ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಾ ಮಾಫಿ ಸಾಕ್ಷಿಯಾಗಲಿ - ಶೌರಿ ಹಾಜರು

Last Updated 25 ಫೆಬ್ರುವರಿ 2011, 15:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ದೂರ ಸಂಪರ್ಕ ಸಚಿವ ಎ.ರಾಜಾ ಮಾಫಿ ಸಾಕ್ಷಿ ಆಗಬೇಕು’ ಎಂದು ಮತ್ತೋರ್ವ ಮಾಜಿ ದೂರಸಂಪರ್ಕ ಸಚಿವ ಅರುಣ್ ಶೌರಿ ಅಭಿಪ್ರಾಯಪಟ್ಟಿದ್ದಾರೆ.

ಅವರು ಶುಕ್ರವಾರ ಸಿಬಿಐ ಮುಂದೆ ಹಾಜರಾಗಿ ಹೊರಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಒಂದೊಮ್ಮೆ ರಾಜಾ ಮಾಫಿ ಸಾಕ್ಷಿ ಆದರೆ ಹಗರಣದ ಎಲ್ಲ ತಿರುಳೂ ಬಯಲಿಗೆ ಬರುತ್ತದೆ ಎಂದು ಹೇಳಿದರು.

ಈ ಪರವಾನಗಿ ಹಂಚಿಕೆಯಲ್ಲಿ ಹಣ ಪಡೆದವರು ಯಾರು? ಯಾರೆಲ್ಲಾ ಟೆಲಿಕಾಂ ಕಂಪೆನಿಗಳ ಪರ ವಹಿಸಿದ್ದರು? ಇಡೀ ಹಗರಣದಲ್ಲಿ ಯಾವ್ಯಾವ ಅಧಿಕಾರಿಗಳು ಭಾಗಿಯಾಗಿದ್ದರು ಎಂಬುದು ಬಯಲಿಗೆ ಬರಬೇಕಿದೆ. ‘ಈ ಎಲ್ಲಾ ಪ್ರಶ್ನೆಗಳಿಗೂ ರಾಜಾ ಉತ್ತರಿಸಬೇಕು. ಅವರು ತಮ್ಮ ಅಧಿಕಾರವಧಿಯಲ್ಲಿ ನಿಯಮಗಳನ್ನೇ ಪಾಲನೆ ಮಾಡಿಲ್ಲ’ ಎಂದು ದೂರಿದರು.

‘ಕೇಂದ್ರ ಸರ್ಕಾರ ಈ ವಿಷಯದಲ್ಲಿ ರಾಷ್ಟ್ರವನ್ನು ಹಾದಿ ತಪ್ಪಿಸುತ್ತಿದ್ದು ಹಗರಣದ ಹಳಿಯನ್ನೇ ಬೇರೆಡೆ ತಿರುಗಿಸುತ್ತಿದೆ ಎಂದು ಆರೋಪಿಸಿದ ಶೌರಿ, ಇಷ್ಟೆಲ್ಲಾ ರಾದ್ಧಾಂತ ನಡೆಯುತ್ತಿದ್ದಾಗ ಸರ್ಕಾರದ ಹಿರಿಯ ಸದಸ್ಯರೇನು ನಿದ್ದೆ ಮಾಡುತ್ತಿದ್ದರೇ’ ಎಂದು ಖಾರವಾಗಿ ಪ್ರಶ್ನಿಸಿದರು.

‘ಇತ್ಯರ್ಥಕ್ಕಾಗಿ ಕಾದು ಕುಳಿತಿದ್ದ ಬಾಕಿ ಪರವಾನಗಿಗಳನ್ನು ರಾಜಾ ಪರಿಗಣಿಸುವ ಗೋಜಿಗೇ ಹೋಗಲಿಲ್ಲ. ಹಳೆಯ ಅರ್ಜಿಗಳು ಇನ್ನೂ ಬಾಕಿ ಇರುವಂತೆಯೇ ಮತ್ತೆ ಹೊಸ ಅರ್ಜಿಗಳನ್ನು ಕರೆಯಲಾಯಿತು. ಇದಕ್ಕಾಗಿ ನೀತಿ ನಿಯಮಗಳನ್ನೇ ಬದಲಾಯಿಸಲಾಯಿತು. ಈ ಪ್ರಕ್ರಿಯೆಯಲ್ಲಿ ರಾಜಾ ಅವರು ತಮ್ಮ ಅಧಿಕಾರವನ್ನು ಸ್ವಂತ ಗಳಿಕೆಗಾಗಿ ದುರುಪಯೋಗ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದರು.

ಮೂರು ಗಂಟೆ ವಿಚಾರಣೆ: ಹಗರಣಕ್ಕೆ ಸಂಬಂಧಿಸಿದಂತೆ ಶೌರಿ ಅವರನ್ನು ಇಲ್ಲಿನ ಸಿಬಿಐ ಕೇಂದ್ರ ಕಚೇರಿಯಲ್ಲಿ ಸುಮಾರು ಮೂರು ಗಂಟೆಗಳ ಕಾಲ ಸುದೀರ್ಘವಾಗಿ ಪ್ರಶ್ನಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅರುಣ್ ಶೌರಿ ಅವರು ಎನ್‌ಡಿಎ ಅಧಿಕಾರಾವಧಿಯಲ್ಲಿ 2003 ಜನವರಿಯಿಂದ 2004 ಮೇವರೆಗೆ ದೂರಸಂಪರ್ಕ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬ ನೀತಿಯ ಆಧಾರದ ಮೇಲೆ 2ಜಿ ಸ್ಪೆಕ್ಟ್ರಂ ಪರವಾನಗಿ ಹಂಚಿಕೆ ಮಾಡಲು ಅಂದಿನ ಎನ್‌ಡಿಎ ಸರ್ಕಾರವು ನಿರ್ಧರಿಸಿತ್ತು.

ಹಗರಣದ ಮುಖ್ಯ ಬಿಂದು ಲಂಚ: ಸಿಬಿಐ ಕಚೇರಿಗೆ ತೆರಳುವ ಮುನ್ನವೂ ಸುದ್ದಿಗಾರರ ಜೊತೆ ಮಾತನಾಡಿದ್ದ ಶೌರಿ, 2ಜಿ ಸ್ಪೆಕ್ಟ್ರಂ ಹಗರಣ ವಾಸ್ತವವಾಗಿ ಲಂಚ ಪಡೆದಿರುವುದಕ್ಕೆ ಸಂಬಂಧಿಸಿದೆಯೇ ಹೊರತು ನೀತಿ ನಿರೂಪಣೆ ವಿಷಯಗಳಿಗಲ್ಲ ಎಂದು ಸ್ಪಷ್ಟಪಡಿಸಿದರು. ‘ಸಿಬಿಐಗೆ ಏನು ಹೇಳಬೇಕು ಎಂದುಕೊಂಡಿದ್ದೇನೆಯೊ ಅದನ್ನು ಲಿಖಿತ ಹೇಳಿಕೆ ರೂಪದಲ್ಲಿ ಸಲ್ಲಿಸುತ್ತೇನೆ’ ಎಂದು ತಿಳಿಸಿದರು.

ಇದೇ ವೇಳೆ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡ ಶೌರಿ, ‘ಸಿಬಿಐ ಈ ಕುರಿತು ನಡೆಸುತ್ತಿರುವ ತನಿಖೆಯಲ್ಲಿ ಕೈಗಾರಿಕೋದ್ಯಮಿಗಳು ಮತ್ತು ಕಾರ್ಪೊರೇಟ್‌ಗಳನ್ನು ಪ್ರಶ್ನಿಸುತ್ತಿರುವುದನ್ನೇ ಮಾಧ್ಯಮಗಳು ದೊಡ್ಡದಾಗಿ ಬಿಂಬಿಸುತ್ತಿವೆ.

ಹಗರಣದಲ್ಲಿ ಕೇಳಿಬಂದಿರುವ ಪ್ರಧಾನ ಮಂತ್ರಿಗಳನ್ನಾಗಲಿ ಅಥವಾ ಡಿಎಂಕೆ ನಾಯಕ ಕರುಣಾನಿಧಿ ಅವರನ್ನಾಗಲೀ ಎಲ್ಲೂ ಪ್ರಸ್ತಾಪಿಸುತ್ತಲೇ ಇಲ್ಲ’ ಎಂದು ದೂರಿದರು.

ಸಿಬಿಐಗೆ ಒಂದೊಮ್ಮೆ ಮುಕ್ತ ಅಧಿಕಾರ ನೀಡಿದರೆ ಅದೊಂದು ಸಕ್ಷಮ ಸಂಘಟನೆಯಾಗಿ ಬೆಳೆಯುತ್ತದೆ ಎಂದು ಶೌರಿ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT