ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಕ್ಕೆ 5 ಸಾವಿರ ಕಿ.ಲೀ. ಸೀಮೆಎಣ್ಣೆ ಕಡಿತ

Last Updated 1 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಶೇ 55ರಷ್ಟು ಕುಟುಂಬಗಳು ಅಡುಗೆ ಅನಿಲ ಸಂಪರ್ಕ ಪಡೆದಿರುವುದರಿಂದ ಕೇಂದ್ರ ಸರ್ಕಾರ ರಾಜ್ಯಕ್ಕೆ ಪೂರೈಕೆ ಮಾಡುವ ಸೀಮೆಎಣ್ಣೆ ಕೋಟಾದಲ್ಲಿ ಐದು ಸಾವಿರ ಕಿಲೋ ಲೀಟರ್‌ನಷ್ಟು ಕಡಿಮೆ ಮಾಡಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವೆ ಶೋಭಾ ಕರಂದ್ಲಾಜೆ ಬುಧವಾರ ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

ಶೂನ್ಯ ವೇಳೆ ಕಾಂಗ್ರೆಸ್‌ನ ಆರ್.ವಿ. ವೆಂಕಟೇಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, `ರಾಜ್ಯದ ಜನಸಂಖ್ಯೆಗೆ ಅನುಗುಣವಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಇನ್ನೂ ಅಧಿಕ ಪ್ರಮಾಣದಲ್ಲಿ ಸೀಮೆಎಣ್ಣೆ ಪೂರೈಸಬೇಕು.

ಆದರೆ, ಶೇ 55ರಷ್ಟು ಕುಟುಂಬಗಳು ಅಡುಗೆ ಅನಿಲ ಸಂಪರ್ಕ ಪಡೆದಿರುವುದರಿಂದ 50 ಸಾವಿರ ಕಿಲೋ ಲೀಟರ್ ಬದಲಿಗೆ ರಾಜ್ಯಕ್ಕೆ ಪ್ರಸ್ತುತ 45 ಸಾವಿರ ಕಿಲೋ ಲೀಟರ್ ಸೀಮೆಎಣ್ಣೆ ಪೂರೈಕೆಯಾಗುತ್ತಿದೆ.
ಆದರೆ, ರಾಜ್ಯದಲ್ಲಿ ಸೀಮೆಎಣ್ಣೆಗೆ ಹೆಚ್ಚಿನ ಬೇಡಿಕೆಯಿದ್ದು, ಇದರಿಂದ ಗ್ರಾಮಾಂತರ ಪ್ರದೇಶದ ಜನರಿಗೆ ತೊಂದರೆಯಾಗುತ್ತಿದೆ~ ಎಂದರು.

ಈ ಉದ್ದೇಶದಿಂದಲೇ ಅಕ್ರಮ ಅಡುಗೆ ಅನಿಲ ಸಂಪರ್ಕಕ್ಕೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿತ್ತು. ಆದರೆ, ಅದಕ್ಕೆ ಒಮ್ಮೆ ತಡೆ ನೀಡಿದ ನಂತರ ಉದ್ದೇಶಪೂರ್ವಕವಾಗಿ ಅಡುಗೆ ಅನಿಲ ಬಳಕೆದಾರರಿಗೆ ಯಾವುದೇ ರೀತಿಯಲ್ಲಿ ತೊಂದರೆ ನೀಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ 79 ಲಕ್ಷ ಅನಿಲ ಸಂಪರ್ಕಗಳಿವೆ. ಈ ಪೈಕಿ ಇನ್ನೂ 21.5 ಲಕ್ಷ ಸಂಪರ್ಕಗಳಿಗೆ ಜನತೆ ಆರ್‌ಆರ್ ಸಂಖ್ಯೆ ನೀಡಿಲ್ಲ.

ವಠಾರ ಅಥವಾ ಅಪಾರ್ಟ್‌ಮೆಂಟ್‌ನಲ್ಲಿ ರುವ ಕುಟುಂಬಗಳು ಒಂದೇ ಆರ್‌ಆರ್ ಸಂಖ್ಯೆಯಡಿ ಪ್ರತ್ಯೇಕ ಅಡುಗೆ ಅನಿಲ ಸಂಪರ್ಕ ಪಡೆದಿದ್ದರೂ ಕಡಿತ ಮಾಡದಂತೆ ಗ್ಯಾಸ್ ಏಜೆನ್ಸಿಗಳಿಗೆ ಕಟ್ಟುನಿಟ್ಟು ಸೂಚನೆ ನೀಡಲಾಗಿದೆ.

 ಉದ್ದೇಶಪೂರ್ವಕವಾಗಿ ಗ್ರಾಹಕರಿಗೆ ತೊಂದರೆ ನೀಡುವಂತಹ ಏಜೆನ್ಸಿಗಳ ವಿರುದ್ಧ ಉಗ್ರ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. `ನಾನು ಕೂಡ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇನೆ. ಮಾಲೀಕರ ಮನೆಯ ಆರ್‌ಆರ್ ಸಂಖ್ಯೆ ಬೇರೆ ಇದೆ.

ಒಂದು ವೇಳೆ ಗ್ರಾಹಕರು ಒಂದೇ ಆರ್‌ಆರ್ ಸಂಖ್ಯೆಯಡಿ ಪ್ರತ್ಯೇಕವಾಗಿ ಅಡುಗೆ ಅನಿಲ ಸಂಪರ್ಕಗಳನ್ನು ಪಡೆದಿದ್ದರೂ ವಾಸ್ತವ್ಯದ ಬಗ್ಗೆ ಸರಿಯಾದ ದಾಖಲೆ ಪತ್ರ ನೀಡಿ ನಿಗದಿತ ಅರ್ಜಿ ನಮೂನೆಯ ಕಾಲಂನಲ್ಲಿ ಸರಿಯಾಗಿ ನಮೂದಿಸಿದರೆ ಸಾಕು~ ಎಂದರು.

ಕಾಳಸಂತೆಯಲ್ಲಿ ಮಾರಾಟ: ಗ್ಯಾಸ್ ಏಜೆನ್ಸಿಗಳು ಇಡೀ ವ್ಯವಸ್ಥೆಯನ್ನು ಕುಲಗೆಡಿಸಿವೆ. ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಳಸಂತೆಯಲ್ಲಿ ಅಡುಗೆ ಅನಿಲ ಮಾರಾಟವಾಗುತ್ತಿದೆ. 425 ರೂಪಾಯಿಗೆ ಗ್ರಾಹಕರಿಗೆ ಒದಗಿಸುವ ಸಿಲಿಂಡರ್ ಅಡುಗೆ ಅನಿಲವನ್ನು ಒಂದು ಸಾವಿರ ರೂಪಾಯಿಗೂ ಅಧಿಕ ಬೆಲೆಗೆ ಆಟೋರಿಕ್ಷಾ, ಹೋಟೆಲ್, ಟಯರ್ ಪಂಕ್ಚರ್ ಶಾಪ್‌ಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಅವರು ಸದನಕ್ಕೆ ಮಾಹಿತಿ ನೀಡಿದರು.

ಬತ್ತ: ರೈತರ ಬಾಕಿ ಶೀಘ್ರ ಬಿಡುಗಡೆ

ಬೆಂಗಳೂರು: ಬೆಂಬಲ ಬೆಲೆಗೆ ಬತ್ತ ಖರೀದಿಸಿದ ರೈತರಿಗೆ ನೀಡಬೇಕಾಗಿರುವ 57 ಕೋಟಿ ರೂಪಾಯಿ ಬಾಕಿ ಮೊತ್ತವನ್ನು ಶೀಘ್ರ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವೆ ಶೋಭಾ ಕರಂದ್ಲಾಜೆ ವಿಧಾನ ಪರಿಷತ್ತಿನಲ್ಲಿ ಬುಧವಾರ ಭರವಸೆ ನೀಡಿದರು.

ಶೂನ್ಯ ವೇಳೆಯಲ್ಲಿ ಪಕ್ಷೇತರ ಸದಸ್ಯ ಮರಿತಿಬ್ಬೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಷ್ಟ್ರೀಕೃತ ಬ್ಯಾಂಕ್‌ನಿಂದ ಶೇ 11.65 ಬಡ್ಡಿ ದರದಲ್ಲಿ 100 ಕೋಟಿ ರೂಪಾಯಿ ಸಾಲ ಪಡೆಯುವ ಸಂಬಂಧ ಆರ್‌ಬಿಐ ಅಧಿಕಾರಿಗಳ ಜತೆ ಚರ್ಚೆ ನಡೆಸಲು ಇಲಾಖೆಯ ಅಧಿಕಾರಿಗಳು ದೆಹಲಿಗೆ  ತೆರಳಿದ್ದಾರೆ.

ಸಾಲ ನೀಡಲು ಆರ್‌ಬಿಐ ಸಮ್ಮತಿ ಸೂಚಿಸಿದರೆ ರೈತರಿಗೆ ಬಾಕಿ  ಬಿಡುಗಡೆ ಮಾಡಲಾಗುವುದು ಎಂದರು.
ಖಾಸಗಿ ಬ್ಯಾಂಕುಗಳಿಂದ ಸಾಲ ಪಡೆದಲ್ಲಿ ಶೇ 13.5 ರಷ್ಟು ಬಡ್ಡಿ ಪಾವತಿಸಬೇಕಾಗುತ್ತದೆ.

ಆರ್‌ಬಿಐ ಸಾಲ ನೀಡಲು ಒಪ್ಪದಿದ್ದಲ್ಲಿ ಖಾಸಗಿ ಬ್ಯಾಂಕುಗಳಿಂದಲೇ ಸಾಲ ಪಡೆಯಲಾಗುವುದು ಎಂದರು.
ರಾಜ್ಯ ಸರ್ಕಾರ ಕ್ವಿಂಟಲ್‌ಗೆ ಹೆಚ್ಚುವರಿ 250ರೂ. ನೀಡುತ್ತಿರುವುದರಿಂದ ಬಹಳ ದೊಡ್ಡ ಪ್ರಮಾಣದಲ್ಲಿ ಬೆಂಬಲ ಬೆಲೆಗೆ ಭತ್ತ ಮಾರಾಟ ಮಾಡಲು ರೈತರು ಮುಂದೆ ಬರುತ್ತಿದ್ದಾರೆ.

ಕಳೆದ ವರ್ಷ ಈ ವೇಳೆಗೆ 30ಸಾವಿರ ಟನ್ ಬತ್ತ ಖರೀದಿಸಿದ್ದರೆ, ಈ ವರ್ಷ 60 ಸಾವಿರ ಟನ್ ಭತ್ತ ಖರೀದಿಸಲಾಗಿದೆ ಎಂದರು.

ಗೋದಾಮುಗಳ ಕೊರತೆಯಿದ್ದರೂ ಖಾಸಗಿ ಗೋದಾಮು ಬಳಸಿಕೊಂಡು ಬೆಂಬಲ ಬೆಲೆಗೆ ಭತ್ತ ಖರೀದಿಸುವ ಪ್ರಕ್ರಿಯೆ ಮುಂದುವರಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT