ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ತಾನ ಮಾದರಿ ಅನುಸರಿಸಿ: ಸುರೇಶ್‌ಕುಮಾರ್‌

ತಂಬಾಕು ಉತ್ಪನ್ನಗಳ ಮೇಲೆ ತೆರಿಗೆ
Last Updated 7 ಜನವರಿ 2014, 19:44 IST
ಅಕ್ಷರ ಗಾತ್ರ

ಬೆಂಗಳೂರು: ‘ಎಲ್ಲ ರೀತಿಯ ತಂಬಾಕು ಉತ್ಪನ್ನಗಳ ಮೇಲೆ ರಾಜಸ್ತಾನದ ಮಾದರಿಯಂತೆ ಶೇ 65 ರಷ್ಟು ಮೌಲ್ಯವರ್ಧಿತ ತೆರಿಗೆಯನ್ನು ವಿಧಿಸಬೇಕು’ ಎಂದು ಮಾಜಿ ಸಚಿವ ಎಸ್‌. ಸುರೇಶ್‌ ಕುಮಾರ್‌ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಸಾರ್ವಜನಿಕ ಆರೋಗ್ಯ ಸಂಸ್ಥೆಯು ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜಸ್ತಾನದಲ್ಲಿ ತಂಬಾಕು ಉತ್ಪನ್ನಗಳಿಗೆ ಹೆಚ್ಚಿನ ತೆರಿಗೆ ವಿಧಿಸುವ ಮೂಲಕ ದೇಶದಲ್ಲಿ ಮಾದರಿ ರಾಜ್ಯವಾಗಿದೆ.

2010 ರಿಂದ ಸತತವಾಗಿ ತೆರಿಗೆಯನ್ನು ಹೆಚ್ಚಳ ಮಾಡಿದೆ. 2010–11 ರಲ್ಲಿ ಶೇ 20, 2011–12 ರಲ್ಲಿ ಶೇ 40, 2012–13 ರಲ್ಲಿ ಶೇ 50, 2013–14 ರಲ್ಲಿ ಶೇ 65 ತೆರಿಗೆಯನ್ನು ವಿಧಿಸಿದೆ. ಇದರಿಂದ ₨ 900 ಕೋಟಿಗಳಷ್ಟು ಆದಾಯ ಬಂದಿದೆ. ರಾಜ್ಯದಲ್ಲಿ ತಂಬಾಕು ಸೇವನೆ ಪ್ರಮಾಣವೂ ಶೇ 17 ಕ್ಕೆ ಇಳಿದಿದೆ’ ಎಂದು ವಿವರಿಸಿದರು.

‘ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚಿಸಿ ತಂಬಾಕು ಸೇವನೆಯನ್ನು ತಗ್ಗಿಸಬಹುದು. ಆ ಮೂಲಕ ಸಹಸ್ರಾರು ಜೀವಗಳನ್ನು ಉಳಿಸಬಹುದಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತೆರಿಗೆ ಹೆಚ್ಚಿಸುವ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದರು.

‘ಇತರೆ ರಾಜ್ಯಗಳಿಗೆ ಹೋಲಿಸಿದರೆ, ರಾಜ್ಯದಲ್ಲಿ ತಂಬಾಕು ಉತ್ಪನ್ನಗಳ ಮೇಲೆ ಅತ್ಯಂತ ಕಡಿಮೆ ತೆರಿಗೆ ವಿಧಿಸಲಾಗುತ್ತಿದೆ. ಕೇರಳ, ತಮಿಳುನಾಡು, ಆಂಧ್ರ­ಪ್ರದೇಶ­ದಲ್ಲಿ ಶೇ 20 ಮತ್ತು ಮಹಾರಾಷ್ಟ್ರದಲ್ಲಿ ಶೇ 25 ರಷ್ಟು ತೆರಿಗೆ ಸಿಗರೇಟ್‌ ಮೇಲೆ ಹಾಕಲಾಗು­ತ್ತಿದೆ. ಆದರೆ, ಕರ್ನಾಟಕದಲ್ಲಿ ಸಿಗರೇಟಿನ ಮೇಲೆ ಶೇ 17 ರಷ್ಟು ಮಾತ್ರ ತೆರಿಗೆಯಿದೆ. ಬೀಡಿಗೆ ಯಾವುದೇ ರೀತಿಯ ತೆರಿಗೆಯನ್ನು ವಿಧಿಸಿಲ್ಲ’ ಎಂದರು.

‘ವಿಶ್ವಮಟ್ಟಕ್ಕೆ ಹೋಲಿಸಿದರೆ ಭಾರತದಲ್ಲಿಯೇ ಅತಿ ಹೆಚ್ಚು ಬಾಯಿ ಕ್ಯಾನ್ಸರ್‌ ರೋಗಿಗಳಿದ್ದಾರೆ. ಪ್ರತಿವರ್ಷ 75 ಸಾವಿರದಿಂದ 80 ಸಾವಿರ ಮಂದಿಯಲ್ಲಿ ಹೊಸದಾಗಿ ಬಾಯಿ ಕ್ಯಾನ್ಸರ್‌ ಪತ್ತೆಯಾಗುತ್ತಿದೆ. ರಾಜ್ಯದಲ್ಲಿ 1.28 ಕೋಟಿ ಜನ ತಂಬಾಕು ಸೇವನೆಯಲ್ಲಿ ತೊಡಗಿದ್ದಾರೆ. 88 ಲಕ್ಷ ಮಂದಿ (ಶೇ 19) ರಷ್ಟು ಜಗಿಯುವ ತಂಬಾಕು ಸೇವಿಸುತ್ತಿದ್ದಾರೆ. 51 ಲಕ್ಷ ಮಂದಿ ಅವಧಿಗೆ ಮುನ್ನವೇ ಸಾಯುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

ಶಾಸಕ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಮಾತನಾಡಿ, ‘ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚಿನ ತೆರಿಗೆಯನ್ನು ವಿಧಿಸಿದರೆ, ಬಳಕೆಯು ಕಡಿಮೆಯಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದರೆ, ಪ್ರಕರಣಗಳನ್ನು ದಾಖಲಿಸಬೇಕು ಎಂಬ ನಿಯಮವಿದೆ. ಆದರೆ, ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ’ ಎಂದರು.

‘ತಂಬಾಕು ಉತ್ಪನ್ನಗಳ ಸೇವನೆಯಿಂದಾಗುವ ಪರಿಣಾಮಗಳು ಅನೇಕ ಕುಟುಂಬಗಳನ್ನು ಸಂಕಷ್ಟಕ್ಕೆ ಈಡುಮಾಡಿವೆ. ಸರ್ಕಾರವು ಪರಿಣಾಮಕಾರಿಯಾದ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

ಲೋಕಸತ್ತಾ ಪಕ್ಷದ ರಾಜ್ಯಾಧ್ಯಕ್ಷ ಅಶ್ವಿನಿ ಮಹೇಶ್‌, ‘ತೆರಿಗೆ ಹೆಚ್ಚಳದಿಂದ ಲಕ್ಷಾಂತರ ಜೀವಗಳು ಉಳಿಯುತ್ತವೆ. ಸರ್ಕಾರದ ಆದಾಯವೂ ಹೆಚ್ಚುತ್ತದೆ. ಇದನ್ನು ಬೇರೆ ಬೇರೆ ಅಭಿವೃದ್ಧಿ ಯೋಜನೆಗಳಿಗೆ ಬಳಸಿಕೊಳ್ಳಬಹುದು’ ಎಂದು ಸಲಹೆ ನೀಡಿದರು.

‘ತಂಬಾಕು ಉತ್ಪನ್ನಗಳ ಸೇವನೆಯು ಒಂದು ಸಾಮಾಜಿಕ ಜಾಡ್ಯವಾಗಿದೆ. ಇದನ್ನು ಪರಿಹರಿಸಲು ಎಲ್ಲ ಪಕ್ಷಗಳು ಒಟ್ಟಾಗಿ ಕೈ ಜೋಡಿಸಿ ಇದನ್ನು ವಿರೋಧಿಸಬೇಕು’ ಎಂದರು.

ಯುವಕರೇ ಹೆಚ್ಚು
ತಂಬಾಕು ಉತ್ಪನ್ನಗಳ ಸೇವನೆಯಿಂದ ಬರುವ ಬಾಯಿ ಕ್ಯಾನ್ಸರ್‌ ಚಿಕಿತ್ಸೆಗೆ ಹಲವರು ಬರುತ್ತಾರೆ. ಮೊದಲು 55 ರಿಂದ 60 ವರ್ಷದವರು ಚಿಕಿತ್ಸೆಗೆ ಬರುತ್ತಿದ್ದರು. ಆದರೆ, ಈಗ ತಂಬಾಕು ಸೇವನೆಯಲ್ಲಿ 20 ರಿಂದ 25 ವರ್ಷದೊಳಗಿನ ಯುವಕರು ತೊಡಗಿದ್ದಾರೆ. ಇಂದು ಅವರೇ ಚಿಕಿತ್ಸೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇದು ನಿಜಕ್ಕೂ ಆತಂಕಪಡುವ ವಿಷಯವಾಗಿದೆ.

– ಡಾ.ವಿಶಾಲ್‌ರಾವ್‌, ಕ್ಯಾನ್ಸರ್‌ ತಜ್ಞ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT