ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಹೆದ್ದಾರಿ ಸಂಚಾರಕ್ಕೆ ಶುಲ್ಕ

Last Updated 3 ಫೆಬ್ರುವರಿ 2011, 17:45 IST
ಅಕ್ಷರ ಗಾತ್ರ


ಬೆಂಗಳೂರು: ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್) ಮತ್ತು ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಕೆ-ಶಿಪ್) ಮೂಲಕ ಅಭಿವೃದ್ಧಿಪಡಿಸಿರುವ ರಾಜ್ಯ ಹೆದ್ದಾರಿಗಳಲ್ಲಿ ರಸ್ತೆ ಬಳಕೆ ಶುಲ್ಕ (ಟೋಲ್) ಸಂಗ್ರಹಿಸಲು ಗುರುವಾರದ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಈ ಮೂಲಕ ಮೈಸೂರು- ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆಯ ಸುಮಾರು 5,000 ಕಿ.ಮೀ ಉದ್ದದ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸಲು ಇನ್ನು ಮುಂದೆ ರಸ್ತೆ ಬಳಕೆ ಶುಲ್ಕ ತೆರಬೇಕಾಗುತ್ತದೆ. ಸಂಪುಟ ಸಭೆ ತೆಗೆದುಕೊಂಡ ತೀರ್ಮಾನಗಳನ್ನು ಉನ್ನತ ಶಿಕ್ಷಣ ಸಚಿವ ಡಾ.ವಿ. ಎಸ್. ಆಚಾರ್ಯ ಸುದ್ದಿಗಾರರಿಗೆ ತಿಳಿಸಿದರು.

ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಈ ಶುಲ್ಕ ಸಂಗ್ರಹಿಸುತ್ತಿದ್ದು, ರಸ್ತೆಗಳ ನಿರ್ವಹಣೆಗೆ ವಾರ್ಷಿಕ 250 ಕೋಟಿ ರೂಪಾಯಿ ಬೇಕಾಗುತ್ತದೆ. ಈ ಮೊತ್ತವನ್ನು ರಸ್ತೆ ಬಳಕೆದಾರರಿಂದಲೇ ವಸೂಲಿ ಮಾಡಲಾಗುವುದು. ಒಂದು ಕಿ.ಮೀ ಉದ್ದದ ರಸ್ತೆ ಬಳಕೆಗೆ ಎಷ್ಟು ಹಣ ಸಂಗ್ರಹಿಸಬೇಕು... ಇತ್ಯಾದಿ ಅಂಶಗಳ ಬಗ್ಗೆ ಇಲಾಖೆಯೇ ತೀರ್ಮಾನ ತೆಗೆದುಕೊಂಡು ಯೋಜನೆಯನ್ನು ಜಾರಿ ಮಾಡಲಿದೆ. ಶುಲ್ಕ ಸಂಗ್ರಹಿಸುವ ದಿನಾಂಕವನ್ನು ಸಂಬಂಧಪಟ್ಟ ಇಲಾಖೆಯೇ ನಿಗದಿಪಡಿಸಲಿದೆ ಎಂದರು ಇತರ ರಾಜ್ಯಗಳಲ್ಲಿ ಶುಲ್ಕ ಸಂಗ್ರಹಣೆ ಯೋಜನೆ ಜಾರಿಯಲ್ಲಿದ್ದು, ರಸ್ತೆ ಅಭಿವೃದ್ಧಿಗೆ ಬಾಹ್ಯ ಸಂಸ್ಥೆಗಳು ಹಣಕಾಸಿನ ನೆರವು ನೀಡಿರುವುದರಿಂದ ಕೇಂದ್ರ ಸರ್ಕಾರ ಶುಲ್ಕ ವಸೂಲಿಗೆ ಸೂಚನೆ ನೀಡಿದೆ ಎಂದರು.

ಕರಾವಳಿಯಲ್ಲಿ ಅಭಿವೃದ್ಧಿ: ರಾಜ್ಯದ ಕರಾವಳಿ 320 ಕಿ.ಮೀ ಇದ್ದು, ಈ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಸಮುದ್ರದಿಂದ 200 ಮೀಟರ್ ಅಂತರದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಸಂಪುಟದಲ್ಲಿ ತೀರ್ಮಾನಿಸಲಾಗಿದೆ.ಪ್ರಸ್ತುತ 500 ಮೀಟರ್‌ವರೆಗೆ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವಂತಿಲ್ಲ. ಇದರಿಂದ ನೆರೆಯ ಗೋವಾ ಮತ್ತು ಕೇರಳದ ಕರಾವಳಿಯಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಯ ಹಾಗೆ ನಮ್ಮಲ್ಲಿ ಮಾಡಲು ಆಗುತ್ತಿಲ್ಲ. ಹೀಗಾಗಿ ನಮಗೆ ಅನುಕೂಲ ಮಾಡಿ ಎನ್ನುವ ಕೋರಿಕೆ ಸಲ್ಲಿಸಲಾಗುವುದು ತಿಳಿಸಿದರು.

ತಜ್ಞ ವೈದ್ಯರ ನೇಮಕ
 ಸಾಮಾನ್ಯ ವೈದ್ಯರ ಹಾಗೆ ತಜ್ಞ ವೈದ್ಯರನ್ನೂ ನೇರ ನೇಮಕಾತಿ ಮೂಲಕ ಆಯ್ಕೆ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ಸಂಪುಟ ಒಪ್ಪಿಗೆ ನೀಡಿದೆ.

ಸಾಮಾನ್ಯ ವೈದ್ಯರ ನೇಮಕಕ್ಕೆ ಮಾತ್ರ ಅವಕಾಶ ಇದ್ದು, ಅದನ್ನು ಬದಲಿಸುವ ಉದ್ದೇಶದಿಂದ ಈ ತಿದ್ದುಪಡಿ ಮಾಡಲಾಗುತ್ತಿದೆ.
ಪ್ರಸ್ತುತ 150 ಸಾಮಾನ್ಯ ವೈದ್ಯರ ಹುದ್ದೆ ಖಾಲಿ ಇದ್ದು, ಮುಂದೆ ನಿವೃತ್ತಿ ನಂತರ ಖಾಲಿಯಾಗುವ ಹುದ್ದೆಗಳು ಸೇರಿ ಒಟ್ಟು 700 ಹುದ್ದೆಗಳಿಗೆ ಎಲ್ಲ ತಜ್ಞ ವೈದ್ಯರನ್ನೇ ನೇಮಕ ಮಾಡಿಕೊಳ್ಳಲಾಗುವುದು. ಮನಃಶಾಸ್ತ್ರಜ್ಞರು, ಮೂಳೆರೋಗ ತಜ್ಞ ಸೇರಿದಂತೆ ಇತರ ತಜ್ಞ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗುವುದು. ಈ ಸಂಬಂಧ ಹೈಕೋರ್ಟ್ ಆದೇಶ ನೀಡಿದ್ದು, ಅದರನ್ವಯ ಕಾಯ್ದೆಗೆ ತಿದ್ದುಪಡಿ ಮಾಡಲಾಗುವುದು ಎಂದರು.

ಇತರ ಪ್ರಮುಖ ನಿರ್ಧಾರಗಳು
* ಕೇಂದ್ರ ಸರ್ಕಾರದ ನೆರವಿನಲ್ಲಿ 56.77 ಕೋಟಿ ವೆಚ್ಚದಲ್ಲಿ ರಾಜ್ಯ ಮಾಹಿತಿ ಕೇಂದ್ರ ಸ್ಥಾಪನೆ. ಇದಕ್ಕೆ ಕೇಂದ್ರ ಸರ್ಕಾರ ರೂ 52.8 ಕೋಟಿ ನೀಡಿದರೆ, ರಾಜ್ಯ ಸರ್ಕಾರ ರೂ 3.47 ಕೋಟಿ ನೀಡಲಿದೆ. ರಾಜ್ಯದ ಪ್ರತಿಯೊಂದು ಮಾಹಿತಿ ಈ ಕೇಂದ್ರದಲ್ಲಿ ದಾಖಲಾಗಲಿದೆ.

* 10 ನಗರಗಳಲ್ಲಿ ದೂರಸಂವೇದಿ ಸಂಸ್ಥೆ ಮೂಲಕ ಕೊಳೆಗೇರಿಗಳ ಸಮೀಕ್ಷೆ. ಮೈಸೂರು, ಗುಲ್ಬರ್ಗ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಬೆಳಗಾವಿ, ಬಳ್ಳಾರಿ, ದಾವಣಗೆರೆ, ತುಮಕೂರು, ಬೆಂಗಳೂರು, ಶಿವಮೊಗ್ಗ ನಗರಗಳಲ್ಲಿ ಈ ಸಮೀಕ್ಷೆ. ಇಲ್ಲಿನ ಕೊಳಚೆ ಪ್ರದೇಶಗಳಲ್ಲಿನ ವಸ್ತುಸ್ಥಿತಿ ಮತ್ತು ಮನೆಗಳ ಅಗತ್ಯದ ಬಗ್ಗೆ  ಮಾಹಿತಿ ನೀಡಲಾಗುತ್ತದೆ. ಇದಕ್ಕೆ ಕೇಂದ್ರ ಸರ್ಕಾರವೇ ರೂ 7.5 ಕೋಟಿ ನೀಡಲಿದೆ. 3 ತಿಂಗಳಲ್ಲಿ ಸಮೀಕ್ಷೆ ಮುಗಿಸಬೇಕು.

* ಸಿಐಡಿ ಪೊಲೀಸರ ಹಾಗೆ ಲೋಕಾಯುಕ್ತ ಪೊಲೀಸರಿಗೆ ಭತ್ಯೆ ನೀಡುವುದು. ಇತ್ತೀಚೆಗೆ ಶೇ 30ರಷ್ಟು ಭತ್ಯೆ ಹೆಚ್ಚಳ ಮಾಡಲಾಗಿತ್ತು. ಅದು ಕೂಡ ಕಡಿಮೆ ಎಂದಾಗ ಸಿಐಡಿ ಪೊಲೀಸರಿಗೆ ಇರುವ ಹಾಗೆ ಶೇ 40ರಷ್ಟು ಹೆಚ್ಚಳ ಮಾಡಲಾಗಿದೆ. ಒಟ್ಟಿನಲ್ಲಿ ಈಗಿನ ಭತ್ಯೆಗಿಂತ ಶೇ 10ರಷ್ಟು ಹೆಚ್ಚಾಗಲಿದೆ.

* ಸರ್ಕಾರಿ ಅನುದಾನಿತ ಶಿಕ್ಷಕರ ತರಬೇತಿ ಸಂಸ್ಥೆಗಳಲ್ಲಿನ ಸ್ನಾತಕೋತ್ತರ ಪದವಿ ಪೂರೈಸಿದ 171 ಮಂದಿ ಬೋಧಕ ಸಿಬ್ಬಂದಿಯ ವೇತನ ಹೆಚ್ಚಳ. ವೇತನ ಹೆಚ್ಚಳದಿಂದ 23 ಲಕ್ಷ ಖರ್ಚಾಗುತ್ತದೆ. ಈ ಶಿಕ್ಷಣ ಸಂಸ್ಥೆಗಳ ಅಧೀಕ್ಷಕರನ್ನು ಪ್ರಾಂಶುಪಾಲರು ಹಾಗೂ ಪ್ರಶಿಕ್ಷಕರನ್ನು ಉಪನ್ಯಾಸಕರೆಂದು ಕರೆಯಲು ತೀರ್ಮಾನ.

* ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಗಡಿ ಭಾಗದ 52 ತಾಲ್ಲೂಕಗಳಲ್ಲಿ ಹಮ್ಮಿಕೊಳ್ಳಬೇಕಾದ ಯೋಜನೆಗಳಿಗೆ ಸಂಬಂಧಿಸಿದ 10 ಕೋಟಿ ರೂಪಾಯಿ ಮೊತ್ತದ ಕ್ರಿಯಾ ಯೋಜನೆಗಳಿಗೆ ಒಪ್ಪಿಗೆ. ಗಡಿ ಭಾಗದಲ್ಲಿ ಕಲೆ, ಸಾಹಿತ್ಯ, ಗಡಿ ಉತ್ಸವ, ಸಭಾ ಭವನ, ಗಡಿ ಭಾಗದ ಶಾಲೆಗಳ ಶಿಕ್ಷಕರಿಗೆ 19 ವಸತಿ ಸಮುಚ್ಚಯ ನಿರ್ಮಾಣ ಇದರಲ್ಲಿ ಸೇರಿದೆ.

* ಬೀದರ್ ಸರ್ಕಾರಿ ವೈದ್ಯಕೀಯ ಕಾಲೇಜಿನ 2ನೇ ಹಂತದ ಕಟ್ಟಡ ನಿರ್ಮಾಣಕ್ಕೆ 62.81 ಕೋಟಿ ಮಂಜೂರು. ಮೊದಲು ರೂ 50 ಕೋಟಿಗೆ ಯೋಜನೆ ರೂಪಿಸಿದ್ದು, ನಂತರ ಎಂ.ಸಿ.ಐ ಸೂಚನೆ ಮೇರೆಗೆ ಬದಲಿಸಲಾಗಿದೆ. ಇದಕ್ಕೆ ರೂ 12.8 ಕೋಟಿ ಹೆಚ್ಚುವರಿಯಾಗಿ ನೀಡಲಾಗಿದೆ.

* 21 ಮರಮಟ್ಟುಗಳ ಮೇಲಿನ ಶೇ 1.5ರಷ್ಟು ಎಪಿಎಂಸಿ ಲೆವಿ ರದ್ದು.

* ಮಂಗಳೂರಿನ ಪಿಲಿಕುಳ ನಿಸರ್ಗಧಾಮದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ ರೂ 15.5 ಕೋಟಿ ವೆಚ್ಚದಲ್ಲಿ ನೂತನ ತಾರಾಲಯ ಸ್ಥಾಪನೆ. ಇದಕ್ಕೆ ರಾಜ್ಯ ಸರ್ಕಾರ ಹಂತಹಂತವಾಗಿ ರೂ 11 ಕೋಟಿ ನೀಡಲಿದೆ. ಕೇಂದ್ರವೂ ತನ್ನ ನೆರವು ನೀಡಲಿದೆ.

* ಉಡುಪಿ ನಗರಸಭೆಯ ಅಮೃತ ಮಹೋತ್ಸವದ ಅಂಗವಾಗಿ ನಾಗರಿಕ ಸೌಲಭ್ಯ ಕಲ್ಪಿಸಲು 25 ಕೋಟಿ ರೂಪಾಯಿ ಮೊತ್ತದ ಒಂಬತ್ತು ಕಾಮಗಾರಿಗಳ ಕ್ರಿಯಾ ಯೋಜನೆಗಳಿಗೆ ಒಪ್ಪಿಗೆ.

* ವೃತ್ತಿ ಶಿಕ್ಷಣ ಸಂಸ್ಥೆಗಳ ಪ್ರವೇಶ ಮತ್ತು ಶುಲ್ಕ ನಿಗದಿ ಕಾಯ್ದೆಗೆ ತಿದ್ದುಪಡಿ ತಂದು, ಮಾತುಕತೆ ಮೂಲಕವೇ ಶುಲ್ಕ ನಿಗದಿಪಡಿಸಲು ಸಂಪುಟ ಒಪ್ಪಿಗೆ. 2006 ಮತ್ತು 2007ರಲ್ಲಿ ಈ ಕಾಯ್ದೆಯ ನಿಯಮ 8 ಅನ್ನು ಅಮಾನತು ಮಾಡಲಾಗಿತ್ತು. 2008ರಿಂದ 11ರವರೆಗೂ ಇದೇ ರೀತಿ ಈ ನಿಯಮವನ್ನು ಅಮಾನತು ಮಾಡಿ, ಮಾತುಕತೆ ಮೂಲಕವೇ ಶುಲ್ಕ ಮತ್ತು ಸೀಟು ಹಂಚಿಕೆ ಮಾಡಿಕೊಳ್ಳಲು ನಿರ್ಧಾರ.

* ಕರ್ನಾಟಕ ವಿತ್ತೀಯ ಕಾರ್ಯಸಂಸ್ಥೆಯ ಕಟ್ಟಡ ನಿರ್ಮಾಣ ಹಂತದಲ್ಲಿದ್ದು, ಇದಕ್ಕೆ ರೂ 30.53 ಕೋಟಿ ವೆಚ್ಚ ಮಾಡಲಾಗುವುದು. ಕೇಂದ್ರ ಸರ್ಕಾರ 10 ಕೋಟಿ ರೂಪಾಯಿ ಕೊಟ್ಟಿದೆ. ಕೆಂಗೇರಿ ಸಮೀಪ ಕಟ್ಟಡ ನಿರ್ಮಿಸುತ್ತಿದ್ದು, ಸದ್ಯದಲ್ಲೇ ಪೂರ್ಣಗೊಳ್ಳಲಿದೆ.
* ಸಂಪುಟ ಉಪ ಸಮಿತಿಯ ಸಲಹೆ ಮೇರೆಗೆ ಆರು ನರ್ಸಿಂಗ್ ಕಾಲೇಜು, ಮೂರು ಪ್ಯಾರಾ ಮೆಡಿಕಲ್ (ನೇತ್ರ) ಸಂಸ್ಥೆ, ಒಂದು ಸರ್ಕಾರಿ ನರ್ಸಿಂಗ್ ಕಾಲೇಜು ಸ್ಥಾಪನೆಗೆ ಒಪ್ಪಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT