ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ತಾನ ರಾಯಲ್ಸ್ ಶುಭಾರಂಭ

Last Updated 6 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಾಹುಲ್ ದ್ರಾವಿಡ್ ಗಳಿಸಿದ ಆಕರ್ಷಕ ಆರ್ಧಶತಕ (65) ಮತ್ತು ಕೆವೊನ್ ಕೂಪರ್ ಅಂತಿಮ ಓವರ್‌ನಲ್ಲಿ ತೋರಿದ ಸಮರ್ಥ ಬೌಲಿಂಗ್ ನೆರವಿನಿಂದ ರಾಜಸ್ತಾನ ರಾಯಲ್ಸ್ ತಂಡ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ದ್ರಾವಿಡ್ ಬಳಗಕ್ಕೆ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಐದು ರನ್‌ಗಳ ರೋಚಕ ಜಯ ಲಭಿಸಿತು. ಮಾಹೇಲ ಜಯವರ್ಧನೆ ನೇತೃತ್ವದ ಡೆಲ್ಲಿಗೆ ಎದುರಾದ ಸತತ ಎರಡನೇ ಸೋಲು ಇದು. ಈ ತಂಡ ಟೂರ್ನಿಯ ಮೊದಲ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಎದುರು ಮುಗ್ಗರಿಸಿತ್ತು.

ಮೊದಲು ಬ್ಯಾಟ್ ಮಾಡಿದ ರಾಯಲ್ಸ್ ನಿಗದಿತ ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 165 ರನ್ ಪೇರಿಸಿತು. ಈ ಮೊತ್ತವನ್ನು ದಿಟ್ಟವಾಗಿ ಬೆನ್ನಟ್ಟಿದ ಡೆವಿಲ್ಸ್ ತಂಡ ಕೊನೆಯ ಓವರ್‌ಗಳಲ್ಲಿ ಎಡವಿದ ಕಾರಣ ಸೋಲು ಅನುಭವಿಸಿತು. 20 ಓವರ್‌ಗಳಲ್ಲಿ ಆರು ವಿಕೆಟ್‌ಗೆ 160 ರನ್ ಗಳಿಸಲಷ್ಟೇ ಶಕ್ತವಾಯಿತು.

ಡೇವಿಡ್ ವಾರ್ನರ್ (77 ರನ್, 56 ಎಸೆತ, 9 ಬೌಂ, 1 ಸಿಕ್ಸರ್) ನಡೆಸಿದ ಹೋರಾಟಕ್ಕೆ ತಕ್ಕ ಫಲ ಲಭಿಸಲಿಲ್ಲ. ವಾರ್ನರ್ ಮತ್ತು ಉನ್ಮುಕ್ತ್ ಚಾಂದ್ (23) ಮೊದಲ ವಿಕೆಟ್‌ಗೆ 39 ರನ್ ಸೇರಿಸಿದರು. 11ನೇ ಓವರ್‌ನಲ್ಲಿ ಒಂದು ವಿಕೆಟ್‌ಗೆ 82 ರನ್ ಗಳಿಸಿದ್ದ ತಂಡ ಸುಲಭ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ ರಾಯಲ್ಸ್ ಬೌಲರ್‌ಗಳು ಬಳಿಕ ಪಂದ್ಯದ ಮೇಲೆ ಹಿಡಿತ ಸಾಧಿಸಿದರು.

ಕೊನೆಯ ಮೂರು ಓವರ್‌ಗಳಲ್ಲಿ ಡೆಲ್ಲಿಗೆ 22 ರನ್‌ಗಳ ಅವಶ್ಯಕತೆಯಿತ್ತು. 19ನೇ ಓವರ್‌ನ ಮೂರನೇ ಎಸೆತದಲ್ಲಿ ಡೇವಿಡ್ ವಾರ್ನರ್ ರನೌಟ್ ಆದದ್ದು ಪಂದ್ಯದ ಗತಿಯನ್ನೇ ಬದಲಿಸಿತು.

ಅಂತಿಮ ಓವರ್‌ನಲ್ಲಿ ತಂಡಕ್ಕೆ 9 ರನ್‌ಗಳು ಬೇಕಿದ್ದವು. ಕೊನೆಯ ಓವರ್ ಬೌಲ್ ಮಾಡಿದ ಕೆವೊನ್ ಕೂಪರ್ ಕೇವಲ ಮೂರು ರನ್ ನೀಡಿ ಎರಡು ವಿಕೆಟ್‌ಗಳನ್ನು ಪಡೆದುಕೊಂಡರು. ಕೂಪರ್ ಒಟ್ಟು 30 ರನ್‌ಗಳಿಗೆ ಮೂರು ವಿಕೆಟ್ ಪಡೆದು ಮಿಂಚಿದರು.
ಮಿಂಚು: ರಾಯಲ್ಸ್ ತಂಡದ ಉತ್ತಮ ಮೊತ್ತಕ್ಕೆ ಕಾರಣರಾದದ್ದು ಕರ್ನಾಟಕದ ದ್ರಾವಿಡ್ ಹಾಗೂ ಸ್ಟುವರ್ಟ್ ಬಿನ್ನಿ. ಇವರು ಎದುರಾಳಿ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ ನಿಂತರು.

ಆರಂಭಿಕ ಆಟಗಾರರಾದ ಕುಸಾಲ್ ಪೆರೇರಾ ಮತ್ತು ಅಜಿಂಕ್ಯ ರಹಾನೆ ಕ್ರಮವಾಗಿ 14 ಹಾಗೂ 28 ರನ್ ಗಳಿಸಿ ಔಟಾದರು. ಮೂರನೇ ವಿಕೆಟ್‌ಗೆ ಜೊತೆಯಾದ ದ್ರಾವಿಡ್ ಮತ್ತು ಬಿನ್ನಿ (40, 20 ಎಸೆತ, 2 ಬೌಂ, 3 ಸಿಕ್ಸರ್) 4.4 ಓವರ್‌ಗಳಲ್ಲಿ 55 ರನ್ ಕಲೆಹಾಕಿದರು.

51 ಎಸೆತಗಳನ್ನು ಎದುರಿಸಿದ ದ್ರಾವಿಡ್ ಆರು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳನ್ನು ಸಿಡಿಸಿದರು. ಕೊನೆಯ ನಾಲ್ಕು ಓವರ್‌ಗಳಲ್ಲಿ ವೇಗವಾಗಿ ರನ್ ಗಳಿಸಲು ರಾಯಲ್ಸ್ ವಿಫಲವಾಯಿತು.

24 ರನ್‌ಗಳಿಗೆ ನಾಲ್ಕು ವಿಕೆಟ್ ಪಡೆದ ಉಮೇಶ್ ಯಾದವ್ ಡೆಲ್ಲಿ ಪರ ಯಶಸ್ವಿ ಬೌಲರ್ ಎನಿಸಿಕೊಂಡರು. ಆಶೀಶ್ ನೆಹ್ರಾ (35ಕ್ಕೆ 2) ಕೂಡಾ ಗಮನ ಸೆಳೆದರು.

ರಾಜಸ್ತಾನ ರಾಯಲ್ಸ್: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 165

ಕುಸಾಲ್ ಪೆರೇರಾ ಸಿ ಪಠಾಣ್ ಬಿ ಉಮೇಶ್ ಯಾದವ್  14
ಅಜಿಂಕ್ಯ ರಹಾನೆ ಸಿ ಮತ್ತು ಬಿ ಶಾಬಾಜ್ ನದೀಮ್  28
ರಾಹುಲ್ ದ್ರಾವಿಡ್ ಸಿ ಜಯವರ್ಧನೆ ಬಿ ಉಮೇಶ್ ಯಾದವ್  65
ಸ್ಟುವರ್ಟ್ ಬಿನ್ನಿ ಬಿ ಉಮೇಶ್ ಯಾದವ್  40
ಬ್ರಾಡ್ ಹಾಡ್ಜ್ ಸಿ ವಾರ್ನರ್ ಬಿ ಉಮೇಶ್ ಯಾದವ್  05
ಕೆವೊನ್ ಕೂಪರ್ ಸಿ ಯಾದವ್ ಬಿ ಆಶೀಶ್ ನೆಹ್ರಾ  02
ಅಶೋಕ್ ಮೆನೇರಿಯಾ ಬಿ ಆಶೀಶ್ ನೆಹ್ರಾ  01
ಎಸ್. ಶ್ರೀಶಾಂತ್ ಔಟಾಗದೆ  00
ರಾಹುಲ್ ಶುಕ್ಲಾ ಔಟಾಗದೆ  01
ಇತರೆ (ಲೆಗ್‌ಬೈ-3, ವೈಡ್-6)  09

ವಿಕೆಟ್ ಪತನ: 1-22 (ಪೆರೇರಾ; 2.6), 2-87 (ರಹಾನೆ; 11.3), 3-142 (ಬಿನ್ನಿ; 16.1), 4-161 (ದ್ರಾವಿಡ್; 18.5), 5-161 (ಹಾಡ್ಜ್; 18.6), 6-164 (ಕೂಪರ್; 19.3), 7-164 (ಮೆನೇರಿಯಾ; 19.4)
ಬೌಲಿಂಗ್: ಇರ್ಫಾನ್ ಪಠಾಣ್ 4-0-31-0, ಆಶೀಶ್ ನೆಹ್ರಾ 4-0-35-2, ಉಮೇಶ್ ಯಾದವ್ 4-0-24-4, ಆ್ಯಂಡ್ರೆ ರಸೆಲ್ 3-0-31-0, ಶಾಬಾಜ್ ನದೀಮ್ 4-0-22-1, ಯೋಹಾನ್ ಬೋಥಾ 1-0-19-0

ಡೆಲ್ಲಿ ಡೇರ್‌ಡೆವಿಲ್ಸ್: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 160

ಡೇವಿಡ್ ವಾರ್ನರ್ ರನೌಟ್  77
ಉನ್ಮುಕ್ತ್ ಚಾಂದ್ ಬಿ ಎಸ್. ಶ್ರೀಶಾಂತ್  23
ಮಾಹೇಲ ಜಯವರ್ಧನೆ ಸಿ ರಹಾನೆ ಬಿ ರಾಹುಲ್ ಶುಕ್ಲಾ  19
ಮನ್‌ಪ್ರೀತ್ ಜುನೇಜ ಸಿ ಹಾಡ್ಜ್ ಬಿ ಕೆವೊನ್ ಕೂಪರ್  20
ಆ್ಯಂಡ್ರೆ ರಸೆಲ್ ಬಿ ಕೆವೊನ್ ಕೂಪರ್  07
ಯೋಹಾನ್ ಬೋಥಾ ಎಲ್‌ಬಿಡಬ್ಲ್ಯು ಬಿ ಕೆವೊನ್ ಕೂಪರ್  02
ಇರ್ಫಾನ್ ಪಠಾಣ್ ಔಟಾಗದೆ  01
ನಮನ್ ಓಜಾ ಔಟಾಗದೆ  00
ಇತರೆ: (ಲೆಗ್‌ಬೈ-5, ವೈಡ್-6)  11

ವಿಕೆಟ್ ಪತನ: 1-39 (ಚಾಂದ್; 5.4), 2-82 (ಜಯವರ್ಧನೆ; 10.6), 3-149 (ಜುನೇಜ;17.6), 4-153 (ವಾರ್ನರ್; 18.3), 5-159 (ಬೋಥಾ; 19.3), 6-160 (ರಸೆಲ್; 19.5)
ಬೌಲಿಂಗ್: ಸ್ಯಾಮುಯೆಲ್ ಬದ್ರಿ 4-0-34-0, ಎಸ್. ಶ್ರೀಶಾಂತ್ 4-0-18-1, ವ ಸಿದ್ಧಾರ್ಥ್ ತ್ರಿವೇದಿ 4-0-35-0, ಕೆವೊನ್ ಕೂಪರ್ 4-0-30-3, ರಾಹುಲ್ ಶುಕ್ಲಾ 3-0-27-1, ಸ್ಟುವರ್ಟ್ ಬಿನ್ನಿ 1-0-11-0

ಫಲಿತಾಂಶ: ರಾಜಸ್ತಾನ ರಾಯಲ್ಸ್‌ಗೆ 5 ರನ್ ಜಯ, ಪಂದ್ಯಶ್ರೇಷ್ಠ: ರಾಹುಲ್ ದ್ರಾವಿಡ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT