ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಮಟ್ಟದ ಬಂಜಾರಾ ಸಮ್ಮೇಳನದಲ್ಲಿ ಯಡಿಯೂರಪ್ಪ

Last Updated 19 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಈ ಯಡಿಯೂರಪ್ಪ ಯಾವಾಗಲೂ ಶೋಷಿತರ ಪರವಾಗಿಯೇ ಇರೋದು. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲು ಸದಾ ಸಿದ್ಧನಿದ್ದೇನೆ. ನೀವು ನನ್ನ ಮೇಲಿಟ್ಟ ನಂಬಿಕೆಗೆ ದ್ರೋಹ ಬಗೆಯೋದಿಲ್ಲ. ಬೇಕಾದರೆ ಇದನ್ನು ರಕ್ತದಲ್ಲಿ ಬರೆದು ಕೊಡ್ತೀನಿ...~ ಹೀಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾವುಕರಾಗಿ ನುಡಿದದ್ದು ಭಾನುವಾರ ಇಲ್ಲಿಯ ನೆಹರೂ ಮೈದಾನದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಬಂಜಾರಾ ಸಮ್ಮೇಳನದಲ್ಲಿ.

ತಮ್ಮ ಮಾತಿನುದ್ದಕ್ಕೂ ಬಂಜಾರಾ ಸಮಾಜದ ಏಳಿಗೆಗಾಗಿ ಕೈಗೊಂಡ ಕಾರ್ಯಕ್ರಮಗಳನ್ನು ವಿವರಿಸಿದ ಅವರು, `ನಿಮ್ಮ ಮಕ್ಕಳಿಗೆ ಶಿಕ್ಷಣ ನೀಡುತ್ತೀರಿ ಎಂದು ಪ್ರಮಾಣ ಮಾಡಬೇಕು.

ವಿದ್ಯೆಯಿಂದ ಮಾತ್ರ ನೀವು ಸಮಾಜದಲ್ಲಿ ಮೇಲೆ ಬರಬಲ್ಲಿರಿ. ನಿಮ್ಮ ಯಾವುದೇ ಸಮಸ್ಯೆಗಳನ್ನು ತಂದುಕೊಟ್ಟರೂ ನಾನು ಪರಿಹರಿಸಲು ಸಿದ್ಧ. ನಿಮ್ಮ ಸಮಾಜದ ಏಳಿಗೆಯ ಉದ್ದೇಶದಿಂದಲೇ ಏಳು ಮಂದಿ ಶಾಸಕರು ಹಾಗೂ ಒಬ್ಬರು ಸಚಿವರನ್ನು ನಿಮ್ಮ ಸಮುದಾಯದಿಂದಲೇ ಆಯ್ಕೆ ಮಾಡಲಾಗಿದೆ.

1445 ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ನಿರ್ಧರಿಸಲಾಗಿದೆ. ಬಂಜಾರಾ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಅದಕ್ಕೆ 200 ಕೋಟಿ ರೂಪಾಯಿ ಅನುದಾನವನ್ನು ಮೀಸಲಿಡಲಾಗಿದೆ. ಅದರಲ್ಲಿ ಈಗಾಗಲೇ ರೂ 140 ಕೋಟಿ ಬಳಕೆ ಮಾಡಲಾಗಿದೆ~ ಎಂದು ಹೇಳಿದರು.

`ಕೆಪಿಎಸ್‌ಸಿ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ವಿ.ವಿ.ಗಳಿಗೆ ಬಂಜಾರಾ ಸಮಾಜದವರನ್ನೇ ನೇಮಕ ಮಾಡಲಾಗಿದೆ. ಬೆಂಗಳೂರಿಗೆ ಬಂದರೆ ವಾಸ್ತವ್ಯ ಹೂಡಲು ವಸಂತ ನಗರದಲ್ಲಿ 10 ಕೋಟಿ ವೆಚ್ಚದಲ್ಲಿ ಸಮುದಾಯ ಭವನ, ಅಲ್ಲದೇ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ವಿಜಾಪುರ ಜಿಲ್ಲೆಗಳಲ್ಲಿಯೂ ತಲಾ ಎರಡು ಕೋಟಿ ವೆಚ್ಚದಲ್ಲಿ ಸಮುದಾಯ ಭವನವನ್ನು ಕಟ್ಟಿಸಲಾಗುತ್ತಿದೆ~ ಎಂದು ಅವರು ನುಡಿದರು.

ಸಚಿವ ಜಗದೀಶ ಶೆಟ್ಟರ ಮಾತನಾಡಿ, `ನಾನು ಕಂದಾಯ ಸಚಿವನಾಗಿದ್ದ ಅವಧಿಯಲ್ಲಿಯೇ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ನಿರ್ಧಾರ ಮಾಡಲಾಯಿತು. ಒಂದು ಸೂಕ್ತ ನೆಲೆ ಇರದಿದ್ದ ಬಂಜಾರಾ ಸಮುದಾಯದವರಿಗೆ ನಗರದಲ್ಲಿ 10 ಎಕರೆ ಪ್ರದೇಶದಲ್ಲಿ ಬಂಜಾರಾ ಕಾಲೊನಿಯನ್ನು ನಿರ್ಮಿಸಲಾಗಿದೆ~ ಎಂದು ಹೇಳಿದರು.

ಮಹಾರಾಷ್ಟ್ರ ಪೌರಾದೇವಿಯಲ್ಲಿರುವ ಅಖಿಲ ಭಾರತ ಬಂಜಾರಾ ತೀರ್ಥ ಕ್ಷೇತ್ರದ ರಾಮರಾವ್ ಮಹಾರಾಜ್ ಸಾನ್ನಿಧ್ಯ ವಹಿಸಿದ್ದರು. ಬಂಜಾರಾ ಗುರುಪೀಠದ ತಿಪ್ಪೇಶ್ವರ ಸ್ವಾಮೀಜಿ ಸೇರಿದಂತೆ ಹಲವು ಸ್ವಾಮೀಜಿಗಳು ಭಾಗವಹಿಸಿದ್ದರು.

ಪಶು ಸಂಗೋಪನೆ ಸಚಿವ ರೇವುನಾಯಕ ಬೆಳಮಗಿ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಚಂದ್ರಕಾಂತ ಬೆಲ್ಲದ, ಎಸ್.ಐ.ಚಿಕ್ಕನಗೌಡ್ರ, ವೀರಭದ್ರಪ್ಪ ಹಾಲಹರವಿ, ಮೋಹನ ಲಿಂಬಿಕಾಯಿ, ಶ್ರೀನಿವಾಸ ಮಾನೆ, ಮಾಜಿ ಸಚಿವ ಎಚ್.ಕೆ.ಪಾಟೀಲ ಹಾಜರಿದ್ದರು.

 ಅಖಿಲ ಕರ್ನಾಟಕ ಕ್ಷತ್ರಿಯ ಮಹಸಭಾ ಅಧ್ಯಕ್ಷ ಹರಿ ಖೋಡೆ ಅವರು ರಾಮರಾವ್ ಮಹಾರಾಜ್ ಅವರಿಗೆ ಚಿನ್ನದ ಕಿರೀಟ ಕಾಣಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT