ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನಿ ಬಾಣಸಿಗ `ಲಾಲಾ' ಎಂಬ ನಳ `ಮಹಾರಾಜ'

Last Updated 24 ಡಿಸೆಂಬರ್ 2012, 9:15 IST
ಅಕ್ಷರ ಗಾತ್ರ

ಬಾಗಲಕೋಟೆ: ದೂರದ ರಾಜಸ್ಥಾನದಿಂದ ಆತ ಬಾಗಲಕೋಟೆ ಶಹರಕ್ಕೆ ಬರುವಾಗ ಕೇವಲ 16 ವರ್ಷದ ಬಾಲಕ, ಆಗ ತಾನೆ ಎಸ್‌ಎಸ್‌ಎಲ್‌ಸಿ ಮುಗಿಸಿದ್ದ ಆತ ನಗರದಲ್ಲಿ ಒತ್ತುಗಾಡಿಯಲ್ಲಿ ಪಾನಿಪೂರಿ, ಬೇಲ್ಪುರಿ, ಐಸ್ ಕ್ರೀಮ್ ಮಾರಿ ತಿಂಗಳಿಗೆ ಐದು ನೂರು ರೂಪಾಯಿ ಗಳಿಸುತ್ತಿದ್ದ ಆತನಿಗೆ ಇಂದು 48 ವರ್ಷ. ಕೇಟರಿಂಗ್‌ನಲ್ಲಿ ಎಲ್ಲಿಲ್ಲದ ಪ್ರಸಿದ್ಧಿ ಗಳಿಸಿರುವ ಆತನ ತಿಂಗಳ ಸಂಪಾದನೆ ಇದೀಗ ಬರೋಬ್ಬರಿ ರೂ. 5 ಲಕ್ಷ! 

ಹೌದು, ಕೇವಲ 20 ವರ್ಷಗಳ ಹಿಂದೆ ಬಾಗಲಕೋಟೆ ನಗರದ ವಲ್ಲಭಬಾಯಿ ಚೌಕಿಯಲ್ಲಿ ತಳ್ಳುಗಾಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಸೋನಾಲಾಲ್ ಗೋಡ್(ಲಾಲ್) ಅವರನ್ನು ಕೈಹಿಡಿದು ಕೋಟ್ಯಾಧೀಶನನ್ನಾಗಿ ಮಾಡಿದ್ದು `ಅನ್ನಪೂರ್ಣೇಶ್ವರಿ' ಅಂದರೆ `ಫುಡ್ ಕೇಟರಿಂಗ್'.        

ಬಾಗಲಕೋಟೆ ನಗರದಲ್ಲಿ ಯಾವುದೇ ಮದುವೆ, ನಾಮಕಾರಣ, ಸಭೆ, ಸಮಾರಂಭದಂತಹ ಶುಭ ಕಾರ್ಯ ನಡೆದರೂ ಅಲ್ಲಿ ಲಾಲಾ ನಳಪಾಕ ಘಮಘಮಿಸುತ್ತದೆ. ಕಾರ್ಯಕ್ರಮ ಹೇಗೇ ನಡೆದರೂ ಲಾಲಾನ ಊಟ ಮಾಡಿದ ಮೇಲೆ ಅದು ಯಶಸ್ವಿಯಾಯಿತು ಎಂದೇ ಅರ್ಥ!

ಲಾಲಾ ಆರಂಭದ ದಿನದಲ್ಲಿ ಬಾಗಲಕೋಟೆ ನಗರದ ವಲ್ಲಭಬಾಯಿ ಚೌಕಿಯಲ್ಲಿ ತಳ್ಳುಗಾಡಿಯಲ್ಲಿ ಬೇಲ್ಪುರಿ, ಪಾನಿಪೂರಿ, ಐಸ್‌ಕ್ರೀಮಾ ಮಾರಾಟ ಮಾಡುತ್ತಿದ್ದರು. ದಿನವೊಂದಕ್ಕೆ 100 ರೂಪಾಯಿ ವ್ಯಾಪಾರವಾದರೆ 15 ರೂಪಾಯಿ ಉಳಿಯುತ್ತಿತ್ತು. ಸುಮಾರು ಆರೇಳು ವರ್ಷ ಇದೇ ವ್ಯಾಪಾರ ಮಾಡಿದ ಲಾಲಾ  `ಬೋಲೆನಾಥ ಐಸ್‌ಕ್ರೀಮ್ ವಾಲ' ಎಂದೇ ನಗರದಲ್ಲಿ ಪ್ರಸಿದ್ಧಿ ಗಳಿಸಿದರು.

ಜೊತೆಗೆ ಬಂಗಾರದ ವ್ಯಾಪಾರದಲ್ಲೂ ತೊಡಗಿದ ಲಾಲಾ ದಿನಕಳೆದಂತೆ ಹಳೆ ಐ.ಬಿ ರಸ್ತೆಯಲ್ಲಿ ಹಳೆ ಜಿಲ್ಲಾಸ್ಪತ್ರೆ ಎದುರು ಒಂದು ಕ್ಯಾಂಟೀನ್ ಆರಂಭಿಸಿದರು. ಸಭೆ, ಸಮಾರಂಭ, ಮದುವೆ, ನಾಮಕರಣದಂತಹ ಶುಭ ಕಾರ್ಯಗಳಿಗೆ ಬಗೆಬಗೆಯ ರುಚಿಕಟ್ಟಾದ ತಿಂಡಿ-ತಿನಿಸುಗಳನ್ನು ಮಾಡಿಕೊಡುವ ಮೂಲಕ ಜನಪ್ರಿಯವಾಗತೊಡಗಿದರು.

ಲಾಲಾ ಪಾಕಶಾಲೆಯ ನಾಮ ಬಾಗಲಕೋಟೆ ಜನತೆಯ ನಾಲಿಗೆ ಮೇಲೆ ನಳನಳಿಸಿ ತೊಡಗಿದ ಮೇಲೆ ನಗರದ ಶ್ರೀಮಂತ, ಬಡವ ಎಲ್ಲರ ಮನೆಯ ಕಾರ್ಯಕ್ರಮಕ್ಕೂ ಅವರು ತಯಾರಿಸುವ ಭೂರಿಭೋಜನವೇ ಇಷ್ಟವಾಯಿತು. ಇಂದಿಗೂ ಅದೇ ರುಚಿ, ಅದೇ ಗುಣಮಟ್ಟದ ರುಚಿಕಟ್ಟಾದ ಊಟವನ್ನು ಬಡಿಸುತ್ತಿರುವ ಲಾಲಾ ಬಾಗಲಕೋಟೆಯಲ್ಲಿ `ಲಾಲಾ ಬ್ರಾಂಡ್' ಆಗಿ ಉಳಿದುಕೊಂಡಿದ್ದಾರೆ.

ಹತ್ತು ಜನರಿಂದ ಲಕ್ಷ ಜನ ಸೇರುವ ಕಾರ್ಯಕ್ರಮ ಇದ್ದರೂ ಉಣಬಡಿಸುವ ಸಾಮಾರ್ಥ್ಯ ಹೊಂದಿರುವ `ಲಾಲಾ ಟೀಂ' ಸಮಯಕ್ಕೆ ಸರಿಯಾಗಿ ಬಿಸಿಬಿಸಿ ಆಹಾರವನ್ನು ಮನೆಬಾಗಿಲಿಗೆ ತಲುಪಿಸುತ್ತಾರೆ, ಅಷ್ಟೇ ಅಲ್ಲ ಹೊಟ್ಟೆ ತುಂಬ ಉಣಬಡಿಸುತ್ತಾರೆ.
ಲಾಲಾ ರಸಪಾಕವನ್ನು ಸವಿದ ಮಂದಿಗೆ ಇದುವರೆಗೆ ಯಾರೊಬ್ಬರಿಗೂ ಹೊಟ್ಟೆ ಉರಿ, ಉಬ್ಬಸ, ವಾಂತಿಯಾದ ಉದಾಹರಣೆ ಇಲ್ಲ. ಅಷ್ಟರ ಮಟ್ಟಿಗೆ ಅಡುಗೆಯನ್ನು ಯಾವುದೇ ರಸಾಯನಿಕ ಪುಡಿ ಬಳಸದೇ  ತಯಾರಿಸುತ್ತಾರೆ. 

ಕೇಟರಿಂಗ್ ಸೇವೆಯಿಂದ ಜನಪ್ರಿಯರಾದ ಲಾಲಾ ಲಕ್ಷಾಂತರ ಹಣವನ್ನು ಗಳಿಸಿ, ಗಣಿ ಉದ್ಯಮದಲ್ಲೂ ತೊಡಗಿಕೊಂಡಿದ್ದಾರೆ. ಅಮೀನಗಡದಲ್ಲಿ ಸಂಗಮೇಶ್ವರ ಗ್ರಾನೈಟ್ ಫ್ಯಾಕ್ಟರಿ, ಸೂಳಿಭಾವಿಯಲ್ಲಿ ಗಾಯಿತ್ರಿ ಗ್ರಾನೈಟ್ ಫ್ಯಾಕ್ಟರಿಯನ್ನು ಹೊಂದಿದ್ದಾರೆ. ಇದೀಗ ಗ್ರಾನೈಟ್ ಉದ್ಯಮದಿಂದ ಹೊರಬರುವ ಚಿಂತನೆ ನಡೆಸಿರುವ ಲಾಲಾ ಬಾಗಲಕೋಟೆ ನಗರದಲ್ಲಿ ಜನಪ್ರಿಯವಾದ `ಲಾಲಾ' ಹೋಟೆಲ್ ಆರಂಭಿಸಲು ಮುಂದಾಗಿದ್ದಾರೆ.

ಇಷ್ಟೇ ಅಲ್ಲದೇ ಲಾಲಾ ಅವರು ರಾಜಸ್ಥಾನದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲೂ ತೊಡಗಿಕೊಂಡಿದ್ದಾರೆ.
ಲಾಲಾ ಅವರ ಜೊತೆ ಅವರ ಸಹೋದರರಾದ ಧನರಾಜ ಪಿ.ಗೋಡ್, ವಿನೋಧ ಪಿ.ಗೋಡ್ ಮತ್ತು ಮಗ ವಿಷ್ಣು ಗೋಡ್ ಕೂಡ ಕೇಟರಿಂಗ್ ಕಾರ್ಯದಲ್ಲಿ ತೊಡಗಿದ್ದಾರೆ.

ರಾಜಸ್ಥಾನದ 8 ಮತ್ತು ಬಾಗಲ ಕೋಟೆಯ 12 ಮಂದಿ ನುರಿತ ಬಾಣಸಿ ಗರು ಸೇರಿಕೊಂಡು ಇದೀಗ ಲಾಲಾ ಕೇಟರಿಂಗ್ ನಡೆಸುತ್ತಿದ್ದು, ಬರುವ ಲಾಭವನ್ನು ಎಲ್ಲರೂ ಹಂಚಿಕೊ ಳ್ಳುತ್ತಿದ್ದಾರೆ. ಭವಿಷ್ಯದಲ್ಲಿ ತಮ್ಮ ಮಗ ವಿನೋಧ ಅವರ ಹೆಗಲಿಗೆ ಕೇಟರಿಂಗ್ ಜವಾಬ್ದಾರಿ ವಹಿಸಿ ರಾಜಸ್ಥಾನದ ಜೋಧಪುರದಲ್ಲಿ ನೆಲೆಸುವ ಆಲೋಚನೆಯಲ್ಲಿ ಇದ್ದಾರೆ.

ಕೇಟರಿಂಗ್, ಗ್ರಾನೈಟ್  ಮತ್ತು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿರುವ ಲಾಲಾ ಅವರ ತಿಂಗಳ ಗಳಿಕೆ ಇದೀಗ ಐದು ಲಕ್ಷ ರೂಪಾಯಿ ತಲುಪಿದೆ. ಇಷ್ಟೆಲ್ಲಾ ಹೇಗೆ ಎಂದು ಕೇಳಿದರೆ. ಇದೆಲ್ಲ `ಅನ್ನಪೂರ್ಣದೇವಿ' ಮಹಾತ್ಮೆ' ಎನ್ನುತ್ತಾರೆ.

`ಜನರ ಪ್ರೀತಿ-ವಿಶ್ವಾಸ ಕಳೆದು ಕೊಳ್ಳದೇ ನ್ಯಾಯವಾಗಿ ದುಡಿದೆ, ಗುಣ ಮಟ್ಟದ ಊಟ ಬಡಿಸಿದೆ, ಕೋಟ್ಯಾ ಧಿಪತಿಯಾದೆ. ಆದರೆ, ಕೋಟ್ಯಾಧೀಶ ನಾಗಿ ಬದುಕಲು ಇಷ್ಟವಿಲ್ಲ, ಜನರ ಸೇವಕನಾಗಿಯೇ ಇರಲು ಇಷ್ಟ' ಎಂದು ನಯವಾಗಿ ಹೇಳಿತ್ತಾರೆ. ಯಾವುದೇ ಹೋಟೆಲ್ ಮ್ಯಾನೇಜ್‌ಮೆಂಟ್ ಓದದ ಇವರು ಇದೀಗ `ಹೋಟೆಲ್ ಮ್ಯಾನೇ ಜ್‌ಮೆಂಟ್ ಗುರು'ವಂತಾಗಿದ್ದಾರೆ.

ಲಾಲಾ ಮೆನು: ದಕ್ಷಿಣ ಭಾರತ ಮತ್ತು ಉತ್ತರ ಭಾರತದ ಎಲ್ಲ ಬಗೆಯ ಅಡುಗೆಯನ್ನು ಮಾಡುವ ಇವರು ರಾಜಸ್ಥಾನಿ ಸ್ಪೆಷಲ್ ಮತ್ತು ಉತ್ತರ ಕರ್ನಾಟಕದ ಬಗೆ ಬಗೆಯ ತಿಂಡಿ- ತಿನಿಸುಗಳ ತಯಾರಿಕೆ ಯಲ್ಲಿ ಜನಪ್ರಿಯ ರಾಗಿದ್ದಾರೆ.

ಉತ್ತರ ಕರ್ನಾಟಕ ಮಂದಿಗೆ ಇಷ್ಟ ವಾಗುವ ಹೋಳಿಗೆ, ಹುಗ್ಗಿ, ಮಧುರ ಮಿಲನ, ಉದ್ರುಸಜ್ಜಕ, ಮಾದಲಿ, ರಸಗುಲ್ಲ, ಮಲೈಸ್ಯಾಂಡ್ವಿಚ್, ಬೂಂದಿ ರಬಡಿ, ಮೈಸೂರ್‌ಪಾಕ್, ಹಾಲು ಹುಗ್ಗಿ, ಖವಾ ಹುಗ್ಗಿ ಪ್ರಮುಖವಾಗಿ ಎಲ್ಲರ ಬಾಯಲ್ಲೂ ನೀರೂರಿಸುತ್ತದೆ.
ಲಾಲಾ ಅವರನ್ನು ಮೊಬೈಲ್ ಸಂಖ್ಯೆ 9448136275 ರಲ್ಲಿ ಸಂಪರ್ಕಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT