್ಕಡು~, `ಪೋಕಿರಿ~, `ದೂಕುಡು~, `ಬಿಜಿನೆಸ್‌ಮನ್~ ಚಿತ್ರಗಳ ಗೆಲುವೇ ನಿದರ್ಶನ. ಕಳೆದ ಶತಮಾನದ ಅಂಚಿನಲ್ಲಿ `ರಾಜಕುಮಾರುಡು~ (1999) ಚಿತ್ರದಿಂದ ನಾಯಕನಾಗಿ ತೆರೆಗೆ ಪರಿಚಯವಾದ ಮಹೇಶ್ ಹೊಸ ಸಹಸ್ರಮಾನದಲ್ಲಿ ತೆಲುಗು ಚಿತ್ರಗಳ ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸಿದವರಲ್ಲಿ ಒಬ್ಬರು.

ನಾಯಕನಾಗಿ 13 ವಸಂತಗಳು ಉರುಳಿವೆ. 17 ಚಿತ್ರಗಳು ತೆರೆಕಂಡಿವೆ. ಅದರಲ್ಲಿ `ಹಿಟ್~ ಅನ್ನಿಸಿಕೊಂಡಿದ್ದು ಐದು ಚಿತ್ರಗಳು. ಗೆದ್ದಿರುವ ಸಿನಿಮಾಗಳಲ್ಲಿ ನಾಲ್ಕರಲ್ಲಿ ನಾಯಕನದು ಆಕ್ರಮಣಶೀಲ ಮನೋಭಾವದ ಪಾತ್ರ. ಇದಕ್ಕೆ ಹೊರತಾಗಿ ನಿಲ್ಲುವ ಚಿತ್ರ `ಮುರಾರಿ~. ಮಹೇಶ್‌ಗೆ ಗೆಲುವಿನ ಮೊದಲ ಸವಿ ಉಣಿಸಿದ್ದು ಕೃಷ್ಣವಂಶಿ ನಿರ್ದೇಶನದ ಮುರಾರಿ (2001). ಆದರೆ, ಅದು ಪಡ್ಡೆಗಳಿಂದ ಸಿಳ್ಳೆ ಹೊರಡಿಸುವ ಚಿತ್ರವಾಗಿರಲಿಲ್ಲ.

ತೆಲುಗುತನದ ಸೊಗಡೇ ಚಿತ್ರವನ್ನು ಗೆಲ್ಲಿಸಿತ್ತು. ಬಳುಕುವ ಬಳ್ಳಿಯಂತಿದ್ದ ಹಿಂದಿಯ ಸೊನಾಲಿ ಬೇಂದ್ರೆಗೆ ಲಂಗ-ದಾವಣಿ ತೊಡಿಸಿ ಆಕೆಯನ್ನು ಅಚ್ಚ `ತೆಲುಗಮ್ಮಾಯಿ~ ಮಾಡಿಬಿಟ್ಟಿದ್ದರು. ಚಿತ್ರಕ್ಕೆ ಒಂದು ರೀತಿ ಮಣ್ಣಿನ ಘಮಲನ್ನು ತಂದಿದ್ದರು ವಂಶಿ.

2002ರಲ್ಲಿ ಬಿಡುಗಡೆಯಾದ `ಟಕ್ಕರಿ ದೊಂಗ~, `ಬಾಬಿ~ ಎರಡೂ ನಿರಾಶೆಗೊಳಿಸಿದವು. ಟಕ್ಕರಿ ದೊಂಗ ಚಿತ್ರದಲ್ಲಿ ಲೀಸಾ ರೇ ಮತ್ತು ಬಿಪಾಷಾ ಬಸು ನಾಯಕಿಯರು. ಕೌಬಾಯ್ ಚಿತ್ರ. ಅದ್ದೂರಿಯಾಗಿತ್ತು. ಆಕರ್ಷಕ ಸೆಟ್ಸ್, ಹಾಲಿವುಡ್ ಶೈಲಿಯಲ್ಲಿ ಅದ್ದಿ ತೆಗೆದರೂ ಚಿತ್ರ ನೋಡುಗರ ಹೃದಯ ಮೀಟಲಿಲ್ಲ.

ಆ ನಿರಾಶೆಯನ್ನು ಗುಣಶೇಖರ್ ನಿರ್ದೇಶನದ `ಒಕ್ಕಡು~ (2003) ನೀಗಿತು. ಮಹೇಶ್ ವೃತ್ತಿಬದುಕಿಗೆ ತಿರುವು ನೀಡಿತು. ಆ್ಯಕ್ಷನ್ ಹೀರೊ ಇಮೇಜ್ ಹೆಗಲೇರಿತು. ಆ ವರ್ಚಸ್ಸು ನೆರಳಿನಂತೆ ಅವರನ್ನು ಹಿಂಬಾಲಿಸುತ್ತಿದೆ. `ಅಜಯ್~ ಹೆಸರಿನಲ್ಲಿ ಅದನ್ನು ಮೆಹರ್ ರಮೇಶ್ ಕನ್ನಡಕ್ಕೆ ತಂದಿದ್ದಾರೆ; ಚಿತ್ರದ ನಾಯಕ ಪುನೀತ್ ರಾಜಕುಮಾರ್.

ಅದೇ ವರ್ಷ ತೆರೆಕಂಡ ತೇಜ ನಿರ್ದೇಶನದ `ನಿಜಂ~ ಗಳಿಕೆಯಲ್ಲಿ ಠುಸ್ ಆಯಿತು. ಏಕೆಂದರೆ ಅದು ಒಕ್ಕಡು `ತೂಕ~ ತೂಗಲಿಲ್ಲ. ಆದರೆ, ಆತನ ಅಭಿನಯದ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿಬಂದವು. ಉತ್ತಮ ನಟನಿಗೆ ಆಂಧ್ರಪ್ರದೇಶ ಸರ್ಕಾರ ಪ್ರತಿವರ್ಷ ನೀಡುವ `ನಂದಿ~ ಪುರಸ್ಕಾರವೂ ಒಲಿಯಿತು. ಆದರೆ ನೋಡುಗರನ್ನು ಒಲಿಸಿಕೊಳ್ಳುವಲ್ಲಿ ಸೋತಿತು.

2004ರಲ್ಲಿ ಬಿಡುಗಡೆಯಾದ `ನಾನಿ~ ಹಾಗೂ ಅದ್ದೂರಿ ಚಿತ್ರ `ಅರ್ಜುನ್~ ಕೂಡಾ ನಿರಾಶೆಯನ್ನೇ ಉಳಿಸಿದವು. 2005ರಲ್ಲಿ ತಿವಿಕ್ರಮ್ ನಿರ್ದೇಶನದಲ್ಲಿ ಒಡಮೂಡಿದ `ಅತಡು~ ಸಾಧಾರಣ ಗೆಲುವು ಕಂಡಿತು. ಪ್ರತಿನಾಯಕನ ಛಾಯೆಯುಳ್ಳ ಈ ಪಾತ್ರವೂ ಮಹೇಶ್‌ಗೆ `ನಂದಿ~ ಪುರಸ್ಕಾರ ತುಂದುಕೊಟ್ಟಿತು.

ನಂತರದ್ದೇ `ಪೋಕಿರಿ~. ಪೂರಿ ಜಗನ್ನಾಥ್ ನಿರ್ದೇಶನದ ಈ ಚಿತ್ರ ಮಹೇಶ್ ಸಿನಿಬದುಕಿಗೆ ಒಂದು ಮೈಲುಗಲ್ಲು. 75 ವರ್ಷಗಳ ತೆಲುಗು ಚಿತ್ರರಂಗದ ಗಳಿಕೆಯ ದಾಖಲೆಗಳನ್ನು ಉಡಾಯಿಸಿತು. ಟ್ರೆಂಡ್ ಸೆಟ್ಟರ್ ಆಯಿತು. ಆ ಚಿತ್ರದ ಡೈಲಾಗುಗಳು ಈಗಲೂ ಪ್ರೇಕ್ಷಕನ ನಾಲಿಗೆ ಮೇಲೆ ನಲಿದಾಡುತ್ತವೆ. `ಒಕ್ಕಸಾರಿ ಡಿಸೈಡಯಿತೇ ನಾ ಮಾಟ ನೇನೇ ವಿನನು~ (ಒಮ್ಮೆ ನಿರ್ಧರಿಸಿದರೆ ನನ್ನ ಮಾತನ್ನು ನಾನೇ ಕೇಳುವುದಿಲ್ಲ) ಎಂಬಂತಹ ಮೊನಚು ಮಾತುಗಳನ್ನು ಮಹೇಶ್ ಒಪ್ಪಿಸುವ ರೀತಿ ಇದೆಯಲ್ಲ ಅದರ ಚೆಂದವೇ ಚೆಂದ.

ನಾಯಕನ ಬಾಯಿಂದ ಮಾತು ತುಪಾಕಿಯಿಂದ ಗುಂಡು ತೂರಿಬಂದಂತೆ ಹೊರಡುತ್ತಲೇ ಥಿಯೇಟರಿನ ನಾಲ್ಕೂ ಮೂಲೆಗಳಿಂದ ಸಿಳ್ಳೆ, ಕೇಕೆಯ ಕಹಳೆ ಮೊಳಗುತ್ತದೆ! ಹಾಸ್ಯ ಸನ್ನಿವೇಶಗಳನ್ನು ಅಷ್ಟೇ ಸಹಜವಾಗಿ ನಿಭಾಯಿಸಬಲ್ಲರು.

ಪೋಕಿರಿಯ ದೊಡ್ಡ ಗೆಲುವು ಕಂಡ ನಂತರ ಮಹೇಶ್ ಬಗೆಗಿನ ನಿರೀಕ್ಷೆಗಳು ಮುಗಿಲು ಮುಟ್ಟಿದವು. ತೆಲುಗಿನ ನಂಬರ್ ಒನ್ ನಟ ಎಂದು ಹೇಳಿಕೊಂಡು ಅಭಿಮಾನಿಗಳು ಸಂಭ್ರಮಿಸಿದರು. ಆದರೆ, ಆ ಬಳಿಕ ಬಿಡುಗಡೆಯಾದ `ಸೈನಿಕುಡು~, `ಅತಿಥಿ~ ಚಿತ್ರಗಳು ನಿರೀಕ್ಷೆಯ ಭಾರಕ್ಕೆ ಕುಸಿದವು. ಮಹೇಶ್ ಅಭಿನಯದಿಂದ ಸ್ವಲ್ಪ ದಿನ ಬಿಡುವು ಪಡೆದರು. ಅವರ ಮುಂದಿನ ಚಿತ್ರ `ಖಲೇಜಾ~ ನೋಡಬೇಕಾದರೆ ಮೂರು ವರ್ಷಗಳೇ ಎದುರು ನೋಡಬೇಕಾಯಿತು.
 
ಅದಾದರೂ ಗೆಲುವು ತಂದಿತೇ? ಇಲ್ಲ! ಗೆಲುವು ಎಂಬುದು ಐದು ವರ್ಷಗಳ ಮಟ್ಟಿಗೆ ಮರೀಚಿಕೆ ಆಗಿತ್ತು. ಗೆಲುವು ಅನಿವಾರ್ಯ ಅನಿಸಿದ್ದಾಗ ಶ್ರೀನು ವೈಟ್ಲ ನಿರ್ದೇಶನದ `ದೂಕುಡು~ ಥಿಯೇಟರುಗಳಿಗೆ ನುಗ್ಗಿತು. `ಮಗಧೀರ~, `ಪೋಕಿರಿ~ ಹೆಸರಿನಲ್ಲಿದ್ದ ದಾಖಲೆಗಳನ್ನೆಲ್ಲ ಅಳಿಸಿಹಾಕಿತು. ಗಳಿಕೆಯ ಮೊತ್ತವನ್ನು 100 ಕೋಟಿ ರೂ. ಗಡಿ ದಾಟಿಸಿದ ಹಿರಿಮೆಗೆ ಒಳಗಾಯಿತು.

ಇದರ ಬೆನ್ನಿಗೇ ಪೂರಿ ಜಗನ್ನಾಥ್ ನಿರ್ದೇಶನದ `ಬಿಜಿನೆಸ್‌ಮನ್~ ಸಂಕ್ರಾಂತಿಗೆ ಬಿಡುಗಡೆಯಾಗಿ ಹಿಟ್ ಚಿತ್ರಗಳ ಪಟ್ಟಿಗೆ ಸೇರಿತು. ತೆಲುಗು ಚಿತ್ರರಂಗದಲ್ಲಿ ಇಲ್ಲಿಯವರೆಗೂ ಅತ್ಯಧಿಕ ಥಿಯೇಟರುಗಳಲ್ಲಿ ತೆರೆಕಂಡ ಚಿತ್ರ ಇದು. ಹೈದರಾಬಾದ್ ನಗರ ಮತ್ತು ಹೊರವಲಯದಲ್ಲಿಯೇ 100 ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆ ಆಗಿದೆ. ಒಟ್ಟು 2,000 ಥಿಯೇಟರುಗಳಲ್ಲಿ ಬಿಡುಗಡೆ ಕಂಡು ಮತ್ತೊಂದು ದಾಖಲೆ ಬರೆದಿದೆ.

ಏಳುಬೀಳುಗಳಿಂದ ಕೂಡಿದ ಮಹೇಶ್‌ರ ವೃತ್ತಿಜೀವನ ಈಗ ಉತ್ತುಂಗ ಮುಟ್ಟಿದೆ. ಆದರೆ, ಪಾತ್ರಗಳ ಆಯ್ಕೆಯಲ್ಲಿ ವೈವಿಧ್ಯದ ಕೊರತೆ ಇದೆ ಎಂಬುದು ಅವರ ಚಿತ್ರಗಳನ್ನು ಗಮನಿಸಿದ ಯಾರಿಗಾದರೂ ಅನ್ನಿಸುತ್ತದೆ. ಚಿತ್ರಗಳು `ಸ್ಟೈಲಿಷ್~ ಆಗಿದ್ದರೂ ಏಕೋ ಏಕತಾನತೆಯ ಸುಳಿಗೆ ಸಿಲುಕಿದಂತೆ ಭಾಸವಾಗುತ್ತದೆ. ವರ್ಚಸ್ಸು ಮತ್ತು ಗೆಲುವು ಅವರನ್ನು ಇಂತಹದೊಂದು ಚೌಕಟ್ಟಿಗೆ ಬಂಧಿಸಿದಂತಿವೆ.

ಈ ಸೂಕ್ಷ್ಮ ಅರಿತೋ ಏನೋ ಮಹೇಶ್ `ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು~ ಚಿತ್ರದಲ್ಲಿ ತೆಲುಗಿನ ಮತ್ತೊಬ್ಬ ಪ್ರಮುಖ ನಟ ವೆಂಕಟೇಶ್ ಜತೆ ನಟಿಸುತ್ತಿದ್ದಾರೆ. ದಿಲ್ ರಾಜು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕುಟುಂಬದ ಸದಸ್ಯರೆಲ್ಲ ಒಟ್ಟಿಗೆ ಕುಳಿತು ನೋಡುವಂತಹ ಚಿತ್ರ ಮಾಡುವ ಮೂಲಕ ಏಕತಾನತೆ ಮುರಿಯುವ ಮತ್ತು ಮಹಿಳಾ ಪ್ರೇಕ್ಷಕರಿಗೆ ಹತ್ತಿರವಾಗುವ ಪ್ರಯತ್ನ ಇದಾಗಿರಬಹುದು.  


ಬಣ್ಣದ ನಂಟು

1975ರಲ್ಲಿ ಜನಿಸಿದ ಮಹೇಶ್ ಸಿನಿಮಾ ಕುಟುಂಬದ ಹಿನ್ನೆಲೆಯಿಂದಲೇ ಬಂದವರು. ಘಟ್ಟಮನೇನಿ ಕೃಷ್ಣ ಅವರ ಸಿನಿಮಾ ವಾರಸುದಾರ. 1965ರಲ್ಲಿ ತೆರೆಕಂಡ `ತೇನೆಮನಸುಲು~ ಚಿತ್ರದಿಂದ ಕನಸಿನ ಲೋಕಕ್ಕೆ ಕಾಲಿಟ್ಟ ಕೃಷ್ಣ ಅವರು 340ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕೃಷ್ಣ ಮತ್ತು ಇಂದಿರಾ ದೇವಿ ದಂಪತಿ ಪುತ್ರ ಮಹೇಶ್.

ಇವರ ಅಣ್ಣ ರಮೇಶ್ ಕೂಡ ಹಲವು ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಅಕ್ಕ ಮಂಜುಳಾ ನಟಿಯಾಗಿ, ನಿರ್ಮಾಪಕಿಯಾಗಿ ತೆಲುಗು ಚಿತ್ರಪ್ರೇಮಿಗಳಿಗೆ ಪರಿಚಿತ. ಸಾಹಸಕ್ಕೆ ಹೆಸರಾದ ಕೃಷ್ಣ, ನಟನೆಯ ಜತೆಗೆ `ಪದ್ಮಾಲಯ ಸ್ಟುಡಿಯೊ~ ಬ್ಯಾನರ್‌ನಡಿ ಹಲವು ಚಿತ್ರಗಳನ್ನು ನಿರ್ಮಿಸಿದ್ದಾರೆ.

ತಂದೆ ನಟಿಸಿದ ಚಿತ್ರಗಳಲ್ಲಿ ಬಾಲನಟನಾಗಿ (9 ಚಿತ್ರಗಳಲ್ಲಿ) ಕಾಣಿಸಿಕೊಂಡ ಮಹೇಶ್, ಚೆನ್ನೈನ ಲೋಯೊಲಾ ಕಾಲೇಜ್ ವಿದ್ಯಾರ್ಥಿ. ಬಿ.ಕಾಂ. ಪದವೀಧರ. `ಫೆಮಿನಾ ಮಿಸ್ ಇಂಡಿಯಾ~ ಸುಂದರಿಯಾಗಿ ಆಯ್ಕೆಯಾಗಿದ್ದ ನಮ್ರತಾ ಶಿರೋಡ್ಕರ್ ಅವರನ್ನು 2005ರಲ್ಲಿ ವಿವಾಹವಾದರು.

ಮಹೇಶ್ ಅಭಿನಯದ `ವಂಶಿ~ ಚಿತ್ರದಲ್ಲಿ ನಮ್ರತಾ ನಾಯಕಿಯಾಗಿ ನಟಿಸಿದ್ದಾರೆ. ಇದರೊಂದಿಗೆ ಹಲವು ಹಿಂದಿ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಈ ದಂಪತಿಗೆ ಆರು ವರ್ಷದ ಮಗ ಇದ್ದಾನೆ. ಹೆಸರು ಗೌತಮ್‌ಕೃಷ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT