ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಗೋಪುರ ಸಿದ್ಧಿವಿನಾಯಕ

Last Updated 2 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ರಾಜಗೋಪುರದಿಂದ ವಿರಾಜಿಸುವ ಗಣಪತಿಯ ಸನ್ನಿಧಾನ ಬಹಳ ವಿರಳ. ಇಂಥದ್ದೊಂದು ಅಪೂರ್ವ ದೇಗುಲಗಳ ಪೈಕಿ ತನ್ನ ಸೌಂದರ್ಯದಿಂದ ಯಾತ್ರಿಕರನ್ನು ಕೈಬೀಸಿ ಕರೆಯುತ್ತಿದೆ ಶಿವಮೊಗ್ಗ ಜಿಲ್ಲೆ ಹೊಸನಗರದ ವರಸಿದ್ಧಿವಿನಾಯಕ.

ಭಕ್ತರೊಬ್ಬರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ 100 ಅಡಿ ಎತ್ತರದ ರಾಜಗೋಪುರ ನಿರ್ಮಿಸಿ ಹರಕೆ ಸಮರ್ಪಿಸಿದರು. ರಾಜ್ಯ ಹೆದ್ದಾರಿಯಲ್ಲಿನ ಈ ರಾಜಗೋಪುರದ ವೈಭವದ ನಡುವೆ ಭಕ್ತರನ್ನು ಹರಸುತ್ತಿದ್ದಾನೆ ಇಲ್ಲಿಯ ವಿನಾಯಕ.

ಅಗಸ್ತ್ಯ ಮಹರ್ಷಿಗಳು ಈ ಸ್ಥಳದಲ್ಲಿ ಬಹುಕಾಲ ನೆಲೆನಿಂತು ಇಲ್ಲಿರುವ ಪುಷ್ಕರಣಿಯಲ್ಲಿ ವರಸಿದ್ಧಿವಿನಾಯಕ ಸ್ವಾಮಿಯ ವಿಗ್ರಹವನ್ನಿಟ್ಟು ಆರಾಧಿಸಿದ್ದರು ಎಂಬ ಐತಿಹ್ಯವಿದೆ. ಶ್ರೀರಾಮಚಂದ್ರನು ಸೀತೆಯನ್ನು ಕರೆತರಲು ಲಂಕೆಗೆ ಹೋಗುವ ಮಾರ್ಗದಲ್ಲಿ ಇಲ್ಲಿಗೆ ಬಂದು ಅಗಸ್ತ್ಯ ಮಹರ್ಷಿಗಳ ದರ್ಶನ ಪಡೆದು ಇಲ್ಲಿನ ವಿನಾಯಕನನ್ನು ಪೂಜಿಸಿದ್ದ. ಮರಳಿ ಬರುವಾಗಲೂ ಪೂಜೆ ಮಾಡುವಂತೆ ಮಹರ್ಷಿಗಳು ರಾಮನಿಗೆ ಆಜ್ಞೆ ಇತ್ತಿದ್ದರು.

ರಾವಣನನ್ನು ಸಂಹರಿಸಿ ಸೀತೆಯೊಂದಿಗೆ ಅಯೋಧ್ಯೆಗೆ ಹಿಂತಿರುಗುವ ಸಂತಸದಲ್ಲಿ ಇದೇ ದಾರಿಯಲ್ಲಿ ಹಿಂತಿರುಗುತ್ತಿದ್ದ ಶ್ರೀರಾಮ ಅಗಸ್ತ್ಯರ ಮಾತನ್ನು ಮರೆತ. ಮುಂದಕ್ಕೆ ಪಯಣಿಸುತ್ತಿದ್ದಂತೆ ಶ್ರೀರಾಮ ಸಂಚರಿಸುತ್ತಿದ್ದ ಪುಷ್ಪಕ ವಿಮಾನಕ್ಕೆ ಬೃಹದಾಕಾರದ ಬೆಟ್ಟ(ಗಿರಿ)ಅಡ್ಡ ನಿಂತಿತು. ಆಗಾಗ ಶ್ರೀರಾಮನು ಕಿಂ ಕಾರಣಂ ಗಿರಿಃ (ಈ ಬೆಟ್ಟ ಅಡ್ಡವೇಕೆ) ಎಂದ. ಆಗ ಜೊತೆಗಿದ್ದ ಲಕ್ಷ್ಮಣ, ಅಗಸ್ತ್ಯರ ಮಾತನ್ನು ನೆನಪಿಸಿ ಸಿದ್ಧಿವಿನಾಯಕನನ್ನು ಪೂಜಿಸಲು ತಿಳಿಸಿದನಂತೆ. ನಂತರ ಶ್ರೀರಾಮ ಸೀತಾ ಸಹಿತನಾಗಿ ಬಂದು ಈ ದೇವರಿಗೆ ಪೂಜೆ ಸಲ್ಲಿಸಿದ.

ಇಲ್ಲಿಂದ 2 ಕಿ.ಮೀ. ದೂರದಲ್ಲಿ ಸ್ಥಳದಲ್ಲಿ ಶ್ರೀರಾಮ ತಂಗಿದ ಸ್ಥಳವೀಗ ಶ್ರೀರಾಮಚಂದ್ರಾಪುರ. ಶ್ರೀರಾಮನಿಂದ `ಕಿಂ ಕಾರಣಂ ಗಿರಿಃ' ಎಂಬ ಉದ್ಗಾರದಿಂದ ಈ ಸ್ಥಳಕ್ಕೆ ಕಾರಣಗಿರಿ ಎಂಬ ಹೆಸರು ಉಳಿದುಕೊಂಡಿತು. ಪ್ರತಿ ವರ್ಷ ರಾಮ ನವಮಿಯಂದು ರಾಮಚಂದ್ರಾಪುರ ಮಠದಲ್ಲಿ ಮಹಾರಥೋತ್ಸವ ಜರುಗುತ್ತದೆ. ಇದು ಶ್ರೀರಾಮನಿಗೂ ಇಲ್ಲಿನ ವಿನಾಯಕನಿಗೂ ಇರುವ ಸಂಬಂಧದ ಕುರುಹಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT