ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣ: ಅಸ್ಸಾಂಜ್‌ಗೆ ಈಕ್ವೆಡಾರ್ ಆಶ್ರಯ

Last Updated 16 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸ್ಸಾಂಜ್ ಅವರಿಗೆ ಮಾನವೀಯ ನೆಲೆಯಲ್ಲಿ ರಾಜಕೀಯ ಆಶ್ರಯ ನೀಡುವುದಾಗಿ ಈಕ್ವೆಡಾರ್‌ ಗುರುವಾರ ತಿಳಿಸಿದೆ.

ಈ ಬೆಳವಣಿಗೆಯಿಂದಾಗಿ ಲಂಡನ್ ಮತ್ತು ಈಕ್ವೆಡಾರ್ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದೆ. ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸ್ವೀಡನ್‌ಗೆ ಹಸ್ತಾಂತರಗೊಳ್ಳುವುದನ್ನು ತಪ್ಪಿಸಿಕೊಳ್ಳಲು ಅಸ್ಸಾಂಜ್, ಜೂನ್ 19ರಿಂದ ಇಲ್ಲಿನ ಈಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

`ಅಸ್ಸಾಂಜ್ ಅವರನ್ನು ಸ್ವೀಡನ್‌ನಿಂದ ಅಮೆರಿಕಕ್ಕೆ ಹಸ್ತಾಂತರ ಮಾಡುವ ಸಾಧ್ಯತೆ ಇದೆ. ಹಾಗಾಗಿ ಅವರಿಗೆ ಇಲ್ಲಿ ಆಶ್ರಯ ನೀಡಲು ಮುಂದಾಗಿದ್ದೇವೆ~ ಎಂದು ಈಕ್ವೆಡಾರ್ ವಿದೇಶಾಂಗ ಸಚಿವ ರಿಕಾರ್ಡೊ ಪ್ಯಾಟಿನೊ ತಿಳಿಸಿದ್ದಾರೆ.

`ಈಕ್ವೆಡಾರ್‌ನ ರಾಯಭಾರ ಕಚೇರಿಯೊಳಗೆ ನುಗ್ಗಿ ಅಸ್ಸಾಂಜ್ ಅವರನ್ನು ಬಂಧಿಸುವ ಅಧಿಕಾರ ತನಗಿದೆ~ ಎಂದು ಈ ಮೊದಲು ಬ್ರಿಟನ್ ಬೆದರಿಕೆ ಹಾಕಿತ್ತು.

`ಅಸ್ಸಾಂಜ್‌ಗೆ ರಾಜಕೀಯ ಆಶ್ರಯ ಸಿಕ್ಕಿರುವುದರಿಂದ ನಮ್ಮ ನಿಲುವೇನೂ ಬದಲಾಗುವುದಿಲ್ಲ. ಕಾನೂನು ಪ್ರಕಾರ ನಾವು ಅವರನ್ನು ಅನಿವಾರ್ಯವಾಗಿ ಹಸ್ತಾಂತರ ಮಾಡಲೇಬೇಕಾಗಿದೆ~ ಎಂದು ವಿದೇಶಾಂಗ ಕಚೇರಿ ವಕ್ತಾರೆ ಅಭಿಪ್ರಾಯಪಟ್ಟಿದ್ದಾರೆ.

ಬಂಧನ: ಈಕ್ವೆಡಾರ್ ರಾಯಭಾರಿ ಕಚೇರಿ ಮುಂಭಾಗದಲ್ಲಿ ಜಮಾಯಿಸಿದ್ದ ಅಸ್ಸಾಂಜ್ ಬೆಂಬಲಿಗರು ಘೋಷಣೆಗಳನ್ನು ಕೂಗಿದರು. ಪೊಲೀಸರೊಂದಿಗೆ ನಡೆದ ಘರ್ಷಣೆಯಲ್ಲಿ ಮೂವರನ್ನು ಬಂಧಿಸಲಾಯಿತು.

ವಿಕಿಲೀಕ್ಸ್ ಖಂಡನೆ: ಅಸ್ಸಾಂಜ್ ಅವರನ್ನು ಬಂಧಿಸುವುದಾಗಿ ಬ್ರಿಟನ್ ಒಡ್ಡಿದ ಬೆದರಿಕೆಯನ್ನು ವಿಕಿಲೀಕ್ಸ್ ಖಂಡಿಸಿದೆ.

ಹಸ್ತಾಂತರ ಅನಿವಾರ್ಯ
ಲಂಡನ್ (ಪಿಟಿಐ):
  `ಅಸ್ಸಾಂಜ್ ಅವರಿಗೆ ಈಕ್ವೆಡಾರ್ ಆಶ್ರಯ ನೀಡಿದರೂ ನಾವು ಕಾನೂನು ಪ್ರಕಾರ ಅವರನ್ನು ಸ್ವೀಡನ್‌ಗೆ ಹಸ್ತಾಂತರ ಮಾಡುವುದು ಅನಿವಾರ್ಯವಾಗಿದೆ~ ಎಂದು ಅಧಿಕಾರಿಗಳು ಹೇಳಿದ್ದಾರೆ.

`ಈಕ್ವೆಡಾರ್ ನಿಲುವಿನಿಂದ  ತೀವ್ರ ನಿರಾಸೆಯಾಗಿದೆ~ ಎಂದು ಬ್ರಿಟನ್ ವಿದೇಶಾಂಗ ಇಲಾಖೆ ಟ್ವಿಟರ್‌ನಲ್ಲಿ ತಿಳಿಸಿದೆ. `ಹಸ್ತಾಂತರ ಕಾಯ್ದೆಗೆ ಅನುಗುಣವಾಗಿ ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದಕ್ಕೆ ನಾವು ಬದ್ಧವಾಗಿದ್ದೇವೆ. ಅದರಂತೆಯೇ ಮುಂದುವರಿಯಲಿದ್ದೇವೆ~ ಎಂದು ಹೇಳಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT