ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ತಾನ ರಾಯಲ್ಸ್‌ಗೆ ಅಗ್ನಿಪರೀಕ್ಷೆ

Last Updated 16 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಜೈಪುರ (ಪಿಟಿಐ): ಈ ಬಾರಿ ರಾಹುಲ್ ದ್ರಾವಿಡ್ ಸಾರಥ್ಯದ ರಾಜಸ್ತಾನ ರಾಯಲ್ಸ್ ಸದ್ದಿಲ್ಲದೇ ಸುದ್ದಿ ಮಾಡುತ್ತಿದೆ. ಪ್ರಮುಖವಾಗಿ ನಾಯಕ ದ್ರಾವಿಡ್ ಉತ್ತಮ ಆಟದ ಮೂಲಕ ಮಾದರಿಯಾಗಿದ್ದಾರೆ. ಇದು ತಂಡದ ಉಳಿದ ಆಟಗಾರರ ವಿಶ್ವಾಸವನ್ನೂ ಹೆಚ್ಚಿಸಿದೆ.

ರಾಜಸ್ತಾನ ರಾಯಲ್ಸ್ ತಂಡದವರು ಬುಧವಾರ ರಾತ್ರಿ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡದ ಸವಾಲು ಎದುರಿಸಲಿದ್ದಾರೆ. ಹಾಗಾಗಿ ಈ ತಂಡದವರಿಗೆ ಈಗ ನಿಜವಾದ ಅಗ್ನಿ ಪರೀಕ್ಷೆ ಎದುರಾಗಿದೆ. ರಿಕಿ ಪಾಂಟಿಂಗ್ ಸಾರಥ್ಯದ ಮುಂಬೈ ಇಂಡಿಯನ್ಸ್ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಜಯಭೇರಿ ಮೊಳಗಿಸಿದೆ. ಪಾಂಟಿಂಗ್ ಹಾಗೂ ಸಚಿನ್ ತೆಂಡೂಲ್ಕರ್ ಅವರಿಂದ ಉತ್ತಮ ಆರಂಭವೇನೂ ಬಂದಿಲ್ಲ. ಆದರೆ ಈ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ದಿನೇಶ್ ಕಾರ್ತಿಕ್, ರೋಹಿತ್ ಶರ್ಮ ಹಾಗೂ ಕೀರನ್ ಪೊಲಾರ್ಡ್ ಉತ್ತಮ ಆಟದ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ.

ಅದರಲ್ಲೂ ದಿನೇಶ್ ಕಾರ್ತಿಕ್ ಟೂರ್ನಿಯ ಆರನೇ ಆವೃತ್ತಿಯಲ್ಲಿ ಇದುವರೆಗೆ ಎರಡು ಅರ್ಧ ಶತಕ ಸೇರಿದಂತೆ ಒಟ್ಟು 224 ರನ್ ಗಳಿಸಿ ಗಮನ ಸೆಳೆದಿದ್ದಾರೆ. ವೇಗದ ಆಟದ ಮೂಲಕ ತಂಡದ ಮೊತ್ತ ಹೆಚ್ಚಿಸುವಲ್ಲಿ ನೆರವಾಗುತ್ತಿದ್ದಾರೆ. ಸಚಿನ್ ಕೂಡ ಪುಣೆ ವಾರಿಯರ್ಸ್ ಎದುರಿನ ಪಂದ್ಯದಲ್ಲಿ 29 ಎಸೆತಗಳಲ್ಲಿ 44 ರನ್ ಗಳಿಸಿ ಉಳಿದ ತಂಡಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಲಸಿತ್ ಮಾಲಿಂಗ, ಹರಭಜನ್ ಸಿಂಗ್ ಪ್ರಭಾವಿ ಪ್ರದರ್ಶನ ತೋರುತ್ತಿದ್ದಾರೆ. ಈ ತಂಡದ ರನ್‌ರೇಟ್ ಕೂಡ ಉತ್ತಮವಾಗಿದೆ. ಸದ್ಯ ಪಾಯಿಂಟ್ ಪಟ್ಟಿಯಲ್ಲಿ ವೆುೀಲಿನ ಕ್ರಮಾಂಕದಲ್ಲಿರುವ ಈ ತಂಡದವರು ಸ್ಥಿರ ಪ್ರದರ್ಶನ ಕಾಯ್ದುಕೊಳ್ಳುವ ವಿಶ್ವಾಸದಲ್ಲಿದ್ದಾರೆ.

ರಾಯಲ್ಸ್ ಕೂಡ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಸಾಧಿಸಿದೆ. ಒಟ್ಟು ಆರು ಪಾಯಿಂಟ್ ಹೊಂದಿರುವ ಈ ತಂಡದವರು ಇಂಡಿಯನ್ಸ್‌ಗೆ ಆಘಾತ ನೀಡುವ ವಿಶ್ವಾಸದಲ್ಲಿದ್ದಾರೆ. ಪುಣೆ ವಾರಿಯರ್ಸ್ ಎದುರಿನ ಪಂದ್ಯದಲ್ಲಿ ಮಾತ್ರ ರಾಹುಲ್ ಬಳಗ ಸೋಲು ಕಂಡಿತ್ತು.
ಈ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶೇನ್ ವಾಟ್ಸನ್ ಹಾಗೂ ಅಜಿಂಕ್ಯ ರಹಾನೆ ಅವರಿಂದ ಉತ್ತಮ ಅಡಿಪಾಯ ಲಭಿಸುತ್ತಿದೆ. ಸ್ಟುವರ್ಟ್ ಬಿನ್ನಿ ಆಲ್‌ರೌಂಡ್ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದ್ದಾರೆ. ದ್ರಾವಿಡ್ ಈಗಾಗಲೇ ಎರಡು ಅರ್ಧ ಶತಕ ಗಳಿಸಿದ್ದಾರೆ. ಯುವಕರನ್ನು ನಾಚಿಸುವಂತೆ ಬ್ಯಾಟ್ ಬೀಸುತ್ತಿದ್ದಾರೆ.

ವಿಶೇಷವೆಂದರೆ ಎಸ್.ಶ್ರೀಶಾಂತ್ ಕಿಂಗ್ಸ್ ಇಲೆವೆನ್ ಎದುರಿನ ಪಂದ್ಯದಲ್ಲಿ ಎರಡು ವಿಕೆಟ್ ಪಡೆದು ಪರಿಣಾಮಕಾರಿ ಬೌಲಿಂಗ್ ನಡೆಸಿದ್ದರು. ಅವರು ಫಾರ್ಮ್ ಕಂಡುಕೊಂಡಿರುವುದು ಈ ಂಡಕ್ಕೆ ಲಭಿಸಿರುವ ಬೋನಸ್.   ಸಿದ್ಧಾರ್ಥ್ ತ್ರಿವೇದಿ ಕೂಡ ಗಮನಾರ್ಹ ಪ್ರದರ್ಶನ ತೋರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT