ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಾಧ್ಯಕ್ಷ ಅಂಗಳದಲ್ಲಿ ಅರಳಿದ ಆಟ

Last Updated 7 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಅದು 1937ನೇ ಇಸವಿ. ಟೆನಿಸ್ ಕ್ಷೇತ್ರದಲ್ಲಿ ಅಂದಿನ ಅಗ್ರಗಣ್ಯ ಆಟಗಾರರಾಗಿದ್ದ ಬಿಲ್ ಟೀಲ್ಡನ್ ಹಾಗೂ ಹೆನ್ಸಿ ಕೋಸೆ ಧಾರವಾಡದಲ್ಲಿ ಟೆನಿಸ್ ಅಂಗಣವನ್ನು ಉದ್ಘಾಟಿಸಿದ್ದರು. ಬಾಂಬೆ ಸರ್ಕಾರದ ನಿವೃತ್ತ ನ್ಯಾಯಮೂರ್ತಿ ಮತ್ತು ಆಗಿನ ಖ್ಯಾತ ಟೆನಿಸ್ ಆಟಗಾರ ರಾಜಾಧ್ಯಕ್ಷ ಅವರ ಹೆಸರಿನಲ್ಲಿ ಅಂಕಣ ಸಿದ್ಧಗೊಂಡಿತ್ತು.

ಇಬ್ಬರು ತಾರೆಯರ ನಡುವೆ ಪ್ರದರ್ಶನ ಪಂದ್ಯ ನಡೆಯಿತು. ಧಾರವಾಡದ ಅಂದಿನ ಖ್ಯಾತನಾಮರಾದ ಬಾಳಾಸಾಹೇಬ್ ಕೊಯಮತ್ತೂರು ಸಹ ಆಟದಲ್ಲಿ ಪಾಲ್ಗೊಂಡಿದ್ದರು. ಎಸ್.ಆರ್. ನರಸಾಪುರ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದರು.

**
2003ರ ಅಕ್ಟೋಬರ್. ಧಾರವಾಡದಲ್ಲಿ ಎಟಿಪಿ ಟೂರ್ನಿ ಸಂಭ್ರಮ. ಥಾಯ್ಲೆಂಡ್‌ನ ಡೇನ್ ಉದಮ್‌ಚೋಕ್ ಅವರಂತಹ ಅಗ್ರಮಾನ್ಯ ಆಟಗಾರರ ಜೊತೆಗೆ ನಮ್ಮವರೇ ಆದ ಪ್ರಕಾಶ್ ಅಮೃತ್‌ರಾಜ್, ರೋಹನ್ ಬೋಪಣ್ಣ, ಪಂಕಜ್ ಮಂಕಡ್ ಅವರಂತಹ ಅನುಭವಿ ಹಾಗೂ ಉದಯೋನ್ಮುಖ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಉದಮ್ ಪ್ರಶಸ್ತಿ ತನ್ನದಾಗಿಸಿಕೊಂಡರು.

**
ಈ ಎರಡು ಘಟನೆಗಳ ನಡುವಿನ ಅವಧಿಯಲ್ಲಿ ಧಾರವಾಡ ಭಾಗದಲ್ಲಿ ಟೆನಿಸ್ ಕ್ರೀಡೆ ಬಹಳಷ್ಟು ಬೆಳೆದಿದೆ. ವಿಶ್ವವಿದ್ಯಾಲಯಗಳು, ನೈರುತ್ಯ ರೈಲ್ವೆ ಪ್ರಧಾನ ಕೇಂದ್ರ... ಹೀಗೆ ಕ್ರೀಡೆಯ ಬೆಳವಣಿಗೆಗೆ ಪೂರಕವಾದ ಪೋಷಕ ಸಂಸ್ಥೆಗಳು ಇಲ್ಲಿವೆ. ಆದರೆ ರಾಷ್ಟ್ರಮಟ್ಟದ ಆಟಗಾರರು ಈ ಭಾಗದಿಂದ ಹೊರಹೊಮ್ಮಲಿಲ್ಲ ಎನ್ನುವ ಕೊರಗು ಈಗಲೂ ಕಾಡುತ್ತಿದೆ.

1938ರಲ್ಲಿ ಬಾಂಬೆ ಆಟಗಾರ ಎ.ಸಿ. ಪೆರೇರಾ ಧಾರವಾಡದ ಯುವಕರಿಗೆ ಟೆನಿಸ್ ತರಬೇತಿ ನೀಡುವ ಮೂಲಕ ಇಲ್ಲಿ ಟೆನಿಸ್ ಪ್ರೀತಿ ಮೊಳಕೆಯೊಡೆಯಿತು. ಎಸ್.ಎಫ್. ಕಣಬುರ್ಗಿಮಠ, ಲಿಮೇಯೆ, ನರಸಿಂಹ ಜೋಶಿ, ವಾಮನ ಜಮಖಂಡಿ ಮೊದಲಾದ ಯುವಕರು ತರಬೇತಿ ಪಡೆದರು.

ಅಲ್ಲಿಂದ ಮುಂದೆ ಸತೀಶ್ ಟಗರಪುರ, ನಂದು ನಾಟೇಕರ್, ಪಿ.ಕೆ. ರಾಮನಾಥನ್, ಆನಂದ್ ಅಮೃತ್, ವಿಜಯ್ ಅಮೃತ್‌ರಾಜ್, ಜಿ.ಕೆ. ಭೂಪತಿ ಮೊದಲಾದ ಅನುಭವಿಗಳ ಆಟಕ್ಕೆ ಇಲ್ಲಿನ ರಾಜಾಧ್ಯಕ್ಷ ಪೆವಿಲಿಯನ್ ಸಾಕ್ಷಿಯಾಗಿದೆ.

ಇತ್ತ ಹುಬ್ಬಳ್ಳಿಯಲ್ಲಿ ಟೆನಿಸ್ ಬೆಳೆದದ್ದು ಕಡಿಮೆ. ಆದರೂ ರೈಲ್ವೆ ಕ್ಲಬ್, ಕಿರ್ಲೋಸ್ಕರ್ ಮೊದಲಾದ ಅಂಕಣಗಳಲ್ಲಿ ಟೆನಿಸ್ ಪ್ರತಿಭೆ ಅರಳಿದೆ. ಶಿಬು ಮಾಚಿ, ಶಿವನ್ ಮಿರಜ್‌ಕರ್ ಮೊದಲಾದ ಆಟಗಾರರು ಇಲ್ಲಿ ಆಡಿದ್ದನ್ನು ನೆನಪಿಸಿಕೊಳ್ಳುತ್ತಾರೆ ಹಿರಿಯ ಟೆನಿಸ್ ಪಟು ಗಂಗಾಧರ ಭಿಲ್ಲೆ.

2006ರ ಏಪ್ರಿಲ್‌ನಲ್ಲಿ ಧಾರವಾಡದಲ್ಲಿ ಮತ್ತೆ ಎಟಿಪಿ ಟೂರ್ನಿ ನಡೆಯಿತು. ಆ ಕ್ಷಣ ಇಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಪ್ರಕಾಶ್, ಬೋಪಣ್ಣ ಅವರಂತಹ ಆಟಗಾರರು ಪಾಲ್ಗೊಂಡಿದ್ದೇ ಅದಕ್ಕೆ ಕಾರಣ ಎನ್ನುತ್ತಾರೆ ಗುರುರಾಜ ಜಮಖಂಡಿ.

ಪ್ರಸ್ತುತ ಧಾರವಾಡದ ರಾಜಾಧ್ಯಕ್ಷ ಪೆವಿಲಿಯನ್‌ನಲ್ಲಿ ಸಿಂಥೆಟಿಕ್ ಹಾಸಿನ ನಾಲ್ಕು ಟೆನಿಸ್ ಅಂಕಣಗಳಿವೆ. ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಕರ್ನಾಟಕ ಕಾಲೇಜು, ಜಿಮ್ಖಾನ ಕ್ಲಬ್ ಮೊದಲಾದ ಕಡೆಗಳಲ್ಲಿ ಮಣ್ಣಿನ ಅಂಕಣಗಳಿದ್ದರೂ ಬಳಕೆಯಾಗುತ್ತಿರುವುದು ಕಡಿಮೆ. ಹುಬ್ಬಳ್ಳಿಯಲ್ಲಿ ರೈಲ್ವೆ ಕ್ಲಬ್ ಬಿಟ್ಟರೆ ಹೇಳಿಕೊಳ್ಳುವ ಅಂಕಣಗಳು ಇಲ್ಲ.

`ಪ್ರಸ್ತುತ ರಾಜಾಧ್ಯಕ್ಷ ಪೆವಿಲಿಯನ್‌ನಲ್ಲಿ ಮುಂಜಾನೆ ಹಿರಿಯರು ಹಾಗೂ ವಿದ್ಯಾರ್ಥಿಗಳು ಅಭ್ಯಾಸ ನಡೆಸುತ್ತಾರೆ. ಕೇವಲ ಐದುನೂರು ರೂಪಾಯಿ ಸದಸ್ವತ್ವದಲ್ಲಿ ವರ್ಷಪೂರ್ತಿ ಅಭ್ಯಾಸ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ದೊರೆತಿದೆ. ಇದರಿಂದ ಯುವಜನರಲ್ಲಿ ಈ ಕ್ರೀಡೆಯತ್ತ ಒಲವು ಮೂಡಿದೆ~ ಎನ್ನುತ್ತಾರೆ ಜಿಲ್ಲಾ ಟೆನಿಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಸಿ.ವಿ. ಅಂಗಡಿ.

ಧಾರವಾಡದ ಪ್ರೇರಣಾ ತಳವಾರ ಈಚೆಗೆ ರಾಷ್ಟ್ರೀಯ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಿದ್ದು, ಹೊಸ ಭರವಸೆ ಮೂಡಿಸುತ್ತಿದ್ದಾರೆ. ಹುಬ್ಬಳ್ಳಿಯ ರಾಹುಲ್ ಭಿಲ್ಲೆ ಸಹ ರಾಷ್ಟ್ರಮಟ್ಟದ ಸ್ಪರ್ಧೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.

ಚೇತನ್ ಗಂಜಾಳ ಅರಂತಹ ಯುವ ತರಬೇತುದಾರರು, ಅಖಿಲೇಶ್ ಜಾಧವ್, ಮಿಸರ್ಜ್ ಜಾವೂರ್ ಮೊದಲಾದ ಯುವ ಆಟಗಾರರು ಧಾರವಾಡದಿಂದ ಸ್ಪರ್ಧೆಯಲ್ಲಿದ್ದಾರೆ. ವಿಶ್ವವಿದ್ಯಾಲಯದ ಮಟ್ಟದಲ್ಲಿ ಸಾಕಷ್ಟು ಮಿಂಚುವ ಆಟಗಾರರು ಇದ್ದಾರೆ.

ಟೆನಿಸ್ ಈ ಭಾಗದಲ್ಲಿ ಬೆಳೆಯಬೇಕಾದರೆ ಇನ್ನಷ್ಟು ಉತ್ತಮ ಸೌಲಭ್ಯಗಳು ಬೇಕು. ಕ್ರೀಡಾ ಸೌಲಭ್ಯಗಳು ಉತ್ತಮಗೊಳ್ಳಬೇಕು ಎನ್ನುವ ಆಗ್ರಹ ಕ್ರೀಡಾಸಕ್ತರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT