ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಕ್ಕೆ ಆಶಾದಾಯಕ ರೈಲ್ವೆ ಬಜೆ

Last Updated 25 ಜನವರಿ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದ ಪಾಲಿಗೆ ಮತ್ತೊಂದು ಆಶಾದಾಯಕ ರೈಲ್ವೆ ಬಜೆಟ್ ನೀಡಲಿದ್ದೇವೆ’ ಎಂದು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಭರವಸೆ ನೀಡಿದರು.ಬೆಂಗಳೂರಿನಿಂದ ತಿರುಪತಿಗೆ ನೇರ ರೈಲು ಸಂಚಾರಕ್ಕೆ ಯಶವಂತಪುರ ರೈಲು ನಿಲ್ದಾಣದಲ್ಲಿ ಮಂಗಳವಾರ ಹಸಿರು ನಿಶಾನೆ ತೋರಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ರಾಜ್ಯದಲ್ಲಿ ಅಗತ್ಯವಿರುವ ಹೊಸ ರೈಲು ಮಾರ್ಗಗಳು, ಹೊಸ ಮಾರ್ಗಗಳಲ್ಲಿ ಸಂಚಾರ ಆರಂಭಿಸುವ ಕುರಿತು  ರಾಜ್ಯದ ಸಂಸದರ ಅಭಿಪ್ರಾಯ ಪಡೆಯಲಾಗಿದೆ. ಇದರ ಆಧಾರದ ಮೇಲೆ ಉತ್ತಮ ಯೋಜನೆಗಳು ಘೋಷಣೆಯಾಗುತ್ತದೆ’ ಎಂದು ಹೇಳಿದರು.

ಫೆ. 24/25ರಂದು ರೈಲ್ವೆ ಬಜೆಟ್: ಫೆಬ್ರುವರಿ 21ರಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಬಹುಶಃ 24 ಅಥವಾ 25ರಂದು ರೈಲ್ವೆ ಬಜೆಟ್ ಮಂಡನೆಯಾಗಲಿದೆ ಎಂದು ತಿಳಿಸಿದ ಸಚಿವರು, ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು.

2010-11ನೇ ಸಾಲಿನ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದ್ದ 17 ಹೊಸ ರೈಲು ಸಂಚಾರದ ಪೈಕಿ ಈಗಾಗಲೇ 10 ಹೊಸ ಮಾರ್ಗಗಳಲ್ಲಿ ರೈಲು ಸಂಚಾರ ಆರಂಭವಾಗಿವೆ. ಸದ್ಯದಲ್ಲಿಯೇ ಯಶವಂತಪುರ-ದೆಹಲಿ ಹಾಗೂ ಬೆಂಗಳೂರು-ನೆಲಮಂಗಲ ರೈಲು ಸಂಚಾರ ಆರಂಭಿಸಲಾಗುವುದು. ಉಳಿದವನ್ನು  ಮಾರ್ಚ್ ಅಂತ್ಯದೊಳಗೆ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಭೂಮಿ ನೀಡುವಲ್ಲಿ ವಿಳಂಬ:ಅಗತ್ಯವಾದ ಭೂಮಿಯನ್ನು ನೀಡುವಲ್ಲಿ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿರುವುದರಿಂದ ಬಹು ನಿರೀಕ್ಷಿತ ಕುಡಚಿ-ಬಾಗಲಕೋಟೆ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲು ತಡವಾಗುತ್ತಿದೆ’ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

‘ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಕುಡಚಿಯಿಂದ ಬಾಗಲಕೋಟೆವರೆಗೆ ರೈಲು ಹಳಿ ಮಾರ್ಗ (150 ಕಿ.ಮೀ) ನಿರ್ಮಾಣ ಯೋಜನೆಗೆ ರಾಜ್ಯ ಸರ್ಕಾರ ಉಚಿತವಾಗಿ ಭೂಮಿ ನೀಡಿ, ಯೋಜನಾ ವೆಚ್ಚದ ಶೇ 50ರಷ್ಟು ಮೊತ್ತವನ್ನು ಭರಿಸುವುದಾಗಿ ಭರವಸೆ ನೀಡಿದೆ. ಯೋಜನೆಯ ಅಂದಾಜು ವೆಚ್ಚ ಸುಮಾರು 914 ಕೋಟಿ ರೂಪಾಯಿ’ ಎಂದರು.

ಬುಲೆಟ್ ಟ್ರೈನ್: ಪಟ್ನಾ-ಬೆಂಗಳೂರು ನಡುವೆ ಬುಲೆಟ್ ಟ್ರೈನ್ ಸಂಚಾರ ಆರಂಭಿಸುವ ಯಾವುದೇ ಪ್ರಸ್ತಾವ ಇಲಾಖೆಯ ಮುಂದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು (ಲಾಲು ಪ್ರಸಾದ್ ಅವರು ರೈಲ್ವೆ ಸಚಿವರಾಗಿದ್ದಾಗ ಇಂತಹದ್ದೊಂದು ರೈಲು ಆರಂಭಿಸಲಾಗುವುದು ಎಂದು ಹೇಳಿದ್ದರು).

ಅಭಿನಂದನೆ ಸಲ್ಲಿಸಿದ ಸಿ.ಎಂ: ‘ರೈಲ್ವೆ ಇಲಾಖೆಯಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಹಲವು ವರ್ಷಗಳಿಂದ ಇದ್ದ ಭಾವನೆಯನ್ನು ಹೋಗಲಾಡಿಸಲು ಮುನಿಯಪ್ಪ ಅವರು ಸಾಕಷ್ಟು ಪ್ರಯತ್ನಿಸಿದ್ದಾರೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದರು. ಸಚಿವೆ ಶೋಭಾ ಕರಂದ್ಲಾಜೆ  ಉಪಸ್ಥಿತರಿದ್ದರು.

ಪ್ರಯಾಣ ದರ ಪಟ್ಟಿ
ಬೆಂಗಳೂರು: ಬಹುನಿರೀಕ್ಷಿತ ಯಶವಂತಪುರ-ತಿರುಪತಿ ರೈಲು ಸಂಚಾರ ಮಂಗಳವಾರ ಆರಂಭಗೊಂಡಿದೆ. ಕೃಷ್ಣರಾಜಪುರ, ಬಂಗಾರಪೇಟೆ, ಕಾಟ್ಪಾಡಿ ಹಾಗೂ ಪಕಳ ಮಾರ್ಗವಾಗಿ ಸಾಗುವ ಈ ರೈಲು ಸುಮಾರು 337 ಕಿ.ಮೀ. ಕ್ರಮಿಸುತ್ತದೆ.

ಯಶವಂತಪುರದಿಂದ (ರೈಲು ಸಂಖ್ಯೆ 12543) ಪ್ರತಿ ಸೋಮವಾರ, ಬುಧವಾರ ಹಾಗೂ ಶನಿವಾರ ಬೆಳಿಗ್ಗೆ 7.20ಕ್ಕೆ ಹೊರಡುವ ರೈಲು ಮಧ್ಯಾಹ್ನ 1.30ಕ್ಕೆ ತಿರುಪತಿ ತಲುಪಲಿದೆ. ತಿರುಪತಿಯಿಂದ (ಸಂಖ್ಯೆ 12544) ಪ್ರತಿ ಭಾನುವಾರ, ಮಂಗಳವಾರ ಹಾಗೂ ಶುಕ್ರವಾರ ಮಧ್ಯಾಹ್ನ 2.50ಕ್ಕೆ ಹೊರಡುವ ರೈಲು ರಾತ್ರಿ 8.55ಕ್ಕೆ ಯಶವಂತಪುರ ತಲುಪಲಿದೆ.

ಪ್ರಯಾಣ ದರ: ಈ ರೈಲಿನಲ್ಲಿ  ಒಟ್ಟು 12 ಕೋಚ್‌ಗಳಿವೆ. ಎ.ಸಿ ಕೋಚ್ ಟಿಕೆಟ್ ದರ ರೂ 373 (ಮುಂಗಡ ಕಾಯ್ದಿರಿಸುವಿಕೆ ಶುಲ್ಕ ಸೇರಿ), ಎರಡನೇ ದರ್ಜೆ ಪ್ರಯಾಣದ ಟಿಕೆಟ್ ದರ 116 ರೂ ಹಾಗೂ ಸಾಮಾನ್ಯ ದರ್ಜೆ ಪ್ರಯಾಣ ಟಿಕೆಟ್ ದರ ರೂ 91.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT