ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀವ್‌ಗಾಂಧಿ ಚೈತನ್ಯ ಯೋಜನೆ ಅನುಷ್ಠಾನಕ್ಕೆ ನಿರ್ಧಾರ

Last Updated 6 ಡಿಸೆಂಬರ್ 2013, 11:09 IST
ಅಕ್ಷರ ಗಾತ್ರ

ಕೊಪ್ಪ: ರಾಜೀವ್‌ಗಾಂಧಿ ಚೈತನ್ಯ ಯೋಜನೆಯಡಿ ತಾಲ್ಲೂಕಿನ 22 ಗ್ರಾಮ ಪಂಚಾಯಿತಿಗಳ ತಲಾ 50 ಜನ ನಿರುದ್ಯೋಗಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಉದ್ಯೋಗ ಮತ್ತು ತರಬೇತಿ ನೀಡಲು ತಾ.ಪಂ. ಅಭಿವೃದ್ಧಿ ಪರಿಶೀಲನಾ ಸಭೆ ನಿರ್ಧರಿಸಿತು.

ತಾ.ಪಂ. ಅಧ್ಯಕ್ಷೆ ಪದ್ಮಾವತಿ ರಮೇಶ್ ಅಧ್ಯಕ್ಷತೆಯಲ್ಲಿ ಗುರುವಾರ ಸೇರಿದ್ದ ತಾ.ಪಂ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಾರ್ಯ­ನಿರ್ವಹಣಾಧಿಕಾರಿ ಜಿ.ಸಿ. ತಿಪ್ಪೇಶ್ ಅವರು ಸರ್ಕಾರ ಅನುಷ್ಠಾನಗೊಳಿಸಲು ಮುಂದಾಗಿ­ರುವ ರಾಜೀವ್ ಗಾಂಧಿ ಯುವ ಚೈತನ್ಯ ಯೋಜನೆ ಬಗ್ಗೆ ಮಾಹಿತಿ ನೀಡಿದರು.

ರಾಜ್ಯ ಸರ್ಕಾರ ಗ್ರಾಮೀಣ ಭಾಗದ ಯುವಜನರ ಆರ್ಥಿಕ ಮಟ್ಟ ಸುಧಾರಿಸಲು, ಉದ್ಯೋಗಕ್ಕಾಗಿ ಪಟ್ಟಣಕ್ಕೆ ವಲಸೆ ಹೋಗು­ವುದನ್ನು ತಡೆಯಲು ರಾಷ್ಟ್ರೀಯ ಗ್ರಾಮೀಣ ಸಂವರ್ಧನಾ ಅಭಿಯಾನದ ಭಾಗವಾಗಿ ರಾಜೀವ್ ಗಾಂಧಿ ಯುವ ಚೈತನ್ಯ ಯೋಜನೆ ರೂಪಿಸಿದ್ದು, 2ಲಕ್ಷ ಗ್ರಾಮೀಣ ಯುವಜನರಿಗೆ ಸ್ವ ಉದ್ಯೋಗ ಮತ್ತು ವೃತ್ತಿ ತರಬೇತಿ ಮೂಲಕ ಉದ್ಯೋಗಾವಕಾಶ ಕಲ್ಪಿಸಲು ಮುಂದಾಗಿದೆ. ಇದಕ್ಕಾಗಿ ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಶೇ. 50ರಷ್ಟು ಪರಿಶಿಷ್ಟ ಜಾತಿ, ಪಂಗಡ, ಶೇ. 3ರಷ್ಟು ಅಂಗವಿಕಲರನ್ನು ಒಳಗೊಂಡ ಎಲ್ಲಾ ವರ್ಗದ 50 ಯುವಜನರನ್ನು ವಿಶೇಷ ಗ್ರಾಮಸಭೆಯಲ್ಲಿ ಆಯ್ಕೆ ಮಾಡಿ ಪಟ್ಟಿ ಸಲ್ಲಿಸಬೇಕು. ಇದೇ ತಿಂಗಳ 8ರಿಂದ ವಿಶೇಷ ಗ್ರಾಮಸಭೆಗಳನ್ನು ಏರ್ಪಡಿಸ­ಲಾಗುವುದು. 8ನೇ ತರಗತಿಯಿಂದ ಪದವಿವರೆಗೆ ಶಿಕ್ಷಣ ಪಡೆದು ನಿರುದ್ಯೋಗಿಗಳಾಗಿರುವ ಯುವಜನರನ್ನು ಆಯ್ಕೆ ಮಾಡಲು ಜನ ಪ್ರತಿನಿಧಿಗಳು ಸಹಕರಿಸುವಂತೆ ಮನವಿ ಮಾಡಿದರು. ಸಭೆ ಅನುಮೋದಿಸಿತು.

ಕೊಪ್ಪದಲ್ಲಿ ಭತ್ತ ಖರೀದಿ ಕೇಂದ್ರ ಆರಂಭಿಸುವ ವಿಚಾರ ತಾ.ಪಂ. ಗಮನಕ್ಕೆ ತರದಿರುವ ಬಗ್ಗೆ ಅಧ್ಯಕ್ಷೆ ಪದ್ಮಾವತಿ ಆಕ್ಷೇಪ ವ್ಯಕ್ತಪಡಿಸಿದರು. ಕಂದಾಯ ಇಲಾಖೆಯ ಇ–ದಾಖಲೆಗಳಲ್ಲಿ ಮನೆದಳದ ದಾಖಲೆ ದೊರೆಯ­ದಿರುವ ಬಗ್ಗೆ ಉಪಾಧ್ಯಕ್ಷ ಪೂರ್ಣಚಂದ್ರ ದೂರಿದರು. ಗ್ರಾಮಗಳಲ್ಲಿ ಸಮುದಾಯ ಕಣ ನಿರ್ಮಾಣಕ್ಕೆ ಗೊತ್ತುಪಡಿಸಿರುವ ರೂ. 90 ಸಾವಿರ ಅನುದಾನ ಸಾಲದು. ಸರ್ಕಾರ ನಿಗದಿ ಪಡಿಸಿದ ಕಣದ ವಿಸ್ತೀರ್ಣ (30X30 ಅಡಿ)  ಚಿಕ್ಕದಾಗುವುದರಿಂದ ಎರೆಡೆರಡು ಕಣಗಳನ್ನು ಒಟ್ಟಿಗೆ ನಿರ್ಮಿಸಲು ಅವಕಾಶ ಕಲ್ಪಿಸಬೇಕೆಂದು ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಆರ್. ನಾರಾಯಣ್ ನೀಡಿದ ಸಲಹೆಗೆ ಸಭೆ ಸಮ್ಮತಿಸಿತು.

ಅಬಕಾರಿ ಇಲಾಖೆ ಅಕ್ರಮ ಮದ್ಯ ಮಾರಾಟ ತಡೆಯುವಲ್ಲಿ ಕಠಿಣ ಕ್ರಮ ಕೈಗೊಳ್ಳದಿರುವ ಬಗ್ಗೆ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು. ಬೆತ್ತದ­ಕೊಳಲು, ಮೆಣಸಿನಹಾಡ್ಯ, ಬೆಂಡೆಹಕ್ಲು, ಕಿತ್ಲಗುಳಿ ಮೊದಲಾದೆಡೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮೆಸ್ಕಾಂ ರೂ 58 ಲಕ್ಷದ ಯೋಜನೆ ಸಿದ್ಧಗೊಳಿಸಿದ್ದು ಅನುದಾನ ಒದಗಿಸಲು ಜಿಲ್ಲಾಧಿಕಾರಿಗಳನ್ನು ಕೋರಲು ಸಭೆ ನಿರ್ಧರಿಸಿತು.

ಜಿ.ಪಂ. ಸದಸ್ಯೆ ಅನ್ನಪೂರ್ಣ ಚನ್ನಕೇಶವ್, ತಾ.ಪಂ. ಸದಸ್ಯೆ ಸುಭದ್ರಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎನ್. ಪ್ರಕಾಶ್, ತೋಟಗಾರಿಕಾ ಸಹಾಯಕ ನಿರ್ದೇಶಕಿ ರೇಖಾ, ಉಪ ತಹಶೀಲ್ದಾರ್ ಮಮತಾಜ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪುರುಷೋತ್ತಮ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT