ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಚಲನಚಿತ್ರ ಪ್ರಶಸ್ತಿ ಯಾರ ಸಂತೋಷಕ್ಕಾಗಿ!

Last Updated 27 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಈ ಸಾಲಿನ ಚಲನಚಿತ್ರ ಪ್ರಶಸ್ತಿ ಆಯ್ಕೆಯ ಬಗ್ಗೆ ಅವಲೋಕಿಸಿದಾಗ ಚಿತ್ರೋದ್ಯಮದವರಲ್ಲಾಗಲಿ ಜನಸಾಮಾನ್ಯರಲ್ಲಾಗಲಿ ಅಂತಹ ಉತ್ಸಾಹದ ಪ್ರತಿಕ್ರಿಯೆಗಳುಂಟಾಗಲಿಲ್ಲವೆಂಬುದು ವೇದ್ಯ.

`ನಮ್ಮ ಸದಸ್ಯರು ಯಾವ ಚಿತ್ರಕ್ಕೆ ಹೆಚ್ಚು ಅಂಕಗಳನ್ನು ಕೊಟ್ಟರೋ ಅಂತಹ ಚಿತ್ರಗಳಿಗೆ ಪ್ರಶಸ್ತಿ ಕೊಟ್ಟಿದ್ದೇವೆ. ಕಮರ್ಷಿಯಲ್ ಕಲಾತ್ಮಕ ಎಂಬ ಭೇದ ತೋರದೆ ಚಿತ್ರಗಳನ್ನು ನೋಡಿ ಪ್ರಶಸ್ತಿ ಆರಿಸಿದ್ದೇವೆ~ ಎನ್ನುತ್ತಾರೆ ಸೂತ್ರಧಾರ ದ್ವಾರಕೀಶ್.

ಆದರೆ ಇನ್ನೂ ಬಿಡುಗಡೆಯಾಗದ, ಯಾರೂ ನೋಡದಂತಹ ಸಿನಿಮಾಗಳಿಗೂ ಪ್ರಶಸ್ತಿ ನೀಡುವ ಕೆಟ್ಟ ಸಂಪ್ರದಾಯವನ್ನು ಮುಂದುವರೆಸಲಾಗಿದೆ. `ರಸಋಷಿ ಕುವೆಂಪು~ ಚಿತ್ರ ಅದು ಚಿತ್ರವೋ ಡಾಕ್ಯುಮೆಂಟರಿ ಚಿತ್ರವೋ ಎಂಬ ಸಂಶಯವೂ ಇದೆ.
 
ಹೀಗಿರುವಾಗ ಚಿತ್ರಕ್ಕೆ ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ ಬಂದಿರುವುದರ ಹಿನ್ನೆಲೆಯಲ್ಲಿ ಕೇವಲ ಕುವೆಂಪು ಅವರ ಹೆಸರಿನ ಪ್ರಭಾವವೇ ಹೆಚ್ಚಿರುವಂತಿದೆ. `ವಿಷ್ಣು ತಮ್ಮ ಗೆಳೆಯ ಎನ್ನುವ ಒಂದೇ ಕಾರಣಕ್ಕಾಗಿ ಪ್ರಶಸ್ತಿ ನೀಡಲಾಗಿಲ್ಲ~ವೆಂಬ ದ್ವಾರಕೀಶರ ಮಾತನ್ನು ಅನುಮಾನದಿಂದಲೇ ನೋಡುವಂತಾಗಿರುವುದು ಪರಿಸ್ಥಿತಿಯ ಚೋದ್ಯ.

 ತಾವು ತಮ್ಮ ಚಿತ್ರಕ್ಕೆ ಹೊಂದಲಿ ಬಿಡಲಿ `ವಿಷ್ಣುವರ್ಧನ್~ ಹೆಸರನ್ನಿಟ್ಟು ಆ ಮೂಲಕ ಕಲೆಕ್ಷನ್ ಮೇಲೆ ಕಣ್ಣಿಟ್ಟಿರುವ ಹಾಗೂ ಹೆಸರಿನ ಬಗ್ಗೆ ವಾದವಿವಾದಗಳಿರುವುದರಿಂದ `ನಿರೀಕ್ಷಣಾ ಜಾಮೀನು~ ಪಡೆಯುವ ಹುನ್ನಾರವೇ ವಿಷ್ಣು ಅವರಿಗೆ ಪ್ರಶಸ್ತಿ ಸಿಕ್ಕಲು ಕಾರಣವಾಗಿರಬಹುದೆ? `ಮರಣೋತ್ತರ ಪ್ರಶಸ್ತಿ~ ಕೊಡುವ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿರುವುದರಲ್ಲಿ ಕೂಡ ಸರ್ವಾನುಮತವಿದ್ದಂತಿಲ್ಲ.
 
ಇನ್ನು ನಟಿ ಅನು ಪ್ರಭಾಕರ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಗಿರುವ `ಪರೀಕ್ಷೆ~ ಚಿತ್ರವನ್ನು ಪ್ರೇಕ್ಷಕ ನೋಡಿದ್ದರಲ್ಲವೆ ಪರೀಕ್ಷೆಯ ಮಾತು! ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಹಿರಿಯರಾದ ಸಿ.ವಿ. ಶಿವಶಂಕರ್ ಅವರಿಗೆ ನೀಡಲಾಗಿರುವುದರಲ್ಲಿ ದಾಕ್ಷಿಣ್ಯ ಕೆಲಸ ಮಾಡಿದಂತಿದೆ. ಏಕೆಂದರೆ 58 ವರ್ಷದಿಂದ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಶಿವಶಂಕರ್ ನಿರ್ದೇಶನಕ್ಕಿಂತ ಗೀತರಚನಕಾರರಾಗಿಯೇ ಹೆಚ್ಚು ದುಡಿದವರು.
ಇನ್ನು ನಟಿ ಅನುಪ್ರಭಾಕರ್ ಅವರೇ `ನಾನು ಪ್ರಶಸ್ತಿಯನ್ನು ನಿರೀಕ್ಷಿಸಿರಲೇ ಇಲ್ಲ~ ಎನ್ನುತ್ತಾರೆ!

ವಿಶೇಷ ಸಾಮಾಜಿಕ ಪರಿಣಾಮ ಬೀರುವ ಚಿತ್ರಗಳಿಗೆಂದು ಪ್ರಶಸ್ತಿಯನ್ನೇನೋ ನೀಡುತ್ತಾರೆ. ಅವು ಚಲನಚಿತ್ರ ಮಂದಿರಗಳಲ್ಲಿ ಪ್ರದರ್ಶನವಾಗಿ ಜನ ನೋಡಿ ಜನಸಾಮಾನ್ಯರ ಮೇಲೆ ಪರಿಣಾಮ ಬೀರಿದರಲ್ಲವೆ ಪ್ರಶಸ್ತಿ ಕೊಟ್ಟಿದ್ದಕ್ಕೂ ಒಂದು ಸಾರ್ಥಕತೆ. `ಕನಸೆಂಬ ಕುದುರೆಯನೇರಿ~ ಚಿತ್ರದ ಪ್ರಮುಖ ಪಾತ್ರಧಾರಿ ಬಿರಾದಾರ್ ಹಾಗೂ ಕಥೆಗಾರ ಅಮರೇಶ ನುಗಡೋಣಿ ಅವರಿಗೆ ರಾಜ್ಯ ಪ್ರಶಸ್ತಿ ನೀಡುವಾಗಲೂ ಅನ್ಯಾಯವಾಗಿದೆಯಲ್ಲವೆ. ಬೇರೆ ಬೇರೆ ಕಾರಣ, ಸ್ವಹಿತಾಸಕ್ತಿಗಳಿಂದಾಗಿ ಈ ವಿಭಾಗಗಳಲ್ಲಿ ಅನ್ಯರಿಗೆ ಮನ್ನಣೆ ದೊರಕಿರುವುದು ಗಮನಾರ್ಹ.

 ಇನ್ನು ಅತ್ಯುತ್ತಮ ಗಾಯಕ ಪ್ರಶಸ್ತಿ `ಟಿಪ್ಪು~ಗೆ ಸಂದಾಯವಾಗಿದೆ. ಅದೂ `ಏ ಪಾರು~ ಎಂಬ ಅಧ್ವಾನದ ಹಾಡಿಗೆ. ಟಿಪ್ಪುವೇ ಆಗಲಿ ಶಂಕರ ಮಹದೇವನ್, ಸೋನು ನಿಗಮ್, ಶ್ರೇಯಾ ಇವರೆಲ್ಲಾ ಅದ್ಭುತ ಗಾಯಕರೆಂಬುದರಲ್ಲಿ ಎರಡು ಮಾತಿಲ್ಲ. ಅವರುಗಳಿಗೇ ಹೆಚ್ಚಿನ ಅವಕಾಶ, ಸಂಭಾವನೆಯೂ ಸಂದಾಯವಾಗುತ್ತಿದೆ.

ನಮ್ಮ ಕನ್ನಡದ ಗಾಯಕ ಗಾಯಕಿಯರಿಗೆ ಈಗಾಗುತ್ತಿರುವ ಅನ್ಯಾಯ ಸಾಲದೆಂಬಂತೆ ಪರಭಾಷಾ ಗಾಯಕರುಗಳಿಗೆ ಇನ್ನು ಪ್ರಶಸ್ತಿಯನ್ನೂ ನೀಡುತ್ತಾ ಬಂದರೆ ನಮ್ಮವರು ಗಾಯನ, ಪ್ರಶಸ್ತಿ ಎರಡರಿಂದಲೂ ನಿರಂತರವಾಗಿ ವಂಚಿತರಾಗಿ ಬಿಡುವ ಸಾಧ್ಯತೆ ಇದೆ.
 
ನಮ್ಮ ಚೇತನ್, ರಾಜೇಶ್ ಕೃಷ್ಣನ್, ನಂದಿತ, ಹೇಮಂತ್, ಪಲ್ಲವಿ ಇವರ ಪಾಡೇನು? ಇವರೇನು ಮಧುರ ಗಾಯಕರಲ್ಲವೆ? ಇವರು ಹಾಡಿದ ಹಾಡುಗಳೂ ಜನಪ್ರಿಯವಾಗಿವೆ ಎಂಬುದನ್ನಾದರೂ ಪರಿಶೀಲನೆಗೆ ಎತ್ತಿಕೊಂಡಾದರೂ ಪ್ರಶಸ್ತಿ ಕೊಟ್ಟ (ಅವಕಾಶವಂತೂ ಇಲ್ಲ) ಪ್ರೋತ್ಸಾಹಿಸಬಹುದಿತ್ತೇನೋ.

 ಎಸ್.ಡಿ. ಅಂಕಲಗಿ ಎಂಬ ನಿರ್ಮಾಪಕರು ಹೆಚ್ಚು ವಿಷ್ಣುವರ್ಧನ್ ಅವರನ್ನೇ ಹಾಕಿಕೊಂಡು ಚಿತ್ರ ನಿರ್ಮಿಸಿದರೆಂಬ ಆಶಯವೋ ದಾಕ್ಷಿಣ್ಯವೋ ಯಾವುದೋ ಒಂದು ವರ್ಕ್‌ಔಟ್ ಆಗಿರುವಂತಿದೆಯೆಂದು ಅನ್ನಿಸುವುದಿಲ್ಲವೆ? ಭಟ್ಟರ `ಮನಸಾರೆ~ಗೆ ಪ್ರಶಸ್ತಿ ಗಿಟ್ಟಿರುವುದರ ಹಿನ್ನೆಲೆಯಲ್ಲಿ ಕೂಡ ಬಂಧುಗಳ ಪ್ರಭಾವ ಕಾಣಬಹುದು.

ಪೋಷಕ ಪಾತ್ರಗಳಲ್ಲಿ ಈ ವರ್ಷ ಮಿಂಚಿದವರಲ್ಲಿ ರಂಗಾಯಣ ರಘು ಅಗ್ರಗಣ್ಯರು. ಅವರನ್ನು ಬೇಕೆಂದೇ ಕಡೆಗಣಿಸಲಾಗಿರುವುದರ ಹಿನ್ನೆಲೆಯಲ್ಲಿ ಅವರು ಜನಪ್ರಿಯರಾಗಿದ್ದೇ ತಪ್ಪೇನೋ! ಹೀಗೆ ಪರಿಶೀಲಿಸುತ್ತಾ ಹೋದಾಗ ಯಾವ ಸಿನಿಮಾಗಳಿಗೂ ತಕ್ಕ ಮಾನ್ಯತೆ ಲಭ್ಯವಾಗದೆ ತಮ್ಮವರನ್ನು ತೃಪ್ತಿಪಡಿಸಲೆಂದೇ ಪ್ರಶಸ್ತಿಗಳನ್ನು ಸಾರಾಸಗಟಾಗಿ ಹಂಚಿರುವುದು ಎಂಥವರಿಗೂ ಅರ್ಥವಾಗದಿರದು.

ಜೀವಮಾನ ಸಾಧನೆಯ ಪ್ರಶಸ್ತಿಗಳಂತೂ ಪೂರ್ವನಿರ್ಧರಿತವೇನೋ ಎಂಬ ಸಂಶಯ ಮೂಡಿಸದಿರವು. ಎಲ್ಲಾ ವರ್ಷವೂ ಪ್ರಶಸ್ತಿ ಪ್ರಕಟವಾದೊಡನೆ ಅಪಸ್ವರಗಳೇಳುವುದು ಸಾಮಾನ್ಯವಾಗಿ ಬಿಟ್ಟಿದೆಯಾದರೂ ಈ ಸಲದ ಆಯ್ಕೆ ಸಮಿತಿ `ನಾವು ಗುಣಮಟ್ಟದ ಆಧಾರದ ಮೇಲೆ ಪ್ರಶಸ್ತಿಗಳನ್ನು ವಿತರಿಸಿದ್ದೇವೆ; ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿದೆ.

2004ರಲ್ಲಿ ನನ್ನನ್ನು ಕೂಡ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಿತಿಗೆ ಸದಸ್ಯನನ್ನಾಗಿ ಸರ್ಕಾರ ಆಯ್ಕೆ ಮಾಡಿತ್ತು. ಆಗ ನನ್ನ ಮೇಲೆ ಒತ್ತಡಗಳೂ ಬಂದವು. ಹಣದ ಆಮಿಷವನ್ನೂ ಒಡ್ಡಲಾಯಿತು. ಹೀಗಾಗಿ ಬಹಳ ಯೋಚಿಸಿ ಇದರ ಗೊಡವೆಯೇ ಬೇಡವೆಂದವನೇ ರಾಜೀನಾಮೆ ನೀಡಿದೆ. ಆಗ ಅಧಿಕಾರಿಗಳಾಗಿದ್ದವರು ರಾಜೀನಾಮೆ ವಾಪಸ್ ಪಡೆಯಲು ಒತ್ತಡ ತಂದರು.

`ದುರ್ಗದಲ್ಲಿದ್ದೇನೆ, ತಿಂಗಳುಗಟ್ಟಲೆ ಬೆಂಗಳೂರಿನಲ್ಲಿ ನೀವು ಕೊಡುವ ಟಿ.ಎ. ಡಿ.ಎ. ನಲ್ಲಿ ಇರಲಾಗದು~ ಎಂದೆ. ಆಗ `ನೀವು ಅನುಕೂಲವಾದಾಗ ಬಂದು ಚಿತ್ರಗಳನ್ನು ನೋಡಿಕೊಂಡು ಹೋಗಬಹುದು. ಎಲ್ಲಕ್ಕೂ ನಂಬರ್ ಹಾಕಿದರಾಯಿತು. ಬೇರೆಯವರೆಲ್ಲಾ ಇರುತ್ತಾರಲ್ಲಾ~ ಎಂದು ಅವರಿವರಿಂದ ಶಿಫಾರಸ್ ಮಾಡಿಸಿದ ಮೇಲಂತೂ ಹೀಗೂ ಉಂಟೆ ಎಂದು ಮತ್ತಷ್ಟು ಗಾಬರಿಯಾಗಿ `ದಯಮಾಡಿ ನನ್ನ ರಾಜೀನಾಮೆ ಅಂಗೀಕರಿಸಿ, ನಾನು ಒಂದೆರಡು ಚಿತ್ರಗಳಿಗೆ ತುರ್ತಾಗಿ ಸಂಭಾಷಣೆ ಬರೆದು ಕೊಡುವುದಿದೆ~ ಎಂಬ ವಿವರಣೆ ನೀಡಿ ವಿರಮಿಸಿದೆ.

ಕೆಲವು ನಿರ್ಮಾಪಕರು ನನಗೆ ತಿಂಗಳುಗಟ್ಟಲೆ ಒಳ್ಳೆ ಹೋಟೆಲ್‌ನಲ್ಲಿ ಊಟ ವಸತಿ ಒದಗಿಸಲೂ ಸಿದ್ಧರಾಗಿದ್ದರು. ಇದೆಲ್ಲಾ ಸಹಜವೇನೋ. ಇಂತಹ ಅನುಭವ ನನ್ನದೊಬ್ಬನದಲ್ಲ. ಕಡೆಯವನದೂ ಅಲ್ಲ. ಇದೆಲ್ಲಾ ಬರಿ `ಓಳು~ ಅಂದರೆ ಅದು ಆತ್ಮವಂಚನೆಯಷ್ಟೆ.

ವಿಶೇಷ ಪ್ರಶಸ್ತಿ ನೀಡುವುದರಲ್ಲೂ ವಿಶೇಷ ಕಾಣದೆ ಸಮಾಧಾನಕರ ಬಹುಮಾನ ನೀಡಿದಂತಿದೆ. ನಂಬಲರ್ಹ ಮೂಲಗಳ ಪ್ರಕಾರ ಪ್ರಶಸ್ತಿ ಆಯ್ಕೆಯ ಅಂತಿಮ ಸಭೆ ನಡೆಯುವ ವೇಳೆಗಾಗಲೆ ಕೆಲವು ಪ್ರಶಸ್ತಿಗಳು ನಿರ್ಧಾರವಾಗಿ ಹೋಗಿದ್ದವು. ಬಂದಿರುವ ಪ್ರಶಸ್ತಿಗಳೆಲ್ಲಾ ನಮ್ಮ ಕನ್ನಡದ ನಟ ನಟಿಯರಿಗೆ, ತಂತ್ರಜ್ಞರಿಗೆ ಇದರಲ್ಲಿ ಅಸೂಯೆ ಪಡುವಂತದ್ದೇನಿಲ್ಲವಾದರೂ ಅರ್ಹರು ವಂಚಿತರಾಗಬಾರದಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT