ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀವ್ ಹಂತಕರ ಕ್ಷಮೆ ಅರ್ಜಿ ಪುನರ್‌ಪರಿಶೀಲನೆಗೆ ತಮಿಳುನಾಡು ವಿಧಾನಸಭೆ ನಿರ್ಣಯ

Last Updated 30 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಚೆನ್ನೈ, (ಪಿಟಿಐ, ಐಎಎನ್‌ಎಸ್): ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿರುವ ಮೂವರು ಹಂತಕರ ಕ್ಷಮಾದಾನ ಅರ್ಜಿಯನ್ನು ಪುನರ್ ಪರಿಶೀಲಿಸಬೇಕು ಎಂದು ರಾಷ್ಟ್ರಪತಿ ಅವರನ್ನು ಒತ್ತಾಯಿಸುವ ಒಕ್ಕೊರಲಿನ ನಿರ್ಣಯವನ್ನು ತಮಿಳುನಾಡು ವಿಧಾನಸಭೆ ಮಂಗಳವಾರ ಅಂಗೀಕರಿಸಿದೆ.

ಹಂತಕರಾದ ಮುರುಗನ್, ಸಂತಾನ್ ಮತ್ತು ಪೇರ್ ಅರಿವಳನ್ ಅವರಿಗೆ ನೀಡಲಾಗಿರುವ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಬೇಕು ಎಂದು ಕೋರುವ ನಿರ್ಣಯವನ್ನು ಮುಖ್ಯಮಂತ್ರಿ ಜಯಲಲಿತಾ ಮಂಡಿಸಿದರು. ನಿರ್ಣಯವನ್ನು ಅವಿರೋಧವಾಗಿ ಅಂಗೀಕರಿಸುವಂತೆ ಅವರು ಈ ಸಂದರ್ಭದಲ್ಲಿ ಮನವಿ ಮಾಡಿದರು.

ಶೀಘ್ರದಲ್ಲೇ ಗಲ್ಲು ಶಿಕ್ಷೆ ಜಾರಿ ಮಾಡುತ್ತಿರುವುದರಿಂದ ರಾಜ್ಯದ ಜನ ದುಃಖಿತರಾಗಿದ್ದಾರೆ. ಆದ್ದರಿಂದ ಕ್ಷಮಾದಾನ ಅರ್ಜಿಯನ್ನು ಪುನರ್‌ಪರಿಶೀಲಿಸಿ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಮಾರ್ಪಡಿಸಬೇಕು ಎಂದು ನಿರ್ಣಯ ಒತ್ತಾಯಿಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ವಿವಿಧ ಪಕ್ಷಗಳ ಮುಖಂಡರು, ಇದೇ ಅಭಿಪ್ರಾಯ ವ್ಯಕ್ತಪಡಿಸಿದರು.

ಸಂಭ್ರಮಿಸಿದ ಜನ: ರಾಜೀವ್ ಹಂತಕರ ಗಲ್ಲು ಶಿಕ್ಷೆಗೆ ಮದ್ರಾಸ್ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿರುವುದರಿಂದ ಚೆನ್ನೈ ಮತ್ತು ಇತರ ನಗರಗಳಲ್ಲಿ ಜನ ಸಂಭ್ರಮಪಟ್ಟರು.

ಕ್ಷಮಾದಾನ ಅರ್ಜಿಯ ಪುನರ್‌ಪರಿಶೀಲನೆಗೆ ರಾಷ್ಟ್ರಪತಿಯನ್ನು ಒತ್ತಾಯಿಸುವ ನಿರ್ಣಯವ್ನು ವಿಧಾನಸಭೆ ಅಂಗೀಕರಿಸಿದಾಗಲೂ ಜನ ಸಂತಸಪಟ್ಟರು. ಎಲ್ಲೆಡೆ ಜಯಕಾರ ಹಾಕಿ, ಪಟಾಕಿಗಳನ್ನು ಸಿಡಿಸಿದರು. ಗಲ್ಲು ಶಿಕ್ಷೆ ವಿರೋಧಿಸಿ ರಾಜ್ಯದ ವಿವಿಧ ಕಡೆಗಳಲ್ಲಿ ಪ್ರತಿಭಟನೆಗಳನ್ನು ನಡೆಸಲಾಯಿತು.

ಕಾನೂನು ಗೌರವಿಸಬೇಕು: `ಈ ದೇಶದ ಕಾನೂನನ್ನು ಗೌರವಿಸಲೇಬೇಕು~ ಎಂದು ತಮಿಳುನಾಡು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ವಿ.ತಂಗಬಾಲು ಹೇಳಿದ್ದಾರೆ.

 ಗಲ್ಲು ಶಿಕ್ಷೆಗೆ ಮದ್ರಾಸ್ ಹೈಕೋರ್ಟ್ ಎಂಟು ವಾರಗಳ ತಡೆಯಾಜ್ಞೆ ನೀಡಿರುವುದಕ್ಕೆ ಮತ್ತು ರಾಜ್ಯ ವಿಧಾನಸಭೆ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಮಾರ್ಪಡಿಸಬೇಕು ಎಂದು ರಾಷ್ಟ್ರಪತಿ ಅವರನ್ನು ಒತ್ತಾಯಿಸುವ ನಿರ್ಣಯ ಅಂಗೀಕರಿಸಿರುವುದಕ್ಕೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT