ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

Last Updated 18 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಅಡ್ವೊಕೇಟ್ ಜನರಲ್ ಅವರಿಗೆ ಪ್ರತ್ಯೇಕವಾದ ಕಚೇರಿ ನಿರ್ಮಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಈ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನ ನೇತೃತ್ವದ ಹೈಕೋರ್ಟ್ ವಿಭಾಗೀಯ ಪೀಠ ಆದೇಶಿಸಿದೆ.

ಈಗ ಹೈಕೋರ್ಟ್ ಕಟ್ಟಡದ ಮೂರು ಕಡೆ ಅಡ್ವೊಕೇಟ್ ಜನರಲ್ (ಎ.ಜಿ) ಅವರ ಕಚೇರಿ ಇದೆ. ಎ.ಜಿ. ಹಾಗೂ ಸಹಾಯಕ ಸಾಲಿಸಿಟರ್ ಜನರಲ್ (ಎಎಸ್‌ಜಿ) ಅವರಿಗೆ ಪ್ರತ್ಯೇಕ ಕಚೇರಿ ನಿರ್ಮಿಸಬೇಕು. ಹೈಕೋರ್ಟ್ ಪಕ್ಕ ಹೊಸದಾಗಿ ನಿರ್ಮಿಸಲಾಗುತ್ತಿರುವ ಕ್ಯಾಂಟೀನ್ ಕಟ್ಟಡದ ಬಳಿ ಎ.ಜಿ. ಹಾಗೂ ಎಎಸ್‌ಜಿ ಕಚೇರಿಗೆ ಕಟ್ಟಡ ನಿರ್ಮಿಸಬೇಕು ಎಂದು ಸಿ.ಎಂ. ಮಹೇಶ್ ಎಂಬುವವರು ಅರ್ಜಿಯಲ್ಲಿ ಕೋರಿದ್ದಾರೆ.

ಹಳೆ ಕೆಜಿಐಡಿ ಕಟ್ಟಡದಲ್ಲಿರುವ ಹೈಕೋರ್ಟ್ ವಿಚಕ್ಷಣಾ ಘಟಕವನ್ನು ಈಗ ಎ.ಜಿ. ಕಚೇರಿ ಇರುವಲ್ಲಿಗೆ ಸ್ಥಳಾಂತರಿಸಬೇಕು. ಹೈಕೋರ್ಟ್ ಆವರಣದಲ್ಲಿರುವ ಬ್ಯಾಂಕ್ ಹಾಗೂ ಅಂಚೆ ಕಚೇರಿಯನ್ನು ಹಳೆ ಕೆಜಿಐಡಿ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಪ್ರೆಸ್ ಕ್ಲಬ್ ಹಾಗೂ ಹಳೆ ಕೆಜಿಐಡಿ ಕಟ್ಟಡದ ನಡುವೆ ಇರುವ ಚುನಾವಣಾ ಆಯೋಗದ ಕಚೇರಿ ಶೀಘ್ರದಲ್ಲೇ ತೆರವಾಗುತ್ತಿದೆ. ಆ ಕಟ್ಟಡವನ್ನು ಕೆಡವಿ, ಅಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸಬೇಕು. ಬಹುಮಹಡಿ ಕಟ್ಟಡದಲ್ಲಿ ಹೈಕೋರ್ಟ್‌ನ ಹಿರಿಯ ವಕೀಲರಿಗೆ ಪ್ರತ್ಯೇಕ ಕೊಠಡಿಗಳನ್ನು ನಿರ್ಮಿಸಿಕೊಡಬೇಕು ಎಂದು ಕೋರಲಾಗಿದೆ. ವಿಚಾರಣೆ ಮುಂದೂಡಲಾಗಿದೆ.

ಬೀದಿ ನಾಯಿ ಹಾವಳಿ
ಬೀದಿ ನಾಯಿಗಳ ನಿಯಂತ್ರಣ ಸಂಬಂಧ ಹೊಸದಾಗಿ ಪ್ರಮಾಣಪತ್ರ ಸಲ್ಲಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹೈಕೋರ್ಟ್ ಗುರುವಾರ ಸೂಚನೆ ನೀಡಿದೆ.

ಬೀದಿ ನಾಯಿಗಳಿಂದ ತೊಂದರೆಗೆ ಒಳಗಾದ ಹಲವರು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ಹೈಕೋರ್ಟ್‌ನ ವಿಭಾಗೀಯ ಪೀಠ, ಬಿಬಿಎಂಪಿಗೆ ಈ ನಿರ್ದೇಶನ ನೀಡಿದೆ.

ಬೀದಿ ನಾಯಿಗಳ ನಿಯಂತ್ರಣ ಸಂಬಂಧ ಹಲವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ನಲ್ಲಿ ಬಿಬಿಎಂಪಿ ಕೂಡ ವಿಶೇಷ ಅನುಮತಿ ಅರ್ಜಿ ಸಲ್ಲಿಸಿದೆ. ಸಂತಾನಶಕ್ತಿ ಹರಣ ಕ್ರಮದಿಂದ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸುವುದು ಸಾಧ್ಯವಿಲ್ಲ ಎಂದು ಬಿಬಿಎಂಪಿ ಸುಪ್ರೀಂ ಕೋರ್ಟ್‌ನಲ್ಲಿ ಹೇಳಿದೆ. ಆದರೆ ಹೈಕೋರ್ಟ್‌ನಲ್ಲಿ ಇದಕ್ಕೆ ವ್ಯತಿರಿಕ್ತವಾಗಿ ಸಂತಾನಶಕ್ತಿ ಹರಣ ಕ್ರಮಕ್ಕೆ ಒಲವು ತೋರಿಸುತ್ತಿದೆ ಎಂದು ಅರ್ಜಿದಾರರ ಪರ ವಕೀಲರು ದೂರಿದರು.

ವಾದ ಆಲಿಸಿದ ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠ, ಹೊಸ ಪ್ರಮಾಣಪತ್ರ ಸಲ್ಲಿಸುವಂತೆ ಬಿಬಿಎಂಪಿಗೆ ಸೂಚನೆ ನೀಡಿ, ವಿಚಾರಣೆ ಮುಂದೂಡಿತು.

ಆನೆಗಳಿಗೆ ದಿಗ್ಬಂಧನ ಸರಿಯೇ: ಹೈಕೋರ್ಟ್ ಪ್ರಶ್ನೆ
ಬೆಂಗಳೂರು:
ಹಾಸನ ಜಿಲ್ಲೆಯ ಕಟ್ಟೆಪುರ - ಆಲೂರಿನ ಹೇಮಾವತಿ ನದಿ ಹಿನ್ನೀರು ಪ್ರದೇಶದಲ್ಲಿರುವ 25 ಆನೆಗಳನ್ನು ಸ್ಥಳಾಂತರಿಸುವ ಬದಲು, ಒಂದೆಡೆ ಹಿಡಿದಿಡುವುದು ಎಷ್ಟರಮಟ್ಟಿಗೆ ಪ್ರಯೋಜನಕಾರಿ ಎಂದು ಹೈಕೋರ್ಟ್ ಬುಧವಾರ ಪ್ರಶ್ನಿಸಿತು.

ಪ್ರಕರಣವೊಂದರ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ಹೈಕೋರ್ಟ್ ವಿಭಾಗೀಯ ಪೀಠ, `ವಿದ್ಯುತ್ ತಗುಲಿ ಆನೆಗಳು ಸಾಯದಂತೆ ವಿದ್ಯುತ್ ನಿಗಮಗಳು ಯಾವ ಕ್ರಮ ಕೈಗೊಂಡಿವೆ~ ಎಂದು ಪ್ರಶ್ನಿಸಿತು.

`ಆನೆಗಳ ಹಾವಳಿ ಹೆಚ್ಚಿರುವ ಸ್ಥಳದಲ್ಲಿ ಗಸ್ತು ಆರಂಭಿಸಲಾಗಿದೆ. ಆದರೆ ವಿದ್ಯುತ್ ತಂತಿಗಳು ಆನೆಗಳಿಗೆ ನಿಲುಕದಂತೆ ಮಾಡಲು ಎಷ್ಟು ಎತ್ತರದ ಕಂಬಗಳನ್ನು ಹಾಕಬೇಕು ಎಂಬ ಬಗ್ಗೆ ನಮಗೆ ಯಾವುದೇ ಸೂಚನೆ ಇಲ್ಲ~ ಎಂದು ಅಧಿಕಾರಿಗಳು ನ್ಯಾಯಪೀಠಕ್ಕೆ ತಿಳಿಸಿದರು.

`ಆನೆಗಳು ಸಾಮಾನ್ಯವಾಗಿ ಒಂಬತ್ತು ಅಡಿ ಎತ್ತರವಿರುತ್ತವೆ. ಅವು ಸೊಂಡಿಲು ಎತ್ತಿದರೆ 20 ಅಡಿ ಎತ್ತರದಲ್ಲಿರುವ ತಂತಿಯನ್ನೂ ಸ್ಪರ್ಶಿಸಬಲ್ಲವು~ ಎಂದು ನಿವೃತ್ತ ಅರಣ್ಯ ಅಧಿಕಾರಿ ಸಿ.ಎಚ್. ಬಸಪ್ಪನವರ್ ತಿಳಿಸಿದರು. ವಿದ್ಯುತ್ ಶಾಕ್ ತಗುಲಿ ಆನೆ ಸಾವನ್ನಪ್ಪಿದರೆ, ವಿದ್ಯುತ್ ಪ್ರಸರಣ ನಿಗಮಗಳ ಕೆಳ ಹಂತದ ಅಧಿಕಾರಿಗಳ ಮೇಲೆ ಮೊಕದ್ದಮೆ ದಾಖಲಿಸಬಹುದು ಎಂದು ವಕೀಲ ಬಿ.ಆರ್. ದೀಪಕ್ ತಿಳಿಸಿದರು. ವಿಚಾರಣೆಯನ್ನು ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT